ಸಿಬಿಐನ ಪ್ರಶ್ನೆಗೆ ಉತ್ತರಿಸಲು ಸಿದ್ಧ

7

ಸಿಬಿಐನ ಪ್ರಶ್ನೆಗೆ ಉತ್ತರಿಸಲು ಸಿದ್ಧ

Published:
Updated:

ಚೆನ್ನೈ: ತಮ್ಮ ಅಧಿಕಾರ ಅವಧಿಯಲ್ಲಿ 2ಜಿ ತರಂಗಾಂತರ ಹಗರಣ ಹಂಚಿಕೆಯ ಬಗ್ಗೆ ಸಿಬಿಐ ಕೇಳುವ ಯಾವುದೇ ಪ್ರಶ್ನೆಗಳಿಗೆ ಉತ್ತರಿಸಲು ತಾವು ಸಿದ್ಧ ಎಂದು ಮಾಜಿ ದೂರಸಂಪರ್ಕ ಸಚಿವ ಅರುಣ್ ಶೌರಿ ಹೇಳಿದ್ದಾರೆ.‘ಸಿಬಿಐ ಪ್ರಶ್ನೆಗಳಿಗೆ ಉತ್ತರಿಸಲು ನನಗೆ ಸಂತೋಷ. ಅದರಲ್ಲಿ ಯಾವುದೇ ಕಷ್ಟ ಇಲ್ಲ. ನಾನು ಸಾರ್ವಜನಿಕವಾಗಿಯೂ ಉತ್ತರ ನೀಡಬಲ್ಲೆ. ಸಿಬಿಐ ಅಧಿಕಾರಿಗಳು ನನ್ನ ಮನೆಗೇ ಬಂದು ಪ್ರಶ್ನಿಸಿದರೂ ಅದಕ್ಕೂ ಸ್ವಾಗತ’ ಎಂದು ಅವರು ಶನಿವಾರ ಇಲ್ಲಿ ಪತ್ರಕರ್ತರಿಗೆ ತಿಳಿಸಿದರು. ಸಿಬಿಐ ತಮ್ಮನ್ನು ಪ್ರಶ್ನಿಸಿದರೆ ತಮ್ಮ ವಿಚಾರಣೆಯ ಮಾಹಿತಿಯನ್ನು ತಾವು ಸಾರ್ವಜನಿಕರಿಗೆ ನೀಡುವುದಾಗಿ ಅವರು ಹೇಳಿದರು.2ಜಿ ಹಗರಣದ ತನಿಖೆ ಸರಿಯಾದ ದಾರಿಯಲ್ಲಿ ಸಾಗುತ್ತಿದೆಯೇ ಎಂದು ಕೇಳಿದಾಗ, ‘ರಾಜಾ ಅವರಿಗೆ ನಿಕಟವಾದ ಕಂಪೆನಿಗಳ ಬಗ್ಗೆ ಒಂದು ವರ್ಷದ ಹಿಂದೆಯೇ ಸಿಬಿಐಗೆ ಮಾಹಿತಿ ನೀಡಲಾಗಿತ್ತು. ಅವರು ತಮ್ಮದೇ ರೀತಿಯ ತನಿಖಾ ಕ್ರಮಗಳನ್ನು ಕೈಗೊಳ್ಳುತ್ತಿರಬಹುದು. ಆದರೆ ಅವರ ತನಿಖೆಗೆ ಭಂಗ ಬರದಿದ್ದರೆ ಸಾಕು ಎಂಬ ಹಾರೈಕೆ ನನ್ನದು. ಒಳಗೆ ಅವರು ಏನು ಮಾಡುತ್ತಿದ್ದಾರೆ ಎಂಬುದು ನನಗೆ ಗೊತ್ತಿಲ್ಲ’ ಎಂದು ಶೌರಿ ತಿಳಿಸಿದರು.ಮೊದಲು ಬಂದವರಿಗೆ ಮೊದಲ ಆದ್ಯತೆ ಎಂಬ ಪದ್ಧತಿಯನ್ನು ರಾಜಾ ಬದಲಿಸಿದರು. ಒಂದು ಕಂಪೆನಿಗೆ ನೆರವಾಗುವ ರೀತಿಯಲ್ಲಿ ಆದ್ಯತಾ ಪಟ್ಟಿ ಬದಲಿಸಿದರು. ತರಂಗಾಂತರ ಹಂಚಿಕೆ ಮಾಡುವಾಗ ಅವರು ಯಾವುದೇ ನೀತಿಗಳನ್ನು ಅನುಸರಿಸಿಲ್ಲ. ಎನ್‌ಡಿಎ ಅಧಿಕಾರ ಅವಧಿಯಲ್ಲಿ ಎಲ್ಲವನ್ನೂ ಕಾನೂನು ಪ್ರಕಾರವೇ ಮಾಡಲಾಗುತ್ತಿತ್ತು, ಆ ವ್ಯವಸ್ಥೆಯನ್ನು ರಾಜಾ ಸಂಪೂರ್ಣ ಮುರಿದು ಹಾಕಿದರು’ ಎಂದು ಅವರು ದೂರಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry