ಮಂಗಳವಾರ, ಮೇ 18, 2021
24 °C
ಕಡೆಗೋಲು

ಸಾವಿಗೆ ಮುನ್ನುಡಿಯಾಗುವ `ಸ್ಟೋರಿ'ಯ ಹುಡುಕಾಟ

ಸಿ.ಜಿ. ಮಂಜುಳಾ Updated:

ಅಕ್ಷರ ಗಾತ್ರ : | |

`ಮಿಲಿಟರಿ ಮತ್ತು ಉಗ್ರರ ನಡುವೆ ಪತ್ರಕರ್ತರು ಅಪ್ಪಚ್ಚಿಯಾಗುತ್ತಾರೆ'.

ಪಾಕಿಸ್ತಾನದ `ಡಾನ್' ಪತ್ರಿಕೆಯ ಸಂಪಾದಕ ಝಫರ್ ಅಬ್ಬಾಸ್ ಹೇಳಿದ ಮಾತುಗಳಿವು. `ಟಿವಿ ಅಥವಾ ಪತ್ರಿಕೆಗಳಿಗಾಗಿ ಜಿಲ್ಲೆಗಳಿಂದ ವರದಿ ಮಾಡುವುದು ಪಾಕಿಸ್ತಾನದಲ್ಲಿ ತುಂಬಾ ಕಷ್ಟದ ಕೆಲಸ. ಹೀಗ್ದ್ದಿದೂ ಹೆಚ್ಚಿನ ತರಬೇತಿ ಅಥವಾ ಹಣಕಾಸಿನ ಬೆಂಬಲವಾಗಲಿ ಇಲ್ಲದೆ ವರದಿಗಾರಿಕೆಗೆ ತೊಡಗುವ ಜಿಲ್ಲೆಗಳ ಪತ್ರಕರ್ತರು ನಿಜಕ್ಕೂ ಸಾಹಸಿಗಳು. ಪ್ರಾಣದ ಹಂಗು ತೊರೆದು ಕೆಲಸ ನಿರ್ವಹಿಸುವ ಈ ಪತ್ರಕರ್ತರಿಗೆ ಶೇ 90ರಷ್ಟು ಪ್ರಕರಣಗಳಲ್ಲಿ ವಿಮೆ ಇರುವುದಿಲ್ಲ. ಆದರೆ ವಿಪರ್ಯಾಸ ನೋಡಿ. ಟಿವಿಯಲ್ಲಿ ಕ್ಯಾಮೆರಾಗೆ ವಿಮೆ ಇರುತ್ತದೆ. ಆದರೆ ಪತ್ರಕರ್ತರಿಗೆ ವಿಮೆ ಇರುವುದಿಲ್ಲ' ಎಂದು ಪರಿಸ್ಥಿತಿಯ ವ್ಯಂಗ್ಯವನ್ನು ಎಳೆಎಳೆಯಾಗಿ ಬಿಡಿಸಿಟ್ಟರು ಅಬ್ಬಾಸ್.

ಪತ್ರಕರ್ತರಿಗೆ ಜೀವರೇಖೆ ಎನಿಸಿದ `ಸ್ಟೋರಿ' ಯ ಹುಡುಕಾಟ, ಸಾವಿಗೆ ಮುನ್ನುಡಿ ಬರೆಯುವಂತಾಗುವುದು ಘೋರ ವ್ಯಂಗ್ಯ. ಜಗತ್ತೇ ಒಂದು ಹಳ್ಳಿಯಾಗಿರುವ ಈ ಯುಗದಲ್ಲಿ ಮಾಹಿತಿಗಳಿಗಾಗಿ ಅಪಾರ ಹಸಿವಿದೆ. ಆದರೆ  ಸುದ್ದಿ ಸಂಗ್ರಹದ ಪ್ರಕ್ರಿಯೆಯಲ್ಲಿ ಪತ್ರಕರ್ತರು ಪ್ರಾಣವನ್ನೇ ಪಣವಾಗಿಡಬೇಕಾಗಿ ಬರುತ್ತಿರುವುದು ಆತಂಕಕಾರಿ ಬೆಳವಣಿಗೆ. ಹೀಗೆ ಹತ್ಯೆಗೊಳಗಾಗುವ ಪತ್ರಕರ್ತರ ಪ್ರಮಾಣ ಇತ್ತೀಚಿನ ವರ್ಷಗಳಲ್ಲಿ ಅತಿ ಎನಿಸುವ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ಇದನ್ನು ಈ ಅಂಕಿಅಂಶಗಳು ದೃಢಪಡಿಸುತ್ತವೆ: ಅಂತರರಾಷ್ಟ್ರೀಯ ಪತ್ರಕರ್ತರ ಒಕ್ಕೂಟದ(ಐಎಫ್‌ಜೆ) ಪ್ರಕಾರ, 2012ರಲ್ಲಿ 121 ಪತ್ರಕರ್ತರು ಜೀವ ತೆತ್ತಿದ್ದಾರೆ. ಇದರಲ್ಲಿ ಕೆಲವು ಪ್ರಕರಣಗಳಲ್ಲಿ ಪತ್ರಕರ್ತರನ್ನೇ ನೇರ ಗುರಿಯಾಗಿಸಿಕೊಂಡು ಹತ್ಯೆ ಮಾಡಲಾಗಿದೆ. ಮತ್ತೆ ಕೆಲವು ಸಂದರ್ಭಗಳಲ್ಲಿ ಬಾಂಬ್ ದಾಳಿ ಅಥವಾ ಮತ್ತಿತರ ಸಂಘರ್ಷಗಳಲ್ಲಿ ಪತ್ರಕರ್ತರು ಸಾವಿಗೀಡಾಗಿದ್ದಾರೆ. ಇದಕ್ಕೂ ಹಿಂದಿನ ವರ್ಷ, 2011ರಲ್ಲಿ ತಮ್ಮ ಕರ್ತವ್ಯ ಪಾಲನೆ ಸಂದರ್ಭದಲ್ಲಿ ಹೀಗೆ ಜೀವ ತೆತ್ತ ಪತ್ರಕರ್ತರ ಸಂಖ್ಯೆ 107 ಇತ್ತು. ಕಳೆದ ಎರಡು ದಶಕಗಳಲ್ಲಿ ಒಂದಲ್ಲ ಒಂದು ಹಿಂಸಾಚಾರದಲ್ಲಿ ಪ್ರಾಣ ಕಳೆದುಕೊಂಡ ಪತ್ರಕರ್ತರ ಸಂಖ್ಯೆ 1,500 ದಾಟಿದೆ.

ಈ ಹಿನ್ನೆಲೆಯಲ್ಲಿ, ಥಾಯ್‌ಲೆಂಡ್‌ನ ಬ್ಯಾಂಕಾಕ್‌ನಲ್ಲಿ ಇತ್ತೀಚೆಗೆ ನಡೆದ ವ್ಯಾನ್ ಇಫ್ರಾದ `ವಿಶ್ವ ಸಂಪಾದಕರ ವೇದಿಕೆ'ಯ ಸಮ್ಮೇಳನದಲ್ಲಿ `ಅಪಾಯಕಾರಿ ವಲಯಗಳಿಂದ ವರದಿಗಾರಿಕೆ ಹಾಗೂ ಸುರಕ್ಷತೆ ಕಾಯ್ದುಕೊಳ್ಳುವಿಕೆ' ವಿಷಯ ಕುರಿತ ಚರ್ಚೆಗೇ ಒಂದು ಗೋಷ್ಠಿ ಮೀಸಲಿಡಲಾಗಿತ್ತು. `ವಿಶ್ವ ಸಂಪಾದಕರ ವೇದಿಕೆ' ಎನ್ನುವುದು ವಿಶ್ವದಾದ್ಯಂತ ಸುದ್ದಿಸಂಸ್ಥೆಗಳು ಹಾಗೂ ವೃತ್ತಪತ್ರಿಕೆ, ಡಿಜಿಟಲ್ ಪತ್ರಿಕೆಗಳ ಸಂಪಾದಕರ ಪ್ರಮುಖ ವೇದಿಕೆಯಾಗಿದೆ. ಪತ್ರಿಕಾ ಸ್ವಾತಂತ್ರ್ಯ ರಕ್ಷಣೆ ಹಾಗೂ ಸಂಪಾದಕೀಯ ಉತ್ಕೃಷ್ಟತೆಗೆ ಈ ವೇದಿಕೆ ಬದ್ಧ.

ಪತ್ರಕರ್ತರಾಗಿರುವುದು ಎಷ್ಟೊಂದು ಕಷ್ಟದ ಕೆಲಸ ಎಂಬುದನ್ನು ತಮ್ಮ ಅನುಭವಗಳ ಮೂಲಕ ಹಂಚಿಕೊಂಡ ಪಾಕಿಸ್ತಾನ ಹಾಗೂ ಮೆಕ್ಸಿಕೊ ರಾಷ್ಟ್ರಗಳ ಪತ್ರಕರ್ತರು ಬಿಡಿಸಿಟ್ಟ ವರದಿಗಾರಿಕೆಯ ಸವಾಲುಗಳು ತೀವ್ರವಾದವು. ನೆಲೆ ಹಾಗೂ ಸಂದರ್ಭಗಳಲ್ಲಿ  ಮೆಕ್ಸಿಕೊ ಹಾಗೂ ಪಾಕಿಸ್ತಾನ ಎರಡು ವಿಭಿನ್ನ ಧ್ರುವಗಳು. ಆದರೆ ಪತ್ರಕರ್ತರಿಗೆ ಕೆಲಸ ಮಾಡಲು ಅತ್ಯಂತ ಕ್ಲಿಷ್ಟಕರವಾದ ಸ್ಥಳಗಳು ಎಂಬಂಥ ಕುಖ್ಯಾತಿ ಗಳಿಸಿಕೊಂಡಿವೆ.  

“ದೊಡ್ಡ ಸಂಸ್ಥೆಗಳಲ್ಲಿ ಕೆಲಸ ಮಾಡುವ ಪತ್ರಕರ್ತರನ್ನು ಬಿಟ್ಟರೆ ಹೆಚ್ಚಿನ ಪತ್ರಕರ್ತರಿಗೆ ಸರಿಯಾದ ತರಬೇತಿಯೂ ಇರುವುದಿಲ್ಲ. ಮಾಧ್ಯಮಗಳ ಪೈಪೋಟಿಯ ಈ ಕಾಲದಲ್ಲಿ `ವರದಿ ಮಾಡಿಬಿಡಿ. ನಂತರ ದೃಢ ಪಡಿಸಿಕೊಳ್ಳಿ' ಎಂಬಂತಹ ವಾತಾವರಣ ಬೇರೆ ಇದೆ'”ಎನ್ನುತ್ತಾ ವಸ್ತುಸ್ಥಿತಿಯ ಕರಾಳ ಮುಖಗಳತ್ತಲೂ ಬೆಳಕು ಚೆಲ್ಲಿದರು ಪಾಕಿಸ್ತಾನದ ಅಬ್ಬಾಸ್.

1991ರಲ್ಲಿ ಅಬ್ಬಾಸ್ ಅವರ ಅಪಾರ್ಟ್‌ಮೆಂಟ್ ಮೇಲೆ ದಾಳಿ ನಡೆದಿತ್ತು. ಈಗ ಅವರ ಮನೆಯಲ್ಲಿ ಸರ್ವೆಲೆನ್ಸ್ ಕ್ಯಾಮೆರಾ ಇದೆ. ಸಶಸ್ತ್ರ ಕಾವಲು ಇದೆ. ಹಾಗೆಯೇ  ಪ್ರತಿದಿನ ಅವರು ಕಾರುಗಳನ್ನು ಬದಲಿಸುತ್ತಾರೆ. ಮನೆ ಬಿಡುವ ಸಮಯ ಹಾಗೂ ಮಾರ್ಗಗಳನ್ನೂ ಬದಲಿಸುತ್ತಿರುತ್ತಾರೆ. ಆದರೆ ಎಲ್ಲ ಪತ್ರಕರ್ತರೂ ಇಂತಹ ಸೌಲಭ್ಯ ಹೊಂದುವುದು ಸಾಧ್ಯವಿಲ್ಲ ಎಂಬುದು ಕಟು ವಾಸ್ತವ.

`15 ವರ್ಷದ ಹಿಂದೆ ರಾಷ್ಟ್ರದ ಸೇನಾ ಮುಖ್ಯಸ್ಥರ ವಿರುದ್ಧ ಅಥವಾ ಅಧ್ಯಕ್ಷರ ವಿರುದ್ಧ ಬರೆಯುವುದನ್ನು ಕನಸುಮನಸಲ್ಲೂ ಯೋಚಿಸುವುದು ಸಾಧ್ಯವಿರಲಿಲ್ಲ. ಈಗ ಸಂದರ್ಭ ಬದಲಾಗಿದೆ. ನಿರ್ಬಂಧವಿದ್ದಾಗ ಆಯ್ಕೆಗಳಿರಲಿಲ್ಲ. ಬದುಕೂ ಸುಲಭವಾಗಿತ್ತು! ಸಂಸ್ಕೃತಿ, ನಾಗರಿಕ ಸೌಲಭ್ಯಗಳು ಇತ್ಯಾದಿ ಕಥೆಗಳಲ್ಲಿ ವರದಿಗಾರಿಕೆ ಮುಗಿದುಹೋಗುತ್ತಿತ್ತು. ಈಗ  ಸದಾ ಅಪಾಯದ ತೂಗುಗತ್ತಿಯ ಕೆಳಗೇ ವರದಿಗಾರಿಕೆ ಮಾಡುವ ಸ್ಥಿತಿ ಇದೆ' ಎಂದೂ ಅಬ್ಬಾಸ್ ಹೇಳಿದರು.

ಮಾದಕ ವಸ್ತು ಅಕ್ರಮ ಸಾಗಣೆಯಲ್ಲಿ ತೊಡಗಿರುವ ಸಂಘಟಿತ ಅಪರಾಧ ಗುಂಪುಗಳ ನಡುವೆ ನಲುಗುವ ನಾಗರಿಕ ಬದುಕಿನ ಕಥೆಗಳನ್ನು ಜಗತ್ತಿಗೆ ವರದಿಮಾಡುವಾಗ ಎದುರಿಸಬೇಕಾದ ಕಷ್ಟಗಳನ್ನು ಮನ ತಟ್ಟುವಂತೆ ನಿರೂಪಿಸಿದವರು ಮೆಕ್ಸಿಕೊದ `ಎಲ್ ಸಿಗ್ಲೊ ಡೆ ಟೊರಿಯಾನ್'ನ ಸಂಪಾದಕೀಯ ನಿರ್ದೇಶಕ ಜೇವಿಯಗಾರ್ಜಾ.  ಲಾಸ್ ಝೆಟಾಸ್ ಹಾಗೂ ಕಾರ್ಟೆಲ್ ಡೆ ಸಿನಾಲೊವಾ ಎಂಬ ಪ್ರಭಾವಶಾಲಿ ಸಂಘಟಿತ ಅಪರಾಧಿಗಳ ಗುಂಪುಗಳ ನಡುವಣ ತೀವ್ರ ಸಂಘರ್ಷದಲ್ಲಿ ಮೆಕ್ಸಿಕೊದ ಲಾ ಲಗೂನಾ ಪ್ರದೇಶ ನಲುಗಿದೆ. ಮಾದಕ ವಸ್ತು ಅಕ್ರಮ ವ್ಯವಹಾರ, ಅಕ್ರಮ ಸಾಗಣೆ, ಹಣ ವಸೂಲಿ, ವೇಶ್ಯಾವಾಟಿಕೆ, ಅಪಹರಣ, ಕಳ್ಳತನ ಇತ್ಯಾದಿ ವ್ಯವಹಾರಗಲ್ಲಿ ತೊಡಗಿಕೊಂಡ ಈ ಗುಂಪುಗಳು, ಈ ಅಕ್ರಮಗಳನ್ನು ಕುರಿತ ವರದಿಗಾರಿಕೆಗೆ ನಿಷೇಧ ಹೇರುತ್ತವೆ. ಜೀವ ಬೆದರಿಕೆಯೊಡ್ಡುತ್ತವೆ. ಅನೇಕ ಬ್ಲಾಗರ್‌ಗಳ ತಲೆಗಳನ್ನೂ ಕತ್ತರಿಸಿವೆ. ಈ ಎರಡೂ ಗುಂಪುಗಳ ಒತ್ತಡ ನಿರ್ವಹಿಸುವುದೇ ದೊಡ್ಡ ಸವಾಲು. ಮೆಕ್ಸಿಕೊದ ಸುದ್ದಿಮನೆಗಳು ಬಾಂಬ್‌ದಾಳಿಗಳಿಗೆ ಗುರಿಯಾಗುವುದು ಹಾಗೂ ಪತ್ರಕರ್ತರು ಅಪಹರಣಕ್ಕೊಳಗಾಗುವುದು, ಹತ್ಯೆಗೊಳಗಾಗುವುದು ಮಾಮೂಲು. ಇದರಿಂದ ವರದಿಗಾರಿಕೆಗೆ ತೆರಳಿದವರ ಸುರಕ್ಷತೆ ಕುರಿತು ಗಂಟೆಗೊಮ್ಮೆ ಫೋನ್ ಮಾಡಿ ವಿಚಾರಿಸುವುದು ಅಲ್ಲಿನ ಪರಿಪಾಠ. ಇಡೀ ಪತ್ರಿಕಾ ಸಿಬ್ಬಂದಿಗೆ ವೈಯಕ್ತಿಕ ಸುರಕ್ಷತೆ ತರಗತಿಗಳನ್ನೂ ಏರ್ಪಡಿಸಲಾಗುತ್ತದೆ. ಹಾಗೆಯೇ ಸುದ್ದಿಗಳ ನಿರ್ವಹಣೆಯ್ಲ್ಲಲಿ ವಿಶೇಷ ಜಾಗರೂಕತೆಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂಬುದನ್ನೂ ಗಾರ್ಜಾ ವಿವರಿಸಿದರು.      

ಯುದ್ಧ ಅಂತ್ಯವಾದ ನಾಲ್ಕು ವರ್ಷಗಳಲ್ಲಿ, ಸ್ವತಂತ್ರ ಮಾಧ್ಯಮವನ್ನು ಹತ್ತಿಕ್ಕುವ ವಾತಾವರಣ ಸೃಷ್ಟಿಯಾಗಿರುವುದನ್ನು ತೀವ್ರ ಕಳಕಳಿಯಿಂದ ವಿವರಿಸಿದವರು ಶ್ರೀಲಂಕಾದ ಡಿಜಿಟಲ್ ಕಾರ್ಯಕರ್ತ ಹಾಗೂ ಸಿಟಿಜನ್ ಜರ್ನಲಿಸ್ಟ್ ಸಂಜನ ಹಟ್ಟೊಟುವಾ.  ಸರ್ಕಾರದ ಮೂಲಸೌಕರ್ಯ ನಿರ್ಮಾಣ ಕಾರ್ಯಕ್ರಮಗಳು ಹಾಗೂ ಕ್ರಿಕೆಟ್ ಕುರಿತ ವರದಿಗಳು ಅತಿ ಎನಿಸುವ ಮಟ್ಟಿಗೆ ಶ್ರೀಲಂಕಾ ಮಾಧ್ಯಮಗಳಲ್ಲಿ ವರದಿಯಾಗುತ್ತವೆ. ಆದರೆ ಮಾನವಹಕ್ಕು, ಕಾನೂನು ಸುವ್ಯವಸ್ಥೆ, ಪ್ರಜಾಸತ್ತಾತ್ಮಕ ಆಡಳಿತ ಸೇರಿದಂತೆ ಹಲವು ಸಮಕಾಲೀನ ಸಂಗತಿಗಳು ಸೂಕ್ತ ರೀತಿಯಲ್ಲಿ ಮುಖ್ಯವಾಹಿನಿ ಪತ್ರಿಕೆಗಳಲ್ಲಿ ದನಿಪಡೆಯುತ್ತಿಲ್ಲ ಎಂಬುದನ್ನು ವಿವರಿಸಿದ ಸಂಜನ, ಸ್ವತಂತ್ರ ಮಾಧ್ಯಮಗಳ ಮೇಲೆ ದೌರ್ಜನ್ಯವೆಸಗಿದವರಿಗೆ ದಂಡನಾ ಭಯವಿಲ್ಲದ ಸಂಸ್ಕೃತಿ ಬೇರೂರಿರುವುದರ ಕುರಿತು ಆತಂಕ ವ್ಯಕ್ತಪಡಿಸುತ್ತಾರೆ.

ಬದುಕುವ ಮೂಲಭೂತ ಹಕ್ಕನ್ನು ರಕ್ಷಿಸುವ ಕುರಿತಾದ ಅಂತರರಾಷ್ಟ್ರೀಯ ಒಡಂಬಡಿಕೆಗಳನ್ನು ಜಾರಿಗೊಳಿಸುವಲ್ಲಿ ಸರ್ಕಾರಗಳು ಹಾಗೂ ವಿಶ್ವಸಂಸ್ಥೆಯ ಸಾಂಸ್ಥಿಕ ವೈಫಲ್ಯಗಳು ಈ ಪರಿಸ್ಥಿತಿಗೆ ಕಾರಣ.  ಹಂತಕರಿಗೆ ಶಿಕ್ಷೆಯಾಗುವುದೇ ಇಲ್ಲ ಎನ್ನುವ ಸ್ಥಿತಿ ಸರಿಯಲ್ಲ. ಶಿಕ್ಷಾ ಭಯವಿಲ್ಲದ ಈ ದಂಡನೆಯ ವಿನಾಯಿತಿ (ಇಂಪ್ಯುನಿಟಿ) ನ್ಯಾಯದಾನದ ವೈಫಲ್ಯವಾಗುತ್ತದೆ.

ದೌರ್ಜನ್ಯ ಎಸಗುವವರು ಅಪರಾಧಿಗಳಾಗಿರಲಿ, ಭಯೋತ್ಪಾದಕರಿರಲಿ ಅಥವಾ ಸರ್ಕಾರದ ಅಧಿಕಾರಿಗಳೇ ಆಗಿರಲಿ ದಂಡನೆಯ ವಿನಾಯಿತಿ ಪಡೆದುಕೊಳ್ಳುವುದರಿಂದ  ತಪ್ಪು ಸಂದೇಶ ರವಾನೆಯಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಅರಗಿಸಿಕೊಳ್ಳಲಾಗದ ಸತ್ಯಗಳನ್ನು ಬಯಲು ಮಾಡುವವರನ್ನು ಗುರಿಯಾಗಿಸಿಕೊಂಡವರ ವಿರುದ್ಧ ದೌರ್ಜನ್ಯ ಎಸಗುವಲ್ಲಿ ತಪ್ಪೇನಿಲ್ಲ ಎಂಬಂತಹ ಸಾಂಸ್ಥಿಕ ಸಂದೇಶ ಇದರಿಂದ ಹೊರಹೊಮ್ಮಿದಂತಾಗುತ್ತದೆ. ಈ ಪ್ರವೃತ್ತಿ ತನಿಖೆಗೆ ತಡೆ ಒಡ್ಡುತ್ತದೆ. ಟೀಕಾಕಾರರನ್ನು ಮೌನವಾಗಿಸುತ್ತದೆ. ಪತ್ರಿಕೆಗಳ ಕಾವಲುನಾಯಿಯ ಸ್ಥಾನಮಾನವೇ ಅಪಮೌಲ್ಯಗೊಳ್ಳುತ್ತದೆ. ಪತ್ರಿಕೆಗಳ ಹಕ್ಕುಗಳು ಹಾಗೂ ಸ್ವಾತಂತ್ರ್ಯಗಳ ಮೇಲೆ ಪ್ರಭಾವಿಗಳ ಸವಾರಿಗೆ ಇದರಿಂದ ಅವಕಾಶ ಸಿಕ್ಕಿದಂತಾಗುತ್ತದೆ. 

  

  ಪತ್ರಕರ್ತರ ಸುರಕ್ಷತೆ ಕುರಿತಂತಹ ಕ್ರಿಯಾಯೋಜನೆಯೊಂದನ್ನು ವಿಶ್ವಸಂಸ್ಥೆ 2012ರ ನವೆಂಬರ್‌ನಲ್ಲಷ್ಟೇ ಅನುಮೋದಿಸಿದೆ. ಹೀಗಾಗಿ ಪತ್ರಕರ್ತರ ಸುರಕ್ಷತೆಗೆ ಸಂಬಂಧಿಸಿದ ವಿಚಾರಗಳನ್ನು ನಿರ್ವಹಿಸಲು ನಾಗರಿಕ ಸಮಾಜ ಹಾಗೂ ಮಾಧ್ಯಮಗಳನ್ನು ತೊಡಗಿಸಿಕೊಳ್ಳಲಾಗುವುದು ಎಂಬಂತಹ ನಿರೀಕ್ಷೆ ಇದರಿಂದ ಗರಿಗೆದರಿದೆ. ಬೆದರಿಕೆಗೊಳಪಟ್ಟಿರುವ ಪತ್ರಕರ್ತರನ್ನು ರಕ್ಷಿಸಲು ಕೊಲೊಂಬಿಯಾದಲ್ಲಿ ವಿಶೇಷ ಪೊಲೀಸ್ ಪಡೆಯನ್ನೇ ರಚಿಸಲಾಗಿದೆ. ಕಳೆದ ಮೇ ತಿಂಗಳೊಂದರಲ್ಲೇ ಕೊಲೊಂಬಿಯಾದಲ್ಲಿ 12 ಪತ್ರಕರ್ತರ ಮೇಲೆ ಆಕ್ರಮಣ ಮಾಡಲಾಗಿದೆ ಅಥವಾ ಬೆದರಿಕೆ ಒಡ್ಡಲಾಗಿದೆ.

ಈವರೆಗೆ ಈ ವರ್ಷ 33 ಪತ್ರಕರ್ತರಿಗೆ ಬೆದರಿಕೆ ಒಡ್ಡಲಾಗಿದೆ ಎಂದು ಪತ್ರಕರ್ತರಿಗೆ ರಕ್ಷಣೆ ನೀಡುತ್ತಿರುವ ಕೊಲೊಂಬಿಯಾ ಒಳಾಡಳಿತ ಸಚಿವಾಲಯದ ರಾಷ್ಟ್ರೀಯ ರಕ್ಷಣಾ ಘಟಕ (ನ್ಯಾಷನಲ್ ಪ್ರೊಟೆಕ್ಷನ್ ಯೂನಿಟ್) ತಿಳಿಸಿದೆ. ಮಾಧ್ಯಮ ವೃತ್ತಿಪರರಿಗೆ ಕೊಲೊಂಬಿಯಾ ಅತ್ಯಂತ ಅಪಾಯಕಾರಿ ಎನಿಸಿದ ಲ್ಯಾಟಿನ್ ಅಮೆರಿಕ ರಾಷ್ಟ್ರವಾಗಿದೆ.

ಸತ್ಯದ ಅನ್ವೇಷಣೆಯಲ್ಲಿ, ಪರಸ್ಪರ ಕಾಲು ತುಳಿಯುತ್ತಾ ಬಹಳ ಜನರಿಗೆ ಅಪಥ್ಯವೆನಿಸುವ ಅಥವಾ ಸಹಿಸಿಕೊಳ್ಳಲು ಇಷ್ಟವಾಗದಂತಹ ವಿಚಾರಗಳನ್ನು ಹೇಳುವುದು ಅನಿವಾರ್ಯವಾಗಿರುತ್ತದೆ. ಆಂತರಿಕ ಸಂಘರ್ಷ ನಡೆಯುತ್ತಿರುವಂತಹ ಕೊಲೊಂಬಿಯಾದಂತಹ ರಾಷ್ಟ್ರದಲ್ಲಿ ಅಪಾಯಗಳಿಗೆ ಸಿಲುಕಿಕೊಳ್ಳದೇ ವೃತ್ತಿಯಲ್ಲಿ ಮುಂದುವರಿಯುವುದು ಕಷ್ಟ ಎನ್ನುವ ಸ್ಥಿತಿ ಏರ್ಪಟ್ಟಿದೆ. 1980ರ ದಶಕದಿಂದಲೂ ಕೊಲೊಂಬಿಯಾದಲ್ಲಿ ಪತ್ರಿಕೋದ್ಯಮ ಕ್ಲಿಷ್ಟಕರ ವೃತ್ತಿ. 1977ರಿಂದ 2012ರವರೆಗೆ 140 ಪತ್ರಕರ್ತರ ಹತ್ಯೆಗಳನ್ನು ಅಧಿಕಾರಿಗಳು ದಾಖಲಿಸಿದ್ದಾರೆ ಎನ್ನುತ್ತದೆ ಪತ್ರಿಕಾ ಸ್ವಾತಂತ್ರ್ಯದ ಪ್ರತಿಷ್ಠಾನದ ವರದಿ. ಈ ಪೈಕಿ 62 ಪ್ರಕರಣಗಳಲ್ಲಿ ಶಿಕ್ಷೆಯಾಗಿಲ್ಲ. ಎಂದರೆ ದಂಡನಾ ವಿನಾಯತಿ ಪ್ರಮಾಣ ಶೇ 44.5.

1986ರಲ್ಲಿ, ಮಾದಕವಸ್ತು ವ್ಯಾಪಾರ ಕುರಿತಂತೆ ಪ್ರಮುಖ ಸಂಗತಿಗಳನ್ನು ವರದಿ ಮಾಡಿದ `ಎಲ್ ಎಸ್‌ಪೆಕ್ಟೇಡರ್' ಪತ್ರಿಕೆಯ  ಆಗಿನ ನಿರ್ದೇಶಕ ಗಿಲ್ಲೆರ್ಮೊ ಕಾನೊ ಅವರ ಹತ್ಯೆ  ಕೊಲೊಂಬಿಯಾದಲ್ಲಿ ಪತ್ರಿಕಾ ಸ್ವಾತಂತ್ರ್ಯದ ಮೇಲೆ ಭಾರಿ ಎನಿಸುವ ನಕಾರಾತ್ಮಕ ಪರಿಣಾಮ ಬೀರಿತು. ಪ್ರತಿ ವರ್ಷ ಈ ಪತ್ರಕರ್ತನ ಗೌರವಾರ್ಥ ಈಗ `ಯುನೆಸ್ಕೊ/ಗಿಲ್ಲೆರ್ಮೊ ಕಾನೊ ವಿಶ್ವ ಪತ್ರಿಕಾ ಸ್ವಾತಂತ್ರ್ಯ ಬಹುಮಾನ'ವನ್ನು ನೀಡಲಾಗುತ್ತಿದೆ. ಈ ವರ್ಷ ಇಥಿಯೋಪಿಯಾದ ರೀಯೋಟ್ ಅಲೆಮು ಈ ಪ್ರಶಸ್ತಿಯನ್ನು ಪಡೆದುಕೊಂಡರು.

ಭ್ರಷ್ಟ ಅಧಿಕಾರಿಗಳ ವಿರುದ್ಧ ವರದಿ ಮಾಡುವ ಸ್ಥಳೀಯ ವರದಿಗಾರರು, ಕಾರ್ಪೊರೆಟ್ ಸಂಸ್ಥೆಗಳ  ದುರಾಚಾರಗಳನ್ನು ಬಯಲುಗೊಳಿಸುವ ತನಿಖಾ ವರದಿಗಾರರು, ವಿಶ್ವದ ಅತ್ಯಂತ ಅಪಾಯಕಾರಿ ವಲಯಗಳಲ್ಲಿ ಸೆರೆ ಹಾಗೂ ಸಾವಿನ ಭಯವನ್ನು ಎದುರಿಸುವ ಯುದ್ಧ ವರದಿಗಾರರು ಸೇರಿದಂತೆ  ಅನೇಕ ಸಾಹಸಿ ವರದಿಗಾರರು ನಮ್ಮ ನಡುವೆ ಇದ್ದಾರೆ. ಹಾಗೆಯೇ ಎಲ್ಲೆಡೆ ರಾಜಕೀಯ, ಕಾರ್ಪೊರೆಟ್ ಸಾರ್ವಜನಿಕ ಸಂಪರ್ಕದ ಸಿದ್ಧ ವರದಿಗಳು ಅಥವಾ `ಕಥೆ'ಗಳ ಹೊಸೆಯುವಿಕೆಯೂ ಢಾಳಾಗಿ ಕಾಣಿಸುತ್ತಿರುವ ಕಾಲ ಇದು. ಆದರೆ ಪತ್ರಕರ್ತರು ತಮ್ಮ ಮೂಲ ಮೌಲ್ಯಗಳಿಗೆ ಬದ್ಧವಾಗಿರಲೇಬೇಕಾದುದು ಅತ್ಯಂತ ಅವಶ್ಯ. `ಗದ್ದಲದಿಂದ ತುಂಬಿದ ಧರಣಿ ಮಂಡಲದಲ್ಲಿ ಸ್ವತಂತ್ರವಾದ ಸ್ವೋಪಜ್ಞ ವಿಷಯಗಳನ್ನು ಸೃಷ್ಟಿಸುವುದೇ ಈಗಿನ ಸವಾಲು' ಎನ್ನುತ್ತಾರೆ ಎಎಫ್‌ಪಿ ಯ ಜಾಗತಿಕ ಸುದ್ದಿ ನಿರ್ದೇಶಕ ಫಿಲಿಪ್ ಮ್ಯಾಸೊನೆಟ್.

ಪ್ರಭುತ್ವದ ವಿರುದ್ಧದ ಅಭಿಪ್ರಾಯಗಳು ಅಥವಾ ಕಟು ಸತ್ಯಗಳ ಅನಾವರಣಗಳನ್ನು ನಿರ್ಬಂಧಿಸವ ಪ್ರಯತ್ನಗಳು ಭಾರತವೂ ಸೇರಿದಂತೆ ಅನೇಕ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲೂ ನಡೆಯುತ್ತಿರುವುದು ಮುಂದುವರಿದೇ ಇದೆ. ಆದರೆ ಜಗತ್ತಿನ ಅನೇಕ ರಾಷ್ಟ್ರಗಳಲ್ಲಿನ ಪರಿಸ್ಥಿತಿ ಅಪಾಯಕಾರಿಯಾಗಿದ್ದು ದಾರುಣವಾಗಿದೆ ಎಂಬುದು ಇಲ್ಲಿ ಮುಖ್ಯ.  ಸುದ್ದಿಯನ್ನು ವರದಿ ಮಾಡಲು ಸೆಣಸುವ ವೃತ್ತಿಪರರು ಸರ್ಕಾರ, ಭಯೋತ್ಪಾದಕರು,  ಶಸ್ತ್ರಸಜ್ಜಿತ ದರೋಡೆಕೋರರು ಮತ್ತಿತರ ಪ್ರಭಾವಿ ಶಕ್ತಿಗಳಿಂದ ದಿನ ನಿತ್ಯದ ಹಿಂಸಾಚಾರದ ಬೆದರಿಕೆಗಳನ್ನು ಎದುರಿಸುವುದು ನಿತ್ಯದ ವಿದ್ಯಮಾನವಾಗಿದೆ.

ಅಂತರರಾಷ್ಟ್ರೀಯ ಸಮುದಾಯಕ್ಕೆ ಮುಖ್ಯ ಮಾಹಿತಿಗಳ ಹರಿವನ್ನು ತಡೆಗಟ್ಟುವ ಉದ್ದೇಶವೂ ಪತ್ರಕರ್ತರ ಹತ್ಯೆಗೆ ಕೆಲವೊಮ್ಮೆ ಕಾರಣವಾಗಿರುತ್ತದೆ. ಹೀಗಿದ್ದೂ  ಈ ಸಾಹಸಿ ಪುರುಷ ಹಾಗೂ ಮಹಿಳೆಯರು ಮತ್ತೆ ಮತ್ತೆ ಈ  ಸುದ್ದಿ ತಾಣಗಳಿಗೆ ವಾಪಸಾಗುತ್ತಾರೆ. ಪ್ರಾಣ ಬೆದರಿಕೆಗಳ ನಡುವೆಯೆ ವಿಶ್ವದ ಅನೇಕ ಕತ್ತಲ ವಿದ್ಯಮಾನಗಳಿಗೆ ಸಾಕ್ಷಿಯಾಗಿ ಬೆಳಕಿಗೆ ತರುತ್ತಿದ್ದಾರೆ.

