ಶನಿವಾರ, ಜನವರಿ 18, 2020
26 °C

ಸಿಇಟಿ ಕಾಯ್ದೆ ಅನುಷ್ಠಾನಕ್ಕೆ ವಿರೋಧ: ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಸರ್ಕಾರ ಜಾರಿಗೊಳಿಸಲು ಹೊರಟಿರುವ 2006 ಸಿಇಟಿ ಕಾಯ್ದೆಯನ್ನು ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ (ಎಬಿವಿಪಿ) ಮತ್ತು ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ಸಂಘಟನೆಗಳ ನೇತೃತ್ವದಲ್ಲಿ ಕಾಲೇಜು ವಿದ್ಯಾರ್ಥಿಗಳು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.ಎಬಿವಿಪಿ: ಬಡ–ಪ್ರತಿಭಾವಂತ ವಿದ್ಯಾರ್ಥಿಗಳನ್ನು ವೃತ್ತಿ ಶಿಕ್ಷಣದಿಂದ ವಂಚಿತರ­ನ್ನಾಗಿಸುವ ಹುನ್ನಾರದೊಂದಿಗೆ ಸರ್ಕಾರವು 2006ರ ಸಿಇಟಿ ಕಾಯ್ದೆಯನ್ನು ಜಾರಿಗೊಳಿಸಲು ಮುಂದಾಗಿದೆ. ದುರ್ಬಲ ವರ್ಗಗಳಿಗೆ ಸಾಮಾಜಿಕ ನ್ಯಾಯ ಒದಗಿಸಲು ವಿಫಲವಾಗುವ ಮತ್ತು ಶೈಕ್ಷಣಿಕ ಹಕ್ಕನ್ನು ಮೊಟಕುಗೊಳಿಸುವ ಸರ್ಕಾರದ ಈ ನೀತಿ ವಿದ್ಯಾರ್ಥಿ ಮತ್ತು ಶೈಕ್ಷಣಿಕ ವಿರೋಧಿಯಾಗಿದೆ ಎಂದು ಗೋಪಾಲ­ಸ್ವಾಮಿ ಕಾಲೇಜು ವಿದ್ಯಾರ್ಥಿಗಳು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.ಎಬಿವಿಪಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶಿವಕುಮಾರ್‌, ಚನ್ನಬಸವ, ಜಿಲ್ಲಾ ಸಂಚಾಲಕ ರಾಕೇಶ್‌, ಸಹ ಸಂಚಾಲಕ ರವಿ, ಅನಿಲ, ಸ್ವಾತಿ, ತೇಜಸ್ವಿನಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.ಎಸ್‌ಎಫ್‌ಐ: 2006ರ ಸಿಇಟಿ ಹೊಸ ಕಾಯ್ದೆಯನ್ನು ಸರ್ಕಾರ ಯಾವುದೇ ಕಾರಣಕ್ಕೂ ಜಾರಿ ಮಾಡಬಾರದು. ಸಿಇಟಿ ಮೂಲಕವೇ ವೃತ್ತಿ ಶಿಕ್ಷಣ ಸೀಟು ಹಂಚಿಕೆ ಹಾಗೂ ಶುಲ್ಕ ನಿಗದಿ ಮಾಡಬೇಕು ಎಂದು ಎಸ್‌ಎಫ್‌ಐ ಕಾರ್ಯಕರ್ತರು ಆಗ್ರಹಿಸಿದರು.ಕಾಯ್ದೆ ಜಾರಿ ಮಾಡುವ ಮೂಲಕ ಸರ್ಕಾರ ವೃತ್ತಿ ಶಿಕ್ಷಣ ಕನಸು ಹೊತ್ತ ವಿದ್ಯಾರ್ಥಿಗಳ ಕನಸಿಗೆ ಭಂಗ ತಂದಿದೆ. ಎಂಜಿನಿಯರಿಂಗ್‌ ಮತ್ತು ವೈದ್ಯಕೀಯ ಕೋರ್ಸ್‌ಗಳಿಗೆ ಶುಲ್ಕವನ್ನು ಹೆಚ್ಚಿಸುವ ಮೂಲಕ ಖಾಸಗಿ ಕಾಲೇಜುಗಳಿಗೆ ಸಿಇಟಿ ಮೂಲಕ ಪ್ರವೇಶ ಪ್ರಕ್ರಿಯೆ ಕೈಬಿಡಲು ಸರ್ಕಾರ ಮುಂದಾಗಿದೆ. ಈ ನೀತಿಯಿಂದಾಗಿ ಲಕ್ಷಾಂತರ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಅನ್ಯಾಯವಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಸರ್ಕಾರಿ ಸೀಟುಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ಸೀಟು ಹಂಚಿಕೆ 75:25 ಅನುಪಾತದಲ್ಲಿ ಇರಬೇಕು. ಖಾಸಗಿ ವೃತ್ತಿ ಶಿಕ್ಷಣ ಸಂಸ್ಥೆಗಳನ್ನು ನಿಯಂತ್ರಿಸಲು ರಾಜ್ಯ ಸರ್ಕಾರಗಳಿಗೆ ಅಧಿಕಾರವಿರುವ ಕೇಂದ್ರೀಯ ಶಾಸನವನ್ನು ಕೇಂದ್ರ ಸರ್ಕಾರ ಜಾರಿಗೆ ತರಬೇಕು ಎಂದು ಆಗ್ರಹಿಸಿದರು. ಎಸ್‌ಎಫ್‌ಐ ಜಿಲ್ಲಾ ಕಾರ್ಯದರ್ಶಿ ಮಹೇಶ್‌ಕುಮಾರ್‌, ಸಂತೋಷ್‌ಕುಮಾರ್‌, ಗುರುರಾಜ್‌ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಪ್ರತಿಕ್ರಿಯಿಸಿ (+)