ಶುಕ್ರವಾರ, ಮೇ 14, 2021
31 °C

ಸಾಮಾಜಿಕ ಜವಾಬ್ದಾರಿ ಇಲ್ಲದ ಆಯ್ಕೆ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಪ್ರಶಸ್ತಿಗಳನ್ನು ಆಯ್ಕೆ ಮಾಡುವ ಸಮಿತಿಯಲ್ಲಿ ಇರುವವರಿಗೆ ಒಳ್ಳೆಯ ಮನಸ್ಸು ಇರಬೇಕು. ಕನಿಷ್ಠ ಮಟ್ಟದ ಸಾಮಾಜಿಕ ಜವಾಬ್ದಾರಿ ಇರಬೇಕು. ಸಮಾಜದಿಂದ ದೂರ ಇರುವವರನ್ನು ಆಯ್ಕೆ ಸಮಿತಿ ಅಧ್ಯಕ್ಷರನ್ನಾಗಿ ಮಾಡಿದರೆ ಒಳ್ಳೆಯ ಆಯ್ಕೆ ನಿರೀಕ್ಷಿಸುವುದು ಸಾಧ್ಯವಿಲ್ಲ~. ಪ್ರಸಕ್ತ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಗಳ ಬಗ್ಗೆ ನಿರ್ಮಾಪಕ - ನಿರ್ದೇಶಕ ಬಿ. ಸುರೇಶ್ ಅವರ ಪ್ರತಿಕ್ರಿಯೆ ಇದು.ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ದೊರೆತ ಚಿತ್ರಗಳನ್ನು ರಾಜ್ಯ ಚಲನಚಿತ್ರ ಆಯ್ಕೆ ಸಮಿತಿಗಳು ಉದ್ದೇಶಪೂರ್ವಕವಾಗಿ ಹೊರಗಿಡುತ್ತಿವೆಯಾ? ಸದಭಿರುಚಿ ಚಿತ್ರಗಳನ್ನು ಗುರ್ತಿಸುವಲ್ಲಿ ರಾಜ್ಯ ಸರ್ಕಾರ ಎಡವುತ್ತಿದೆಯಾ? ಕಳೆದ ಮೂರ‌್ನಾಲ್ಕು ವರ್ಷಗಳಿಂದ ರಾಜ್ಯ ಚಲನಚಿತ್ರ ಪ್ರಶಸ್ತಿಗಳ ಪಟ್ಟಿ ಹೊರಬಿದ್ದಾಗಲೆಲ್ಲ ಮತ್ತೆ ಮತ್ತೆ ಚರ್ಚೆಗೆ ಬರುತ್ತಿರುವ ಪ್ರಶ್ನೆಗಳಿವು. ಈ ಬಗ್ಗೆ `ಪ್ರಜಾವಾಣಿ~ಯೊಂದಿಗೆ ಮಾತ ನಾಡಿದ ಸುರೇಶ್, ರಾಜ್ಯ ಪ್ರಶಸ್ತಿಗಳ ಗುಣಮಟ್ಟ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದರು.`ನೈಸ್ ಕಾರಿಡಾರ್‌ಗೆ ಅನುಮತಿ ಕೊಟ್ಟವರು ಸರ್ಕಾರದಲ್ಲಿ ಇರುವು ದರಿಂದ ನನ್ನ ಪುಟ್ಟಕ್ಕನ ಹೈವೇ ಚಿತ್ರಕ್ಕೆ ಪ್ರಶಸ್ತಿ ನಿರಾಕರಿಸಿರುವುದು ಸಹಜವೇ ಆಗಿದೆ. ಆದರೆ, ಈ ಕಾಲದ ಸಮಸ್ಯೆ ಯಾದ ಹಿರಿಯ ತಲೆಮಾರಿನವರ ತಲ್ಲಣಗಳನ್ನು ಪರಿಣಾಮಕಾರಿಯಾಗಿ ಚಿತ್ರಿಸಿರುವ, ಶಿವರಾಮ ಕಾರಂತರ ಕಾದಂಬರಿ ಆಧರಿಸಿದ `ಬೆಟ್ಟದ ಜೀವ~ ಚಿತ್ರವನ್ನು ಪ್ರಶಸ್ತಿ ಪಟ್ಟಿಯಿಂದ ಹೊರಗಿಟ್ಟಿ ರುವುದು ತಪ್ಪು.ಶೇಖರ್ ನಿರ್ದೇಶನದ `ಐದೊಂದ್ಲ ಐದು~ ರೀತಿಯ ಪ್ರಯೋಗಶೀಲ ಚಿತ್ರವನ್ನು ಕೂಡ ಆಯ್ಕೆ ಸಮಿತಿ ಗುರ್ತಿಸಬೇಕಿತ್ತು. ಕಮರ್ಷಿಯಲ್ ಚಿತ್ರಗಳಿಗೆ ಪ್ರಶಸ್ತಿ ನೀಡಬೇಕು ಎನ್ನುವುದಾದರೆ `ಸೂಪರ್~ ಚಿತ್ರಕ್ಕಿಂತಲೂ ಒಳ್ಳೆಯ ಚಿತ್ರಗಳಿದ್ದವು~ ಎಂದರು.ಕರ್ನಾಟಕ ಚಲನಚಿತ್ರ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷ ಹಾಗೂ ನಿರ್ದೇಶಕ ಟಿ.ಎಸ್. ನಾಗಾಭರಣ ಅವರಿಗೆ ಕೂಡ, ರಾಷ್ಟ್ರಪ್ರಶಸ್ತಿ ಪಡೆದ ಚಿತ್ರಗಳನ್ನು ಸಾರಾಸಾಗಟಾಗಿ ಪಕ್ಕಕ್ಕೆ ಇಟ್ಟಿರುವುದು ಸಮ್ಮತವಲ್ಲ. `ತಾತ್ವಿಕ ನಿಲು ವಿಲ್ಲದೆ ಕೇವಲ ಗ್ಲಾಮರ್ ವಿಜೃಂಭ ಣೆಯ ಚಿತ್ರಕ್ಕೆ ಮಣೆ ಹಾಕುವುದು ಸರಿಯಲ್ಲ~    ಎನ್ನುವ ಅನಿಸಿಕೆ ಅವರದು.2010ರ ಯಶಸ್ವೀ ಚಿತ್ರಗಳಲ್ಲಿ ಒಂದಾದ `ಒಲವೇ ಮಂದಾರ~ ಚಿತ್ರದ ನಿರ್ದೇಶಕ ಜಯತೀರ್ಥ ಅವರಿಗೂ ತಮ್ಮ ಚಿತ್ರಕ್ಕೆ ಪ್ರಶಸ್ತಿ ಬಾರದೇ ಹೋದ ಬಗ್ಗೆ ನಿರಾಶೆಯಿದೆ. `ಪ್ರಶಸ್ತಿ ಪಟ್ಟಿ ಪ್ರಕಟವಾದ ತಕ್ಷಣ ನಿರ್ಮಾಪಕರಿಗೆ ಫೋನ್ ಮಾಡಿ ಪ್ರಾಮಾಣಿಕವಾಗಿ ಕ್ಷಮೆ ಕೋರಿದೆ. ಒಳ್ಳೆಯ ಸಿನಿಮಾ ರೂಪಿಸುವ ಹಿನ್ನೆಲೆಯಲ್ಲಿ ಅವರಿಗೆ ಅನೇಕ ಆಸೆಗಳನ್ನು ತೋರಿಸಿದ್ದೆ.ಆದರೆ, ನಮ್ಮ ಆಸೆಗಳೆಲ್ಲ ಹುಸಿಯಾದವು. ಭ್ರಷ್ಟಾಚಾರ ಮಾಡುವುದು ನಮಗೆ ಗೊತ್ತಿಲ್ಲ. ಯಾರನ್ನೂ ನಾನು ಪರಿಚಯ ಮಾಡಿಕೊಂಡಿಲ್ಲ~ ಎಂದ ಅವರು, `ಯಾತಕ್ಕಾಗಿ ಒಳ್ಳೆಯ ಸಿನಿಮಾ ಮಾಡಬೇಕು ಅನ್ನಿಸುತ್ತಿದೆ~ ಎಂದು ತಮ್ಮ ನಿರಾಶೆ ತೋಡಿಕೊಂಡರು.`ಬೆಟ್ಟದ ಜೀವ~ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಪಡೆದಿರುವ ನಿರ್ದೇಶಕ ಪಿ.ಶೇಷಾದ್ರಿ ಅವರು ತಮ್ಮ ಚಿತ್ರಕ್ಕೆ ರಾಜ್ಯ ಪ್ರಶಸ್ತಿ ದೊರೆಯದೇ ಹೋದ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದರು. ಆದರೆ, ಒಳ್ಳೆಯ ಚಿತ್ರಗಳನ್ನು ಸರ್ಕಾರ ಕಡೆಗಣಿಸುತ್ತಿದೆ ಎನ್ನುವ ಅಸಮಾಧಾನ ಅವರ ಮಾತುಗಳಲ್ಲಿತ್ತು.`ಕಳೆದ ಏಳೆಂಟು ವರ್ಷಗಳಿಂದಲೂ ಒಳ್ಳೆಯ ಚಿತ್ರಗಳನ್ನು ಕಡೆಗಣಿಸಲಾಗುತ್ತಿದೆ. ಅದರಲ್ಲೂ, ಕಳೆದ ಮೂರು ವರ್ಷಗಳಿಂದ ಸದಭಿರುಚಿಯ ಚಿತ್ರಗಳಿಗೆ ಸರ್ಕಾರ ಸತತವಾಗಿ ಪೆಟ್ಟು ಕೊಟ್ಟಿದೆ. ಕನ್ನಡ ಚಿತ್ರೋದ್ಯಮದ ಬೆಳವಣಿಗೆಗೆ ನಮ್ಮ ಸರ್ಕಾರ ಹಲವು ಸವಲತ್ತುಗಳನ್ನು ಒದಗಿಸಿಕೊಟ್ಟಿದೆ. ಈ ಬಗ್ಗೆ ನಾವು ಹೋದಲ್ಲೆಲ್ಲ ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ. ಆದರೆ, ಇದೇ ಸರ್ಕಾರ ಪ್ರಶಸ್ತಿಗಳನ್ನು ನೀಡುವ ನಿಟ್ಟಿನಲ್ಲಿ ಜವಾಬ್ದಾರಿಯುತವಾಗಿ ವರ್ತಿಸುತ್ತಿಲ್ಲ~.`ಸೂಪರ್ ಚಿತ್ರಕ್ಕೆ ಪ್ರಥಮ ಅತ್ಯುತ್ತಮ ಚಿತ್ರ ಪ್ರಶಸ್ತಿ ನೀಡಲಾಗಿದೆ. ಸಿನಿಮಾದ ಗುಣಮಟ್ಟದ ಬಗ್ಗೆ ನಾನು ಮಾತನಾಡಲಾರೆ. ಆದರೆ, ಚಿತ್ರದ ಛಾಯಾಗ್ರಾಹಕರಾದ ಅಶೋಕ್ ಕಶ್ಯಪ್ ಅವರೇ ಆಯ್ಕೆ ಸಮಿತಿಯಲ್ಲಿದ್ದಾರೆ. ನೈತಿಕವಾಗಿ ಇದು ಸರಿಯಾದುದಲ್ಲ~ ಎಂದು ಶೇಷಾದ್ರಿ ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.