ಮಂಗಳವಾರ, ಜನವರಿ 28, 2020
17 °C

ಸಿದ್ದೇಶ್ವರ ಶ್ರೀಗಳ ಅದ್ದೂರಿ ಪಲ್ಲಕ್ಕಿ ಉತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿರೂರ(ಗುಳೇದಗುಡ್ಡ): ಗ್ರಾಮದ ಸಿದ್ದೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ಹಾಗೂ ಲಿಂ, ಸಿದ್ದೇಶ್ವರ ಶ್ರೀಗಳವರ 43ನೇ ಪುಣ್ಯಸ್ಮರಣೆಯ ನಿಮಿತ್ತ ಶ್ರೀಗಳವರ ಗದ್ದುಗೆಗೆ ರುದ್ರಾಭಿಷೇಕ ವಿಸೇಷ ಪೂಜೆಯ ನಂತರ ವಿವಿಧ ಹೂವುಗಳಿಂದ ಅಲಂಕಾರಗೊಳಿಸಿದ ಪಲ್ಲಕ್ಕಿ ಉತ್ಸವದ ಮೆರವಣಿಗೆ ಶಿವಯೋಗಾಶ್ರಮದ ಸಿದ್ದಲಿಂಗ ಶ್ರೀಗಳವರ ನೇತೃತ್ವದಲ್ಲಿ ಸಡಗರ ಸಂಭ್ರಮದಿಂದ ಗುರುವಾರ ಗ್ರಾಮದಲ್ಲಿ ನಡೆಯಿತು.ಬೆಳಿಗ್ಗೆ 7ಗಂಟೆಗೆ ಲಿಂ,  ಸಿದ್ದಲಿಂಗ ಶ್ರೀಗಳವರ ಬೆಳ್ಳಿ ಮೂರ್ತಿ ಇರುವ ಪಲ್ಲಕ್ಕಿ ಉತ್ಸವದ ಹೂವಿನ ಆಟ, ಕೋಲಾಟ, ಕರಡಿ ಮಜಲ, ಡೊಳ್ಳಿನ ಮೇಳ, ಪುರವಂತರ ಕುಣಿತ ಹಾಗೂ ಸುಮಂಗಲಿಯರ ಕಳಸಾರತಿಗಳೊಂದಿಗೆ ಮೆರವಣಿಗೆ ಸಿದ್ದೇಶ್ವರ ದೇವಸ್ಥಾನದಿಂದ ಹೊರಟು ನೇಕಾರರ ಓಣಿ, ಸಿದ್ದೇಶ್ವರ ಪ್ರೌಢ ಹಾಗೂ ಪ್ರಾಥಮಿಕ ಶಾಲೆ, ದೊಡ್ಡ ಓಣಿ, ಕಂಬಾರ, ಗೌಡರ ಓಣಿಯ ಮೂಲಕ ಸಂಜೆ ಸಿದ್ದೇಶ್ವರ ದೇವಸ್ಥಾನಕ್ಕೆ ಬಂದು ತಲುಪಿತು.ಪಲ್ಲಕಿ ಉತ್ಸವದ ಮೆರವಣಿಗೆಯ ಮಧ್ಯದಲ್ಲಿ ಭಕ್ತರು ಶ್ರದ್ಧೆ, ಭಕ್ತಿಯಿಂದ ಪಲ್ಲಕ್ಕಿಯಲ್ಲಿ ಇರುವ  ಬೆಳ್ಳಿ ಮೂರ್ತಿಗೆ ಹೂವು. ಹಣ್ಣು. ಆರತಿಗಳೊಂದಿಗೆ ಪೂಜೆ ನೆರವೇರಿಸಿ ಹರಕೆ ಮುಟ್ಟಿಸಿದರು. ಮೆರವಣಿಗೆಯಲ್ಲಿ ಕುಂಬಾರ ಓಣೆಯ ಗಜಾನನ ಯುವಕ ಮಂಡಳದ ಹೂವಿನ ನೃತ್ಯ, ಕೋಲಾಟ, ಕರಡಿ ಮಜಲ, ಡೊಳ್ಳಿನ ಮೇಳ ಹಾಗೂ ಸುಮಂಗಲಿಯರ ಕಳಸ, ಆರತಿ ಮೆರವಣಿಗೆಗೆ ಮೆರಗು ತಂದಿತು.ಪಲ್ಲಕ್ಕಿ ಉತ್ಸವದ ಮೆರವಣಿಗೆಯಲ್ಲಿ ಗ್ರಾಮದ ಹಿರಿಯರು, ಯುವಕರು, ಮಹಿಳೆಯರು ಹಾಗೂ ತರುಣ ಸಂಘದವರು ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)