ಸಾಮೂಹಿಕ ನಾಯಕತ್ವಕ್ಕೆ ಗಡ್ಕರಿ ಸಲಹೆ

ಭಾನುವಾರ, ಮೇ 26, 2019
30 °C

ಸಾಮೂಹಿಕ ನಾಯಕತ್ವಕ್ಕೆ ಗಡ್ಕರಿ ಸಲಹೆ

Published:
Updated:

ಬೆಂಗಳೂರು: ಕೊಪ್ಪಳ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಸಾಮೂಹಿಕ ನಾಯಕತ್ವದಡಿಯೇ ಹೋಗುವಂತೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ರಾಜ್ಯದ ಮುಖಂಡರಿಗೆ ಸಲಹೆ ಮಾಡಿದ್ದಾರೆ.

ಗಡ್ಕರಿ ಜತೆ ಚರ್ಚಿಸಲು ನಾಗಪುರಕ್ಕೆ ಮಂಗಳವಾರ ತೆರಳಿದ್ದ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಇತರರಿಗೆ ಈ ಸಲಹೆ ನೀಡಿದ್ದಾರೆ ಎಂದು ಗೊತ್ತಾಗಿದೆ.ಸಂಜೆ ನಗರಕ್ಕೆ ವಾಪಸಾದ ನಂತರ ಸುದ್ದಿಗಾರರ ಜತೆ ಮಾತನಾಡಿದ ಸದಾನಂದ ಗೌಡ ಅವರು ಎಲ್ಲರೂ ಒಟ್ಟಿಗೇ ಹೋಗಲು ವರಿಷ್ಠರು ಸಲಹೆ ನೀಡಿದ್ದು, ಆ ಪ್ರಕಾರ ನಡೆದುಕೊಳ್ಳುವುದಾಗಿ ಹೇಳಿದರು. ಯಡಿಯೂರಪ್ಪ ನೇತೃತ್ವದಲ್ಲೇ ಚುನಾವಣೆ ಎದುರಿಸಬೇಕೆಂದು ಅವರ ಬೆಂಬಲಿಗ ಕೆಲ ಸಚಿವರು ಇತ್ತೀಚೆಗೆ ನಾಗಪುರಕ್ಕೆ ತೆರಳಿ ಗಡ್ಕರಿ ಅವರಿಗೆ ಮನವಿ ಮಾಡಿದ್ದರು.ಈ ವಿಷಯದಲ್ಲಿ ಮುಖಂಡರಲ್ಲಿಯೂ ಗೊಂದಲ ಉಂಟಾಗಿತ್ತು. ಕೊನೆಗೆ ಮುಖ್ಯಮಂತ್ರಿ ಸದಾನಂದ ಗೌಡ ಅವರು ಗಡ್ಕರಿ ಅವರನ್ನು ಭೇಟಿ ಮಾಡಿಯೇ ಈ ವಿವಾದ ಬಗೆಹರಿಸಿಕೊಳ್ಳಲು ನಿರ್ಧರಿಸಿ, ನಾಗಪುರಕ್ಕೆ ತೆರಳಿದರು. ಜ್ವರದ ಕಾರಣ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ನಾಗಪುರಕ್ಕೆ ಹೋಗಲಿಲ್ಲ.ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮುಖಂಡರಾದ ಸಂತೋಷ್, ಸತೀಶ್ ತೆರಳಿದ್ದರು.

`ಒಬ್ಬರ ನೇತೃತ್ವದಲ್ಲಿ ಚುನಾವಣೆಗೆ ಹೋಗುವುದು ಬೇಡ. ಎಲ್ಲರೂ ಒಗ್ಗಟ್ಟಾಗಿ ಚುನಾವಣೆ ಎದುರಿಸಿ~ ಎನ್ನುವ ಸಲಹೆಯನ್ನು ಗಡ್ಕರಿ ನೀಡಿದರು. ಇದೇ ವೇಳೆ ಯಡಿಯೂರಪ್ಪ ಅವರನ್ನು ಕಡೆಗಣಿಸುವಂತಿಲ್ಲ.

ಅವರನ್ನೂ ಜತೆಗೆ ಕರೆದೊಯ್ಯಬೇಕೆನ್ನುವ ಸಲಹೆಯನ್ನೂ ಅವರು ನೀಡಿದ್ದಾರೆ ಎಂದು ಗೊತ್ತಾಗಿದೆ.ಯಡಿಯೂರಪ್ಪ ಮನವಿ: `ಸುಳ್ಳು ಆರೋಪಗಳ ಹಿನ್ನೆಲೆಯಲ್ಲಿ ನಾನು ಅಗ್ನಿಪರೀಕ್ಷೆ ಎದುರಿಸುತ್ತಿದ್ದು, ಕೊಪ್ಪಳ ಚುನಾವಣೆ ನನ್ನ ನೇತೃತ್ವದಲ್ಲೇ ನಡೆಯಲಿ~ ಎಂದು ಯಡಿಯೂರಪ್ಪ ಮನವಿ ಮಾಡಿದರು ಎನ್ನಲಾಗಿದೆ.

`ಬಳ್ಳಾರಿಯ ಶ್ರೀರಾಮುಲು ಸೇರಿದಂತೆ ಯಾರೇ ಚುನಾವಣೆಗೆ ಸ್ಪರ್ಧಿಸಿದರೂ ನಾನು ಸಮರ್ಥವಾಗಿ ಅದನ್ನು ಎದುರಿಸಿ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಶ್ರಮಿಸುತ್ತೇನೆ.ಹೀಗಾಗಿ ನನ್ನ ನೇತೃತ್ವದಲ್ಲೇ ಚುನಾವಣೆ ನಡೆಯಲಿ~ ಎನ್ನುವ ಮನವಿ ಮಾಡಿದರು ಎನ್ನಲಾಗಿದೆ. ಸದ್ಯದಲ್ಲೇ ಎಲ್ಲ ಆರೋಪಗಳಿಂದ ಮುಕ್ತವಾಗುವ ವಿಶ್ವಾಸ ಇದ್ದು, ಮುಂದಿನ ಸಾರ್ವತ್ರಿಕ ಚುನಾವಣೆ ಕೂಡ ತಮ್ಮ ನೇತೃತ್ವದಲ್ಲೇ ನಡೆಯಲಿ ಎನ್ನುವ ಮನವಿಯನ್ನೂ ಮಾಡಿದರು ಎಂದು ಗೊತ್ತಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry