ಬುಧವಾರ, ಮೇ 18, 2022
25 °C

ಸಾರಿಗೆ ನೌಕರರಿಗೆ ವೇತನ ಹೆಚ್ಚಳ: ಶೀಘ್ರ ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಾರಿಗೆ ಸಂಸ್ಥೆಯ ನೌಕರರಿಗೆ ಶೇ 10ರಷ್ಟು ವೇತನ ಹೆಚ್ಚಿಸುವ ಸಂಬಂಧ ಇನ್ನೊಂದು ವಾರದೊಳಗೆ ಸಚಿವ ಸಂಪುಟ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಗೃಹ ಹಾಗೂ ಸಾರಿಗೆ ಸಚಿವ ಆರ್. ಅಶೋಕ ಬುಧವಾರ ಇಲ್ಲಿ ಹೇಳಿದರು.ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ನೌಕರರ ಸಂಘದ ರಾಜ್ಯ ಸಮಿತಿಯು ನಗರದ ಪುರಭವನದಲ್ಲಿ ಹಮ್ಮಿಕೊಂಡಿದ್ದ ಡಾ.ಬಿ.ಆರ್. ಅಂಬೇಡ್ಕರ್ ಅವರ 121ನೇ ಜನ್ಮ ದಿನಾಚರಣೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.`ವಾಯುವ್ಯ ಹಾಗೂ ಈಶಾನ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳು ನಷ್ಟದಲ್ಲಿವೆ. ಆದರೂ, ಯಾರಿಗೂ ತಾರತಮ್ಯ ಮಾಡದೆ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ಸಂಸ್ಥೆಗಳ ನೌಕರರಿಗೆ ಶೇ 10ರಷ್ಟು ವೇತನ ಹೆಚ್ಚಿಸಲು ನಿರ್ಧರಿಸಲಾಗಿದೆ. ವಾರದೊಳಗೆ ಸಚಿವ ಸಂಪುಟ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಂಡ ನಂತರ ಸರ್ಕಾರ ಆದೇಶ ಹೊರಡಿಸಲಿದೆ~ ಎಂದು ತಿಳಿಸಿದರು.`ವಾಯುವ್ಯ ಹಾಗೂ ಈಶಾನ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳನ್ನು ನಷ್ಟದಿಂದ ಲಾಭದ ಕಡೆಗೆ ತರಲು ನಿರಂತರ ಪ್ರಯತ್ನ ನಡೆದಿದೆ. ಇದಕ್ಕಾಗಿ ತೆರಿಗೆ ವಿನಾಯಿತಿ ಕೂಡ ನೀಡಲಾಗುತ್ತಿದೆ. ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಸಂಸ್ಥೆಗಳು ಲಾಭ ಗಳಿಸಲು ನೌಕರರ ದುಡಿಮೆಯೇ ಕಾರಣ~ ಎಂದರು.`ಈ ಹಿಂದೆ ಸಾರಿಗೆ ಸಂಸ್ಥೆಗೆ ಸಾಲ ನೀಡಲು ಬ್ಯಾಂಕ್‌ಗಳು ಬಹುದೂರ ನಿಲ್ಲುತ್ತಿದ್ದವು. ಇದೀಗ ಸಂಸ್ಥೆಯು ಬಹಳ ಸದೃಢವಾಗಿರುವುದರಿಂದ ಬ್ಯಾಂಕ್‌ಗಳಿ ಸಾಲ ನೀಡಲು `ಕ್ಯೂ~ನಲ್ಲಿ ನಿಲ್ಲುತ್ತಿವೆ~ ಎಂದು ಸಚಿವರು ಹೇಳಿದರು.

`ಬಿಎಂಟಿಸಿಯ ಸಂಚಾರ ಸಾಗಣೆ ಮತ್ತು ನಿರ್ವಹಣಾ ಕೇಂದ್ರವೊಂದಕ್ಕೆ ಅಂಬೇಡ್ಕರ್ ಅವರ ಹೆಸರನ್ನಿಡಲು ಕ್ರಮ ಕೈಗೊಳ್ಳಲಾಗುವುದು~ ಎಂದು ಅವರು ಘೋಷಿಸಿದರು.

 

  

 

 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.