ಶುಕ್ರವಾರ, ಮೇ 7, 2021
21 °C

ಸಾಹಿತಿಗಳು ರಾಜಕೀಯ ವ್ಯವಸ್ಥೆ ಬದಲಿಸಬೇಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ದಿಕ್ಕು ತಪ್ಪಿರುವ ಪ್ರಸ್ತುತ ರಾಜಕೀಯ ವ್ಯವಸ್ಥೆಯನ್ನು ಬದಲಿಸುವ ಕೆಲಸ ಸಾಹಿತಿಗಳಿಂದ ಆಗಬೇಕು~ ಎಂದು ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.ನಗರದಲ್ಲಿ ಮಂಗಳವಾರ ಪ್ರೇಜಸ ಪ್ರಕಾಶನ ಸಂಸ್ಥೆಯ ಉದ್ಘಾಟನೆ ಹಾಗೂ ಐದು ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.`ರಾಜಕೀಯ ಕ್ಷೇತ್ರ ಇಂದು ತನ್ನ ಎಲ್ಲೆ ಮೀರಿ ಕಲುಷಿತಗೊಂಡಿದೆ. ರಾಜಕೀಯ ಕ್ಷೇತ್ರದಲ್ಲಿ ಲಜ್ಜೆ ಮೀರಿ ಭ್ರಷ್ಟಾಚಾರ ವ್ಯಾಪಕವಾಗಿ ಬೆಳೆಯುತ್ತಿದೆ. ಒಳ್ಳೆಯ ಜನರು ರಾಜಕೀಯ ಕ್ಷೇತ್ರಕ್ಕೆ ಬರುವುದೇ ತಪ್ಪು ಎಂಬಂಥ ಭಾವ ಎಲ್ಲರಲ್ಲೂ ಮೂಡಿದೆ. ರಾಜಕಾರಣಿ ಎಂದು ಹೇಳಿಕೊಳ್ಳಲು ಹಿಂಜರಿಯಬೇಕಾದ ಪರಿಸ್ಥಿತಿ ಇಂದು ಸಮಾಜದಲ್ಲಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಇಂದಿಗೂ ತತ್ವ, ಸಿದ್ಧಾಂತ ಹಾಗೂ ಮೌಲ್ಯಗಳನ್ನು ಉಳಿಸಿಕೊಂಡು ಬಂದಿರುವ ಸಾಹಿತಿಗಳಿಂದ ರಾಜಕೀಯ ಕ್ಷೇತ್ರದಲ್ಲಿ ಬದಲಾವಣೆ ತರುವ ಕೆಲಸ ಆಗಬೇಕು~ ಎಂದು ಅವರು ಆಶಿಸಿದರು.`ನಮ್ಮ ಕಾರ್ಯಾಂಗ ವ್ಯವಸ್ಥೆಯಲ್ಲಿ ಅನೇಕ ಉನ್ನತ ಅಧಿಕಾರಿಗಳಿಗೆ ಶೋಷಣೆ ಹಾಗೂ ಅವಮಾನಗಳ ಪರಿಚಯವೇ ಇಲ್ಲ. ಹೀಗಾಗಿ ಶೋಷಿತರ ಪರವಾದ ಕೆಲಸಗಳಾಗದೇ ಸಂವಿಧಾನದ ಮೂಲ ಉದ್ದೇಶ ಇನ್ನೂ ಈಡೇರಿಲ್ಲ. ರಾಜಕೀಯದ ಲೇಪವಿರುವ ಎಲ್ಲವನ್ನೂ ಸಮಾಜ ಅನುಮಾನದಿಂದ ನೋಡುತ್ತಿರುವ ಸಂದರ್ಭ ಈಗ ನಿರ್ಮಾಣವಾಗಿದೆ. ಹೀಗಾಗಿ ರಾಜಕೀಯ ಲೇಪವಿರದ ಹೋರಾಟಗಳು ಮಾತ್ರ ಯಶಸ್ವಿಯಾಗುತ್ತವೆ. ಒಳ್ಳೆಯ ವ್ಯಕ್ತಿಗಳು ರಾಜಕೀಯ ಕ್ಷೇತ್ರಕ್ಕೆ ಬಂದರೆ ಜಾತಿ ಹಾಗೂ ಹಣದ ಪ್ರಭಾವ ರಾಜಕೀಯದಲ್ಲಿ ಸ್ವಲ್ಪ ಮಟ್ಟಿಗಾದರೂ ಕಡಿಮೆಯಾಗಬಹುದು~ ಎಂದು ಅವರು ನುಡಿದರು.ಹಿರಿಯ ಸಾಹಿತಿ ಡಾ.ಕೆ.ಮರುಳಸಿದ್ಧಪ್ಪ ಮಾತನಾಡಿ, `ಹಿಂದಿಗಿಂತಲೂ ಇಂದು ಕನ್ನಡದ ಪರಿಸ್ಥಿತಿ ಉತ್ತಮವಾಗಿದೆ. ಪಂಚತಾರಾ ಹೋಟೆಲ್‌ಗಳೂ ಸೇರಿದಂತೆ ಎಲ್ಲ ಕಡೆಗಳಲ್ಲೂ ಕನ್ನಡ ಭಾಷೆಯನ್ನು ಯಾವುದೇ ಹಿಂಜರಿಕೆ ಇಲ್ಲದಂತೆ ಬಳಸಬಹುದಾದ ವಾತಾವರಣ ಈಗ ನಿರ್ಮಾಣವಾಗಿದೆ. ಸದ್ಯ ವರ್ಷಕ್ಕೆ ಸುಮಾರು ಐದು ಸಾವಿರ ಶೀರ್ಷಿಕೆಯ ಕನ್ನಡ ಪುಸ್ತಕಗಳು ಪ್ರಕಟಗೊಳ್ಳುತ್ತಿವೆ. ಸುಮಾರು ನೂರು ಕನ್ನಡ ಸಿನಿಮಾಗಳು ನಿರ್ಮಾಣವಾಗುತ್ತಿವೆ. ಕನ್ನಡ ಪತ್ರಿಕೆಗಳ ಓದುಗರ ಸಂಖ್ಯೆಯೂ ಹೆಚ್ಚಾಗಿದೆ. ಇದು ಕನ್ನಡ ಭಾಷೆಯ ಸಂಮೃದ್ಧ ಕಾಲ~ ಎಂದು ಅವರು ನುಡಿದರು.`ಪ್ರಕಾಶನ ಕ್ಷೇತ್ರ ಇಂದು ವೇಗವಾಗಿ ಬೆಳೆಯುತ್ತಿದ್ದು, ಬೃಹತ್ ಪ್ರಮಾಣದ ಖಾಸಗಿ ಪ್ರಕಾಶನ ಸಂಸ್ಥೆಗಳು ಸಮೂಹ ಮಾಧ್ಯಮಗಳ ಒಡೆತನ ಹೊಂದುತ್ತಿವೆ. ಇಂತಹ ಸಂದರ್ಭದಲ್ಲಿ ಸಣ್ಣ ಪ್ರಮಾಣದ ಪ್ರಕಾಶನ ಸಂಸ್ಥೆಗಳು ಹೆಚ್ಚು ಬೆಳೆಯಬೇಕು~ ಎಂದು ಅವರು ಆಶಿಸಿದರು.ಸಾಹಿತಿ ಡಾ.ಬಂಜಗೆರೆ ಜಯಪ್ರಕಾಶ್ ಅವರು ಡಾ.ಎಚ್.ನಾಗವೇಣಿ ಅವರ `ಸೂರ್ಯನಿಗೊಂದು ವೀಳ್ಯ~, ಡಾ.ಎಂ.ವೆಂಕಟಸ್ವಾಮಿ ಅವರ `ಈಶಾನ್ಯ ಭಾರತದ ಕವಿತೆಗಳು~, ಡಾ.ವಿಠ್ಠಲ ಭಂಡಾರಿ ಅವರ `ಹಸಿವಿನ ಹಾಡು ಪಾಡು~, ಕಾ.ತ.ಚಿಕ್ಕಣ್ಣ ಅವರ `ಚದುರಂಗ~ ಹಾಗೂ ಎಸ್.ಜಿ.ಸಿದ್ಧರಾಮಯ್ಯ ಅವರ `ನೆಲಮೂಲ ದನಿ~ ಪುಸ್ತಕಗಳನ್ನು ಪರಿಚಯಿಸಿದರು.ಸಮಾರಂಭದಲ್ಲಿ ತುಮಕೂರು ಜಿಲ್ಲೆ ಚಿಕ್ಕನಾಯಕನ ಹಳ್ಳಿ ತಾಲ್ಲೂಕಿನ ನೂಲೇನೂರು ಕದಿರಮ್ಮ ಮತ್ತು ತಂಡದವರಿಂದ ತತ್ವಪದಗಳ ಗಾಯನ ನಡೆಯಿತು. ಐದೂ ಪುಸ್ತಕಗಳ ಲೇಖಕರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.