ಭಾನುವಾರ, ಫೆಬ್ರವರಿ 28, 2021
24 °C

ಸಿಇಒ ವಿರುದ್ಧ ಸರ್ಕಾರಕ್ಕೆ ಪತ್ರ: ಎಚ್ಚರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಇಒ ವಿರುದ್ಧ ಸರ್ಕಾರಕ್ಕೆ ಪತ್ರ: ಎಚ್ಚರಿಕೆ

ರಾಯಚೂರು: ಜಿಲ್ಲೆಯ ಅಭಿವೃದ್ಧಿ ಕೆಲಸಗಳ ಬಗ್ಗೆ ದೂರದೃಷ್ಟಿಯಿಂದ ಕೈಗೊಳ್ಳಬೇಕಾದ ಯೋಜನೆಗಳ ಬಗ್ಗೆ ಸಮಗ್ರ ಚರ್ಚೆ ನಡೆಯಬೇಕಿದ್ದ ಜಿಲ್ಲಾ ಯೋಜನಾ ಸಮಿತಿ ಸಭೆ ಜಿಲ್ಲಾ ಪಂಚಾಯಿತಿ ಸದಸ್ಯರ, ಸ್ಥಾಯಿ ಸಮಿತಿ ಅಧ್ಯಕ್ಷರು ಅಳಲು ಹೇಳಿಕೊಳ್ಳುವ ಗೋಳಿನ ಸಭೆಯಾಗಿ ಪರಿಣಮಿಸಿತು.ಕಾರಣ. ಸಭೆಗೆ ಹಾಜರಾಗಿ ಅಭಿವೃದ್ಧಿ ಯೋಜನೆ, ನನೆಗುದಿಗೆ ಬಿದ್ದ ಕಾಮಗಾರಿಗಳ ಬಗ್ಗೆ ಮಾಹಿತಿ, ಕೈಗೊಂಡ ಕ್ರಮಗಳ ಬಗ್ಗೆ ವಿವರ ನೀಡಬೇಕಾಗಿದ್ದ ಜವಾಬ್ದಾರಿಯುತ ಅನೇಕ ಅಧಿಕಾರಿಗಳು ಸಭೆಗೆ ಗೈರು ಹಾಜರಾಗಿದ್ದರು.ಪರಿಣಾಮ ಜಿಲ್ಲಾ ಪಂಚಾಯಿತಿ ಸದಸ್ಯರಾದ ಅಸ್ಲಂ ಪಾಷಾ, ಸ್ಥಾಯಿ ಸಮಿತಿ ಅಧ್ಯಕ್ಷ ಹನುಮೇಶ ಮದ್ಲಾ­ಪುರ, ಪ್ರಕಾಶ ಜೇರಬಂಡಿ ಸೇರಿದಂತೆ ಕೆಲ ಸದಸ್ಯರು ಸಭೆ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಲಲಿತಮ್ಮ ಲಿಂಗರಾಜು, ಮುಖ್ಯ ಕಾರ್ಯನಿರ್ವಾ­ಹಕ ಅಧಿಕಾರಿ ವಿಜಯಾ ಜ್ಯೋತ್ಸ್ನಾ ಅವರನ್ನು ಪ್ರಶ್ನಿಸಿದರು.ಪ್ರತಿ ಸಭೆಯಲ್ಲೂ ಇದೇ ರಾಗ ಅದೇ ಕಥೆ. ಅಧಿಕಾರಿಗಳು ಉಪೇಕ್ಷೆ ಮಾಡಿ­ದ್ದಾರೆ. ಯೋಜನಾ ಸಭೆಗೆ ಬರದೇ ಲೋಪವೆಸಗಿದ್ದಾರೆ ಕ್ರಮ ಜರುಗಿಸಲೇ­ಬೇಕು. ಜವಾಬ್ದಾರಿಯುತ ಸ್ಥಾನದಲ್ಲಿ­ರುವ ಅಧಿಕಾರಿಗಳು ತಮ್ಮ ಬದಲಾಗಿ ಬೇರೊಬ್ಬ ಅಧಿಕಾರಿಗಳನ್ನು ಸಭೆಗೆ ಉತ್ತರ ಕೊಡಿಸಲು ಕಳುಹಿಸಿದ್ದಾರೆ. ಆ ರೀತಿ ಉತ್ತರ ಕೊಡಲು ಬಂದವರನ್ನು ಸಭೆಯಿಂದ ಹೊರಗೆ ಕಳುಹಿಸಬೇಕು ಎಂದು ಒತ್ತಾಯ ಮಾಡಿದರು.ಜಿ.ಪಂ. ಸಿಇಓ ವಿರುದ್ಧ ಸರ್ಕಾರಕ್ಕೆ ದೂರು, ಅಧ್ಯಕ್ಷೆ ಎಚ್ಚರಿಕೆ: ‘ ನೀವು ಕ್ರಮ ಕೈಗೊಳ್ಳದೇ ಇರುವುದೇ ಇಂಥ ಸಮಸ್ಯೆ ಆಗಿದೆ. ಸಭೆಗೆ ಬಾರದೇ ಇರುವ, ತಮ್ಮ ಬದಲಾಗಿ ಬೇರೊಬ್ಬ ಅಧಿಕಾರಿಗಳನ್ನು ಉತ್ತರ ಕೊಡಿಸಲು ಕಳುಹಿಸಿರುವಂಥ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು. ಉತ್ತರ ಕೊಡಲು ಬಂದ ಅಧಿಕಾರಿಗಳನ್ನು ಸಭೆಯಿಂದ ಹೊರಗಡೆ ಕಳುಹಿಸಬೇಕು. ಇಲ್ಲದೇ ಇದ್ದರೆ ಸರ್ಕಾರಕ್ಕೆ ತಮ್ಮ ವಿರುದ್ಧ ದೂರು ನೀಡುವುದಾಗಿ ಅಧ್ಯಕ್ಷೆ ಲಲಿತಮ್ಮ ಲಿಂಗರಾಜು ಅವರು ಸಿಇಓ ವಿಜಯಾ ಅವರಿಗೆ ಎಚ್ಚರಿಕೆ ನೀಡಿದರು.ಸಭೆಗೆ ಗೈರು ಹಾಜರಾದ ಸಿಂಧ­ನೂರು ನಗರಸಭೆ ಆಯುಕ್ತ, ಎಂಜಿನಿ­ಯರ್, ರಾಯಚೂರು ನಗರಸಭೆ ಆಯುಕ್ತರ ವಿರುದ್ಧ ಜಿಲ್ಲಾಧಿಕಾರಿಗೆ ಪತ್ರ ಬರೆದು ಕ್ರಮಕ್ಕೆ ಕೈಗೊಳ್ಳಲು ಕೋರಲಾಗುವುದು. ಸಭೆ ಉಪೆಕ್ಷೆ ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಸಿಇಓ ವಿಜಯಾ ಉತ್ತರಿಸಿದರು.ಆಯುಕ್ತರ ಬದಲು ಉತ್ತರ ನೀಡಲು ಬಂದಿದ್ದ ರಾಯಚೂರು, ಸಿಂಧನೂರು ನಗರಸಭೆ ಎಂಜಿನಿಯರ­ಗಳನ್ನು ಸಿಇಓ ಸಭೆಯಿಂದ ಹೊರಗೆ ಕಳುಹಿಸಿದರು.

ಬಿಆರ್‌ಜಿಎಫ್ ಯೋಜನೆಯಡಿ ಕೈಗೊಳ್ಳುವ ಕಾಮಗಾರಿ ಬಗ್ಗೆ ಸದಸ್ಯರ ಗಮನಕ್ಕೆ ತಾರದೇ ಇರುವುದು, ಪ್ರಶ್ನೆ ಮಾಡಿದರೆ ಸದಸ್ಯರಿಗೆ ಹೇಳಬೇಕೆಂದೇ­ನಿಲ್ಲ ಎಂದು ಉತ್ತರ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಅಧಿಕಾರಿಗಳಿಂದ ಕೇಳಿ ಬರುತ್ತಿದೆ.ಲಕ್ಷಾಂತರ ಮೊತ್ತದ ಕಾಮಗಾರಿ ಆದರೂ ಆ ಬಗ್ಗೆ ಮಾಹಿತಿ ನೀಡುವುದಿಲ್ಲ. ಉದ್ಘಾಟನೆ ಬಗ್ಗೆ ಮಾಹಿತಿ ಇಲ್ಲ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಹನುಮೇಶ ಮದ್ಲಾಪುರ, ಅಸ್ಲಂ ಪಾಷಾ, ಪ್ರಕಾಶ ಜೇರಬಂಡಿ, ಎಚ್.ಬಿ ಮುರಾರಿ ಆಕ್ಷೇಪ ವ್ಯಕ್ತಪಡಿಸಿದರು. ಇಲಾಖೆಯ  ಉಪ ನಿರ್ದೇಶಕ ಅಪ್ಪಾಜಿ ಅವರ ವಿರುದ್ಧ ಹರಿಹಾಯ್ದರು.ಶಾಸಕರಾದ ಶಿವರಾಜ ಪಾಟೀಲ, ಪ್ರತಾಪಗೌಡ ಅವರನ್ನು ಹೊರತು­ಪಡಿಸಿ ಇತರ ಶಾಸಕರು ಸಭೆಗೆ ಗೈರು ಆಗಿದ್ದರು. ಸಭೆ ಆರಂಭಗೊಂಡು ಒಂದು ತಾಸಿನ ಬಳಿಕ ಆ ಇಬ್ಬರೂ ಶಾಸಕರು, ಜಿ.ಪಂ. ಉಪಾಧ್ಯಕ್ಷರ ಕೆ ಶರಣಪ್ಪ ಸಭೆಯಿಂದ ನಿರ್ಗಮಿಸಿದರು.ಜಿ.ಪಂ. ಸದಸ್ಯ ಎಚ್‌.ಬಿ. ಮುರಾರಿ ಅವರು, ಈ ಯೋಜನಾ ಸಮಿತಿ ಸಭೆ ಮಹತ್ವದ ಸಭೆ. ಅಧಿಕಾರಿಗಳೇ ಬಂದಿಲ್ಲ. ಇದು ಅಪೂರ್ಣ ಸಭೆ. ಸರಿಯಾದ ಮಾಹಿತಿ ದೊರಕಿಸುವ ಕೆಲಸ ಆಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಉಪ ಕಾರ್ಯದರ್ಶಿ ಮುಕ್ಕಣ್ಣ ಕರಿಗಾರಿ, ಡಾ. ರೋಣಿ, ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.