ಗುರುವಾರ , ಮೇ 28, 2020
27 °C

ಸಿಂಕ್ ನೀರಿನ ಬಳಕೆಗೆ ಚಿಂತನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆಜಿಎಫ್: ಮುಂಬರುವ ಬೇಸಿಗೆಯಲ್ಲಿ ನಗರದಲ್ಲಿ ಉಂಟಾಗಬಹುದಾದ ಕುಡಿಯುವ ನೀರಿನ ಬವಣೆ ತಪ್ಪಿಸಲು ಕೃಷ್ಣಾವರಂ ಬಳಿಯ ಬಿಜಿಎಂಎಲ್ ಸಿಂಕ್ ನೀರನ್ನು ಬಳಸುವ ಬಗ್ಗೆ ಜಲಮಂಡಳಿ ಚಿಂತನೆ ನಡೆಸಿದೆ.ಸದರಿ ಪ್ರದೇಶವು ಇಳಿಜಾರು ಪ್ರದೇಶದಲ್ಲಿದ್ದು ಈಗಾಗಲೇ ಬೆಮಲ್ ಸಿಂಕ್ ನೀರನ್ನು ಬಳಸಿಕೊಳ್ಳುತ್ತಿದ್ದು, ಸೂಕ್ತ ವ್ಯವಸ್ಥೆ ಮಾಡಿ ಅದನ್ನು ಜನತೆಗೆ ನೀಡಬಹುದು ಎಂಬ ಸಲಹೆಯನ್ನು ಹಿರಿಯ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.ನಗರಕ್ಕೆ ನೀರು ಸರಬರಾಜು ಮಾಡುವ ಬೇತಮಂಗಲ ಜಲಾಶಯದಲ್ಲಿರುವ ನೀರು ಬೇಸಿಗೆವರೆವಿಗೆ ಮಾತ್ರ ಸಾಕಾಗಲಿದೆ. ಬೇಸಿಗೆಯಲ್ಲಿ ಪುನಃ ಮಳೆ ಕೈಕೊಟ್ಟರೆ ನೀರಿನ ಹಾಹಾಕಾರ ಮುಗಿಲು ಮುಟ್ಟುತ್ತದೆ. ಈಗಾಗಲೇ ಕಳೆದ ನಾಲ್ಕು ವರ್ಷಗಳಿಂದ ಮಳೆಯ ಅಭಾವದಿಂದ ಕುಡಿಯುವ ನೀರನ್ನು ಬಿಂದಿಗೆ ಒಂದಕ್ಕೆ 1.50 ಪೈಸೆಯಂತೆ ಜನತೆ ಕೊಳ್ಳುತ್ತಿದ್ದಾರೆ. ಸುಮಾರು 200ಕ್ಕೂ ಹೆಚ್ಚು ಖಾಸಗಿ ಟ್ಯಾಂಕರ್‌ಗಳು ನಗರದೆಲ್ಲೆಡೆ ಜನತೆಯ ನೀರಿನ ದಾಹ ತಣಿಸುತ್ತಿವೆ.ಪ್ರತಿ ನಿತ್ಯ ಸುಮಾರು 5 ಕೋಟಿ ಲೀಟರ್‌ನಷ್ಟು ಕುಡಿಯುವ ನೀರು ಕೆಜಿಎಫ್ ನಗರಕ್ಕೆ ಅವಶ್ಯಕವಿದೆ. ಪ್ರಸ್ತುತ ಶೇ.20 ರಷ್ಟು ನೀರನ್ನು ಸಹ ಪೂರೈಸಲು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಬೇತಮಂಗಲ ಜಲಾಶಯದ ಜೊತೆಗೆ ಹೊಸ ನೀರಿನ ಮೂಲ ಹುಡುಕುವ ಯತ್ನದಲ್ಲಿ ಮಂಡಳಿ ಅಧಿಕಾರಿಗಳು ತಲ್ಲೆನರಾಗಿದ್ದಾರೆ.ಚಿನ್ನದ ಗಣಿಯಲ್ಲಿ ಸಿಗುವ ಯಥೇಚ್ಚ ನೀರನ್ನು ಉಪಯೋಗಿಸಿಕೊಳ್ಳುವ ಬಗ್ಗೆ ಪುನಃ ವರದಿಗಳನ್ನು ತಯಾರಿಸಲಾಗುತ್ತಿದೆ. ಗಣಿ ನೀರು ಕುಡಿಯಲು ಯೋಗ್ಯವಲ್ಲ ಎಂಬ ಹಿಂದಿನ ವರದಿ ಬದಿಗಿಟ್ಟು, ಅದನ್ನು ಸಂಸ್ಕರಿಸಿ ಕುಡಿಯುವ ನೀರನ್ನಾಗಿ ಪರಿವರ್ತಿಸಲು ಸಾಧ್ಯವೇ ಎಂಬ ಸಂಶೋಧನೆಯಲ್ಲಿ ಅಧಿಕಾರಿಗಳು ಇದ್ದಾರೆ. ಈಚೆಗೆ ಸಿಂಕ್‌ಗೆ ಭೇಟಿ ನೀಡಿದ್ದ ಜಲಮಂಡಳಿ ಅಧ್ಯಕ್ಷ ಎಸ್.ಎನ್.ಕೃಷ್ಣಯ್ಯಶೆಟ್ಟಿ, ಮುಖ್ಯ ಎಂಜಿನಿಯರ್ ರವೀಂದ್ರಭಟ್ಟ, ತಾಂತ್ರಿಕ ಸಹಾಯಕ ನಾಗೇಶ್ ಮತ್ತಿತರ ಹಿರಿಯ ಅಧಿಕಾರಿಗಳು ನೀರಿನ ಸ್ಯಾಂಪಲ್ ತೆಗೆದುಕೊಂಡು ಹೋಗಿದ್ದಾರೆ.ಸಿಂಕ್ ನೀರು ಕುಡಿಯಲು ಸಾಧ್ಯವಿಲ್ಲದಿದ್ದರೆ ಅದನ್ನು ಇತರ ಉಪಯೋಗಕ್ಕಾಗಿಯಾದರೂ ಜನಕ್ಕೆ ನೀಡಿದರೆ ಸಾಕಷ್ಟು ನೀರಿನ ಸಮಸ್ಯೆ ಬಗೆಹರಿಸಬಹುದು. ಈ ಪ್ರದೇಶದಲ್ಲಿ ಹಲವು ನೀರಿನ ತಾಣಗಳ ಸುಳಿವಿದ್ದು, ಯಂತ್ರಗಳ ಮೂಲಕ ಅವುಗಳನ್ನು ಪತ್ತೆ ಹಚ್ಚಬೇಕು ಎಂದು ಕೃಷ್ಣಯ್ಯಶೆಟ್ಟಿ ಅಧಿಕಾರಿಗಳಿಗೆ ತಿಳಿಸಿದ್ದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.