ಮಂಗಳವಾರ, ಮೇ 11, 2021
21 °C

ಸಿಂಗ್-ಜರ್ದಾರಿ ಚರ್ಚೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಭಯೋತ್ಪಾದಕ  ಹಫೀಜ್ ಸಯೀದ್ ಸುಳಿವಿಗೆ ಅಮೆರಿಕ ಬಹುಮಾನ ಘೋಷಿಸಿರುವ ಸಂದರ್ಭದಲ್ಲೇ ಪಾಕಿಸ್ತಾನದ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ಮತ್ತು ಪ್ರಧಾನಿ ಮನಮೋಹನ್ ಸಿಂಗ್ ಅವರು ಭಾನುವಾರ ನಡೆಸಲಿರುವ ಮಾತುಕತೆ ಕುತೂಹಲಕ್ಕೆ ಕಾರಣವಾಗಿದೆ.ಅಜ್ಮೇರ್ ದರ್ಗಾಕ್ಕೆ ಖಾಸಗಿ ಭೇಟಿ ನೀಡುವ ಸಲುವಾಗಿ ಜರ್ದಾರಿ ಅವರು ಭಾರತಕ್ಕೆ ಆಗಮಿಸುತ್ತಿದ್ದಾರೆ. ಇಸ್ಲಾಮಾಬಾದ್‌ನಿಂದ ದೆಹಲಿಗೆ ಬಂದಿಳಿದ ಕೂಡಲೇ ರೇಸ್‌ಕೋರ್ಸ್ ರಸ್ತೆಯಲ್ಲಿರುವ ಪ್ರಧಾನಿ ಸಿಂಗ್ ಅವರ ಅಧಿಕೃತ ನಿವಾಸಕ್ಕೆ ತೆರಳಲಿದ್ದಾರೆ. ಅಲ್ಲಿ ಇಬ್ಬರೇ ಮಾತುಕತೆ ನಡೆಸಿದ ನಂತರ ಔತಣ ಕೂಟ ಏರ್ಪಡಿಸಲಾಗಿದೆ. ಸಿಂಗ್ ಮತ್ತು ಜರ್ದಾರಿ ಮಾತುಕತೆ ವೇಳೆ ಬೇರ‌್ಯಾವ ನಾಯಕರೂ ಹಾಜರಿರುವುದಿಲ್ಲ.ಮಾತುಕತೆಗೆ ಪೂರ್ವ ನಿಗದಿತವಾದ ಅಂಶಗಳು ಇರದ ಕಾರಣ ಎರಡೂ ರಾಷ್ಟ್ರಗಳ ಮಧ್ಯೆ ವಿಶ್ವಾಸಾರ್ಹತೆ ಹೆಚ್ಚಿಸಲು ಅಗತ್ಯವಾದ ವಿಷಯಗಳ ಬಗ್ಗೆ ಈ ಧುರೀಣರು ಅನೌಪಚಾರಿಕವಾಗಿ ಚರ್ಚಿಸಲಿದ್ದಾರೆ. ಇದೊಂದು ಪೂರ್ವ ನಿಗದಿತ ಸಭೆಯಾಗಿರದ ಕಾರಣ ಮಾತುಕತೆಯ ನಂತರ ಯಾವುದೆ ಅಧಿಕೃತ ಪ್ರಕಟಣೆ ಅಥವಾ ಒಪ್ಪಂದದ ಬಗ್ಗೆ ಹೇಳಿಕೆಗಳು ಇರುವುದಿಲ್ಲ.ಮಾತುಕತೆ ಸಂದರ್ಭದಲ್ಲಿ ಭಯೋತ್ಪಾದಕರ ಹಾವಳಿ, ಮುಂಬೈ ದಾಳಿಯ ರೂವಾರಿ ಸಯೀದ್ ಹಫೀಜ್ ವಿರುದ್ಧ ಕಠಿಣ ಕ್ರಮದ ವಿಚಾರ, ಕಾಶ್ಮೀರ ಸಮಸ್ಯೆ, ಪ್ರಾದೇಶಿಕ ವಿಷಯಗಳು ಚರ್ಚೆಯಾಗಬಹುದು ಎಂಬ ನಿರೀಕ್ಷೆ ಇದೆ.

ಇದಲ್ಲದೇ ಪಾಕಿಸ್ತಾನದಲ್ಲಿ ಮರಣ ದಂಡನೆ ಶಿಕ್ಷೆಗೆ ಗುರಿಯಾಗಿರುವ ಸರಬ್‌ಜಿತ್ ಸಿಂಗ್ ಕ್ಷಮಾದಾನ ವಿಚಾರವೂ ಪ್ರಸ್ತಾಪವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.ಬಿಗಿ ಭದ್ರತೆ: ಜರ್ದಾರಿ ಅವರು ವಿಮಾನ ನಿಲ್ದಾಣದಿಂದ ನೇರವಾಗಿ ಪ್ರಧಾನಿ ನಿವಾಸಕ್ಕೆ ತೆರಳಲಿರುವುದರಿಂದ ಈ ಮಾರ್ಗದಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಎನ್‌ಎಸ್‌ಜಿಯ ಗುಂಡಿನ ದಾಳಿ ನಿಷ್ಣಾತರು ಸೇರಿದಂತೆ ಸುಮಾರು 2000 ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ. ಶಾರ್ಪ್ ಶೂಟರ್‌ಗಳು ಎತ್ತರದ ಕಟ್ಟಡಗಳಲ್ಲಿ ನಿಂತು ನಿಗಾ ಇಡಲಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.ಗೃಹ ಇಲಾಖೆ ದಾಖಲೆ: ಮುಂಬೈ ದಾಳಿಯ ರೂವಾರಿ ಹಫೀಜ್‌ಗೆ ಹಾಗೂ ಮುಂಬೈ ಮೇಲೆ ದಾಳಿ ಮಾಡಿದ ಭಯೋತ್ಪಾದಕರಿಗೆ ಸಂಬಂಧಿಸಿದ ದಾಖಲೆಗಳನ್ನು ಗೃಹ ಸಚಿವಾಲಯ ಪ್ರಧಾನಿ ಕಾರ್ಯಾಲಯಕ್ಕೆ ಕಳುಹಿಸಿದೆ.ಮಾತುಕತೆ ಸಂದರ್ಭದಲ್ಲಿ ಪ್ರಧಾನಿ ಅವರು ಈ ದಾಖಲೆಗಳನ್ನು ಮುಂದಿಟ್ಟುಕೊಂಡು ಹಫೀಜ್ ಮತ್ತು ಇತರ ಭಯೋತ್ಪಾದಕರ ಬಗ್ಗೆ ಚರ್ಚಿಸಬಹುದು ಎಂದೂ ಹೇಳಲಾಗಿದೆ.ಒತ್ತಾಯ: ಲಷ್ಕರ್-ಎ-ತೊಯ್ಬಾ ಸಂಘಟನೆಯ ಸ್ಥಾಪಕ ಮತ್ತು 26/11ರ ಮುಂಬೈ ದಾಳಿಯ ರೂವಾರಿ ಹಫೀಜ್ ಸಯೀದ್ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಜರ್ದಾರಿ ಅವರನ್ನು ಒತ್ತಾಯಿಸಬೇಕೆಂದು ಕಾಂಗ್ರೆಸ್ ಮತ್ತು ಬಿಜೆಪಿ, ಮನಮೋಹನ್ ಸಿಂಗ್ ಅವರನ್ನು ಆಗ್ರಹಿಸಿವೆ.ಪಾಕಿಸ್ತಾನದಲ್ಲಿ ಭಯೋತ್ಪಾದಕರು ಆಶ್ರಯ ಪಡೆದಿರುವ ಬಗ್ಗೆ ಪ್ರಧಾನಿ ಅವರು ಆತಂಕ ವ್ಯಕ್ತಪಡಿಸಬೇಕು. ಹಫೀಜ್ ಭಾರತಕ್ಕೆ ಬೇಕಾಗಿರುವ ಅಪರಾಧಿ ಎಂಬುದನ್ನು ಜರ್ದಾರಿ ಅವರ ಗಮನಕ್ಕೆ ತರಬೇಕು ಎಂದು ಬಿಜೆಪಿ ವಕ್ತಾರ ತರುಣ್ ವಿಜಯ್ ಹೇಳಿದ್ದಾರೆ.ಸಯೀದ್‌ನನ್ನು ಭಾರತಕ್ಕೆ ಹಸ್ತಾಂತರಿಸಲು ಒತ್ತಾಯಿಸಬೇಕು ಎಂದು ಕಾಂಗ್ರೆಸ್ ವಕ್ತಾರ ರಶೀದ್ ಅಲ್ವಿ ಕೋರಿದ್ದಾರೆ.ಭಾರತ ಮತ್ತು ಪಾಕಿಸ್ತಾನದ ಸಂಬಂಧ ಸುಧಾರಣೆ ಆಗಬೇಕಾದರೆ ಹಫೀಜ್‌ನನ್ನು ಭಾರತಕ್ಕೆ ಹಸ್ತಾಂತರಿಸಬೇಕು ಎಂದು ನ್ಯಾಷನಲ್  ಕಾನ್ಫರೆನ್ಸ್‌ನ ಮುಖ್ಯಸ್ಥ ಫರೂಕ್ ಅಬ್ದುಲ್ಲಾ ಹೇಳಿದ್ದಾರೆ.ಅಜ್ಮೇರ್ ವರದಿ: ಪಾಕಿಸ್ತಾನದಲ್ಲಿ ಮರಣ ದಂಡನೆ ಶಿಕ್ಷೆಗೆ ಗುರಿಯಾಗಿರುವ ಸರಬ್‌ಜಿತ್ ಸಿಂಗ್ ಅವರ ಸಹೋದರಿ ದಲ್‌ಬೀರ್ ಕೌರ್, ಜರ್ದಾರಿ ಅವರು ಇಲ್ಲಿಯ ದರ್ಗಾಕ್ಕೆ ಭೇಟಿ ನೀಡುವ ಒಂದು ದಿನ ಮೊದಲು ಬಂದು ಸಹೋದರನ ಬಿಡುಗಡೆಗೆ ಪ್ರಾರ್ಥಿಸಿದ್ದಾರೆ.`ನನ್ನ ಪ್ರಾರ್ಥನೆಯಿಂದಾಗಿ ಜರ್ದಾರಿ ಅವರು ಇಲ್ಲಿಗೆ ಬಂದು ಆಶೀರ್ವಾದ ಪಡೆಯುತ್ತಿದ್ದಾರೆ. ಇದೇ ರೀತಿ ನನ್ನ ಸಹೋದರನಿಗೂ ಪ್ರಾರ್ಥನೆಯ ಫಲ ದೊರೆತು ಪಾಕಿಸ್ತಾನದ ಜೈಲಿನಿಂದ ಬಿಡುಗಡೆಯಾಗಲಿ ಎಂದು ಕೋರುತ್ತೇನೆ~ ಎಂದು ಕೌರ್ ಹೇಳಿದ್ದಾರೆ. ಪ್ರಾರ್ಥನೆ ಸಂದರ್ಭದಲ್ಲಿ ಸರಬ್‌ಜಿತ್ ಪುತ್ರಿ ಸ್ವಪನ್‌ದೀಪ್ ಸಹ ಹಾಜರಿದ್ದಳು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.