ಮಂಗಳವಾರ, ಮೇ 18, 2021
30 °C

ಸಿಗ್ನಲ್ ದೀಪ ದುರಸ್ತಿ ಇನ್ನೂ ದೂರ ದೂರ !

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ನಗರಾಭಿವೃದ್ದಿ, ಜಿಲ್ಲಾಭಿವೃದ್ಧಿಗೆ ನಗರಸಭೆ ಮತ್ತು ಜಿಲ್ಲಾಡಳಿತ ನಿರಾಸಕ್ತಿ ತೋರುತ್ತಿವೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿ ಬರುತ್ತಿರುವ ಬೆನ್ನಿನಲ್ಲೇ ಈಗ ಮತ್ತೊಂದು ವಿಷಯ ವಿವಾದಕ್ಕೀಡಾಗುವ ಸಾಧ್ಯತೆಯಿದೆ. ಆರು ತಿಂಗಳಿನಿಂದ ಕೆಟ್ಟು ನಿಂತಿರುವ ಶಿಡ್ಲಘಟ್ಟ ವೃತ್ತದ ಸಿಗ್ನಲ್ ದೀಪಗಳು ಶೀಘ್ರವೇ ದುರಸ್ತಿಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಸಿಗ್ನಲ್ ದೀಪಗಳ ದುರಸ್ತಿ `ಹೊಣೆ ನಮ್ಮದಲ್ಲ~ ಎಂದು ನಗರಸಭೆ, ಜಿಲ್ಲಾಡಳಿತ ಸ್ಪಷ್ಟನೆ ನೀಡುವುದು ಮುಂದುವರೆದಿದ್ದು, ಶೀತಲಸಮರಕ್ಕೂ ಕಾರಣವಾಗಿದೆ.ಸಿಗ್ನಲ್ ದೀಪಗಳ ಅವ್ಯವಸ್ಥೆ ಕುರಿತು ಸೆಪ್ಟೆಂಬರ್ 19ರ `ಪ್ರಜಾವಾಣಿ~ ಸಂಚಿಕೆಯಲ್ಲಿ ವರದಿ ಪ್ರಕಟವಾದ ಹಿನ್ನೆಲೆಯಲ್ಲಿ ತುರ್ತು ಸಭೆ ನಡೆಸಿದ ನಗರಸಭೆ ಅಧಿಕಾರಿಗಳು ಮತ್ತು ಸದಸ್ಯರು ಸಿಗ್ನಲ್ ದೀಪಗಳಿಗೆ ಸಂಬಂಧಿಸಿದಂತೆ ಎಲ್ಲ ಕಡತ, ದಾಖಲೆಪತ್ರಗಳನ್ನು ಪರಿಶೀಲಿಸಿದ್ದಾರೆ. ಸಿಗ್ನಲ್ ದೀಪಗಳ ದುರಸ್ತಿ ಕಾರ್ಯ ತಮ್ಮ ವ್ಯಾಪ್ತಿಗೆ ಬರುವುದೇ ಅಥವಾ ಇಲ್ಲವೇ ಎಂಬುದರ ಬಗ್ಗೆಯೂ ಚರ್ಚಿಸಿದ್ದಾರೆ. ಅಂತಿಮವಾಗಿ ನಿರ್ಣಯ ಕೈಗೊಂಡ ನಗರಸಭೆಯು, `ಸಿಗ್ನಲ್ ದೀಪಗಳ ದುರಸ್ತಿ ಹೊಣೆ ಜಿಲ್ಲಾಡಳಿತದ್ದೇ ಹೊರತು ನಮ್ಮದಲ್ಲ~ ಎಂಬ ಸ್ಪಷ್ಟನೆ ನೀಡಿದೆ.`ಸಿಗ್ನಲ್ ದೀಪಗಳನ್ನು ಅಳವಡಿಸಲು ಈ ಹಿಂದೆ ಜಿಲ್ಲಾಧಿಕಾರಿ ನೇರವಾಗಿ ಬಿಎಚ್‌ಇಎಲ್ ಸಂಸ್ಥೆಗೆ ರೂ.9.80 ಲಕ್ಷ ಪಾವತಿಸಿದ್ದರು. ಜಿಲ್ಲಾಡಳಿತ ಸ್ವತಃ ಕ್ರಮ ಕೈಗೊಂಡ ಕಾರಣ ನಗರಸಭೆ ಇದರಲ್ಲಿ ಯಾವುದೇ ಪಾತ್ರವಹಿಸಲಿಲ್ಲ. ದೀಪಗಳ ಅಳವಡಿಕೆಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಪತ್ರ ವ್ಯವಹಾರ ಮತ್ತು ಚರ್ಚೆ ನಡೆಸಲಿಲ್ಲ. ದೀಪಗಳ ಅಳವಡಿಕೆ ಅಥವಾ ದುರಸ್ತಿಗೆ ನಗರಸಭೆಯಿಂದ ಹಣ ಬಿಡುಗಡೆಯಾಗಿಲ್ಲ ಮತ್ತು ಮೀಸಲಿಡಲಾಗಿಲ್ಲ. ಕೆಟ್ಟು ಹೋಗಿರುವ ಸಿಗ್ನಲ್ ದೀಪಗಳ ದುರಸ್ತಿ ಸಾಧ್ಯವಿಲ್ಲ~ ಎಂದು ನಗರಸಭೆ ಅಧ್ಯಕ್ಷ ಬಿ.ಎ.ಲೋಕೇಶ್‌ಕುಮಾರ್ ತಿಳಿಸಿದ್ದಾರೆ.`ಸಿಗ್ನಲ್ ದೀಪಗಳ ಅಳವಡಿಕೆ, ನಿರ್ವಹಣೆ ಮತ್ತು ದುರಸ್ತಿಗೆ ಸಂಬಂಧಿಸಿದಂತೆ ಬಜೆಟ್‌ನಲ್ಲಿ ಹಣ ಮೀಸಲಿಡುವಂತೆ ಪೊಲೀಸ್ ಇಲಾಖೆ ಅಥವಾ ಜಿಲ್ಲಾಡಳಿತದಿಂದ ಯಾವುದೇ ಪತ್ರ ಬಂದಿಲ್ಲ. ಈ ಕಾರಣದಿಂದ ಬಜೆಟ್‌ನಲ್ಲಿ ಹಣ ಮೀಸಲಿಡಲಾಗಿಲ್ಲ. ಒಂದು ವೇಳೆ ದೀಪಗಳ ದುರಸ್ತಿಗಾಗಿ ಹಣ ವೆಚ್ಚ ಮಾಡಿದ್ದಲ್ಲಿ, ಆಡಿಟ್ ಸಂದರ್ಭದಲ್ಲಿ ತಿರಸ್ಕೃತಗೊಳ್ಳುತ್ತದೆ~ ಎಂದು ಅವರು ಹೇಳಿದ್ದಾರೆ.ಇಷ್ಟಕ್ಕೆ ಸುಮ್ಮನಾಗದ ಅಧ್ಯಕ್ಷರು ಜಿಲ್ಲಾಡಳಿತದ ಕಾರ್ಯನಿರ್ವಹಣೆ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ್ದಾರೆ.

