ಮಂಗಳವಾರ, ಜೂನ್ 22, 2021
24 °C

ಸಾಮಾಜಿಕ ಭದ್ರತಾ ಯೋಜನೆ: ಫಲಾನುಭವಿಗಳ ಸಂಖ್ಯೆ ನಿಗದಿ

ಭೀಮಸೇನ ಚಳಗೇರಿ/ ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಪ್ಪಳ: ಸಾಮಾಜಿಕ ಭದ್ರತಾ ಯೋಜನೆಯಡಿ ನೀಡಲಾಗುವ ವಿವಿಧ ಮಾಸಾಶನಗಳಿಗೆ ಸಂಬಂಧಿಸಿದಂತೆ ತಾಲ್ಲೂಕು ಮತ್ತು ಜಿಲ್ಲಾವಾರು ಫಲಾನುಭವಿಗಳ ಸಂಖ್ಯೆಯನ್ನು ನಿಗದಿಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.ನಿಗದಿತ ಸಂಖ್ಯೆಗಿಂತ ಹೆಚ್ಚು ಅರ್ಜಿಗಳು ಬಂದಲ್ಲಿ ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯದ ನಿರ್ದೇಶಕರಿಗೆ ಸೂಕ್ತ ಸ್ಪಷ್ಟೀಕರಣ ನೀಡಿ ಅವರಿಂದ ಅನುಮೋದನೆ ಪಡೆಯುವಂತೆ ಕಂದಾಯ ಇಲಾಖೆ ಸೂಚಿಸಿದೆ.

ಹೀಗಾಗಿ ಸಂಧ್ಯಾ ಸುರಕ್ಷಾ, ನಿರ್ಗತಿಕ ವಿಧವಾ ವೇತನ, ಅಂಗವಿಕಲ ವೇತನ ಹಾಗೂ ಇಂದಿರಾಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ (ವೃದ್ಧಾಪ್ಯ ವೇತನ) ಪಡೆಯುವ ಫಲಾನುಭವಿಗಳ ಸಂಖ್ಯೆ ಇನ್ನು ಮುಂದೆ ಗಣನೀಯವಾಗಿ ಕಡಿಮೆಯಾಗಲಿದೆ.ಯೋಜನೆಯ ದುರುಪಯೋಗವನ್ನು ತಡೆಗಟ್ಟಲು ಕಂದಾಯ ಇಲಾಖೆ ಈ ಕ್ರಮ ಕೈಗೊಂಡಿದೆ. ಒಂದೇ ವ್ಯಕ್ತಿ ಎರಡು ಪಿಂಚಣಿಗಳನ್ನು ಪಡೆದಿರುವ, ಮರಣ ಹೊಂದಿರುವ ವ್ಯಕ್ತಿಗಳ ಮಾಹಿತಿ ದಾಖಲಾಗದ ಕಾರಣ ಪಿಂಚಣಿ ಹಣವನ್ನು ವಿತರಿಸುತ್ತಿರುವ, ಅಂಗವೈಕಲ್ಯ ಇಲ್ಲದಿದ್ದರೂ ಅಂಗವಿಕಲರ ಪಿಂಚಣಿ ಪಡೆಯುತ್ತಿರುವುದನ್ನು ತಪ್ಪಿಸಲು ಈ ಕ್ರಮವನ್ನು ಜಾರಿಗೆ ತರಲಾಗಿದೆ ಎಂದು ಇಲಾಖೆಯ ಆದೇಶದಲ್ಲಿ ವಿವರಿಸಲಾಗಿದೆ.ವೃದ್ಧಾಪ್ಯ ವೇತನ ಪಡೆಯುವ ಫಲಾನುಭವಿಗಳ ವಯೋಮಿತಿಯನ್ನು 65 ವರ್ಷದಿಂದ 60 ವರ್ಷಕ್ಕೆ ಇಳಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ರಾಜ್ಯದಲ್ಲಿ ಈ ಯೋಜನೆಯಡಿ ವೇತನ ಪಡೆಯುತ್ತಿರುವ 60ರಿಂದ 64 ವರ್ಷಗಳ ವಯೋಮಿತಿಯ ಫಲಾನುಭವಿಗಳ ಸಂಖ್ಯೆಯನ್ನು 4,27,915ಕ್ಕೆ ನಿಗದಿಪಡಿಸಿದೆ.ಆದರೆ, 60ರಿಂದ 64 ವರ್ಷ ವಯೋಮಿತಿಯ 93,290 ಜನ ಫಲಾನುಭವಿಗಳು ವಿಧವಾ ವೇತನ ಪಡೆಯುತ್ತಿದ್ದಾರೆ. 5,968 ಜನ ಫಲಾನುಭವಿಗಳು ಅಂಗವಿಕಲ ವೇತನ ಯೋಜನೆಯಡಿ ಪಿಂಚಣಿ ಪಡೆಯುತ್ತಿದ್ದಾರೆ.

