ಸಿಮೆಂಟ್ ಕಂಪೆನಿಗಳ ಮೇಲೆ ಸಿಸಿಐ ಗದಾಪ್ರಹಾರ
ನವದೆಹಲಿ (ಪಿಟಿಐ): ಎಸಿಸಿ, ಅಂಬುಜಾ ಸಿಮೆಂಟ್ಸ್, ಜೈಪ್ರಕಾಶ್ ಅಸೋಸಿಯೇಟ್ಸ್ ಮತ್ತು ಆದಿತ್ಯ ಬಿರ್ಲಾ ಸಮೂಹದ ಅಲ್ಟ್ರಾಟೆಕ್ ಸೇರಿದಂತೆ ದೇಶದ 11 ಪ್ರಮುಖ ಸಿಮೆಂಟ್ ಕಂಪೆನಿಗಳ ವಿರುದ್ಧ ಮಾರುಕಟ್ಟೆ ಸ್ಪರ್ಧಾತ್ಮಕತೆ, ದರ ನಿಗದಿಯತ್ತ ನಿಗಾ ಇಡುವ `ಕಾಂಪಿಟಿಷನ್ ಕಮಿಷನ್ ಅಫ್ ಇಂಡಿಯ~(ಸಿಸಿಐ), ಗುರುವಾರ ಭಾರಿ ಗದಾಪ್ರಹಾರ ಮಾಡಿದೆ.
ಭಾರಿ ಲಾಭ ತರುವ ಪ್ರಮಾಣದಲ್ಲಿ ದರ ನಿಗದಿಪಡಿಸಿಕೊಳ್ಳಲು ಕೂಟ ರಚಿಸಿಕೊಂಡು ನಿಯಮಗಳನ್ನು ಉಲ್ಲಂಘಿಸಿದ ಪ್ರಮುಖ ಬ್ರಾಂಡೆಡ್ ಸಿಮೆಂಟ್ ಕಂಪೆನಿಗಳಿಗೆ ರೂ 6307 ಕೋಟಿಯಷ್ಟು ಭಾರಿ ಮೊತ್ತದ ದಂಡ ವಿಧಿಸಿದೆ.
`ಕಾಂಪಿಟಿಷನ್ ಆ್ಯಕ್ಟ್-2002ರ~ ಅನ್ವಯ ಸ್ಪರ್ಧಾತ್ಮಕ ದರ ನಿಗದಿಪಡಿಸಬೇಕಿದ್ದ ಈ ಕಂಪೆನಿಗಳು ಎಲ್ಲ ನಿಯಮಗಳನ್ನೂ ಉಲ್ಲಂಘಿಸಿವೆ. 90 ದಿನದಲ್ಲಿ ದಂಡ ಪಾವತಿಸಬೇಕು ಎಂದು `ಸಿಸಿಐ~ ಆದೇಶದಲ್ಲಿ ಹೇಳಿದೆ.
ಗ್ರಾಹಕರಿಗೆ ಸ್ಪರ್ಧಾತ್ಮಕ ಬೆಲೆಯಲ್ಲಿ ಗುಣಮಟ್ಟದ ಉತ್ಪನ್ನ ದೊರಕುವಂತೆ ಮಾಡಲು ಹಾಗೂ ಉತ್ಪಾದನೆ, ಬೆಲೆ ನಿಗದಿ, ಮಾರಾಟ ಮತ್ತಿತರ ಅಂಶಗಳ ಮೇಲೆ ಹತೋಟಿ ಇಡಲು ಉತ್ಪಾದಕರು ಕೂಟ ರಚಿಸಿಕೊಳ್ಳುವುದನ್ನು ತಡೆಯಲೆಂದೇ `ಕಾಂಪಿಟಿಷನ್ ಆ್ಯಕ್ಟ್-2002~ ರಚಿಸಲಾಗಿದೆ.
`ಈ ಕಂಪೆನಿಗಳು ಕೂಟ ರಚಿಸಿಕೊಂಡು ಸಿಮೆಂಟ್ ತಯಾರಿಕೆಯನ್ನೇ ಕಡಿಮೆ ಮಾಡಿವೆ. ಆ ಮೂಲಕ ಮಾರುಕಟ್ಟೆಗೆ ಸಿಮೆಂಟ್ ಕಡಿಮೆ ಪೂರೈಕೆಯಾಗುವಂತೆ ಮಾಡಿ ದರ ಹೆಚ್ಚಳವಾಗುವಂತೆ ನೋಡಿಕೊಂಡಿವೆ~ ಎಂದು `ಸಿಸಿಐ~ ತನ್ನ 258 ಪುಟಗಳ ಆದೇಶದಲ್ಲಿ ನೇರವಾಗಿಯೇ ದೋಷಾರೋಪ ಮಾಡಿದೆ.
ಅಚ್ಚರಿ ಎಂದರೆ ಸಿಮೆಂಟ್ ಉದ್ಯಮದ ಪ್ರಾತಿನಿಧಿಕ ಸಂಸ್ಥೆಯಾದ `ಸಿಮೆಂಟ್ ಉತ್ಪಾದಕರ ಸಂಘ~ಕ್ಕೂ (ಸಿಎಂಎ) ದಂಡ ವಿಧಿಸಲಾಗಿದೆ. ಗ್ರಾಸಿಂ ಸಿಮೆಂಟ್ಸ್ (ಈಗ ಅಲ್ಟ್ರಾಟೆಕ್ನಲ್ಲಿ ವಿಲೀನವಾಗಿದೆ), ಲಾಫರ್ಜ್ ಇಂಡಿಯ, ಜೆಕೆ ಸಿಮೆಂಟ್, ಇಂಡಿಯ ಸಿಮೆಂಟ್ಸ್, ಮದ್ರಾಸ್ ಸಿಮೆಂಟ್ಸ್, ಸೆಂಚುರಿ ಸಿಮೆಂಟ್ಸ್, ಬಿನಾನಿ ಸಿಮೆಂಟ್ಸ್ `ಸಿಸಿಐ~ನಿಂದ ದಂಡನೆಗೆ ಒಳಗಾಗಿರುವ ಇತರೆ ಕಂಪೆನಿಗಳು.
ಈಗ ವಿಧಿಸಲಾಗಿರುವ ದಂಡವು ಈ ಸಿಮೆಂಟ್ ಕಂಪೆನಿಗಳು 2009-10 ಮತ್ತು 2010-11ನೇ ಹಣಕಾಸು ವರ್ಷದಲ್ಲಿ ಗಳಿಸಿದ ನಿವ್ವಳ ಲಾಭದ ಶೇ 50ರಷ್ಟು ಪ್ರಮಾಣದ ಮೊತ್ತವಾಗಿದೆ.
`ದಂಡದ ಮೊತ್ತವನ್ನು ಶೇ 300ರವರೆಗೂ ಹೆಚ್ಚಿಸಲು ಅವಕಾಶವಿದೆ~ ಎಂದು ಪ್ರಕರಣದ ತನಿಖಾ ಸಂಸ್ಥೆ ಹೇಳಿದೆ.
`ಬಿಲ್ಡರ್ಸ್ ಅಸೋಸಿಯೇಷನ್ ಅಫ್ ಇಂಡಿಯಾ~(ಬಿಎಐ) ಸಲ್ಲಿಸಿದ್ದ ದೂರಿನ ಮೇರೆಗೆ `ಸಿಸಿಐ~ ವಿಚಾರಣೆ ನಡೆಸಿ ದಂಡದ ಆದೇಶ ಹೊರಡಿಸಿದೆ. ಇದಕ್ಕೂ ಮುನ್ನ ತನಿಖಾ ಮಹಾ ನಿರ್ದೇಶನಾಲಯದ ಮೂಲಕ ತನಿಖೆಯನ್ನೂ ನಡೆಸಲಾಗಿತ್ತು. ತನಿಖೆ ವೇಳೆ ಈ 11 ಕಂಪೆನಿಗಳು ಯಾವ ಯಾವ ಅವಧಿಯಲ್ಲಿ ಎಷ್ಟೆಷ್ಟು ಸಿಮೆಂಟ್ ತಯಾರಿಸುತ್ತಿದ್ದವು, ಮಾರುಕಟ್ಟೆ ಬೇಡಿಕೆಯನ್ನು ಅನುಸರಿಸಿ ಹೇಗೆ ಪೂರೈಕೆ ಮಾಡುತ್ತಿದ್ದವು, ದರವನ್ನೂ ಹೇಗೆ ನಿಗದಿ ಮಾಡುತ್ತಿದ್ದವು ಎಂಬ ಅಂಶಗಳನ್ನೆಲ್ಲ ಪರಿಶೀಲಿಸಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.