ಶನಿವಾರ, ಜನವರಿ 18, 2020
27 °C
ಸಂಸದರಿಂದ ಹೆದ್ದಾರಿಯ ಸಮಸ್ಯೆಗಳ ಖುದ್ದು ವೀಕ್ಷಣೆ

ಸಾರ್ವಜನಿಕ ಸಭೆ ನಡೆಸದ ಅಧಿಕಾರಿಗಳು

ಸಾರ್ವಜನಿಕ ಸಭೆ ನಡೆಸದ ಅಧಿಕಾರಿಗಳು Updated:

ಅಕ್ಷರ ಗಾತ್ರ : | |

ಹಾವೇರಿ: ಬಹುದಿನಗಳಿಂದ ನನೆನೆಗುದಿಗೆ ಬಿದ್ದ ರಾಷ್ಟ್ರೀಯ ಹೆದ್ದಾರಿ–- ೪ರಲ್ಲಿನ ಸಮಸ್ಯೆಗಳಿಗೆ ಆದಷ್ಟು ಬೇಗ ಪರಿಹಾರ ಒದಗಿಸಬೇಕು ಎಂದು ಸಂಸದ ಶಿವಕುಮಾರ ಉದಾಸಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಿದರು.ಮಂಗಳವಾರ ಜಿಲ್ಲೆಯ ರಾಣೆಬೆನ್ನೂರ ತಾಲ್ಲೂಕಿನ ಚಳಗೇರಿಯಿಂದ ಹಿಡಿದು ಹಾವೇರಿ ತಾಲ್ಲೂಕಿನ ನೆಲೋಗಲ್‌ವರೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಮಸ್ಯೆಗಳ ಖುದ್ದು ಪರಿಶೀಲನೆ ನಡೆಸಿದ ನಂತರ ಅವರು, ಯಾವುದೇ ಕಾರಣಕ್ಕೂ ವಿಳಂಬ ಮಾಡದೇ ಅಗತ್ಯ ಸೌಲಭ್ಯ ನೀಡುವುದರ ಜತೆಗೆ ಸಮಸ್ಯೆಗಳಿಗೆ ಪರಿಹಾರ ನೀಡಬೇಕು ಎಂದು ಹೇಳಿದರು.ಹೆದ್ದಾರಿಯ ಬಹುತೇಕ ಕಡೆಗಳಲ್ಲಿ ಸರ್ವಿಸ್‌ ರಸ್ತೆಗಳಿಲ್ಲ. ಸರ್ವಿಸ್‌ ರಸ್ತೆಗಳು ಇದ್ದಲ್ಲಿ ರಕ್ಷಣಾ ತಡೆಗೋಡೆ ಇಲ್ಲ. ಸರ್ವಿಸ್‌ ರಸ್ತೆಗಳು ಸಂಪೂರ್ಣ ಕಳಪೆ ಮಟ್ಟದ್ದಾಗಿವೆ. ಹೆದ್ದಾರಿಗೆ ನೀಡಬೇಕಾದ ಅಗತ್ಯ ಸೌಲಭ್ಯಗಳನ್ನು ನೀಡದ ಕಾರಣ, ಹೆದ್ದಾರಿ ಜನರನ್ನು ಬಲಿ ತೆಗೆದುಕೊಳ್ಳುವ ತಾಣಗಳಾಗಿವೆ. ಜನ, ಜಾನುವಾರು ಹೆದ್ದಾರಿ ಮೇಲೆ ಹೋದರೆ, ಸುರಕ್ಷಿತವಾಗಿ ಮನೆಗೆ ಸೇರುವ ಭರವಸೆಯೇ ಇಲ್ಲ ಎಂದು ಜನರು ಸಂಸದರು ಎದುರು ಸಮಸ್ಯೆಗಳ ಸರಮಾಲೆಯನ್ನೇ ಬಿಚ್ಚಿಟ್ಟರು.ಜನರ ಸಮಸ್ಯೆಗಳನ್ನು ಆಲಿಸಿದ ಸಂಸದ ಶಿವಕುಮಾರ ಅವರು, ಕೂಡಲೇ ಸಮರ್ಪಕ ಸರ್ವೀಸ್‌ ರಸ್ತೆಗಳ ಜತೆಗೆ ರಕ್ಷಣಾ ತಡೆಗೋಡೆ ನಿರ್ಮಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರಲ್ಲದೇ, ನೆಲೋಗಲ್ಲ, ಮೊಟೆಬೆನ್ನೂರು, ಕಾಕೋಳ, ಚಳಗೇರಿ, ಕಮಡೂರ ಸೇರಿದಂತೆ ಇನ್ನಿತರ ಸ್ಥಳಗಳಲ್ಲಿ ಈಗಿರುವ ಸಮಸ್ಯೆಯನ್ನು ಷಟ್ಪಥ ರಸ್ತೆ ನಿರ್ಮಾಣ ಮಾಡುವ ಸಂದರ್ಭದಲ್ಲಿ ಸರಿ ಮಾಡಬೇಕು ಎಂದು ಸಲಹೆ ಮಾಡಿದರು. ಸ್ಥಳ ವೀಕ್ಷಣೆ ಬಳಿಕ ನಗರದಲ್ಲಿರುವ ಸಂಸದರ ಕಚೇರಿಯಲ್ಲಿ ಸಭೆ ನಡೆಸಿ, ಪ್ರಾಧಿಕಾರದ ಸ್ಥಳೀಯ ಅಧಿಕಾರಿಗಳು ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಮಾಡಬಹುದಾದ ಕೆಲಸಗಳನ್ನು ಕೂಡಲೇ ಮಾಡಬೇಕು. ಸರ್ಕಾರದ ಮಟ್ಟದಲ್ಲಿ ಆಗಬೇಕಾದ ಕೆಲಸಗಳ ಪಟ್ಟಿ ಮಾಡಿ ತಮಗೆ ನೀಡಬೇಕು. ಆ ಪಟ್ಟಿಯನ್ನು ಮುಂದೆ ನಡೆಯುವ ಲೋಕಸಭೆ ಅಧಿವೇಶನದ ವೇಳೆ ಸಂಬಂಧಪಟ್ಟ ಸಚಿವರೊಂದಿಗೆ ಚರ್ಚಿಸಿ ಬಗೆಹರಿಸುವ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.ಡಿ.22 ರಂದು ಚಿತ್ರದುರ್ಗ ವಿಭಾಗದ ಹೆದ್ದಾರಿ ಅಧಿಕಾರಿಗಳ ಸಭೆಯನ್ನು ಬೆಂಗಳೂರಿನಲ್ಲಿ ಕರೆಯಲಾಗಿದ್ದು, ಆ ಸಭೆಯಲ್ಲಿ ಜಿಲ್ಲೆಯಲ್ಲಿ ಹಾದು ಹೋಗಿರುವ ಹೆದ್ದಾರಿಯ ಸಮಸ್ಯೆ ಹಾಗೂ ಅವುಗಳಿಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲಾಗುವುದು ಎಂದು ಸಂಸದ ಉದಾಸಿ ತಿಳಿಸಿದರು.ಈ ಸಂದರ್ಭದಲ್ಲಿ ಹೆದ್ದಾರಿ ಪ್ರಾಧಿಕಾರದ ಚಿತ್ರದುರ್ಗ ವಿಭಾಗದ ವ್ಯವಸ್ಥಾಪಕ ಸೋಮಶೇಖರ ಇದ್ದರು.ಸಭೆ ನಡೆಸದ ಅಧಿಕಾರಿಗಳು:ರಾಷ್ಟ್ರೀಯ ಪ್ರಾಧಿಕಾರದ ಅಧಿಕಾರಿಗಳು ಡಿ. 