ಮಂಗಳವಾರ, ಮೇ 18, 2021
22 °C

ಸಿಂಡಿಕೇಟ್ ಸದಸ್ಯರ ನೇಮಕ ರದ್ದು ಕೋರ್ಟ್‌ನಲ್ಲಿ ಸರ್ಕಾರ ಸಮರ್ಥನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮೈಸೂರು ಮತ್ತು ಬೆಂಗಳೂರು ವಿಶ್ವವಿದ್ಯಾಲಯಗಳ ಸಿಂಡಿಕೇಟ್‌ಗೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ನೇಮಕಗೊಂಡಿದ್ದ ಸದಸ್ಯರ ನಾಮನಿರ್ದೇಶನವನ್ನು ಹಿಂದೆ ಪಡೆದ ನಿರ್ಧಾರ ಸಮರ್ಥಿಸಿ ಕೊಂಡಿರುವ ಸರ್ಕಾರ, `ಹಿಂಬಾಗಿಲ ಮೂಲಕ ಪ್ರವೇಶ ಪಡೆದವರನ್ನು ವಾಪಸ್ ಕಳುಹಿಸಲಾಗುತ್ತಿದೆ' ಎಂದು ಹೈಕೋರ್ಟ್‌ನಲ್ಲಿ ಹೇಳಿದೆ.ಮೈಸೂರು ವಿ.ವಿ ಸಿಂಡಿಕೇಟ್ ಸದಸ್ಯರಾಗಿದ್ದ ಅ.ಮ. ಭಾಸ್ಕರ, ಜಗದೀಶ್, ಹೀರೇಂದ್ರ ಶಹಾ ಮತ್ತು ದಾಸಯ್ಯ ಅವರು ಸಲ್ಲಿಸಿರುವ ಅರ್ಜಿ ಹಾಗೂ ಬೆಂಗಳೂರು ವಿ.ವಿ ಸಿಂಡಿಕೇಟ್ ಸದಸ್ಯರಾಗಿದ್ದ ಡಾ.ಕೆ.ವಿ. ಆಚಾರ್ಯ, ಟಿ.ಎಚ್. ಶ್ರೀನಿವಾಸಯ್ಯ ಮತ್ತು ಸಿ.ಕೆ. ಜಗದೀಶ ಪ್ರಸಾದ್ ಅವರು ಸಲ್ಲಿಸಿರುವ ಪ್ರತ್ಯೇಕ ಅರ್ಜಿಗಳನ್ನು ನ್ಯಾಯಮೂರ್ತಿ ಅಶೋಕ ಬಿ. ಹಿಂಚಗೇರಿ ಸೋಮವಾರ ವಿಚಾರಣೆಗೆ ಕೈಗೆತ್ತಿಕೊಂಡರು.ಅರ್ಜಿದಾರರ ಪರ ವಾದಿಸಿದ ಹಿರಿಯ ವಕೀಲ ಕೆ.ಎಂ. ನಟರಾಜ್, `ಅರ್ಜಿದಾರರು ಶಿಕ್ಷಣ ತಜ್ಞರು ಎಂಬ ಕಾರಣಕ್ಕೆ ಸಿಂಡಿಕೇಟ್ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ಅವರ ನಾಮ ನಿರ್ದೇಶನ ಹಿಂದೆ ಪಡೆಯಲು ಸರ್ಕಾರಕ್ಕೆ ಸೂಕ್ತ ಕಾರಣಗಳು ಇರಬೇಕು. ಎಲ್ಲ ಸದಸ್ಯರನ್ನು ಒಮ್ಮಿಂ ದೊಮ್ಮೆಗೇ ವಜಾ ಮಾಡಿರುವುದು ಅಧಿಕಾರವನ್ನು ಮನಸೋಇಚ್ಛೆ ಬಳಸಿದಂತೆ ಆಗುತ್ತದೆ' ಎಂದು ವಾದಿಸಿದರು.ಸರ್ಕಾರದ ಪರ ವಾದಿಸಿದ ಅಡ್ವೊಕೇಟ್ ಜನರಲ್ ಪ್ರೊ.ರವಿವರ್ಮ ಕುಮಾರ್, `ಈ ಸಿಂಡಿಕೇಟ್ ಸದಸ್ಯರನ್ನು ಸರ್ಕಾರ ತನ್ನ ವಿವೇಚನಾ ಅಧಿಕಾರ ಬಳಸಿ ನೇಮಕ ಮಾಡಿದೆ. ಅದೇ ಅಧಿಕಾರ ಬಳಸಿ ಅವರ ನಾಮನಿರ್ದೇಶನ ಹಿಂಪಡೆ ದಿದೆ. ಮೈಸೂರು ವಿ.ವಿ ಸಿಂಡಿಕೇಟ್‌ಗೆ ಆರು ಸದಸ್ಯರನ್ನು ಬಿಜೆಪಿ ರಾಜ್ಯ ಘಟಕದ ಕಾರ್ಯದರ್ಶಿ ನಿರ್ಮಲ್ ಕುಮಾರ್ ಸುರಾನ ಅವರ ಶಿಫಾರಸು ಆಧರಿಸಿ ನೇಮಕ ಮಾಡಲಾಗಿತ್ತು' ಎಂದು ವಿವರಿಸಿದರು.`ವಿಚಾರಣೆ ಮುಗಿಯುವವರೆಗೂ ಬೆಂಗಳೂರು ಮತ್ತು ಮೈಸೂರು ವಿವಿಗಳ ಸಿಂಡಿಕೇಟ್‌ಗೆ ಹೊಸ ಸದಸ್ಯರನ್ನು ನೇಮಕ ಮಾಡದಂತೆ ಸರ್ಕಾರಕ್ಕೆ ತಿಳಿಸಿ' ಎಂದು ನ್ಯಾಯಪೀಠ ಮೌಖಿಕವಾಗಿ ನಿರ್ದೇಶಿಸಿತು. ಅರ್ಜಿದಾರರ ನೇಮಕ ಮತ್ತು ಅವರನ್ನು ಸಿಂಡಿಕೇಟ್ ಸದಸ್ಯತ್ವದಿಂದ ವಜಾ ಮಾಡಿದ ಕ್ರಮಕ್ಕೆ ಸಂಬಂಧಿಸಿದ ಕಡತಗಳನ್ನು `ಈಗಿರುವಂತೆಯೇ ಸಲ್ಲಿಸಿ' ಎಂದು ಸೂಚಿಸಿದ ಪೀಠ, ವಿಚಾರಣೆ ಮುಂದೂಡಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.