ಟೀಕೆಗೊಳಗಾದಾಗ ಅಥವಾ ಹಗರಣಗಳನ್ನು ಬಹಿರಂಗಗೊಳಿಸಿದಾಗ ಅದು ಹೊರಹೊಮ್ಮಿಸುವ ಸಂದೇಶಕ್ಕೆ ಗಮನ ನೀಡದೆ ಸಂದೇಶವಾಹಕನನ್ನು ಬಲಿ ಪಡೆಯುವ ಪ್ರಭುತ್ವದ ಪ್ರವೃತ್ತಿ ಬದಲಾಗುವುದು ಎಂದು? ಭ್ರಷ್ಟರ ವಿರುದ್ಧ ಕ್ರಮ ಕೈಗೊಳ್ಳುವುದಕ್ಕಿಂತ ಭ್ರಷ್ಟಾಚಾರ ಬಯಲಿಗೆಳೆದವರ ಮೇಲಿನ ಆಕ್ರಮಣ ನಿಲ್ಲುವುದು ಯಾವಾಗ ಎಂಬುದು ದೊಡ್ಡ ಪ್ರಶ್ನೆ.

`ಸುದ್ದಿಯನ್ನು ಬಚ್ಚಿಡಲು ಸಾಮಾನ್ಯವಾಗಿ ಪ್ರಭುತ್ವ ಬಯಸುತ್ತದೆ. ಇನ್ನುಳಿಯುವುದು ಜಾಹೀರಾತು' ಎಂಬಂತಹ ಮಾತಿದೆ. ಇದು ಉತ್ಪ್ರೇಕ್ಷೆಯ ಮಾತಿರಬಹುದು. ಆದರೆ ಪೂರ್ಣ ಅಲ್ಲಗಳೆಯಲೂ ಆಗುವುದಿಲ್ಲ. ಮಾಹಿತಿ ಸಶಕ್ತಗೊಳಿಸುವಂತಹದ್ದು. `ಸಾವಿರ ಬಯೊನೆಟ್‌ಗಳಿಗಿಂತ ಮೂರು ಪ್ರತಿಕೂಲ ಪತ್ರಿಕೆಗಳಿಗೆ ಹೆಚ್ಚು ಭಯ ಪಡಬೇಕು' ಎನ್ನುವ ನೆಪೊಲಿಯನ್ ಮಾತು ಇದಕ್ಕೆ ಸಾಕ್ಷಿ.

ಸಂಘರ್ಷ, ಯುದ್ಧದ ಸ್ಥಳಗಳಲ್ಲಿನ ಅಪಾಯ, ಪತ್ರಕರ್ತೆಗೆ ಮತ್ತೊಂದು ಬಗೆಯದು. ಇದಕ್ಕೆ ಉದಾಹರಣೆ, ಎರಡು ವರ್ಷಗಳ ಹಿಂದೆ ಈಜಿಪ್ಟ್‌ನ ಸರ್ವಾಧಿಕಾರಿ ಹೊಸ್ನಿ ಮುಬಾರಕ್ ಪದಚ್ಯುತಿಯ ಸಂಭ್ರಮಾಚರಣೆ ನಡೆಯುತ್ತಿದ್ದ ತಹ್ರೀರ್ ಚೌಕದಲ್ಲಿ ತೀವ್ರತರವಾದ ಲೈಂಗಿಕ ಹಲ್ಲೆಗೆ ಗುರಿಯಾದ ಅಮೆರಿಕದ ಸಿಬಿಎಸ್ ಟಿವಿಯ ವಿದೇಶ ವರದಿಗಾರ್ತಿ ಲಾರಾ ಲೋಗನ್. ಈ ಘಟನೆಯ ಆಘಾತದ ನಂತರವೂ ಸಂಘರ್ಷ ಸ್ಥಳಗಳ ವರದಿಗಾರಿಕೆಗೆ ಹೋಗುವ ಛಾತಿಯನ್ನು ಕಳೆದುಕೊಂಡಿಲ್ಲ ಅವರು. ಇತ್ತೀಚೆಗಷ್ಟೇ  ಅಲ್ ಖೈದಾ ಕುರಿತ ವರದಿಗಾಗಿ ಆಫ್‌ಘಾನಿಸ್ತಾನಕ್ಕೆ ತೆರಳಿದ್ದರು ಲೋಗನ್.  `ಅಪಾಯಕಾರಿ  ಸಂಘರ್ಷದ ಸ್ಥಳಗಳಿಂದ ವರದಿಗಾರಿಕೆ ಮಾಡುವುದರಲ್ಲಿ ನನಗೆ ನಂಬಿಕೆ ಇದೆ. ಈ ವರದಿಗಾರಿಕೆಯನ್ನು ನಾನೆಂದೂ ಬಿಟ್ಟುಕೊಡುವುದಿಲ್ಲ' ಎಂಬ ಲೋಗನ್ ಮಾತು ಪತ್ರಕರ್ತವೃತ್ತಿಯ ಬದ್ಧತೆಯನ್ನು ಅನುರಣಿಸುತ್ತದೆ.

   ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.