ಸೋಮವಾರ, ಮೇ 23, 2022
20 °C

ಸಾವಿನ ದವಡೆಯಿಂದ ಪಾರಾದ ಆನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಚ್.ಡಿ,ಕೋಟೆ: ತಾಲ್ಲೂಕಿನ ನಾಗರ ಹೊಳೆ ಅಭಯಾರಣ್ಯದ ಮೇಟಿಕುಪ್ಪೆ ವನ್ಯಜೀವಿ ವಲಯದ ತಾರಕ ಡ್ಯಾಂ ಹಿನ್ನೀರಿನಲ್ಲಿ ಕಳೆದ 15 ದಿನಗಳಿಂದ ಆಶ್ರಯ ಪಡೆಯುತ್ತ ನೋವನ್ನು ಅನುಭವಿಸುತ್ತಿದ್ದ ಆನೆಗೆ ಜೀವ ರಕ್ಷಕ ಔಷಧಿ ನೀಡುವಲ್ಲಿ ಕೊನೆಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಮುಂದಾಗಿದ್ದು, ಆನೆ ಚೇತರಿಸಿಕೊಳ್ಳುತ್ತಿದೆ. ಉನ್ನತಾಧಿಕಾರಿಗಳ ಸಲಹೆ ಮೇರೆಗೆ ಜೀವ ರಕ್ಷಕ ಔಷಧಿಯನ್ನು ಆಹಾರದ ಮೂಲಕ ನೀಡುವ ಪ್ರಯತ್ನ ಮಾಡಲಾಗಿದೆ. ಆನೆಯು ನಿಧಾನವಾಗಿ ಚೇತರಿಸಿ ಕೊಳ್ಳತೊಡಗಿದೆ. ಈ ಆನೆಯನ್ನು ದಿನ ನೋಡಿ ಕೊಳ್ಳುತ್ತಿದ್ದ ವಾಚರ್ ಶ್ರೀನಿ ವಾಸ್ ಮತ್ತು ದಿನಗೂಲಿ ಬಸವರಾಜು ಹತ್ತಿರಕ್ಕೆ ಹೋದರೂ ಆನೆ ಭಯ ಪಡುತ್ತಿಲ್ಲ. ಅವರ ಹೊರತಾಗಿ ಉಳಿದವರು ಹೋದರೆ ಸಿಟ್ಟಿಗೇಳುತ್ತಿದೆ.ಅರಣ್ಯ ಇಲಾಖೆಯ ಸಿಬ್ಬಂದಿ ಜೀವಭಯ  ಬಿಟ್ಟು ಆನೆಗೆ ಔಷಧೋಪಚಾರ ಮತ್ತು ಆಹಾರವನ್ನು ನೀಡುತ್ತಿದ್ದಾರೆ. ಆನೆಗೆ ಜೀವ ರಕ್ಷಕ ಔಷಧಿಯನ್ನು ಕಬ್ಬಿನ ಒಳ ಭಾಗದಲ್ಲಿ ಸೇರಿಸಿ ಕೊಡಲಾಗುತ್ತಿದೆ, ಟಾನಿಕ್ ಮಾತ್ರೆ ಗಳನ್ನು ಬತ್ತ ಮತ್ತು ಹುಲ್ಲಿನಲ್ಲಿ ಬೆರೆಸಿ ಕೊಡಲಾಗುತ್ತಿದೆ. ಇದರಿಂದ ಚೇತರಿಸಿ ಕೊಂಡ ಆನೆ ನೀರಿನಿಂದ ಹೊರ ಬಂದಿದ್ದು, ಕಾಡಿನೊಳಗೆ ಹೋಗಿ ಆಹಾರವನ್ನು ತಿನ್ನುತ್ತಿದೆ. ‘ನಾವು ನೀಡುವ ಔಷಧಿಯ ಕಬ್ಬು ಮತ್ತು ಹುಲ್ಲನ್ನು ತಿನ್ನಲು ಬರುತ್ತಿದೆ’ ಎನ್ನುತ್ತಾರೆ ಅರಣ್ಯ ಇಲಾಖೆಯ ಪಶುವೈದ್ಯರು.ಆನೆ ಮೊದಲು ಕಾಲನ್ನು ನೆಲಕ್ಕೆ ಊರುತ್ತಿರಲಿಲ್ಲ, ಕಾಲನ್ನು ಮೇಲಕ್ಕೆ ಎತ್ತಿಕೊಂಡು ಕುಂಟುತ್ತಿತ್ತು. ಔಷಧಿಯನ್ನು ನೀಡಿದ ನಂತರ ನೀರಿನಿಂದ ಹೊರಗೆ ಓಡಾಡುತ್ತಿದೆ. ಆದರೆ ಕಾಲಿ ನಲ್ಲಿರುವ ಊತ ಕಡಿಮೆಯಾಗಿಲ್ಲ. ಮತ್ತಿನ ಔಷಧಿ ನೀಡಿ ಚಿಕಿತ್ಸೆ ನೀಡಲು ಅದಕ್ಕೆ ಬೇಕಿರುವ ಅತ್ಯಾಧುನಿಕ ಉಪಕರಣ ಗಳು ಲಭ್ಯವಿಲ್ಲ ಎಂದು ವೈದ್ಯಾಧಿಕಾರಿ ಶ್ರೀನಿವಾಸ್ ತಿಳಿಸಿದರು. ಡಿ.ಎಫ್.ಒ. ವಿಜಯ ರಂಜನ್ ಸಿಂಗ್, ಸಿ.ಸಿ.ಎಫ್. ಅಜಯ್ ಮಿಶ್ರ, ಅರಣ್ಯ ವಿಭಾಗದ ಸಿ.ಐ.ಡಿ. ಎಸ್.ಪಿ. ಅನ್ವೇಕರ್ ಹಾಗೂ ಅರಣ್ಯ ಇಲಾಖೆಯ ಪಶು ವೈದ್ಯಾಧಿಕಾರಿ ಶ್ರೀನಿವಾಸ್ ಆನೆಯ ಚಲನವಲನ ವೀಕ್ಷಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.