ಬುಧವಾರ, ಮೇ 12, 2021
27 °C

ಸಾಕ್ಷರತೆ ಪ್ರಮಾಣ: ಶೇ 85 ಗುರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ರಾಜ್ಯದ ಸಾಕ್ಷರತೆ ಪ್ರಮಾಣವನ್ನು 2012ರ ವೇಳೆಗೆ ಶೇ 85ರಷ್ಟಕ್ಕೆ ಹೆಚ್ಚಿಸುವ ಗುರಿ ಹೊಂದಲಾಗಿದೆ~ ಎಂದು ಲೋಕ ಶಿಕ್ಷಣ ಸಚಿವ ರೇವೂನಾಯಕ್ ಬೆಳಮಗಿ ಹೇಳಿದರು.47ನೇ ಅಂತರರಾಷ್ಟ್ರೀಯ ಸಾಕ್ಷರತಾ ಸಪ್ತಾಹದ ಅಂಗವಾಗಿ ರಾಜ್ಯ ಸಾಕ್ಷರತಾ ಮಿಶನ್ ಪ್ರಾಧಿಕಾರ ಹಾಗೂ ಲೋಕ ಶಿಕ್ಷಣ ನಿರ್ದೇಶನಾಲಯದ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಉನ್ನತ ಅಧ್ಯಯನ ಸಂಸ್ಥೆಯ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಾಕ್ಷರತಾ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.`ರಾಜ್ಯದಲ್ಲಿ ಸಾಕ್ಷರತಾ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ ಪರಿಣಾಮ 2001ರಲ್ಲಿ ಶೇ 66.64ರಷ್ಟಿದ್ದ ಸಾಕ್ಷರತಾ ಪ್ರಮಾಣ ಇದೀಗ ಶೇ 75.66ಕ್ಕೆ ಹೆಚ್ಚಿದೆ. 2011ರ ಜನಗಣತಿ ಪ್ರಕಾರ ಪುರುಷರ ಸಾಕ್ಷರತೆ ಪ್ರಮಾಣ ಶೇ 82.10ರಷ್ಟಿದ್ದರೆ, ಮಹಿಳಾ ಸಾಕ್ಷರತಾ ಪ್ರಮಾಣ ಶೇ 65.40ರಷ್ಟಿದೆ.

 

ಪುರುಷ ಹಾಗೂ ಸ್ತ್ರೀಯರ ಸಾಕ್ಷರತೆ ಪ್ರಮಾಣದ ಅಂತರ ಶೇ 16.70ರಷ್ಟಿದ್ದು, ಗ್ರಾಮೀಣ ಪ್ರದೇಶದಲ್ಲಿ ಪರಿಶಿಷ್ಟ ಜಾತಿ/ಪಂಗಡ ಹಾಗೂ ಅಲ್ಪಸಂಖ್ಯಾತರ ಸಾಕ್ಷರತೆ ಪ್ರಮಾಣ ಕಡಿಮೆ ಇದೆ. ಈ ಅಂತರವನ್ನು ಕಡಿಮೆ ಮಾಡಿ ಸಾಕ್ಷರತೆ ಪ್ರಮಾಣವನ್ನು ಹೆಚ್ಚಿಸುವುದು ಸರ್ಕಾರದ ಗುರಿ~ ಎಂದರು.`2009-10ರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅನುದಾನದಲ್ಲಿ `ಸಾಕ್ಷರ ಭಾರತ್~ ಕಾರ್ಯಕ್ರಮವನ್ನು ರಾಜ್ಯದ 20 ಜಿಲ್ಲೆಗಳ 3,788 ಗ್ರಾಮ ಪಂಚಾಯ್ತಿಗಳ ಮೂಲಕ ಅನುಷ್ಠಾನಗೊಳಿಸಲಾಗಿದೆ. 15 ವರ್ಷ ಮೀರಿದ ಸುಮಾರು 40 ಲಕ್ಷ ಅನಕ್ಷರಸ್ಥರನ್ನು ಅದರಲ್ಲೂ ಪ್ರಮುಖವಾಗಿ ಮಹಿಳೆಯರು, ಪರಿಶಿಷ್ಟ ಜಾತಿ/ ವರ್ಗ, ಅಲ್ಪಸಂಖ್ಯಾತರನ್ನು ಸಾಕ್ಷರರನ್ನಾಗಿ ಮಾಡುವ ಕಾರ್ಯಕ್ರಮ ಇದಾಗಿದೆ~ ಎಂದು ಅವರು ಹೇಳಿದರು.`ಲೋಕ ಶಿಕ್ಷಣ ನಿರ್ದೇಶನಾಲಯವು ಡಾ.ಡಿ.ಎಂ.ನಂಜುಂಡಪ್ಪ ವರದಿ ಅನ್ವಯ ಹಿಂದುಳಿದ ಜಿಲ್ಲೆಗಳಲ್ಲಿ ಅನಕ್ಷರಸ್ಥರಿಗೆ ಜ್ಞಾನ ಒದಗಿಸಲು ಪ್ರಯತ್ನಿಸುತ್ತಿದೆ. ಅಲ್ಲದೇ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಎಸ್‌ಸಿಪಿ/ಟಿಎಸ್‌ಪಿ ಕಾರ್ಯಕ್ರಮಗಳ ಅಡಿ ಪರಿಶಿಷ್ಟ ನವ ಸಾಕ್ಷರರಿಗೆ ವೃತ್ತಿ ಕೌಶಲ ಒದಗಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ ವಿದ್ಯಾಪೀಠಗಳ ಮೂಲಕ ಗ್ರಾಮೀಣ ವಿದ್ಯಾವಂತ ಯುವಕ ಯುವತಿಯರಿಗೆ ಆಧುನಿಕ ವೃತ್ತಿ ಕೌಶಲ ತರಬೇತಿ ನೀಡುತ್ತಿದೆ~ ಎಂದು ಸಚಿವರು ಮಾಹಿತಿ ನೀಡಿದರು.ಶಿಕ್ಷಣ ಇಲಾಖೆ ಕಾರ್ಯದರ್ಶಿ ಜಿ.ಕುಮಾರ್ ನಾಯಕ್, `ಸಾಕ್ಷರತೆ ಹಾಗೂ ಅಭಿವೃದ್ಧಿಗೆ ಅನ್ಯೋನ್ಯ ಸಂಬಂಧವಿದೆ. ಸಾಕ್ಷರತೆಯಿಂದ ಅಭಿವೃದ್ಧಿ, ತಲಾ ಆದಾಯ ಹೆಚ್ಚಳ, ಸ್ತ್ರೀ ಸಮಾನತೆ ಸಾಧಿಸಲು ಸಹಕಾರಿಯಾಗಲಿದೆ. ಆದ್ದರಿಂದ ಅನಕ್ಷರತೆಯ ವಿಷ ವರ್ತುಲದಿಂದ ಎಲ್ಲರನ್ನು ಹೊರ ತರಲು ಸಾಕ್ಷರರು ಪ್ರಯತ್ನಿಸಬೇಕು~ ಎಂದು ಮನವಿ ಮಾಡಿದರು.ಲೋಕ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕಿ ಬಿ.ಬಿ.ಕಾವೇರಿ ಸ್ವಾಗತಿಸಿದರು. ಸಾಕ್ಷರ ಭಾರತ್ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಶ್ರಮಿಸಿದ ಸಂಯೋಜಕರು ಹಾಗೂ ಸ್ವಯಂ ಸೇವಕರಿಗೆ ಸಮಾವೇಶದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.