ಭಾನುವಾರ, ಜೂನ್ 20, 2021
29 °C

ಸಿಇಒ ಕಚೇರಿಯಲ್ಲಿ ಜಿ.ಪಂ. ಸದಸ್ಯರ ಧರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ವಿರುದ್ಧ ಅವಿಶ್ವಾಸ ಗೊತ್ತುವಳಿ ಸಭೆ ಕರೆಯುವ ವಿಷಯದಲ್ಲಿ ಜಿ.ಪಂ. ಮುಖ್ಯಕಾರ್ಯನಿರ್ವಾಹಣಾಧಿಕಾರಿ ನಿಯಮಾನುಸಾರ ನಡೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿ ಬಿಜೆಪಿ ಜಿ.ಪಂ. ಸದಸ್ಯರು ಗುರುವಾರ ಧರಣಿ ನಡೆಸಿದರು.ಸಿಇಒ ಕಚೇರಿಯಲ್ಲೇ ಮಧ್ಯಾಹ್ನ 3ರಿಂದ ಸಂಜೆ 7.30ರ ವರೆಗೆ ಧರಣಿ ನಡೆಸಿದ ಬಿಜೆಪಿಯ ಜಿ.ಪಂ.10 ಸದಸ್ಯರು, ಈಗಾಗಲೇ ಅಧ್ಯಕ್ಷೆ ವಿರುದ್ಧ ಅವಿಶ್ವಾಸ ಗೊತ್ತುವಳಿ ಸೂಚಿಸಲಾಗಿದೆ. ನಿಯಮಾವಳಿಯಂತೆ ಅಧ್ಯಕ್ಷೆ 15 ದಿನ ಕಳೆದರೂ ಸಭೆ ಕರೆದಿಲ್ಲ, ಹಾಗಾಗಿ ಸಿಇಒ ಅವರೇ ಸಭೆ ಕರೆಯಬೇಕು ಎಂದು ಆಗ್ರಹಿಸಿದರು. ಸದಸ್ಯರ ಬೇಡಿಕೆಗೆ ಉತ್ತರಿಸಿದ ಸಿಇಒ ಎಸ್.ಜಿ. ಪಾಟೀಲ, ಈ ಬಗ್ಗೆ ಸರ್ಕಾರದ ಗಮನಕ್ಕೆ ತರುವುದಾಗಿ ಎರಡು ದಿನಗಳ ಕಾಲಾವಕಾಶ ಕೇಳಿದರು ಎಂದು ತಿಳಿದುಬಂದಿದೆ.ಅಧ್ಯಕ್ಷೆ ವಿರುದ್ಧದ ಅವಿಶ್ವಾಸಕ್ಕೆ ಸಹಿ ಮಾಡಿದ್ದ 17 ಸದಸ್ಯರಲ್ಲಿ 6 ಸದಸ್ಯರು ಅವಿಶ್ವಾಸ ಗೊತ್ತುವಳಿಯಿಂದ ಹಿಂದೆ ಸರಿದಿರುವುದರಿಂದ ಅವಿಶ್ವಾಸ ಮಂಡಿಸಲು ಬರುವುದಿಲ್ಲ ಎಂಬ ಕಾರಣದಿಂದ ಸಿಇಒ ಅವರು ಇತರೆ ಸದಸ್ಯರಿಗೆ ನೋಟಿಸ್ ನೀಡಿದ್ದರು.ನಿಯಮಾನುಸಾರ ಸಿಇಒ ನೋಟಿಸ್ ನೀಡಲು ಬರುವುದಿಲ್ಲ, ಅವಿಶ್ವಾಸ ಮಂಡನೆಗೆ ಸಭೆ ಕರೆಯಲೇ ಬೇಕು, ಆದರೆ  ಅಧ್ಯಕ್ಷೆ ಕವಿತಾ ದಡ್ಡೇನವರ ಸಭೆ ಕರೆಯಬಾರದು ಎಂದು ಸಿಇಒಗೆ ಪತ್ರ ಬರೆದ ಹಿನ್ನೆಲೆಯಲ್ಲಿ ಸಭೆ ಕರೆಯದಿರುವುದಕ್ಕೆ ಬಂಡಾಯ ಸದಸ್ಯರು ಆಕ್ರೋಶಗೊಳ್ಳಲು ಕಾರಣ ಎನ್ನಲಾಗಿದೆ.ಧರಣಿಯಲ್ಲಿ ಉಪಾಧ್ಯಕ್ಷ  ಹೂವಪ್ಪ ರಾಠೋಡ,  ಹನುಮಂತ ನಿರಾಣಿ, ಕೃಷ್ಣ ಓಗೆನ್ನವರ,  ವೀಣಾ ಪ್ರಕಾಶ ಎಮ್ಮಿ, ನಿಂಗಪ್ಪ ಬೊಮ್ಮನಗೌಡರ,  ಶೋಭಾ ತೋಟಿಗೇರಿ, ಸುಧಾ ಸೋರಗಾಂವಿ,  ಪದ್ಮವ್ವ ಅಕ್ಕಿಮರಡಿ, ಲಕ್ಷ್ಮಿಬಾಯಿ ನ್ಯಾಮಗೌಡರ,  ಸಾವಿತ್ರಿ ಪಾಟೀಲ ಮತ್ತಿತರರು ಇದ್ದರು.ಈ ಸಂದರ್ಭದಲ್ಲಿ `ಪ್ರಜಾವಾಣಿ~ಯೊಂದಗೆ ಮಾತನಾಡಿದ ಜಿ.ಪಂ. ಸದಸ್ಯ ಕೃಷ್ಣ ಓಗೆಣ್ಣವರ, ಹನುಮಂತ ನಿರಾಣಿ ಮತ್ತು ವೀಣಾ ಪ್ರಕಾಶ ಎಮ್ಮಿ, ಪಂಚಾಯತ್ ರಾಜ್ ನಿಯಮಾವಳಿ ಪ್ರಕಾಶ ಒಮ್ಮೆ ಅವಿಶ್ವಾಸ ಗೊತ್ತುವಳಿಗೆ ಸಹಿ ಹಾಕಿದ ಬಳಿಕ ಅದರಿಂದ ಹಿಂದೆ ಸರಿಯಲು ಬಾರದು. ಸಭೆಯನ್ನು ಕರೆಯಲೇ ಬೇಕಾಗುತ್ತದೆ. ಬೇಕಾದರೆ ಸಭೆಯಲ್ಲಿ ಅವಿಶ್ವಾಸದ ವಿರುದ್ಧ ಮತ ಚಲಾಯಿಸಬಹುದಾಗಿದೆ ಎಂದರು.ಅಧ್ಯಕ್ಷೆ ಸಭೆ ಕರೆಯದಿದ್ದರೆ ಉಪಾಧ್ಯಕ್ಷರು ಸಭೆ ಕರೆಯಬೇಕಾಗು ತ್ತದೆ, ಇವರಿಬ್ಬರೂ ಸಭೆ ಕರೆಯದಿದ್ದಾಗ ನಿಯಮಾನುಸಾರ ಸಿಇಒ ಸಭೆ ಕರೆಯಬೇಕಾಗುತ್ತದೆ ಎಂದು ಪ್ರತಿಭಟನಾ ನಿರತ ಜಿ.ಪಂ. ಸದಸ್ಯರು ವಾದಿಸಿದರು.ಜಿಲ್ಲೆಯಲ್ಲಿ ಕುರುಬ ಸಮಾಜವನ್ನು ಸಂಪೂರ್ಣ ನಿರ್ಲಕ್ಷ್ಯಿಸಲಾಗಿದೆ, ಕುರುಬರನ್ನು ರಾಜಕೀಯವಾಗಿ ಅನಾಥರನ್ನಾಗಿ ಮಾಡುವ ಯತ್ನ ನಡೆದಿದೆ. ಇದಕ್ಕೆ ಅವಕಾಶ ನೀಡಬಾರದು ಎಂಬ ಉದ್ದೇಶದಿಂದ ವೀಣಾ ಪ್ರಕಾಶ ಎಮ್ಮಿ ಅವರನ್ನು ಮುಂದಿನ ಜಿ.ಪಂ. ಅಧ್ಯಕ್ಷೆಯನ್ನಾಗಿ ಮಾಡಬೇಕು ಎಂದು ಕೃಷ್ಣ ಓಗೆಣ್ಣವರ ಆಗ್ರಹಿಸಿದರು.ಒಂದು ವೇಳೆ ವೀಣಾ ಅವರಿಗೆ ಅಧ್ಯಕ್ಷೆ ಸ್ಥಾನ ನೀಡದಿದ್ದರೆ ಜಿಲ್ಲೆಯಾದ್ಯಂತ ಕುರುಬರು ಪ್ರತಿಭಟಿಸಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.