ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಯವ ಗುರುಕುಲ

Last Updated 21 ಅಕ್ಟೋಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರಿನ ಸಮೀಪದ ತೋಟವೊಂದರಲ್ಲಿ ಬೆಳ್ಳನೆಯ ವಿದೇಶಿ ಯುವತಿಯರು ಕೆಲಸ ಮಾಡುತ್ತಿದ್ದಾರೆ. ದೂರದ ಅಮೆರಿಕದ ವಿನ್ಸೆಂಟೊ ವಿಶ್ವವಿದ್ಯಾಲಯದವರಾದ ಅವರೆಲ್ಲಾ ಹುಡುಕಿ ಬಂದಿದ್ದು ದೊಡ್ಡಬಳ್ಳಾಪುರದ ಸಮೀಪ ಇರುವ ಒಬ್ಬ ‘ಕೃಷಿ ತಪಸ್ವಿ’ಯನ್ನು! ಪುಸ್ತಕದ ಬದನೆಕಾಯಿಗಳನ್ನು ಬದಿಗಿಟ್ಟು, ದಿನವೆಲ್ಲಾ ತಮ್ಮ ಪಾಲಿಗೆ ಬಂದ ಕೆಲಸಗಳನ್ನು ಪೂರೈಸಿ ಸಂಜೆ ತೋಟದಲ್ಲೇ ಮರವೊಂದರ ಕೆಳಗೆ ಕೂತು ಅವರೊಡನೆ ಇಂಗ್ಲಿಷ್ ಭಾಷೆಯಲ್ಲಿ ಸಂಭಾಷಣೆ. ಲೋಕಾಭಿರಾಮವಾಗಿ ಆರಂಭವಾಗುವ ಸಂಭಾಷಣೆ ಸಸ್ಯ ವಿಜ್ಞಾನದ ಆಳ ಅಗಲಕ್ಕೂ ವಿಸ್ತರಿಸುತ್ತದೆ.

ಆಧುನಿಕ ರಾಸಾಯನಿಕ ಕೃಷಿಯನ್ನು, ಅದರ ಹಿಂದಿರುವ ಟೊಳ್ಳು ವಿಜ್ಞಾನವನ್ನು ಧಿಕ್ಕರಿಸಿ, ಸಾವಯವ ಕೃಷಿಗೆ ಮಾದರಿ ಎನ್ನುವಂತೆ ಸ್ವಾವಲಂಬನೆಯಿಂದ ಬದುಕು ನಡೆಸುತ್ತಿರುವ ಡಾ. ನಾರಾಯಣ ರೆಡ್ಡಿ ಅವರು ಶಾಲೆಗೆ ಅಂತ ಹೋಗಿದ್ದು ೨ನೆ ತರಗತಿಯ ತನಕ ಮಾತ್ರ! ರೆಡ್ಡಿಯವರ ತೋಟ, ಮನೆ ಹಾಗೂ ಅವರ ಪರಿಶ್ರಮ ಸಾವಯವ ಕೃಷಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಗುರುಕುಲವೆಂದೇ ಗುರುತಿಸಲ್ಪಟ್ಟಿದೆ. ರೆಡ್ಡಿಯವರು ಸುಮಾರು ೩೦ ವರ್ಷಗಳ ಹಿಂದೆ ದುಡಿದು ಕೂಡಿಟ್ಟ ಹಣದಿಂದ ಖರೀದಿಸಿದ ಜಮೀನಿನಲ್ಲಿ ಆರಂಭಿಸಿದ್ದು ತರಕಾರಿ ಬೆಳೆ.

ಇವರು ಕೂಡಾ ಮೊದಮೊದಲಿಗೆ ಸಹಜವಾಗಿಯೇ ಹೆಚ್ಚಿನ ಲಾಭದಾಸೆಗೆ ರಾಸಾಯನಿಕ ಕೃಷಿಗೆ ಮಾರುಹೋಗಿದ್ದವರು.  ರಾಸಾಯನಿಕದಿಂದ ಸತ್ವ ಕಳೆದುಕೊಳ್ಳುತ್ತಿದ್ದ ಮಣ್ಣು ದಿನದಿನಕ್ಕೂ ಹೆಚ್ಚಿನ ರಾಸಾಯನಿಕಗಳ ಹೂಡಿಕೆ ಬೇಡುತ್ತಿತ್ತು. ಎಂದೆಂದಿಗೂ ರಾಸಾಯನಿಕ ಕೃಷಿಯು ಅಧೋಗತಿಯತ್ತಲೇ ಎಂಬುದನ್ನು ಬಹು ಬೇಗನೆ ಮನಗಂಡ ರೆಡ್ಡಿಯವರು ಹೆಂಡತಿ ಸರೋಜಮ್ಮನವರ ಸಲಹೆಯಂತೆ ಮತ್ತೆ ಪಾರಂಪರಿಕ ಪದ್ಧತಿಗೆ ಮರಳುವ ಯೋಚನೆ ಮಾಡಿದರು.

ಸಾವಯವ ಕೃಷಿ, ಭಾರತೀಯರಿಗೆ ಸಾಂಪ್ರದಾಯಿಕವೇ ಆದರೂ ಬಲಿತ ವಿಜ್ಞಾನದ ಇತರ ಶಾಖೆಯೊಂದಿಗೆ ಸಮಾನಾಂತರವಾಗಿ ಗುರುತಿಸಿಕೊಳ್ಳುವಲ್ಲಿ ಸೋತಿತ್ತು. ಆಂಗ್ಲರ ಶಿಕ್ಷಣದ ಪರಿಣಾಮವಾಗಿ ಭಾರತೀಯರ ಮಾನಸಿಕತೆ ದೇಶಿಯವಾದದ್ದನ್ನೆಲ್ಲಾ ದೂಷಿಸುವ ಕೀಳು ಸಂಪ್ರದಾಯಕ್ಕೆ ಜೋತು ಬಿದ್ದಿತ್ತು. ಸಾವಯವ ಕೃಷಿಯನ್ನು ಆಧುನಿಕ ವಿಜ್ಞಾನವು ಒಪ್ಪಿಕೊಳ್ಳುವ ಮಟ್ಟಕ್ಕೆ ವ್ಯಾಖ್ಯಾನಿಸುವ ಜರೂರು ಇದ್ದೇ ಇತ್ತು.

ಸಾಂಪ್ರದಾಯಿಕ ಸಾವಯವ ಕೃಷಿಯನ್ನು ಪರಿಷ್ಕರಿಸಿದವರು ಹಲವರಾದರೂ, ನಾರಾಯಣ ರೆಡ್ಡಿ, ಕೃಷಿ ವಿಜ್ಞಾನದಲ್ಲಿ ಪ್ರಾಯೋಗಿಕವಾಗಿ ಹಾಗೂ ತುಲನಾತ್ಮಕ ಅಧ್ಯಯನದಲ್ಲಿ ಬಲು ಕುಶಲಿಯೂ ಹೌದು. ನಮ್ಮವೇ ಕೃಷಿ ವಿಶ್ವವಿದ್ಯಾಲಯಗಳು ಹಾಗೂ ಇಲಾಖೆಗಳು ಮೈಮರೆವಿನಿಂದ ಕೂತಿದ್ದರೂ, ರೆಡ್ಡಿ ಏಕ ವ್ಯಕ್ತಿ ವಿಶ್ವವಿದ್ಯಾಲಯವೇ ಆಗಿದ್ದಾರೆ.

