ಭಾನುವಾರ, ಏಪ್ರಿಲ್ 18, 2021
32 °C

ಸಾರ್ವಜನಿಕರಿಗೇಕೆ ಶಿಕ್ಷೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ಮತ್ತು ನೌಕರರ ಮುಷ್ಕರದಿಂದ ಪಾಲಿಕೆಯ ಪ್ರಮುಖ ಸೇವೆಗಳು ಸ್ಥಗಿತಗೊಂಡು, ಜನಸಾಮಾನ್ಯರಿಗೆ ತೀವ್ರ ಅನನುಕೂಲ ಆಗಿದೆ. ಜನನ-ಮರಣ ಪ್ರಮಾಣ ಪತ್ರ ನೀಡುವುದರಿಂದ ಕಸ ವಿಲೇವಾರಿವರೆಗೆ ಎಲ್ಲ ಕೆಲಸಗಳು ನಿಂತಿವೆ.ನಾಗರಿಕರು ಪಾವತಿಸುವ ತೆರಿಗೆ ಹಣದಿಂದ ವೇತನ ಪಡೆಯುವ ಸಿಬ್ಬಂದಿ, ತಮ್ಮ ಬೇಡಿಕೆ ಈಡೇರಿಸಿಕೊಳ್ಳಲು ಅದೇ ನಾಗರಿಕರನ್ನು ಗುರಾಣಿ ಆಗಿಸಿಕೊಳ್ಳುವ ಪರಿಪಾಠ ಸರಿಯಲ್ಲ. ಮುಷ್ಕರಕ್ಕೆ ಪೌರ ಕಾರ್ಮಿಕರೂ ಬೆಂಬಲ ಸೂಚಿಸಿರುವುದರಿಂದ ನಗರದ ವಸತಿ ಪ್ರದೇಶಗಳ ಬೀದಿ ಬೀದಿಗಳಲ್ಲಿ ಕಸ ವಿಲೇವಾರಿ ಆಗದೆ ಗುಡ್ಡೆ ಬಿದ್ದಿದೆ.ಬೀದಿಗಳಲ್ಲಿ ಬಿದ್ದಿರುವ ಕಸವನ್ನು ಒಂದೆರಡು ದಿನಗಳಲ್ಲಿ ಹೊರಕ್ಕೆ ಸಾಗಿಸದಿದ್ದರೆ ಅದು ಕೊಳೆತು ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಮಳೆ ಸುರಿಯುತ್ತಿರುವುದರಿಂದ ಕಸ ಬೇಗ ಕೊಳೆತು ನಾತ ಹೊಡೆಯುವ ಸಾಧ್ಯತೆಗಳು ಹೆಚ್ಚಾಗಿವೆ. ಅಲ್ಲದೇ ಅದೇ ಕಸ ಚರಂಡಿಗಳಿಗೆ ಬಿದ್ದು ಮಳೆ ನೀರು ಸಲೀಸಾಗಿ ಹರಿಯಲು ಸಾಧ್ಯವಾಗದೆ ತಗ್ಗು ಪ್ರದೇಶಗಳಿಗೆ ನುಗ್ಗುವ ಅಪಾಯ ಇದ್ದೇ ಇದೆ.ಸೇವೆ ಸ್ಥಗಿತಗೊಳಿಸುವ ನಿರ್ಧಾರಕ್ಕೆ ಬರುವ ಮೊದಲು ಎಂಜಿನಿಯರುಗಳು ಮತ್ತು ನೌಕರರು ನಗರದ ನಿವಾಸಿಗಳಿಗೆ ಆಗುವ ಇಂತಹ ತೊಂದರೆಗಳ ಬಗ್ಗೆ ಅರೆಕ್ಷಣ ಯೋಚಿಸಬೇಕಿತ್ತು. ಅಷ್ಟಕ್ಕೂ ಬೇಡಿಕೆ ಈಡೇರಿಸಿಕೊಳ್ಳಲು ಸೇವೆ ಸ್ಥಗಿತಗೊಳಿಸುವುದೊಂದೇ ಮಾರ್ಗೋಪಾಯವೆ?ಪಾಲಿಕೆಯ ಎಂಜಿನಿಯರುಗಳು ಮತ್ತು ನೌಕರರ ವಿರುದ್ಧ ಬೆಂಗಳೂರು ಮಹಾನಗರ ಕಾರ್ಯಪಡೆ (ಬಿಎಂಟಿಎಫ್) ದಾಖಲಿಸಿರುವ ಕ್ರಿಮಿನಲ್ ಮೊಕದ್ದಮೆಗಳನ್ನು ವಾಪಸು ಪಡೆಯಬೇಕು ಎಂದು ಆಗ್ರಹಿಸಿ ಈ ಮುಷ್ಕರ ನಡೆಸಲಾಗುತ್ತಿದೆ. ಮಂಜೂರಾತಿ ಪಡೆದ ನಕ್ಷೆಯ ವ್ಯಾಪ್ತಿ ಮೀರಿ ಕಟ್ಟಡ ನಿರ್ಮಾಣ, ನಿವೇಶನ ಖಾತಾ ವರ್ಗಾವಣೆ ಮತ್ತಿತರ ತಕರಾರುಗಳಿಗೆ ಸಂಬಂಧಿಸಿದ ಗಂಭೀರ ಸ್ವರೂಪದ ಸಾರ್ವಜನಿಕ ದೂರುಗಳನ್ನು ಕ್ರಿಮಿನಲ್ ಪ್ರಕರಣಗಳಾಗಿ ಪರಿವರ್ತಿಸುವ ಮೂಲಕ ಬಿಎಂಟಿಎಫ್ ತಮಗೆ ಕಿರುಕುಳ ನೀಡುತ್ತಿದೆ ಎಂಬುದು ನೌಕರರ ಆರೋಪ.

 

ನಕ್ಷೆ ಮಂಜೂರಾತಿ ಪಡೆಯದೆ ಮತ್ತು ಅನುಮತಿ ಪಡೆದ ನಂತರ ನಕ್ಷೆಯ ವ್ಯಾಪ್ತಿ ಉಲ್ಲಂಘಿಸಿ ಕಟ್ಟಡ ನಿರ್ಮಿಸುವ ಪ್ರಕರಣಗಳ ಸಂಖ್ಯೆ ನಗರದಲ್ಲಿ ದಿನೇ ದಿನೇ ಹೆಚ್ಚುತ್ತಿದೆ. ಸರ್ಕಾರಕ್ಕೆ ಇದು ತಲೆನೋವಾಗಿಯೂ ಪರಿಣಮಿಸಿದೆ. ಇದನ್ನು ನಿಯಂತ್ರಿಸಲು ಅಧಿಕಾರಿಗಳು ವಿಫಲ ಆಗಿರುವುದರಿಂದಲೇ ಅಕ್ರಮ ಕಟ್ಟಡಗಳ ಹಾವಳಿ ಹೆಚ್ಚಾಗಿರುವುದು.ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾದರೆ ಯಾವುದೋ ಒಂದು ತಾಂತ್ರಿಕ ಲೋಪ ಹುಡುಕಿ ಮುಷ್ಕರ ಹೂಡುತ್ತಾರೆ. ಹೀಗಾದರೆ ಅಕ್ರಮಗಳಿಗೆ ಕಡಿವಾಣ ಹಾಕುವುದಾದರೂ ಹೇಗೆ? ವಿವಿಧ ನ್ಯಾಯಾಲಯಗಳಲ್ಲಿ ದಾಖಲಿಸಿರುವ ಎಲ್ಲ ಮೊಕದ್ದಮೆಗಳನ್ನು ಕೂಡಲೇ ಹಿಂದಕ್ಕೆ ಪಡೆಯಬೇಕು ಎಂದರೆ ಸರ್ಕಾರಕ್ಕೆ ಅದು ಕಷ್ಟದ ಕೆಲಸ.ಪಾಲಿಕೆ ಅಧಿಕಾರಿ/ನೌಕರರ ಸಂಘದ ಪದಾಧಿಕಾರಿಗಳು ಮತ್ತು ಸಂಬಂಧಿಸಿದ ಸಚಿವರು ಒಂದೆಡೆ ಕುಳಿತು ಮಾತುಕತೆ ಮೂಲಕ ತಕ್ಷಣ ಬಿಕ್ಕಟ್ಟು ಬಗೆಹರಿಸಬೇಕು. ಜನರಿಗೆ ಆಗುತ್ತಿರುವ ತೊಂದರೆ ನಿವಾರಿಸಬೇಕು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.