ಗುರುವಾರ , ಜನವರಿ 30, 2020
23 °C
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ್‌ ಜೋಶಿ ಒತ್ತಾಯ

ಸಿಇಟಿ ಏಕರೂಪ ಶಾಸನ: ಸರ್ವ ಪಕ್ಷ ನಿಯೋಗಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಖಾಸಗಿ ವೃತ್ತಿ ಶಿಕ್ಷಣ ಕಾಲೇಜುಗಳ ಪ್ರವೇಶ ಮತ್ತು ಶುಲ್ಕ ನಿಗದಿಗೆ ದೇಶಾದ್ಯಂತ ಏಕರೂಪದ ಶಾಸನ ಜಾರಿಗೆ ತರುವಂತೆ ಕೇಂದ್ರದ ಮೇಲೆ ಒತ್ತಡ ಹೇರಲು ಸರ್ವ ಪಕ್ಷಗಳ ನಿಯೋಗ ವನ್ನು ಕೊಂಡೊಯ್ಯಬೇಕೆಂದು ರಾಜ್ಯ ಬಿಜೆಪಿ ಅಧ್ಯಕ್ಷ ಪ್ರಹ್ಲಾದ ಜೋಶಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಗ್ರಹಿಸಿದ್ದಾರೆ.ವೃತ್ತಿ ಶಿಕ್ಷಣ ಕಾಲೇಜುಗಳ ಪ್ರವೇಶ ಮತ್ತು ಶುಲ್ಕ ನಿಗದಿ ಸಂಬಂಧ 2006ರಲ್ಲಿ ರೂಪಿಸಿರುವ ಕಾಯ್ದೆ ಯನ್ನು ಜಾರಿಗೆ ತಂದರೆ ದಲಿತರು, ಹಿಂದುಳಿದವರು ಹಾಗೂ ಬಡವರಿಗೆ ವೃತ್ತಿಪರ ಶಿಕ್ಷಣ ಅತ್ಯಂತ ದುಬಾರಿ ಆಗಲಿದೆ ಎಂದು ಪ್ರಹ್ಲಾದ ಜೋಶಿ ಬುಧವಾರ ಪತ್ರಿಕಾ ಗೋಷ್ಠಿಯಲ್ಲಿ ಆತಂಕ ವ್ಯಕ್ತಪಡಿಸಿದರು.ವಿದ್ಯಾರ್ಥಿ ಸಂಘಟನೆಗಳು ಮತ್ತು ವಿರೋಧ ಪಕ್ಷಗಳ ಜತೆ ಚರ್ಚಿಸದೆ ಸರ್ಕಾರ ಏಕಪಕ್ಷೀಯವಾಗಿ ಕಾಯ್ದೆ ಜಾರಿಗೆ ತರುತ್ತಿದೆ. ಇದರಿಂದ ಮಕ್ಕಳು ಮತ್ತು ಪೋಷಕರಿಗೆ ಭಾರಿ ಅನ್ಯಾಯವಾಗಲಿದೆ ಎಂದು ಎಚ್ಚರಿಕೆ ನೀಡಿದರು.ಕೇಂದ್ರ ಸರ್ಕಾರ ಲೇಖಾನುದಾನ ಪಡೆಯಲು ಜನವರಿ ತಿಂಗಳಲ್ಲಿ ಬಜೆಟ್‌ ಅಧಿವೇಶನ ಕರೆಯಲಿದೆ. ಬಜೆಟ್‌ ಅಧಿವೇಶನದಲ್ಲೇ ವೃತ್ತಿ ಶಿಕ್ಷಣ ಸಂಸ್ಥೆಗಳ ಪ್ರವೇಶಕ್ಕೆ ಏಕರೂಪ ಶಾಸನ ರೂಪಿಸುವ ಮಸೂದೆ ಮಂಡಿಸುವಂತೆ ಒತ್ತಡ ಹೇರಲು ಕೇಂದ್ರಕ್ಕೆ ಸರ್ವ ಪಕ್ಷ ನಿಯೋಗ ಕೊಂಡೊಯ್ಯಬೇಕು ಎಂದು ಜೋಶಿ ಒತ್ತಾಯಿಸಿದರು.ವಿದ್ಯಾರ್ಥಿಗಳು, ಪೋಷಕರ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ ಅಗತ್ಯ ಮಸೂದೆಯನ್ನು ಸಂಸತ್ತಿನಲ್ಲಿ ಮಂಡನೆ ಮಾಡಿದರೆ ತಮ್ಮ ಪಕ್ಷದಿಂದ ಸಂಪೂರ್ಣ ಬೆಂಬಲ ಕೊಡಿಸಲು ಸಿದ್ಧ ಎಂದು ಲೋಕಸಭೆ ಸದಸ್ಯರೂ ಆಗಿರುವ  ಜೋಶಿ ಭರವಸೆ ನೀಡಿದರು.ರಾಜ್ಯ ಸರ್ಕಾರ ಈ ವಿಷಯದಲ್ಲಿ ನಿರ್ಲಕ್ಷ್ಯ ತೋರಿದರೆ ರಾಜ್ಯದಲ್ಲಿ ಬಿಜೆಪಿ ದೊಡ್ಡ ಹೋರಾಟ ನಡೆಸಲಿದೆ ಎಂದು ಜೋಶಿ ಎಚ್ಚರಿಕೆ  ನೀಡಿದರು.ಸಿದ್ದರಾಮಯ್ಯನವರ ಸರ್ಕಾರ ಶೈತ್ಯಾಗಾರದಲ್ಲಿದೆ. ಅಕ್ಕಿ ಗಿರಣಿ ಬಂದ್‌, ಕಬ್ಬಿನ ಸಮಸ್ಯೆ, ಖಾಸಗಿ ವೃತ್ತಿಪರ ಕಾಲೇಜುಗಳ ಸಮಸ್ಯೆಗಳಿದ್ದರೂ ನಿದ್ದೆ ಮಾಡುತ್ತಿದೆ ಎಂದು ಜೋಶಿ ದೂರಿದರು.ಅಕ್ಕಿ ಗಿರಣಿಗಳ ಬಂದ್‌ನಿಂದಾಗಿ ಅನ್ನ ಭಾಗ್ಯ ಯೋಜನೆಗೆ ಅಕ್ಕಿ ಸಿಗುತ್ತಿಲ್ಲ. ಮುಕ್ತ ಮಾರುಕಟ್ಟೆಯಲ್ಲಿ ಅಕ್ಕಿ ಬೆಲೆ ಸಿಕ್ಕಾಪಟ್ಟೆ ಏರಿಕೆಯಾಗಿದೆ. ಕಬ್ಬಿನ ಸಮಸ್ಯೆ ಬಗೆಹರಿಸಲು ಸರ್ಕಾರ ವಿಫಲವಾಗಿದೆ ಎಂದು ಜೋಶಿ ಟೀಕಿಸಿದರು.ಕಬ್ಬಿನ ಸಮಸ್ಯೆ ಹಾಗೂ ರಾಷ್ಟ್ರೀಯ ಹೆದ್ದಾರಿ (ಹಾವೇರಿ ಸಮೀಪ) ಯಲ್ಲಿ ನಡೆಯುತ್ತಿರುವ ಅಪ ಘಾತಗಳ ಬಗ್ಗೆ ಗಮನ ಸೆಳೆಯುವ ಸೂಚನೆ ಮಂಡಿ ಸಿದ್ದೆ. ಎರಡು ನಿಲುವಳಿ ಸೂಚನೆಗಳ ಮೇಲೆ ಚರ್ಚೆಗೆ ಅವಕಾಶ ಕೊಡಿಸುವುದಾಗಿ ಲೋಕಸಭೆ ವಿರೋಧ ಪಕ್ಷದ ನಾಯಕಿ ಸುಷ್ಮಾ ಸ್ವರಾಜ್‌ ಭರವಸೆ ನೀಡಿದ್ದರು. ಆದರೆ, ಆಡಳಿತ ಪಕ್ಷವೇ ಸಂಸತ್ತಿನ ಕಾರ್ಯಕಲಾಪಕ್ಕೆ ಅಡ್ಡಿ ಮಾಡಿತು ಎಂದು ಆರೋಪಿಸಿದರು.ಲೋಕಪಾಲ ಮಸೂದೆ ಅಂಗೀಕಾರ ಮತ್ತು ಅಮೇರಿಕಾ ದೇವಯಾನಿ ಅವರನ್ನು ಕೆಟ್ಟದಾಗಿ ನಡೆಸಿಕೊಂಡ ಬಗ್ಗೆ  ಚರ್ಚೆ ಮಾಡಿರುವುದನ್ನು ಬಿಟ್ಟರೆ ಚಳಿಗಾಲ ಅಧಿವೇಶನದ ಸಾಧನೆ ಶೂನ್ಯ ಎಂದು ಜೋಶಿ ಕಟುವಾಗಿ ಟೀಕಿಸಿದರು.ಈ ತಿಂಗಳ 27ರಂದು ಬೆಂಗಳೂರಿನಲ್ಲಿ ರಾಜ್ಯ ಬಿಜೆಪಿ ಕಾರ್ಯಕಾರಿಣಿ ನಡೆಯಲಿದೆ. ರಾಜನಾಥ್‌ಸಿಂಗ್‌ ಭಾಗವಹಿಸಲಿದ್ದಾರೆ. ರಾಜ್ಯ ಸರ್ಕಾರದ ವೈಫಲ್ಯದ ವಿರುದ್ಧ ಕಾರ್ಯಕಾರಿಣಿಯಲ್ಲಿ ಚರ್ಚಿಸಿ ಹೋರಾಟ ರೂಪಿಸುವುದಾಗಿ ರಾಜ್ಯ ಬಿಜೆಪಿ ಅಧ್ಯಕ್ಷರು ತಿಳಿಸಿದರು.

ಪ್ರತಿಕ್ರಿಯಿಸಿ (+)