ಕೃಷಿ ಋಷಿ ಎಂದೇ ಪರಿಚಿತರಾಗಿದ್ದ ಪುರುಷೋತ್ತಮರಾಯರಿಂದ ಜಪಾನಿನ ತತ್ವಜ್ಞಾನಿ ಮೊಸನಾಬ ಫುಕುವೊಕ ತನಕ ಹೆಚ್ಚಿನ ಪ್ರಯೊಗಶೀಲರ ಸಂಪರ್ಕ ಸಾಧಿಸಿದವರೂ ಹೌದು. ಹಾಗಾಗಿಯೇ ರೆಡ್ಡಿಯವರನ್ನು ವಿನ್ಸೆಂಟೊ ಮೊದಲಾದ ವಿಶ್ವವಿದ್ಯಾಲಯಗಳು ಗುರುತಿಸಿ ಅವರ ವಿದ್ಯಾರ್ಥಿಗಳನ್ನು ಅಧ್ಯಯನಕ್ಕೆಂದು ಇಲ್ಲಿಯ ತನಕ ಕಳಿಸುತ್ತಿವೆ. ಹಾಗೆಯೇ ಬಂದು ಕೆಲಸ ಮಾಡುತ್ತಿರುವ ಯುವತಿಯರೇ ಮೊನ್ನೆ ತೋಟದ ಮಧ್ಯೆ ನಮ್ಮ ಕಣ್ಣಿಗೆ ಕಂಡವರು.

ಹೀಗೆ ಬರುವ ಹಲವರಿಗಾಗಿ ರೆಡ್ಡಿಯವರು ಒಂದು ಸುಸಜ್ಜಿತವಾದ ವಸತಿ ಸಮುಚ್ಚಯವನ್ನು ತೋಟದ ಮಧ್ಯದಲ್ಲಿ  ನಿರ್ಮಿಸಿದ್ದಾರೆ. ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಮಾತ್ರವಲ್ಲದೆ ಹಲವು ರೈತಾಪಿಗಳು ರೆಡ್ಡಿಯವರ ಸಹವಾಸ ಬಯಸಿ ಬರುತ್ತಾರೆ. ಇತ್ತೀಚೆಗೆ ಆಸುಪಾಸಿನ ಶಾಲಾ ವಿದ್ಯಾರ್ಥಿಗಳಿಗೂ ವರ್ಷಕ್ಕೆ ಕೆಲವು ದಿನಗಳ ಶಿಬಿರಗಳನ್ನು ನಡೆಸುತ್ತಿದ್ದಾರೆ. ಮಾತ್ರವಲ್ಲದೆ ಆ ಮಕ್ಕಳಲ್ಲಿ ಕೆಲವರು ಬೇಸಿಗೆ ರಜೆಯಲ್ಲಿ ಮತ್ತೆ ತಾವಾಗಿಯೇ ಅಪೇಕ್ಷಿಸಿ ರೆಡ್ದಿಯವರನ್ನು ಹುಡುಕಿ ಬಂದು ಕೃಷಿ ಕೆಲಸಗಳಲ್ಲಿ ಆಸಕ್ತಿ ತೋರುತ್ತಿರುವುದು ಅವರಿಗೆ ಹೆಚ್ಚಿನ ಖುಷಿ ಕೊಟ್ಟಿದೆ.

ಕಟು ವಾಸ್ತವ ವಾದಿಗಳಾದ ರೆಡ್ಡಿ, ಸೋಮಾರಿ ಇಲ್ಲವೆ ಶೋಕಿ ಲಾಲರನ್ನು ಮೆಚ್ಚಲಾರರು. ಸಾವಯವ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಅಪೇಕ್ಷಿಸಿ ಯಾರೇ ಅರಸಿ ಬಂದರೂ ರೆಡ್ಡಿ ಸಕಾರಾತ್ಮಕವಾಗಿಯೇ ಸ್ಪಂದಿಸುತ್ತಾರೆ. ಬಾಬಾ ರಾಮ್ ದೇವ ಕೂಡಾ ರೆಡ್ಡಿಯವರ ಗುರುಕುಲದ ವಿಶೇಷತೆಯನ್ನು ಮನಗಂಡು, ತಮ್ಮ ಪತಂಜಲಿ ಕೆಂದ್ರದ ವತಿಯಿಂದ ಕೃಷಿ ಆಸಕ್ತರಿಗಾಗಿ ಶಿಬಿರಗಳನ್ನು  ಇದೇ ಗುರುಕುಲದಲ್ಲಿ ಆಯೋಜಿಸುತ್ತಿದ್ದಾರೆ.

ಸಸ್ಯ ವಿಜ್ಞಾನದ ಸೂಕ್ಷ್ಮವನ್ನೂ ಸಾಮಾನ್ಯರೂ ಅರ್ಥೈಸುವಂತೆ ವಿವರಿಸುವ ರೆಡ್ಡಿಯವರ ಮಾತು ಹಾಸ್ಯಮಯ ಉದಾಹರಣೆಯಿಂದಲೂ, ಕಟು ವಾಸ್ತವದಿಂದಲೂ ಕೂಡಿರುತ್ತದೆ.  ಆಧುನಿಕವೆಂದು ಬಿಂಬಿಸಲಾದ ರಾಸಾಯನಿಕ ಕೃಷಿ ಪದ್ಧತಿಯನ್ನು ಪೋಷಿಸಲು ಕಂಪೆನಿಗಳ ಹುನ್ನಾರ ಹಾಗೂ ಅವರ ತಾಳಕ್ಕೆ ನರ್ತಿಸುವ ಡೋಂಗಿ ವಿಜ್ಞಾನಿಗಳ ಪಿತೂರಿಗಳನ್ನು ರೆಡ್ಡಿ ಎಳೆಎಳೆಯಾಗಿ ಬಿಡಿಸಿ ತೋರಿಸಬಲ್ಲರು.

ಭಾರತೀಯರ ಸಾಂಪ್ರದಾಯಿಕ ಕೃಷಿ  ಸ್ವಾತಂತ್ರ್ಯಾನಂತರ ಹೇಗೆ ಸರ್ಕಾರದ ತಪ್ಪು ನಿರ್ಧಾರ ಹಾಗೂ ಲಾಭಕೋರ ಕಂಪೆನಿಗಳ ಕುತಂತ್ರಕ್ಕೆ ಬಲಿಯಾಗಿ ತನ್ನ ಸ್ವಂತಿಕೆಯನ್ನು ಕಳೆದುಕೊಳ್ಳುತ್ತಾ ಬಂತು, ಆ ತಪ್ಪುಗಳನ್ನು ಸರಿಪಡಿಸಿಕೊಳ್ಳಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂಬುದನ್ನು ತಮ್ಮದೇ ಶೈಲಿಯಲ್ಲಿ ಮಂಡಿಸುತ್ತಾರೆ.

ಕೃಷಿ ಕ್ಷೇತ್ರದಲ್ಲಿ ಸಾಲ ಸೋಲ, ಆತ್ಮಹತ್ಯೆ ಇದಕ್ಕೆಲ್ಲಾ ಆಸ್ಪದವೇ ಇಲ್ಲ ಎನ್ನುವ ರೆಡ್ಡಿ, ವ್ಯವಹಾರ ಕುಶಲರೂ ಹೌದು. ಕೃಷಿಕ ವೈಜ್ಞಾನಿಕನು ಮಾತ್ರವಲ್ಲ, ವ್ಯಾವಹಾರಸ್ಥನೂ ಆಗಿರಬೇಕೆಂಬುದು ರೆಡ್ಡಿಯವರ ನಿಲುವು. ನಮ್ಮ ಕಾಲಘಟ್ಟದಲ್ಲಿ ಸಾವಯವ ಕೃಷಿ ಕೇವಲ ಉದ್ಯೋಗವಾಗಿರದೆ, ಮಾನವನ ಅಳಿವು ಉಳಿವಿನ ಪ್ರಶ್ನೆಗೆ ಉತ್ತರವು ಆಗಿದೆ.