`ಅಭಿವೃದ್ಧಿ ಕಾಮಗಾರಿ ಮತ್ತು ಬೇರೆ ಕಾರಣಗಳಿಗಾಗಿ ನಗರಸಭೆಗೆ ಬರುತ್ತಿರುವ ಅನುದಾನ ಸಾಕಾಗುತ್ತಿಲ್ಲ. ಅಭಿವೃದ್ಧಿ ಕಾಮಗಾರಿಗಳಿಗೆ ಜಿಲ್ಲಾಡಳಿತ ಅನುಮೋದನೆ ನೀಡುತ್ತಿಲ್ಲ. ಅವುಗಳಿಗೆ ಸಂಬಂಧಿಸಿದ ಕಡತಗಳನ್ನು ವಿಲೇವಾರಿ ಮಾಡುತ್ತಿಲ್ಲ. ನಗರಾಭಿವೃದ್ಧಿಗೆ ನಿರ್ಲಕ್ಷ್ಯ ತೋರುತ್ತಿರುವ ಜಿಲ್ಲಾಡಳಿತವೇ ಸಿಗ್ನಲ್ ದೀಪಗಳ ದುರಸ್ತಿಗೆ ವಿಶೇಷ ಅನುದಾನವನ್ನು ನಗರಸಭೆಗೆ ಬಿಡುಗಡೆ ಮಾಡಲಿ~ ಎಂದು ಹೇಳಿದ್ದಾರೆ.ಆದರೆ, ಮತ್ತೊಂದೆಡೆ ಜಿಲ್ಲಾಧಿಕಾರಿ ಡಾ.ಎನ್.ಮಂಜುಳಾ ನಗರಸಭೆ ಕಾರ್ಯವೈಖರಿ ಬಗ್ಗೆ ಬೇಸರ ವ್ಯಕ್ತಪಡಿಸುತ್ತಾರೆ. `ನಗರಾಭಿವೃದ್ಧಿಗೆ ಸಂಬಂಧಿಸಿದಂತೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕಾದ ನಗರಸಭೆ ನಿರೀಕ್ಷಿತ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿಲ್ಲ. ರಸ್ತೆಗಳು ಹದಗೆಟ್ಟಿದ್ದರೂ ಅವುಗಳನ್ನು ದುರಸ್ತಿಗೊಳಿಸುತ್ತಿಲ್ಲ. ಚರಂಡಿ ಕಾಮಗಾರಿ ಮತ್ತು ಇತರ ಸುಧಾರಣೆ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ನಗರಸಭೆಯ ಬಗ್ಗೆ ಎಷ್ಟು ಹೇಳಿದರೂ ನಿಷ್ಪ್ರಯೋಜಕ~ ಎಂದು ಹೇಳುವ ಅವರು ನಗರಸಭೆ ಬಗ್ಗೆ ಹೆಚ್ಚು ಮಾತನಾಡಲು ಬಯಸುವುದಿಲ್ಲ.`ನಗರಸಭೆ ಮತ್ತು ಜಿಲ್ಲಾಡಳಿತದ ಸ್ವಪ್ರತಿಷ್ಠೆಯಿಂದ ಚಿಕ್ಕಬಳ್ಳಾಪುರ ನಗರ ಇನ್ನಷ್ಟು ಬಡವಾಗುತ್ತಿದೆ. ಬೇರೆ ತಾಲ್ಲೂಕುಗಳಿಗೆ ಹೋಲಿಸಿದರೆ, ಚಿಕ್ಕಬಳ್ಳಾಪುರ ತಾಲ್ಲೂಕು ಹಿಂದುಳಿದಿದೆ.  ಸಿಗ್ನಲ್ ದೀಪಗಳು ದುರಸ್ತಿಯಾಗದಿದ್ದಲ್ಲಿ, ಸಂಚಾರ ವ್ಯವಸ್ತೆ ಇನ್ನಷ್ಟು ಹದಗೆಡಲಿದೆ. ಸಿಗ್ನಲ್ ದೀಪಗಳು ಕೆಟ್ಟು ಈಗಾಗಲೇ ಆರು ತಿಂಗಳಾಗಿದ್ದು, ಶೀಘ್ರ ದುರಸ್ತಿಯಾಗದಿದ್ದರೆ ವಾರ್ಷಿಕೋತ್ಸವ ಆಚರಿಸಬೇಕಾಗುತ್ತದೆ~ ಎಂದು ಪೊಲೀಸ್ ಅಧಿಕಾರಿಯೊಬ್ಬರು ವ್ಯಂಗ್ಯವಾಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.