ಶನಿವಾರ, ಏಪ್ರಿಲ್ 17, 2021
22 °C

ಸಿದ್ದಾಪುರದ ಸ್ವಾತಂತ್ರ್ಯ ಸ್ಮಾರಕ

ರವೀಂದ್ರ ಭಟ್ ಬಳಗುಳಿ Updated:

ಅಕ್ಷರ ಗಾತ್ರ : | |

ಸಿದ್ದಾಪುರದ ಸ್ವಾತಂತ್ರ್ಯ ಸ್ಮಾರಕ

ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲ್ಲೂಕು ಸ್ವಾತಂತ್ರ್ಯ ಹೋರಾಟದಲ್ಲಿ ಮಹತ್ವದ ಪಾತ್ರ ವಹಿಸಿತ್ತು. ತಾಲ್ಲೂಕಿನ ಜನ ನಡೆಸಿದ್ದ `ಕರ ನಿರಾಕರಣೆಯ ಸಮರ, ಮಾವಿನಗುಂಡಿಯಲ್ಲಿ ಮಹಿಳೆಯರು ನಡೆಸಿದ್ದ ಸತ್ಯಾಗ್ರಹ ಆ ಕಾಲದ ಸ್ವಾತಂತ್ರ್ಯ ಚಳವಳಿಯ ರೋಚಕ ಅಧ್ಯಾಯಗಳಲ್ಲೊಂದು. 11 ಲಕ್ಷ ರೂ ಖರ್ಚು ಮಾಡಿ ಮಹಿಳಾ ಸತ್ಯಾಗ್ರಹ ಸ್ಮಾರಕ ಮತ್ತು ವನವನ್ನು ನಿರ್ಮಿಸುವ ಮೂಲಕ ಇದನ್ನು ಸದಾ ಸ್ಮರಿಸಿಕೊಳ್ಳುವ ಪ್ರಯತ್ನ ಮಾವಿನಗುಂಡಿಯಲ್ಲಿ ನಡೆದಿದೆ.ಪಶ್ಚಿಮ ಘಟ್ಟ ಕಾರ್ಯಪಡೆ ಮತ್ತು ಅರಣ್ಯ ಇಲಾಖೆ ಸೇರಿ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಪೊಲೀಸ್ ಠಾಣೆಯಾಗಿದ್ದ ಸ್ಥಳದಲ್ಲಿಯೇ ಇಂಥದ್ದೊಂದು ಸ್ಮಾರಕ ನಿರ್ಮಿಸಿವೆ. ಈ ಸ್ಥಳದಲ್ಲಿ  ರೂಪಿಸಲಾಗಿರುವ ದೃಶ್ಯಾವಳಿಗಳು ಅಂದಿನ ಚಳವಳಿಯನ್ನು  ಜೀವಂತಗೊಳಿಸಿವೆ.

 

ದೇಶಕ್ಕಾಗಿ ಹೋರಾಡಿದ್ದ  ಮಹಿಳೆಯರು ಇಲ್ಲಿ ಮೂರ್ತಿಗಳ ರೂಪು ತಳೆದಿದ್ದಾರೆ. ಶಿಗ್ಗಾಂವ್‌ನ ಶಿಲ್ಪಾ ಕಲಾ ಕುಟೀರದ ಸೊಲಬಕ್ಕನವರ್ ತಂಡದವರು ಇಲ್ಲಿನ ಮೂರ್ತಿಗಳನ್ನು ಅದ್ಭುತವಾಗಿ ನಿರ್ಮಿಸಿದ್ದಾರೆ. ಶಿವನ ಮೂರ್ತಿಯನ್ನು ಪುರುಷೋತ್ತಮ ನಿರ್ಮಿಸಿದ್ದಾರೆ. ಉದ್ಯಾನಕ್ಕೆ ಮೈಸೂರಿನ ಬ್ಲೂ ರೋಸ್ ಗಾರ್ಡ್‌ನ್ ಲ್ಯಾಂಡ್ ಸ್ಕ್ರೇಪರ‌್ಸ ಸಂಸ್ಥೆ ನೆರವಾಗಿದೆ. ಈ ಸ್ಮಾರಕ ಮತ್ತು ವನ ನಿರ್ಮಾಣದ ಅಂದಾಜು ವೆಚ್ಚ  ಸುಮಾರು 11ಲಕ್ಷ ರೂಪಾಯಿ.ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಾವಿನಗುಂಡಿಯಲ್ಲಿ  ನಡೆದಿದ್ದೇನು ಎಂಬ ಪ್ರಶ್ನೆ ಈ ಸ್ಮಾರಕವನ್ನು ನೋಡಿದಾಗ ಉದ್ಭವಿಸುತ್ತದೆ. ಸ್ಥಳೀಯರಾದ ಜಯಪ್ರಕಾಶ ಹೆಗಡೆ ಹೇಳುವ ಪ್ರಕಾರ `1931ರ ಕರನಿರಾಕರಣೆ ಚಳವಳಿಯಲ್ಲಿ ಭಾಗವಹಿಸಿ ಕರ ನೀಡದವರ ಸ್ಥಿರ ಮತ್ತು ಚರಾಸ್ತಿಗಳನ್ನು ಬ್ರಿಟಿಷ್ ಸರ್ಕಾರ ಹರಾಜು ಹಾಕಿದರೂ, ಕೊಳ್ಳಲು ದೇಶಪ್ರೇಮಿಗಳು ಮುಂದೆ ಬರುತ್ತಿರಲಿಲ್ಲ. ಹೀಗಿದ್ದೂ ಮಾವಿನಗುಂಡಿಯ ಸರ್ಕಾರಿ ನೌಕರನೊಬ್ಬ ಹರಾಜಿನಲ್ಲಿ ಎಮ್ಮೆಯೊಂದನ್ನು ಖರೀದಿಸಿದ. ಇದು ಮಹಿಳಾ ಸ್ವಾತಂತ್ರ್ಯಯೋಧರನ್ನು ಕೆರಳಿಸಿತು. ಗಣಪಮ್ಮ ಕುಳಿಬೀಡು, ಸೀತಮ್ಮ ಹೊಸಕೊಪ್ಪ, ದೇವಮ್ಮ ಹೇಮಗಾರ, ಭಾಗೀರಥಮ್ಮ ಕುಳಿಬೀಡು ಇವರುಗಳು ಆ ನೌಕರನ ಮನೆಯ ಎದುರು 1932ನೇ ಇಸವಿ ಮೇ 8ರಂದು ಸತ್ಯಾಗ್ರಹ ಪ್ರಾರಂಭಿಸಿದರು.

 

ಮೊದಲು ಇವರನ್ನೆಲ್ಲ ಹೊಡೆದು ಹಿಂಸಿಸಿದ ಆತ ಕೊನೆಗೆ ಚಳವಳಿಗೆ ಮಣಿದು ಎಮ್ಮೆ ವಾಪಸ್ ಮಾಡಿದ. ಅದರಂತೆ ಮತ್ತೊಂದು ಸಂದರ್ಭದಲ್ಲಿ  ಮಾವಿನಗುಂಡಿಯ ಪೊಲೀಸನೊಬ್ಬ ಮತ್ತೊಂದು ಎಮ್ಮೆಯನ್ನು ಹರಾಜಿನಲ್ಲಿ ಪಡೆದ. ಅದನ್ನು  ಭುವನೇಶ್ವರಮ್ಮ ತ್ಯಾಗಲಿ,  ಲಕ್ಷ್ಮಮ್ಮ ಕಲ್ಲಾಳ, ಮಹಾದೇವಮ್ಮ ದೊಡ್ಮನೆ, ಮಹಾದೇವಮ್ಮ ಗುಂಜಗೋಡು, ದುಗ್ಗಮ್ಮ ಹಣಜಿಬೈಲ್, ಕಾವೇರಮ್ಮ ಕಲ್ಲಾಳ ಪ್ರತಿಭಟಿಸುತ್ತಾರೆ.ಮೂವತ್ತು ದಿನ `ಅನ್ನ ಸತ್ಯಾಗ್ರಹ~ ನಡೆಸಿದ ಭುವನೇಶ್ವರಮ್ಮ ಮತ್ತು ಲಕ್ಷ್ಮಮ್ಮನ ಸ್ಥಿತಿ ಚಿಂತಾಜನಕವಾದಾಗ ಬಂಧಿಸಿ ಸಿದ್ದಾಪುರ ಕೋರ್ಟ್‌ನಲ್ಲಿ ಹಾಜರು ಪಡಿಸುತ್ತಾರೆ.ಮಾಜಿಸ್ಟ್ರೇಟರು ಇವರಿಬ್ಬರಿಗೆ ಕೋರ್ಟ್ ಮುಗಿಯುವವರೆಗೆ ಸಜೆ ಮತ್ತು ಮಹಾದೇವಮ್ಮ ದೊಡ್ಮನೆ, ದುಗ್ಗಮ್ಮ ಹಣಜಿಬೈಲ್,ಕಾವೇರಮ್ಮ ಕಲ್ಲಾಳ ಅವರುಗಳಿಗೆ ನಾಲ್ಕು ತಿಂಗಳ ಜೈಲು ಶಿಕ್ಷೆ ನೀಡುತ್ತಾರೆ~.ಇಂಥ ವೀರರ ಕಥೆಗಳನ್ನು ಈ ಉದ್ಯಾನ, ಸ್ಮಾರಕ ನೆನಪಿಸುವಂತಿದೆ. ಸತ್ಯಾಗ್ರಹ ಸ್ಮಾರಕ ಉತ್ತಮ ಆರಂಭ. ಆದರೆ ಇನ್ನೂ ಆಗಬೇಕಾಗಿರುವದು ಬಹಳಷ್ಟಿದೆ. ಈ ಕಾರ್ಯ ಮುಂದುವರಿಯಬೇಕು ಎಂಬ ಆಗ್ರಹ ಸ್ಥಳೀಯರದ್ದು.

 
ಮಾವಿನಗುಂಡಿಯ ಮಹಿಳೆಯರ ಸತ್ಯಾಗ್ರಹದ ವರದಿಗೆ ಬರುತ್ತಿದ್ದ ಮದ್ರಾಸ್‌ನ `ಹಿಂದೂ~ ಪತ್ರಿಕೆಯ ವಿಶೇಷ ವರದಿಗಾರರೊಬ್ಬರ್ನು ಬಂಧಿಸಿ ಕಾರವಾರ ಜೈಲಿಗೆ ಕಳುಹಿಸಲಾಗಿತ್ತು.  ಪತ್ರಿಕೆಯ ಸಂಪಾದಕರು ಮುಂಬೈ ಸರ್ಕಾರಕ್ಕೆ ಈ ಬಗ್ಗೆ ಬಿಸಿ ಮುಟ್ಟಿಸಿದ ನಂತರ ಆ ವರದಿಗಾರರನ್ನು ಬಿಡುಗಡೆ ಮಾಡಲಾಯಿತು. ಮುಂದೆ ಆ ಪತ್ರಿಕೆಯಲ್ಲಿ  ಮಾವಿನಗುಂಡಿಯಲ್ಲಿ ನಡೆದ ಪೊಲೀಸ್‌ರ ದೌರ್ಜನ್ಯದ ವಿಸ್ತ್ರತ ವರದಿ ಪ್ರಕಟವಾಗಿ ಇಡೀ ದೇಶದ ಗಮನ ಸೆಳೆದಿತ್ತು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.