 

ಹೀಗಾಗಿ ಇಂದಿರಾಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ ಪಡೆಯುವ ಫಲಾನುಭವಿಗಳ ಸಂಖ್ಯೆಯನ್ನು 3,28,657ಕ್ಕೆ ಸೀಮಿತಗೊಳಿಸಬೇಕಾಗಿದೆ ಎಂದು `ಪ್ರಜಾವಾಣಿ~ಗೆ ಲಭ್ಯವಾಗಿರುವ ದಾಖಲೆಗಳು ಹೇಳುತ್ತವೆ.ಈ ಹಿನ್ನೆಲೆಯಲ್ಲಿ ಒಂದೆಡೆ ವೃದ್ಧಾಪ್ಯ ವೇತನ ಪಡೆಯುವವರ ಸಂಖ್ಯೆಯನ್ನು ಸೀಮಿತಗೊಳಿಸಬೇಕು, ಇನ್ನೊಂದೆಡೆ ನಕಲಿ ಫಲಾನುಭವಿಗಳನ್ನು ಯೋಜನೆಯಿಂದ ಕೈಬಿಡಲು ಜಿಲ್ಲಾವಾರು ಫಲಾನುಭವಿಗಳ ಸಂಖ್ಯೆಯನ್ನು ನಿಗದಿಗೊಳಿಸಲಾಗಿದೆ ಎಂದು ಅಧಿಕಾರಿಗಳು ವಿವರಿಸುತ್ತಾರೆ.ಪ್ರಸ್ತುತ ಕೊಪ್ಪಳ ಜಿಲ್ಲೆಯಲ್ಲಿ 14,175 ಜನ ಫಲಾನುಭವಿಗಳು ವೃದ್ಧಾಪ್ಯ ವೇತನ ಪಡೆಯುತ್ತಿದ್ದಾರೆ. 25,014 ಮಹಿಳೆಯರು ವಿಧವಾ ವೇತನ, 18,576 ಜನರು ಅಂಗವಿಕಲರ ವೇತನ ಹಾಗೂ 37,060 ಜನ ವೃದ್ಧರು ಸಂಧ್ಯಾ ಸುರಕ್ಷಾ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಸಾಮಾಜಿಕ ಭದ್ರತಾ ಯೋಜನೆಯಡಿ ಜಿಲ್ಲೆಯಲ್ಲಿ 94,825 ಜನ ಫಲಾನುಭವಿಗಳಿದ್ದಾರೆ.ಇನ್ನು ನೂತನ ಆದೇಶದಂತೆ ಜಿಲ್ಲೆಗೆ ಸದರಿ ಯೋಜನೆಯಡಿ ವಿವಿಧ ವೇತನ ಪಡೆಯಲು 2,800 ಜನ ಫಲಾನುಭವಿಗಳನ್ನು ನಿಗದಿಪಡಿಸಲಾಗಿದೆ.ಅಂದರೆ ಪ್ರಸ್ತುತ ಜಿಲ್ಲೆಯಲ್ಲಿರುವ ಒಟ್ಟು ಫಲಾನುಭವಿಗಳಿಗೆ ಹೋಲಿಸಿದರೆ, ಹೊಸದಾಗಿ ಶೇ 2.95ರಷ್ಟು ಜನ ಫಲಾನುಭವಿಗಳಿಗೆ ಮಾತ್ರ ಯೋಜನೆಯ ಲಾಭ ಸಿಗಲಿದೆ.ವಿರೋಧ: ಸರ್ಕಾರದ ಈ ನಡೆಗೆ ಈಗಾಗಲೇ ವಿರೋಧ ವ್ಯಕ್ತವಾಗಿದೆ. ನಕಲಿ ಅಥವಾ ಅನರ್ಹ ಫಲಾನುಭವಿಗಳನ್ನು ಪತ್ತೆ ಮಾಡುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಸೂಚಿಸಬೇಕು. ತಪ್ಪಿತಸ್ಥರ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಬೇಕು ಎಂದು ಸೇವಾ ಸಂಸ್ಥೆ ಎಂಬ ಎನ್‌ಜಿಒದ ಅಧ್ಯಕ್ಷ ರಾಜಾ ಬಕ್ಷಿ ಪ್ರತಿಪಾದಿಸುತ್ತಾರೆ.ಇಂತಿಷ್ಟೇ ಸಂಖ್ಯೆಯ ವಿಧವೆಯರು ಇರಬೇಕು ಎಂದು ಹೇಗೆ ಹೇಳಲಾಗುತ್ತದೆ. ಅರ್ಹ ವೃದ್ಧರ ಸಂಖ್ಯೆ ನಿಗದಿತ ಸಂಖ್ಯೆಗಿಂತ ಹೆಚ್ಚಾಗಿದ್ದಲ್ಲಿ ಅನುಮೋದನೆ ಪಡೆಯಲು ಆ ಹಿರಿಯ ಜೀವಗಳು ಕಚೇರಿಗಳಿಗೆ ಎಷ್ಟು ಎಡತಾಕಬೇಕು ಎಂದೂ ಪ್ರಶ್ನಿಸುತ್ತಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.