ಸಿಲಿಂಡರ್ ಪೂರೈಕೆಗೆ ಒತ್ತಾಯ
ಗೌರಿಬಿದನೂರು: ಸುಮಾರು ಹದಿನೈದು ದಿನಗಳಿಂದ ಅಡುಗೆ ಅನಿಲ ಸಿಲಿಂಡರ್ ಪೂರೈಕೆಯಲ್ಲಿ ಸಮಸ್ಯೆ ತಲೆದೋರಿದ್ದು, ಕೂಡಲೇ ಬಗೆಹರಿಸಬೇಕು ಎಂದು ಒತ್ತಾಯಿಸಿ ಸಾರ್ವಜನಿಕರು ಸೋಮವಾರ ತಾಲ್ಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಸಿಲಿಂಡರ್ ವಿತರಣೆ ಮಾಡುವ ಏಜೆನ್ಸಿ ಮಳಿಗೆಯೊಂದರ ಎದುರು ಕೆಲ ಕಾಲ ಪ್ರತಿಭಟನೆ ಕೈಗೊಂಡು ನಂತರ ರಸ್ತೆ ತಡೆ ನಡೆಸಿದರು.ಪ್ರತಿಭಟನೆ ನೇತೃತ್ವ ವಹಿಸಿದ್ದ ಪುರಸಭೆ ಸದಸ್ಯ ನಾಗಾಸ್ವಾಮಿ ಮಾತನಾಡಿ, ~ಮನೆಗಳಲ್ಲಿ ಅಡುಗೆ ಮಾಡಲು ಗ್ಯಾಸ್ ಇಲ್ಲದೆ ತುಂಬಾ ತೊಂದರೆಯಾಗಿದೆ. ಅನಿವಾರ್ಯವಾಗಿ ಹೋಟೆಲ್ಗಳಲ್ಲಿ ತಿಂಡಿ ಮತ್ತು ಊಟ ಮಾಡಬೇಕಾದ ಪರಿಸ್ಥಿತಿ ಬಂದಿದೆ~ ಎಂದರು.
ಇತ್ತೀಚೆಗೆ ತಾಲ್ಲೂಕಿಗೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ, ಸಿಲಿಂಡರ್ ಪೂರೈಕೆಗೆ ಶೀಘ್ರ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಆದರೆ ಈವರೆಗೆ ಯಾವುದೇ ಸಮಸ್ಯೆ ಬಗೆಹರಿದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಉಪತಹಶೀಲ್ದಾರ್ ಚನ್ನಬಸಪ್ಪ ಮನವಿಪತ್ರ ಸ್ವೀಕರಿಸಿ, ಸಿಲಿಂಡರ್ ವಿತರಣೆಗೆ ಶೀಘ್ರ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಸಮಾಜ ಸೇವಕಿ ಪ್ರಮೀಳಾ ರಾಧಾಕೃಷ್ಣ, ಕರ್ನಾಟಕ ರಕ್ಷಣಾ ವೇದಿಕೆಯ ಅಶ್ವತ್ಥನಾರಾಯಣ, ಹನುಮಂತರಾಯಪ್ಪ, ಶಿವಕುಮಾರ್ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.