ಭಾನುವಾರ, ಮೇ 22, 2022
26 °C

`ಸಾಹಿತ್ಯ ಓದಿದರೆ ಮನಸ್ಸು ಪರಿವರ್ತನೆ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ಪ್ರಸ್ತುತ ದಿನಗಳಲ್ಲಿ ಬರಹದಲ್ಲೂ ಕೆಲವರು ಜಾತಿಯ ವಿಷಬೀಜ ಬಿತ್ತುತ್ತಿದ್ದಾರೆ ಎಂದು ಲೇಖಕ ಕೃಷ್ಣಮೂರ್ತಿ ಹನೂರು ಅಸಮಾಧಾನ ವ್ಯಕ್ತಪಡಿಸಿದರು.ನಗರದ ಗಾಂಧಿ ಭವನದಲ್ಲಿ ಗೋಕುಲ ಪಬ್ಲಿಷರ್ಸ್‌ ವತಿಯಿಂದ ಭಾನುವಾರ ಅಜ್ಞಾನತೊಬ್ಬನ ಆತ್ಮಚರಿತ್ರೆ ಕಾದಂಬರಿ ಕುರಿತು ಹಮ್ಮಿಕೊಂಡಿದ್ದ ಆಪ್ತ ಸಂವಾದದಲ್ಲಿ ಮಾತನಾಡಿದರು.ಈ ರೀತಿ ಮಾಡುವುದರಿಂದ ಎಲ್ಲರ ಸಮಯ ವ್ಯಯವಾಗುತ್ತದೆ. ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ನೆರವಾಗುವಂತಹ ಲೇಖನಗಳನ್ನು ಬರೆದರೆ ಉಪಯೋಗವಾಗುತ್ತದೆ ಎಂದರು.ಸಾಹಿತ್ಯವನ್ನು ನಿರಂತರವಾಗಿ ಓದಿದರೆ ಮನಸ್ಸು ಪರಿವರ್ತನೆಯಾಗುತ್ತದೆ. ಆದ್ದರಿಂದ ಸಾಹಿತ್ಯ ಓದುವ ಅಭ್ಯಾಸ ಮಾಡಿಕೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ ನಕಲು ಲೇಖನ, ಸಾಹಿತ್ಯದ ಹಾವಳಿ ಜಾಸ್ತಿಯಾಗಿದೆ. ಅಂಥದ್ದನ್ನು ತಿರಸ್ಕರಿಸಬೇಕು. ನಿಜವಾದ ಸಾಹಿತಿಗಳು ಇಂಥ ಕೆಲಸಕ್ಕೆ ಕೈಹಾಕುವುದಿಲ್ಲ ಎಂದು ಹೇಳಿದರು.ಜಾನಪದ ಅಧ್ಯಯನಕ್ಕಾಗಿ ಚಿತ್ರದುರ್ಗದಲ್ಲಿ ಇತಿಹಾಸ ಸತ್ಯಗಳನ್ನು ಹುಡುಕಿಕೊಂಡು ಹೋದೆ. ಅಲ್ಲಿಂದ ಬರವಣಿಗೆಯ ಪಯಣ ಆರಂಭವಾಯಿತು. ಬರವಣಿಗೆಯಲ್ಲಿ ಜೀವಂತಿಕೆ ಇರಬೇಕು ಎಂದರು.ಸಂವಾದದಲ್ಲಿ ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಹಿಂದಿನ ದಿನಗಳಲ್ಲಿ ಕ್ರೌರ್ಯ ಬಹಳಷ್ಟು ಇತ್ತು. ಇತಿಹಾಸದ ಪುಟಗಳನ್ನು ಕೆದಕಿದಾಗ ಇದು ಗೊತ್ತಾಗುತ್ತದೆ. ಈಗ ಸುಧಾರಣೆಯಾಗಿದೆ. ಅಪವಾದ ತಪ್ಪಿಸಿಕೊಳ್ಳಲು ಕಾದಂಬರಿಕಾರರು ಬಹಳ ಎಚ್ಚರಿಕೆಯಿಂದ ಕಾದಂಬರಿಗಳನ್ನು ಬರೆಯಬೇಕು ಎಂದರು. ಕಸಾಪ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಜಿ.ಟಿ. ವೀರಪ್ಪ,  ಎಂ.ಜಿ. ವಿನಯ್‌ಕುಮಾರ್, ಶಿವಕುಮಾರ್ ಆರಾಧ್ಯ, ನಂದೀಶ್, ಭವಾನಿ, ಲೋಕೇಶ್ ಮತ್ತಿತರರು ಉಪಸ್ಥಿತರಿದ್ದರು.ನವಲೇಖಕರ ಶಿಬಿರ

ಮಂಡ್ಯ:  ರಾಷ್ಟ್ರ ಮಟ್ಟದ `ಹಿಂದಿತರ ಭಾಷೆ ನವಲೇಖಕರ ಶಿಬಿರ'ವನ್ನು ಜುಲೈ 22 ರಿಂದ 29ರ ವರೆಗೆ ನಗರದ ಹಿಂದಿ ಭವನದಲ್ಲಿ ಏರ್ಪಡಿಸಲಾಗಿದೆ ಎಂದು ಕರ್ನಾಟಕ ಹಿಂದಿ ಸಭಾ ಕಾರ್ಯದರ್ಶಿ ಎಸ್. ವಿನಯ್ ಕುಮಾರ್ ತಿಳಿಸಿದ್ದಾರೆ.`ಶಿಬಿರದಲ್ಲಿ ಕಥೆ ಕಟ್ಟುವ ಬಗೆಗೆ, ಕವಿತೆ, ನಾಟಕ, ಪದ್ಯ ರಚನೆಯ ಬಗೆಗೆ ಹೇಳಿಕೊಡಲಾಗುವುದು. ರಾಷ್ಟ್ರದ ವಿವಿಧೆಡೆಯಿಂದ ಸುಮಾರು 50 ನವಲೇಖಕರು ಭಾಗವಹಿಸುವರು. ಹಿಂದಿ ಸಾಹಿತ್ಯದ ನಾನಾ ಪ್ರಕಾರಗಳಲ್ಲಿ ತೊಡಗಿಸಿಕೊಂಡಿರುವ ಡಾ.ತಿಪ್ಪೇಸ್ವಾಮಿ,   ಡಾ. ಪ್ರತಿಭಾ ಮೊದಲಿಯಾರ್, ಡಾ. ಅಶೋಕ್ ಕಾಂಬ್ಳೆ, ಡಾ. ಪ್ರಭುಸೇನ್, ದ್ವಾರಕನಾಥ್ ಸೇರಿದಂತೆ ಹಲವರು ಶಿಬಿರದಲ್ಲಿ ಮಾಹಿತಿ ನೀಡಲಿದ್ದಾರೆ ಎಂದು ಹೇಳಿದ್ದಾರೆ.ಮಂಡ್ಯ ತಾಲ್ಲೂಕಿನ ಎಲ್ಲ ಸರ್ಕಾರಿ/ಅನುದಾನಿತ ಪ್ರೌಢಶಾಲಾ ಹಿಂದಿ ಶಿಕ್ಷಕರಿಗೆ ಜುಲೈ 22 ರಿಂದ 29ರ ವರೆಗೆ ಅನ್ಯ ಕಾರ್ಯ ನಿಮಿತ್ತ (ಓಓಡಿ) ಸೌಲಭ್ಯವನ್ನು ಕಲ್ಪಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಪ್ರಬಂಧ ಸ್ಪರ್ಧೆ

ಮಂಡ್ಯ:  ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘಟನೆ ವತಿಯಿಂದ ಜಿಲ್ಲೆಯ ಸಂಸ್ಥಾಪಕ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಕುರಿತು ನಗರದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಗಾಂಧಿ ಭವನದಲ್ಲಿ ಜುಲೈ 27 ಎಂದು ಬೆಳಿಗ್ಗೆ 11 ಗಂಟೆಗೆ ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿದೆ. ಭಾಗವಹಿಸುವ ವಿದ್ಯಾರ್ಥಿಗಳು ಶಾಲೆಯ ಮುಖ್ಯೋಪಾಧ್ಯಾಯರ ಪತ್ರದೊಂದಿಗೆ ಹಾಜರಾಗಬೇಕು. ಪ್ರಬಂಧ ಬರೆಯಲು ಒಂದು ಗಂಟೆ ಕಾಲಾವಕಾಶ ನೀಡಲಾಗುವುದು.ವಿಜೇತರಿಗೆ ನಗದು ಬಹುಮಾನ, ಪ್ರಮಾಣಪತ್ರ ನೀಡಲಾಗುವುದು. ವಿವರಗಳಿಗೆ ಕೆ. ಪ್ರಹ್ಲಾದರಾವ್ ಮೊ.9342424994 ಮೂಲಕ ಸಂಪರ್ಕಿಸಬೇಕು ಎಂದು ಪತ್ರಿಕಾ ಕಾರ್ಯದರ್ಶಿ ಹೊಳಲು ಶ್ರೀಧರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.