ಶನಿವಾರ, ಫೆಬ್ರವರಿ 27, 2021
19 °C
ಸ್ಯಾಮ್ ಅಂಕಲ್‌ಗೆ ಪತ್ರಗಳು ಮತ್ತು ಇತರ ಕಿಡಿಗೇಡಿ ಬರಹಗಳು

ಸಾದತ್ ಹಸನ್ ಮಂಟೊ

-ಸಂದೀಪ ನಾಯಕ Updated:

ಅಕ್ಷರ ಗಾತ್ರ : | |

ಸಾದತ್ ಹಸನ್ ಮಂಟೊ

ಉರ್ದು ಕಥೆಗಾರ ಸಾದತ್ ಹಸನ್ ಮಂಟೊ ಅವರ ಕಥೆಗಳ ಅನುವಾದದ ಮೊದಲ ಸಂಕಲನವನ್ನು ತಂದ ಹಸನ್ ನಯೀಂ ಸುರಕೋಡರು ಈಗ ಅವನ ವ್ಯಂಗ್ಯ ಬರಹಗಳ ಸಂಗ್ರಹವನ್ನು ಅನುವಾದಿಸಿದ್ದಾರೆ. ಇವೆಲ್ಲವೂ ಮಂಟೊನ ವ್ಯಂಗ್ಯ, ಕಿಡಿಗೇಡಿ ಬರಹಗಳನ್ನು ಒಳಗೊಂಡಿವೆ. ಈ ಹಿಂದೆ ಸ್ಯಾಮ್ ಅಂಕಲ್ ಎಂದು ಕರೆಯಲಾಗುತ್ತಿದ್ದ ಅಮೆರಿಕಕ್ಕೆ ಬರೆದ 9 ಪತ್ರಗಳು ಇಲ್ಲಿವೆ. ಜೊತೆಗೆ ಮಂಟೊನನ್ನು ಹತ್ತಿರದಿಂದ ನೋಡಿದವರ ಬರಹಗಳ ಜೊತೆಗೆ, ಮಂಟೊ ಸ್ವತಃ ತನ್ನ ಮದುವೆ, ತನ್ನ ಬಗ್ಗೆ ತಾನೇ ಬರೆದುಕೊಂಡ `ಮಂಟೊ ವ್ಯಕ್ತಿಚಿತ್ರ' ಕೂಡ ಇಲ್ಲಿ ಅನುವಾದಗೊಂಡಿದೆ.ಮಂಟೊನ ಹರಿತ, ಚುರುಕಾದ ವ್ಯಂಗ್ಯ ಅಮೆರಿಕದ ಸ್ವಾರ್ಥದಿಂದ ತುಂಬಿದ ಬದಲಾಗದ ನಿಲುವುಗಳನ್ನು, ತನ್ನ ಸ್ವಹಿತಾಸಕ್ತಿಯನ್ನು ಕಾಪಾಡಿಕೊಳ್ಳುವ ಒಲವುಗಳನ್ನು ಪ್ರಕಟಿಸುತ್ತದೆ. ಅವನ ವ್ಯಂಗ್ಯ, ಕಿಡಿಗೇಡಿತನಗಳೂ ಸತ್ಯವನ್ನು ಹೇಳಲು ಅವನು ಆಯ್ದುಕೊಂಡ ಹತ್ತಿರದ ದಾರಿ. ಇದು ಈಗಲೂ ಪ್ರಸುತ್ತವಾಗಿವೆ ಎನ್ನುವುದು ಮಾಂಟೊ ನಂಥ ದೊಡ್ಡ ಲೇಖಕನ ಪ್ರತಿಭೆಗೆ ಉದಾಹರಣೆ. ಆದ್ದರಿಂದಲೇ ಅದಕ್ಕೆ ಸಾರ್ವಕಾಲಿಕತೆಯ ಗುಣ ಬಂದಿದೆ.ಮನುಕುಲ ಮುಟ್ಟಿದ ದುರಂತವನ್ನು, ತಾನು ಕಂಡ ದೇಶವಿಭಜನೆಯ ತಲ್ಲಣಗಳನ್ನು ಕಥೆಗಳಲ್ಲಿ ಹೇಳಿದ ಅವನು ಇಲ್ಲಿನ ಬರಹಗಳಲ್ಲೂ ಮಾನವೀಯ ಸಂವೇದನೆಯನ್ನು ಅಭಿವ್ಯಕ್ತಿಸಿದ್ದಾನೆ.ಸಾಹಿತ್ಯದ ಅಸಲು ಕಸುಬಿಗೆ ಬದ್ಧನಾಗಿ ಬರೆದ ಮಾಂಟೊನಿಂದ ಅಧಿಕಾರದ ಹಿಂದೆ ಹೋಗುವ, ಕ್ಷುಲ್ಲಕ ರಾಜಕೀಯ ಮಾಡಿಕೊಂಡಿರುವ ಕನ್ನಡದ ಬರಹಗಾರರು ಕಲಿಯುವುದು ಬಹಳಷ್ಟಿದೆ. ಹಲವು ಕಷ್ಟಗಳನ್ನು ತನ್ನ ಸೀಮಿತ ಕಾಲದ ಜೀವನದಲ್ಲಿ ಕಂಡ ಅವನ ಬದುಕು ಯಾರಿಗೂ ಮಾದರಿಯಾಗಬೇಕಿಲ್ಲ. ಆದರೆ, ಅವನ ಸಾಹಿತ್ಯ, ಅದು ನೀಡಿದ ಕಾಣ್ಕೆಗಳನ್ನು ನೆನೆಯಲು ಈ ಪುಸ್ತಕ ಅನುವು ಮಾಡಿಕೊಡುತ್ತದೆ. ಸಕಾಲಿಕವಾಗಿ ಬಂದ ಸುರಕೋಡರ ಈ ಅನುವಾದದ ಸಾರ್ಥಕತೆ ಬಹುಶಃ ಇಲ್ಲಿಯೇ ಇದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.