ಕೃಷಿಕ, ಸರಳತೆಯೊಂದಿಗೆ ಸಮಾಜಮುಖಿ ಆಗಲೇಬೇಕಾದ ಜವಾಬ್ದಾರಿ ಎದುರು ನಿಂತಿದೆ. ನಾರಾಯಣ ರೆಡ್ಡಿಯವರು ಕೃಷಿ ಬಗ್ಗೆ ಮಾತ್ರ ಮಾತನಾಡದೆ ಒಟ್ಟಾರೆಯಾಗಿ ನಮ್ಮ ಜೀವನಶೈಲಿಯೇ ಸಾವಯವಕ್ಕೆ  ಒಗ್ಗಿಕೊಳ್ಳಬೇಕೆನ್ನುವರು. ಕೃಷಿ ಮಿತ್ರರ ಒಡನಾಟ, ಕಾರ್ಯಕ್ರಮಗಳ ಸಲುವಾಗಿ ಸದಾ ದೇಶ ವಿದೇಶಗಳ ಪ್ರವಾಸ ಮಾಡುತ್ತಲೇ ಇರಬೇಕಾದ ಅನಿವಾರ್ಯತೆ ರೆಡ್ಡಿ ಅವರಿಗಿದೆ.

ಬಿಡುವಿಲ್ಲದ ತಮ್ಮ ದಿನಚರಿಯ ಮಧ್ಯೆಯೂ ಎಲ್ಲಾ ಪ್ರವಾಸಗಳನ್ನೂ ಹಳ್ಳಿಮೂಲೆಯಿಂದಲೆ ಸ್ವಂತ ವಾಹನವಿಲ್ಲದೆ, ಸಾರ್ವಜನಿಕ ಸಾರಿಗೆ ಮಾತ್ರ ಬಳಸುತ್ತಾ ನಿರ್ವಹಿಸುತ್ತಿರುವ ನಾರಾಯಣ ರೆಡ್ಡಿಯವರ ವಯಸ್ಸು ಕೇವಲ ೭೮!
.....

‘ಒಂದೇ ಒಂದು ಮಿಂಚು ಬಂದಾಗ ಲಕ್ಷಾಂತರ ಟನ್‌ ಸಾರಜನಕ ಭೂಮಿಗೆ ಬೀಳುತ್ತದೆ. ಮಿಂಚಿನ 2,600 ಸೆಂಟಿಗ್ರೇಡ್‌ ಉಷ್ಣತೆಗೂ ಹಾಗೂ ಮೋಡಗಳ ಒತ್ತಡಕ್ಕೂ ಅದು ಅಮೋನಿಯಾ ಆಗಿ ಪರಿವರ್ತನೆಗೊಂಡು, ಕೋಟ್ಯಂತರ ಟನ್‌ ಸಾರಜನಕ ಭೂಮಿಗೆ ಸೇರುತ್ತದೆ. ಅದೇ ಕಾರಣಕ್ಕೆ, ಮಿಂಚು ಸಿಡಿಲು ಬಂದಾಗ ಮೂರು ಗಂಟೆಗಳಲ್ಲೇ ಸಸ್ಯಗಳು ತಮ್ಮ ಬಣ್ಣವನ್ನು ಬದಲಿಸುತ್ತವೆ’ ಎನ್ನುವ ವೈಜ್ಞಾನಿಕ ಕಾರಣ ನೀಡುತ್ತಾರೆ ರೆಡ್ಡಿ.

ಹೀಗೆ ರೈತರು ಅಗತ್ಯವಾಗಿ ತಿಳಿಯಲೇಬೇಕಾದ ಮಾಹಿತಿಯ ಕಣಜ ಅವರು. ಸರಳ ವೈಜ್ಞಾನಿಕ ತಿಳಿವಳಿಕೆ ಇರುವ ರೈತನನ್ನು ಯಾವ ಕಂಪನಿಗಳೂ ಹಾದಿ ತಪ್ಪಿಸಲಾರವು ಎನ್ನುವುದು ಅವರ ಅಭಿಮತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT