ಗುರುವಾರ , ಮೇ 19, 2022
24 °C
ಪೊಲೀಸ್ ಮಾಹಿತಿದಾರರಿಗೆ ನಕ್ಸಲರ ಕೊಲೆ ಬೆದರಿಕೆ ಪತ್ರ

`ಸಾವು,ಬದುಕು:ಆಯ್ಕೆ ನಿಮ್ಮದು'

ವಿಶೇಷ ವರದಿ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು:  `ಜನರೊಂದಿಗೆ ಸೇರಿ ಬದುಕಬೇಕೆ? ಅಥವಾ ಪೊಲೀಸರ ಜೊತೆ ಸೇರಿ ಸಾಯಬೇಕೆ? ನೀವೇ ನಿರ್ಧರಿಸಿ' ಎಂದು ನಕ್ಸಲರು ಪೊಲೀಸ್ ಮಾಹಿತಿದಾರರಿಗೆ ಎಚ್ಚರಿಕೆ ನೀಡಿ, ಕೊಲೆ ಬೆದರಿಕೆ ಹಾಕಿ ಪತ್ರ ಬರೆದಿರುವ ಸಂಗತಿ ಬೆಳಕಿಗೆ ಬಂದಿದೆ.

ಸಿಪಿಐ (ಮಾವೋವಾದಿ) ಮಲೆನಾಡು ಏರಿಯಾ ಸಮಿತಿ ಮತ್ತು ಕರಾವಳಿ ಏರಿಯಾ ಸಮಿತಿ ಹೆಸರಿನಲ್ಲಿ ಪೊಲೀಸ್ ಮಾಹಿತಿದಾರರನ್ನು ಗುರಿಯಾಗಿಸಿಕೊಂಡು ಬರೆದಿರುವ ಪತ್ರದ ಪ್ರತಿ 'ಪ್ರಜಾವಾಣಿ' ಕಚೇರಿಗೆ ಬಂದಿದೆ.`ಪೊಲೀಸ್ ಮಾಹಿತಿದಾರರಿಗೆ ಮಾವೊವಾದಿಗಳ ಮನವಿ ಮತ್ತು ಎಚ್ಚರಿಕೆ' ಶೀರ್ಷಿಕೆಯಡಿ ನಕ್ಸಲರು ನಾಲ್ಕು ಪುಟಗಳ ಪತ್ರ ಬರೆದಿದ್ದಾರೆ.ಪತ್ರದ ಸಾರಾಂಶ; `ಜನರೊಂದಿಗೆ ಸೇರಿ ಬದುಕಬೇಕೆ? ಅಥವಾ ಪೊಲೀಸರ ಜೊತೆ ಸೇರಿ ಸಾಯಬೇಕೆ? ಎಂಬ ಪ್ರಶ್ನೆಗೆ ಉತ್ತರಿಸಬೇಕಾದ ಇಕ್ಕಟ್ಟಿನ ಪರಿಸ್ಥಿತಿ ನೀವೇ ತಂದುಕೊಂಡಿದ್ದೀರಿ. ಏಕೆಂದರೆ ಕ್ರಾಂತಿಕಾರಿಗಳ ಕಗ್ಗೊಲೆಗೆ ಕಾರಣರಾದ ದ್ರೋಹಿಗಳಿಗೆ ಶಿಕ್ಷೆ ನೀಡದೆ ಕ್ರಾಂತಿಕಾರಿ ಚಳವಳಿ ಮುಂದಕ್ಕೆ ಕೊಂಡೊಯ್ಯಲು ಸಾಧ್ಯವಿಲ್ಲ. ಸಾವು ಎಲ್ಲರಿಗೂ ಸಹಜವೆ. ಆದರೆ ಜನರಿಗೆ ದ್ರೋಹ ಬಗೆದು ಸಾಯಬೇಕೆ? ಜನರೊಂದಿಗೆ ಜನರಾಗಿ ಬದುಕಿ ಸಾಯಬೇಕೆ? ಎಂಬ ವಿಷಯದ ಬಗ್ಗೆಯೂ ನೀವು ಚಿಂತಿಸಬೇಕು'.'ಮಲೆನಾಡು, ಕರಾವಳಿ ಪ್ರದೇಶಗಳಲ್ಲಿ ನಕ್ಸಲ್ ಚಳವಳಿ ಪ್ರಾರಂಭವಾಗಿ ಈ ಹತ್ತು ವರ್ಷಗಳಲ್ಲಿ ನಿಮ್ಮ ಸಹಕಾರದಿಂದ ಪೊಲೀಸರು ನಮ್ಮ ಗೆರಿಲ್ಲಾ ಸೇನೆ (ಪಿಎಲ್‌ಜಿಎ)ಯ 13 ಸಂಗಾತಿಗಳನ್ನು ಮತ್ತು ಮಾವಿನಹಾಡ್ಯ (ಮೆಣಸಿನಹಾಡ್ಯ)ದ ಆದಿವಾಸಿಗಳಾದ ಪರಮೇಶ, ರಾಮೇಗೌಡ, ಸುಂದರೇಶ್, ಕಾವೇರಕ್ಕ ಮುಂತಾದವರನ್ನು ಕಗ್ಗೊಲೆ ಮಾಡಿದ್ದಾರೆ. ನಕ್ಸಲರ ಹೋರಾಟದಿಂದಲೇ ಈ ಪ್ರದೇಶದಲ್ಲಿ ಜನರ ಬದುಕಿಗೆ ಬೇಕಾದ ಸಂಪನ್ಮೂಲ, ಸಂಸ್ಕೃತಿ ಉಳಿದುಬಂದಿದೆ.ನಾವು ಇಲ್ಲದಿದ್ದಲ್ಲಿ ಕುದುರೆಮುಖ ರಾಷ್ಟ್ರೀಯ ಉದ್ಯಾನ ಯೋಜನೆ ಜಾರಿ ಮಾಡಿ, ಇಷ್ಟರಲ್ಲೇ ಜನರನ್ನು ಒಕ್ಕಲೆಬ್ಬಿಸುತ್ತಿದ್ದರು. ತಮ್ಮ ಪ್ರಾಣ ಅರ್ಪಿಸಿ, ಜನರ ಒಳಿತಿಗಾಗಿ ಹೋರಾಡುವ ಮಾವೊವಾದಿಗಳನ್ನು ರಕ್ಷಿಸುವುದು ತಮ್ಮ ಕರ್ತವ್ಯವೆಂದು ಜನರು ಪ್ರೀತಿಯಿಂದ ನಮ್ಮನ್ನು ನೋಡಿಕೊಳ್ಳುತ್ತಿದ್ದಾರೆ.ಅವರ ನಡುವೆ ನೀವು ಕೇವಲ ಪೊಲೀಸರು ನೀಡಿದ ಹಣದ ಆಸೆಗೆ ಬಲಿಯಾಗಿ ನಿಮ್ಮ ಸೋದರ, ಸೋದರಿಯರನ್ನು ಕೊಲ್ಲಲು ಕಾರಣರಾಗಿದ್ದೀರಿ. ಇಲ್ಲದಿದ್ದಲ್ಲಿ ಆ ಪೊಲೀಸ್ ..ಗಳಿಗೆ ಏನೂ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಇಂತಹ ಕೃತ್ಯದ ಮೂಲಕ ಜನರಿಗೆ ದೊಡ್ಡ ದ್ರೋಹ ಎಸಗುತ್ತಿದ್ದೀರಿ. ಇದನ್ನು ತಿಳಿದೇ ಪೊಲೀಸರು ಮಾಹಿತಿದಾರರನ್ನು ಸೃಷ್ಟಿಸಲು ಲಕ್ಷಾಂತರ ರೂಪಾಯಿ ಸುರಿಯುತ್ತಿದ್ದಾರೆ'.'ಒಂದು ವಿಷಯ ನೀವು ತಿಳಿಯಿರಿ. ಇಷ್ಟು ವರ್ಷಗಳಿಂದ ಆದಿವಾಸಿಗಳು ಮತ್ತು ರೈತಾಪಿ ಜನರು ಯಾವುದೇ ಮೂಲಸೌಕರ್ಯಗಳಿಲ್ಲದೆ ಹಳ್ಳಿಗಳಲ್ಲಿ ಅದೇ ಹಳೆಯ ಬದುಕು ನಡೆಸುತ್ತಿದ್ದಾರೆ. ಭೂಮಾಲೀಕರು, ಎಸ್ಟೇಟ್ ಮಾಲೀಕರು, ಲೇವಾದೇವಿ ಬಡ್ಡಿಕೋರರು ಅಮಾಯಕ ಜನರನ್ನು ಶೋಷಣೆ ಮಾಡಿ ಕೊಬ್ಬುತ್ತಿದ್ದರು. ಮಾವೊವಾದಿ ಪಕ್ಷದ ನಾಯಕತ್ವದಲ್ಲಿ ಸಶಸ್ತ್ರ ಹೋರಾಟ ಶುರುವಾದ ನಂತರವೇ ಅರಣ್ಯ ಇಲಾಖೆ ಮತ್ತು ಭೂಮಾಲೀಕರ ದೌರ್ಜನ್ಯಗಳು ಕಡಿಮೆಯಾಗಿವೆ. ಕೂಲಿ ದರವೂ ಹೆಚ್ಚಾಗಿದೆ.ಬಲಾತ್ಕಾರದಿಂದ ಒಕ್ಕಲೆಬ್ಬಿಸಲು ಪ್ರಯತ್ನಿಸಿದ ಸರ್ಕಾರ ಇಂದು ಜನರ ಇಚ್ಚೆ ಇಲ್ಲದೆ ಒಕ್ಕಲೆಬ್ಬಿಸುವುದಿಲ್ಲವೆಂಬ ಮಟ್ಟಕ್ಕೆ ಬಂದಿದೆ. ನಕ್ಸಲ್ ಬಾಧಿತ ಪ್ರದೇಶಗಳಿಗೆ ಪ್ಯಾಕೇಜ್ ಹೆಸರಿನಲ್ಲಿ ಸುಧಾರಣಾ ಕಾರ್ಯಕ್ರಮ ಪ್ರಾರಂಭವಾಗಿದೆ. ಇವು ನಮ್ಮ ಹೋರಾಟದ ಫಲವೆಂದು ಹೇಳಬೇಕಾದ ಅಗತ್ಯವಿಲ್ಲ'.`ಜನವಿರೋಧಿಗಳೆಲ್ಲರೂ ನಮ್ಮ ದಳಗಳ ಮುಂದೆ ಶರಣಾಗಬೇಕು. ಈಗಲಾದರೂ ಗಂಭೀರವಾಗಿ ಯೋಚಿಸಿ ಯಾರ ಕಡೆ ಇರಬೇಕೆಂಬುದು ನಿರ್ಣಯಿಸಿ'.`ಜನರು ಕಷ್ಟಕಾರ್ಪಣ್ಯ, ದೌರ್ಜನ್ಯದಿಂದ ಬಿಡುಗಡೆಯಾಗಿ ನೆಮ್ಮದಿ ಜೀವನ ನಡೆಸಬೇಕಾದರೆ ವಿಮೋಚನೆಗಾಗಿ ಸಶಸ್ತ್ರ ಹೋರಾಟ ಮುಂದುವರಿಸಬೇಕು  ಎಂದು ಪತ್ರದಲ್ಲಿ ವಿವರವಾಗಿ ಬರೆಯಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.