ಸಾವಿರಾರು ಮರಗಳ ನಾಶ ಭೀತಿ

7

ಸಾವಿರಾರು ಮರಗಳ ನಾಶ ಭೀತಿ

Published:
Updated:

ಕಾರವಾರ: ಇಲ್ಲಿಯ ಕಡಲತೀರದಲ್ಲಿ ಪ್ರವೇಶ ನಿಷೇಧಿಸಲಾಗಿದೆ ಎಂದು ನಾಮಫಲಕ ಹಾಕಿರುವ ಬೆನ್ನ ಹಿಂದೆಯೇ ಮತ್ತೊಂದು ಸುದ್ದಿ ತಾಲ್ಲೂಕಿನ ನಾಗರಿಕರ ನಿದ್ದೆಗೆಡಿಸಿದೆ.ನೈಸರ್ಗಿಕವಾಗಿ ಸಂಪದ್ಭರಿತವಾಗಿರುವ ಇಲ್ಲಿಯ ಕಡಲತೀರದಲ್ಲಿ ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆ ಹೆಲಿಪ್ಯಾಡ್ ನಿರ್ಮಿಸಲು ಮುಂದಾಗಿದೆ.ಹೆಲಿಪ್ಯಾಡ್ ನಿರ್ಮಿಸುವುದಕ್ಕೆ ಸಂಬಂಧಪಟ್ಟಂತೆ ಕಡಲತೀರದಲ್ಲಿ ಮಾರುತಿ ದೇವರ ಮೂರ್ತಿ ಹಾಗೂ ಸಂಗೀತ ಕಾರಂಜಿ ಇರುವ ಸ್ಥಳದಲ್ಲಿರುವ ಗಾಳಿ ಮರಗಳನ್ನು ಕಟಾವು ಮಾಡಲು ಬಂದರು ಒಳನಾಡು ಜಲ ಸಾರಿಗೆ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಹೆಲಿಪ್ಯಾಡ್ ನಿರ್ಮಾಣ ವಿಷಯ ಸ್ಥಳೀಯ ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ. ಹೆಲಿಪ್ಯಾಡ್ ನಿರ್ಮಿಸಲು ಸಾವಿರಾರು ಗಾಳಿ ಮರಗಳನ್ನು ಬಲಿ ಕೊಡಬೇಕಾದ ಪ್ರಸಂಗ ಈಗ ಎದುರಾಗಿದೆ.

ಗಿಡ, ಮರಗಳನ್ನು ಉಳಿಸುವುದಕ್ಕೆ ಸಂಬಂಧಪಟ್ಟಂತೆ ಸರಕಾರ ಪ್ರತಿವರ್ಷ ಕೋಟಿಗಟ್ಟಲೆ ಹಣ ಖರ್ಚು ಮಾಡುತ್ತಿದೆ. ಆದರೆ, ಸರಕಾರದ ಭಾಗವಾಗಿರುವ ಇಲಾಖೆಗಳೇ ಮರ ಕಡಿಯುವುದಕ್ಕೆ ಅನುಮತಿ ಕೇಳಿ ಸಾವಿರಾರು ಮರಗಳನ್ನು ನಾಶ ಮಾಡಲು ಉದ್ದೇಶಿಸಿರುವುದು ಆಶ್ಚರ್ಯ ಮೂಡಿಸಿದೆ. ಈಗಾಗಲೇ ನೌಕಾನೆಲೆಯಲ್ಲಿ ಹೆಲಿಪ್ಯಾಡ್ ಇದೆ.ಕಾರವಾರಕ್ಕೆ ಮುಖ್ಯಮಂತ್ರಿಗಳು, ಗಣ್ಯ ವ್ಯಕ್ತಿಗಳು ಹೆಲಿಕಾಪ್ಟರ್ ಮೂಲಕ ಬರುವುದಿದ್ದರೆ ನೌಕಾನೆಲೆಯ ಹೆಲಿಪ್ಯಾಡ್ ಅನ್ನೇ ಬಳಸಲಾಗುತ್ತಿದೆ.ಇದೂ ಅಲ್ಲದೇ ನಗರ ಮಾಲಾದೇವಿ ಮೈದಾನದಲ್ಲೂ ಹೆಲಿಕಾಪ್ಟರ್ ಇಳಿಸಲು ತಾತ್ಕಾಲಿಕ ವ್ಯವಸ್ಥೆ ಇದೆ. ಹೆಲಿಕಾಪ್ಟರ್ ಲ್ಯಾಂಡಿಂಗ್‌ಗೆ ಇಷ್ಟೆಲ್ಲ ಅವಕಾಶಗಳಿರುವಾಗ ಹೆಲಿಪ್ಯಾಡ್ ನಿರ್ಮಿಸುವ ಅವಶ್ಯಕತೆ ಇದೆಯೇ ಎನ್ನುವ ಪ್ರಶ್ನೆ ಕಾಡುತ್ತಿದೆ.ಕಡಲತೀರದಲ್ಲಿ ಹೆಲಿಪ್ಯಾಡ್ ನಿರ್ಮಾಣ ಆದ್ದಲ್ಲಿ ಸಾಂಪ್ರದಾಯಿಕ ಮೀನುಗಾರಿಕೆಗೂ ಕುತ್ತು ಬರಲಿದೆ.ತಲಾತಲಾಂತರಗಳಿಂದ ಸಾಂಪ್ರದಾಯಿಕ ಮೀನುಗಾರಿಕೆ ಮಾಡಿ ಜೀವನ ನಿರ್ವಹಣೆ ಮಾಡುತ್ತ ಬಂದಿರುವ ಮೀನುಗಾರರು ಹೆಲಿಪ್ಯಾಡ್ ನಿರ್ಮಾಣ ಆಗುವ ಸುದ್ದಿ ಕೇಳಿ ಚಿಂತಿತರಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry