ಶನಿವಾರ, ಮೇ 28, 2022
28 °C

ಸಿನಿಮಾ ಪ್ರಶಸ್ತಿ: ಇಂದು ವಿಚಾರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: 2010-11ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಗಳಿಗೆ ಅರ್ಹ ಚಲನಚಿತ್ರಗಳು ಮತ್ತು ಕಲಾವಿದರ ಆಯ್ಕೆ ಸಮಿತಿಗೆ ಅಶೋಕ ಕಶ್ಯಪ್, ಹೇಮಾ ಚೌಧರಿ ಮತ್ತು ಈಶ್ವರ ದೈತೋಟ ಅವರನ್ನು ಸದಸ್ಯರನ್ನಾಗಿ ನೇಮಕ ಮಾಡಿದ ಸರ್ಕಾರದ ಕ್ರಮ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಶುಕ್ರವಾರಕ್ಕೆ ಮುಂದೂಡಿದೆ.ಪ್ರಥಮ ಪ್ರಶಸ್ತಿ ಪಡೆದ  `ಸೂಪರ್' ಸಿನಿಮಾದ ಛಾಯಾಗ್ರಾಹಕ ಆಗಿದ್ದ ಅಶೋಕ ಅವರು ಆಯ್ಕೆ ಸಮಿತಿಯ ಸದಸ್ಯರಾಗಿದ್ದರು. ಈಶ್ವರ ದೈತೋಟ ಮತ್ತು ಹೇಮಾ ಅವರು ಕೆಲಸ ಮಾಡಿರುವ ಚಿತ್ರಗಳೂ ಪ್ರಶಸ್ತಿಗೆ ಸ್ಪರ್ಧಿಸಿದ್ದವು. ಸಿನಿಮಾದಲ್ಲಿ ಒಂದಲ್ಲ ಒಂದು ಪಾತ್ರ ನಿರ್ವಹಿಸಿ, ನಂತರ ಆಯ್ಕೆ ಸಮಿತಿಯಲ್ಲೂ ಸದಸ್ಯರಾಗಿ ಸೇರುವುದು ಉಚಿತವಲ್ಲ ಎಂದು ದೂರಿ ಬಸಂತ ಕುಮಾರ ಪಾಟೀಲ ಅವರು ಅರ್ಜಿ ಸಲ್ಲಿಸಿದ್ದಾರೆ.ಗುರುವಾರ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರಾಮಮೋಹನ ರೆಡ್ಡಿ ಅವರು, `ನೀವಾಗಿಯೇ ಆಯ್ಕೆ ಪಟ್ಟಿಯನ್ನು ಹಿಂಪಡೆಯಿರಿ. ಇಲ್ಲವಾದರೆ ನಾವೇ ಸೂಕ್ತ ಆದೇಶ ಹೊರಡಿಸಬೇಕಾಗುತ್ತದೆ' ಎಂದು ಸರ್ಕಾರಕ್ಕೆ ಮೌಖಿಕವಾಗಿ ಸೂಚನೆ ನೀಡಿದರು.ಅರ್ಜಿ ವಜಾ: ವಿಶ್ವವಿದ್ಯಾಲಯಗಳ ಅನುದಾನ ಆಯೋಗದ (ಯುಜಿಸಿ) 10ನೇ ಯೋಜನಾ ಅವಧಿಯಲ್ಲಿ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಂಡಿದ್ದ ಒಂಬತ್ತು ಪ್ರಾಧ್ಯಾಪಕರ ಸೇವೆಯನ್ನು ಕಾಯಂಗೊಳಿಸುವ ಬೆಂಗಳೂರು ವಿ.ವಿ. ನಿರ್ಧಾರ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಇತ್ತೀಚೆಗೆ ವಜಾ ಮಾಡಿದೆ.ಡಾ.ಎನ್. ಸುನಿತಾ ಮತ್ತು ಇತರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ದಿಲೀಪ್ ಬಿ. ಭೋಸಲೆ, ಈ ಆದೇಶ ನೀಡಿದರು.ಯುಜಿಸಿ ರೂಪಿಸಿರುವ ನಿಯಮಗಳನ್ನು ಉಲ್ಲಂಘಿಸಿ ಅವರ ಸೇವೆಯನ್ನು ಕಾಯಂಗೊಳಿಸಲಾಗುತ್ತಿದೆ ಎಂದು ಅರ್ಜಿಯಲ್ಲಿ ದೂರಲಾಗಿತ್ತು. ಇದನ್ನು ತಳ್ಳಿಹಾಕಿರುವ ಪೀಠ, `ನೇಮಕಾತಿ ಕಾನೂನಿಗೆ ಅನುಗುಣವಾಗಿಯೇ ಇದೆ' ಎಂದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.