3 ರಂದು ಸಾರ್ವಜನಿಕ ಸಭೆ ನಡೆಸುವುದಾಗಿ ಹೇಳಿದ್ದರೂ, ಸಭೆಯನ್ನು ನಡೆಸದೇ ಕೇವಲ ಸಂಸದರ ಕಚೇರಿಯಲ್ಲಿ ಕಾಟಾಚಾರದ ಸಭೆ ನಡೆಸಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.ಈ ಹಿಂದೆ ನ.19 ರಂದು ಕರೆದ ಸಭೆಯ ಬಗ್ಗೆ ಯಾರಿಗೂ ಮಾಹಿತಿಯೇ ಇಲ್ಲ. ಅಧಿಕಾರಿಗಳು ಕಾಟಾಚಾರಕ್ಕೆ ಸಭೆ ಮಾಡುತ್ತಿದ್ದಾರೆ. ಬೇರೆ ದಿನಾಂಕ ನೀಡಿ ಸಾರ್ವಜನಿಕರ ಸಭೆ ಕರೆಯಬೇಕೆಂಬ ಜನರ ಒತ್ತಾಯಕ್ಕೆ ಮಣಿದ ಅಧಿಕಾರಿಗಳು, ಡಿ.3 ರಂದು ಸಭೆ ನಡೆಸುವುದಾಗಿ ಹೇಳಿದ್ದರು. ಆದರೆ, ಸಭೆ ಮಾಡದೇ ವಾಪಸ್ಸಾಗಿದ್ದಾರೆ.ಅದು ಅಲ್ಲದೇ, ಪ್ರಾಧಿಕಾರದ ಅಧಿಕಾರಿಗಳು ಸಾರ್ವಜನಿಕರ ಸಭೆ ನಡೆಸುವುದಿರಲಿ, ಸಂಸದರ ಸ್ಥಳ ಭೇಟಿಯ ಬಗ್ಗೆಯೂ ಮಾಧ್ಯಮದವರಿಗೆ ಮಾಹಿತಿ ನೀಡದೇ, ಸಂಸದರನ್ನು ಗೌಪ್ಯವಾಗಿ ಪರಿಶೀಲನೆಗೆ ಕರೆದುಕೊಂಡು ಹೋಗಿರುವುದು ಅವರ ಕಾರ್ಯವೈಖರಿಗೆ ಬಗ್ಗೆ ಸಂಶಯ ಪಡುವಂತಾಗಿದೆ ಎಂದು ಯುವ ಮುಖಂಡ ಸಿದ್ದರಾಜ ಕಲಕೋಟಿ ಹೇಳಿದ್ದಾರೆ. ಕೇಂದ್ರ ಸಚಿವರಿಗೆ ಪತ್ರ: ಡಿ. ೩ರಂದು ಸಭೆ ನಡೆಸಲು ಸ್ವತಃ ಸಂಸದರೇ ಆದೇಶಿಸಿದ್ದರು. ಅದನ್ನೂ ಗಾಳಿಗೆ ತೂರಿರುವ ಪ್ರಾಧಿಕಾರದ ಅಧಿಕಾರಿಗಳು, ಸಾರ್ವಜನಿಕರಿಗೆ ಮಾಹಿತಿ ನೀಡದಿರುವ ಬಗ್ಗೆ ಹಾಗೂ ಕೆಲವೇ ಜನರ ಸಮ್ಮುಖದಲ್ಲಿ ಸಭೆ ನಡೆಸಿರುವ ಕುರಿತು ಸಂಬಂಧಪಟ್ಟ ಸಚಿವರಿಗೆ ಪತ್ರ ಬರೆದು ಇಲ್ಲಿನ ಅಧಿಕಾರಿಗಳ ಕಾರ್ಯವೈಖರಿಯನ್ನು ಗಮನಕ್ಕೆ ತರಲಾಗುವುದು ಎಂದು ವಕೀಲ ಪರಶುರಾಮ ಅಗಡಿ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)