ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಲಿಕಾನ್ ಸಿಟಿಯಲ್ಲಿ ಸಿರಿಗೆರೆ ಸೊಗಡು

Last Updated 9 ಫೆಬ್ರವರಿ 2011, 18:30 IST
ಅಕ್ಷರ ಗಾತ್ರ

ಚಿತ್ರದುರ್ಗ ಜಿಲ್ಲೆ ಸಿರಿಗೆರೆಯ ತರಳಬಾಳು ಬೃಹನ್ಮಠ ಐವತ್ತರ ದಶಕದಿಂದಲೂ ನಾಡಿನ ಒಳ- ಹೊರಗೆ ನಡೆಸಿಕೊಂಡು ಬಂದಿರುವ ಸರ್ವಧರ್ಮ ಸಮನ್ವಯದ ಪರಿಕಲ್ಪನೆಯ ‘ತರಳಬಾಳು ಹುಣ್ಣಿಮೆ ಮಹೋತ್ಸವ’ ಒಂದು ನಾಡ ಹಬ್ಬವಾಗಿ ಸರ್ವ ಜನಾದರಣೆ ಗಳಿಸಿದೆ.

ಕೋಮು ಸಾಮರಸ್ಯ ಸಾರುವ ದೊಡ್ಡ ವೇದಿಕೆಯೇ ‘ತರಳಬಾಳು ಹುಣ್ಣಿಮೆ’. ಹೆಸರಿಗೆ ತಕ್ಕಂತೆ ಜಾತಿ ಮತ, ಪ್ರಾಂತ್ಯ ಪ್ರದೇಶಗಳ ಭೇದವಿಲ್ಲದೆ ಎಲ್ಲರನ್ನೂ ಮಾನವತಾ ಸದ್ಧರ್ಮದ ಬೆಸುಗೆಯಲ್ಲಿ ಒಗ್ಗೂಡಿಸುವ ಭಾವೈಕ್ಯ ಸಂಗಮವೂ ಹೌದು. ಏಕೆಂದರೆ ಸಿರಿಗೆರೆಯ ಮೂಲದಲ್ಲೇ ಸಹಬಾಳ್ವೆಯ ಆದರ್ಶವಿದೆ. 

ಈ ಮಠದ ಮೂಲಪುರುಷರು ಹನ್ನೆರಡನೆಯ ಶತಮಾನದ ಬಸವಾದಿ ಶಿವಶರಣರ ಸಮಕಾಲೀನರಾದ, ಬಸವಣ್ಣನಂತೆ ಸಾಮಾಜಿಕ ಪರಿವರ್ತನೆಯ ಕನಸು ಕಂಡ ವಿಶ್ವಬಂಧು ಮರುಳಸಿದ್ಧರು. ಜಾತಿ ವೈಷಮ್ಯ, ಅಂಧಾಚರಣೆಗಳಿಂದ ಕುದಿಯುತ್ತಿದ್ದ ಅಂದಿನ ಸಮಾಜಕ್ಕೆ ಶಾಂತಿ ಸಹಬಾಳ್ವೆಯ ಮಂತ್ರ ಬೋಧಿಸಿದವರು. ದಿಕ್ಕೆಟ್ಟ ಜನರಿಗೆ ಧರ್ಮದ ದಾರಿ ತೋರುವ ಪ್ರಯತ್ನವಾಗಿ ಅಂದು ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲ್ಲೂಕಿನ ಉಜ್ಜಯಿನಿಯಲ್ಲಿ ‘ಸದ್ಧರ್ಮ ಪೀಠ’ ಸ್ಥಾಪಿಸಿ, ಅದರಲ್ಲಿ ಮಾಘ ಶುದ್ಧ ಪೂರ್ಣಿಮೆಯಂದು ತಮ್ಮ ಶಿಷ್ಯ ತೆಲಗುಬಾಳು ಸಿದ್ಧಯ್ಯನನ್ನು ಕುಳ್ಳಿರಿಸಿ ‘ತರಳಾ ಬಾಳು’ ಎಂದು ಹರಸಿದರು.

ತರಳಬಾಳು ಎಂಬ ಮರುಳಸಿದ್ಧ ಪಂಚಾಕ್ಷರಿ ಮಂತ್ರ ವ್ಯಕ್ತಿ ಕೇಂದ್ರಿತ ನೆಲೆಯದ್ದಲ್ಲ, ಸಮಷ್ಟಿ ಕೇಂದ್ರಿತ, ಜಗತ್ತಿನ ಜನರೆಲ್ಲರೂ ತರಳರೇ. ಸರ್ವರೂ ವೈಯಕ್ತಿಕವಾಗಿ ಮತ್ತು ಸಾಮೂಹಿಕವಾಗಿ ತಮ್ಮ ತಮ್ಮ ಹೊಣೆಗಾರಿಕೆ ನೆರವೇರಿಸಬೇಕೆಂಬುದೇ ಇದರ ಆಶಯ.  

ಈ ಪರಂಪರೆಯಲ್ಲಿಸಾಗಿ ಬಂದ ಸದ್ಧರ್ಮ ಪೀಠಾಧಿಪತಿಗಳೇ ‘ತರಳಬಾಳು ಜಗದ್ಗುರುಗಳು’. ಉಜ್ಜಯಿನಿಯಲ್ಲಿ ಚರ್ಮ ವೃತ್ತಿ ಕಾಯಕದ ಮಾರಯ್ಯ- ಸುಪ್ರಭೆಯರ ಪುತ್ರ ಮರುಳಸಿದ್ಧರು. ಅವರು ಧಾರ್ಮಿಕ ಅಜ್ಞಾನ, ಮೌಢ್ಯ, ಕಂದಾಚಾರ ಮತ್ತು ವೈದಿಕ ಪರಂಪರೆಯ ವಿರುದ್ಧ ಸಮರ ಸಾರಿ ಅಲ್ಲಿನ ಪುರಪ್ರಮುಖ ಬಾಚನಗೌಡರಿಂದ ಭೂಮಿ ಪಡೆದು ಅಲ್ಲಿಯೇ ಸದ್ಧರ್ಮ ಪೀಠ ಸ್ಥಾಪಿಸಿದರು. ಭೂಮಿ ಪಡೆದ ಕುರುಹಾಗಿ ಉಜ್ಜಯಿನಿಯ ಸುತ್ತಲೂ ಒಂಬತ್ತು ಪಾದಗಟ್ಟೆಗಳು ಈಗಲೂ ಇವೆ.

ಈ ನೆಲೆಗಟ್ಟಿನ ಹಿನ್ನೆಲೆಯಲ್ಲಿಯೇ ‘ತರಳಬಾಳು ಹುಣ್ಣಿಮೆ ಮಹೋತ್ಸವ’ ಪ್ರತಿ ವರ್ಷ ಒಂಭತ್ತು ದಿನ ನಡೆಯುತ್ತ ಬಂದಿದೆ. ಆರಂಭದಲ್ಲಿ ಊರ ಹಬ್ಬವಾಗಿ ಸಿರಿಗೆರೆ ಮಠದಲ್ಲೇ ನಡೆಯುುತ್ತಿತ್ತು. ಭಕ್ತರ ಬೇಡಿಕೆ ಮೇರೆಗೆ 1950ರಲ್ಲಿ ಪ್ರಥಮವಾಗಿ ಈಗಿನ ದಾವಣಗೆರೆ ಜಿಲ್ಲೆಯ ಜಗಳೂರಿನಲ್ಲಿ ಮುಸ್ಲಿಂ ಮುತ್ಸದ್ದಿ ಜೆ.ಎಂ. ಇಮಾಂ ಸಾಹೇಬ್ ಅವರ ಅಧ್ಯಕ್ಷತೆಯಲ್ಲಿ ನಡೆದಿದ್ದು ವಿಶೇಷ. 
ನಂತರ ಈ ಮಹೋತ್ಸವ ಮಹಾರಾಷ್ಟ್ರ ಸೊಲ್ಲಾಪುರ ಸೇರಿದಂತೆ ರಾಜ್ಯದ ಬೇರೆ ಬೇರೆ ಪ್ರದೇಶಗಳಲ್ಲಿ ಕಳೆದ 50 ವರ್ಷಗಳಿಂದ ನಡೆಯುತ್ತ ಬಂದಿದೆ.

2010ರಲ್ಲಿ ಬೆಂಗಳೂರಿನಲ್ಲಿ ನಡೆಯಬೇಕಿತ್ತು. ಆದರೆ ಕಳೆದ ವರ್ಷ ಉತ್ತರ ಕರ್ನಾಟಕದಲ್ಲಿ ಪ್ರವಾಹದಿಂದ ಅಪಾರ ಸಾವು ನೋವು, ಹಾನಿ ಸಂಭವಿಸಿದ ಹಿನ್ನೆಲೆಯಲ್ಲಿ ಹುಣ್ಣಿಮೆ ಹಬ್ಬಕ್ಕೆ ಅರ್ಥವಿಲ್ಲ ಎಂದು ಭಾವಿಸಿದ ಸಿರಿಗೆರೆಯ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರು ಮಠದಲ್ಲಿ ಔಪಚಾರಿಕವಾಗಿ ಆಚರಿಸಿ ಸಂತ್ರಸ್ತರಿಗೆ ಸಹಾಯ ಹಸ್ತ ಚಾಚಿದ್ದರು. ಅಲ್ಲಿನ 13 ಗ್ರಾಮಗಳಲ್ಲಿ ಮಠದ ವತಿಯಿಂದ ಶಾಲಾ ಕಟ್ಟಡ ನಿರ್ಮಾಣವಾಗುತ್ತಿದೆ. ಇದು ಈ ಮಠದ ಪರಂಪರೆ ಎಂದು ನೆನಪಿಸಿಕೊಳ್ಳುತ್ತಾರೆ ಅಧ್ಯಾಪಕ ಡಾ. ಕೆ.ಜಿ. ಹಾಲಸ್ವಾಮಿ.

ಸಮಯ ಪಾಲನೆ
ಒಂದು ಮಠದ ಚಾರಿತ್ರಿಕ ಹಿನ್ನೆಲೆಯಲ್ಲಿ ನಡೆದುಕೊಂಡು ಬಂದಿರುವ ಈ ಹುಣ್ಣಿಮೆ ಮಹೋತ್ಸವವನ್ನು ಜಾತಿ- ಮತ- ಪಂಥಗಳ ಚೌಕಟ್ಟನ್ನು ಮೀರಿ ನಾಡ ಜನರ ಭಾವೈಕ್ಯ ಸಾಧನವನ್ನಾಗಿ ರೂಪಿಸಿದವರು ಮಠದ ಹಿಂದಿನ ಗುರುಗಳಾದ ಲಿಂಗೈಕ್ಯ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ. ಅದಕ್ಕೆ ಹೊಸ ರೂಪ ನೀಡಿದವರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ.

36 ವರ್ಷಗಳ ಬಳಿಕ 2ನೇ ಬಾರಿಗೆ ಇಂದಿನಿಂದ ಫೆ. 18ರ ವರೆಗೆ 9 ದಿನ ಅರಮನೆ ಮೈದಾನದ ಕೃಷ್ಣವಿಹಾರದಲ್ಲಿ ತರಳಬಾಳು ಮಹೋತ್ಸವ. ಇಲ್ಲಿ ಸಮಯ ಪಾಲನೆಗೆ ಅತಿ ಹೆಚ್ಚು ಪ್ರಾಶಸ್ತ್ಯ. ಅತಿಥಿಗಳು, ಆಹ್ವಾನಿತರು, ಗಣ್ಯರಾದಿಯಾಗಿ ಯಾರೇ ಬರಲಿ ಬಿಡಲಿ ಸಮಯಕ್ಕೆ ಸರಿಯಾಗಿ ಕಾರ್ಯಕ್ರಮ ಆರಂಭ. ಧಾರ್ಮಿಕ ನೇತಾರರು, ಸಾಮಾಜಿಕ ಚಿಂತಕರಿಂದ ಉಪನ್ಯಾಸ, ದೇಸೀ ಸೊಬಗು ಹಾಗೂ ಸೊಗಡಿನ ಸಾಂಸ್ಕೃತಿಕ ಕಾರ್ಯಕ್ರಮಗಳು ಭಾವೈಕ್ಯತೆ ಮೂಡಿಸುವ ಮೂಲಮಂತ್ರವಾಗಲಿವೆ.
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT