ಸೋಮವಾರ, ಮೇ 17, 2021
21 °C

ಸಿಹಿ ಹಂಚಿ ಸಂಭ್ರಮಿಸಿದ ವಕೀಲರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಹಿ ಹಂಚಿ ಸಂಭ್ರಮಿಸಿದ ವಕೀಲರು

ಧಾರವಾಡ: ಧಾರವಾಡ ಮತ್ತು ಗುಲ್ಬರ್ಗ ಹೈಕೋರ್ಟ್ ಸಂಚಾರಿ ಪೀಠಗಳನ್ನು ಕಾಯಂ ಪೀಠಗಳನ್ನಾಗಿ ಪರಿವರ್ತಿಸುವ ಕೇಂದ್ರ ಸಚಿವ ಸಂಪುಟದ ನಿರ್ಣಯಕ್ಕೆ ಇಲ್ಲಿನ ಸಂಚಾರಿ ಪೀಠದ ವಕೀಲರು ಸಿಹಿ ಹಂಚಿ ಸಂಭ್ರಮಿಸಿದರು.ಬುಧವಾರ ಮಧ್ಯಾಹ್ನ ಸಂಘದಲ್ಲಿ ಸಭೆ ಸೇರಿದ ವಕೀಲರು ಪರಸ್ಪರ ಶುಭಾಶಯ ಕೋರಿ, ಸಿಹಿ ಹಂಚಿ ಸಂತಸ ಹಂಚಿಕೊಂಡರು. ನಂತರ ನಡೆದ ಸಭೆಯಲ್ಲ ವಕೀಲರ ಸಂಘದ ಅಧ್ಯಕ್ಷ ಬಿ.ಡಿ.ಹಿರೇಮಠ ಸೇರಿದಂತೆ ಅನೇಕ ಹಿರಿಯ ವಕೀಲರು ಸರ್ಕಾರದ ನಿರ್ಣಯ ಶೀಘ್ರ ನ್ಯಾಯದಾನ ಪ್ರಕ್ರಿಯೆಗೆ ಸಹಕಾರಿಯಾಗಲಿದೆ. ಹಲವು ದಶಕಗಳ ಹೋರಾಟದ ನಂತರ ಈ ಭಾಗದಲ್ಲಿ ಕಾರ್ಯಾರಂಭ ಮಾಡಿದ್ದ ಸಂಚಾರಿ ಪೀಠಗಳು ಕಾಯಂಗೊಳ್ಳುವ ಮೂಲಕ ಬಹುದಿನದ ಕನಸು ಈಡೇರಿದಂತಾಗಿದೆ.

ಇದಕ್ಕೆ ಕಾರಣರಾದ ಪ್ರಧಾನಿ, ಕೇಂದ್ರ ಸಚಿವ ಸಂಪುಟದ ಸದಸ್ಯರು, ಸಕಾರಾತ್ಮಕ ಸ್ಪಂದನೆ ನೀಡಿದ ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಅಭಿನಂದನೆ ಸಲ್ಲಿಸಿದರು. ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಸುರೇಶ ಹುಡೇದಗಡ್ಡಿ, ಕಾರ್ಯದಶಿ ಮದನ ಮೋಹನ್ ಕೊಣ್ಣೂರ, ಹಿರಿಯ ವಕೀಲರಾದ ವಿ.ಪಿ.ಕುಲಕರ್ಣಿ, ಎಫ್.ವಿ.ಪಾಟೀಲ, ಜಗದೀಶ ಪಾಟೀಲ, ಅರವಿಂದ ಕುಲಕರ್ಣಿ ಇತರರು ಇದ್ದರು.ಗೆಜೆಟ್ ಅಧಿಸೂಚನೆಯಷ್ಟೇ ಬಾಕಿ..

2008ರ ಜುಲೈ 7ರಂದು ಕಾರ್ಯಾರಂಭ ಮಾಡಿದ್ದ ಇಲ್ಲಿನ ಸಂಚಾರಿ ಪೀಠ, ಕಾಯಂ ಪೀಠವಾಗಲು ಅಗತ್ಯವಿರುವ ಎಲ್ಲ ಮೂಲಸೌಲಭ್ಯಗಳನ್ನು ಹೊಂದಿದ್ದು, ತಾಂತ್ರಿಕ ಬದಲಾವಣೆ ಮಾತ್ರ ಬಾಕಿ ಇದೆ. ಕೇಂದ್ರ ಸಚಿವ ಸಂಪುಟ ಕೈಗೊಂಡಿರುವ ನಿರ್ಣಯ ಅಧಿಕೃತವಾಗಿ ಗೆಜೆಟ್ ಅಧಿಸೂಚನೆಯಾಗಿ ಪ್ರಕಟವಾಗಬೇಕು. ನಂತರ ರಾಷ್ಟ್ರಪತಿಗಳ ಅಂಕಿತದ ಮುದ್ರೆ ಬೀಳಬೇಕು. ಆ ನಂತರ ಪರಿವರ್ತನೆ ಪ್ರಕ್ರಿಯೆಗಳು ಆರಂಭಗೊಳ್ಳಲಿವೆ.ಧಾರವಾಡದಲ್ಲಿ ಸಂಚಾರಿ ಪೀಠ ಕಾರ್ಯಾರಂಭ ಮಾಡಿದಾಗ ಪ್ರಧಾನ ಪೀಠದಲ್ಲಿದ್ದ ಈ ಭಾಗದ ಸುಮಾರು 22 ಸಾವಿರ ಪ್ರಕರಣಗಳು ಇಲ್ಲಿಗೆ ವರ್ಗಾವಣೆಯಾಗಿದ್ದವು. ಸದ್ಯ ಪೀಠದಲ್ಲಿ ಸುಮಾರು 56 ಸಾವಿರ ಪ್ರಕರಣಗಳು ಬಾಕಿ ಇವೆ. ಜುಲೈ 2008ರಿಂದ ಜೂನ್ 2013ರವರೆಗೆ 28 ಸಾವಿರ ಮಿಸಲೇನಿಯಸ್ ಅರ್ಜಿಗಳು ಸೇರಿದಂತೆ ಒಟ್ಟು 1 ಲಕ್ಷ 7 ಸಾವಿರದ 81 ಪ್ರಕರಣಗಳು ಈ ಪೀಠದಲ್ಲಿ ಇತ್ಯರ್ಥಗೊಂಡಿವೆ. ಪೀಠದಲ್ಲಿ ಮುಖ್ಯ ನ್ಯಾಯಮೂರ್ತಿಗಳು ಇಲ್ಲಿಗೆ ಭೇಟಿ ನೀಡಿದಾಗ ಕಲಾಪ ನಡೆಸಲು ಇರುವ ನ್ಯಾಯಾಂಗಣ ಸೇರಿದಂತೆ ಒಟ್ಟು 10 ಹವಾನಿಯಂತ್ರಿತ  ಸುಸಜ್ಜಿತ ಕೋರ್ಟ್ ಹಾಲ್‌ಗಳು ಇವೆ.

ಸುಮಾರು 65 ಲಕ್ಷ ಮೌಲ್ಯದ ಕಾನೂನು ಪುಸ್ತಕಗಳು ಗ್ರಂಥಾಲಯದಲ್ಲಿವೆ. ನ್ಯಾಯಮೂರ್ತಿಗಳ ವಾಸಕ್ಕೆ ಮನೆಗಳು ಹೀಗೆ ಸಕಲ ಸೌಲಭ್ಯಗಳು ಇಲ್ಲಿವೆ. ಇವು ಸಂಚಾರಿ ಪೀಠಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಅಪೇಕ್ಷಿತ ದಾಖಲಾತಿ ಇಲ್ಲ ಎನ್ನುವ ಹಲವರ ಅನುಮಾನಗಳಿಗೆ ಉತ್ತರವಾಗಿ ನಿಲ್ಲುತ್ತವೆ.ಸದ್ಯ ಹೈಕೋರ್ಟ್ ಸಂಚಾರಿಪೀಠದಲ್ಲಿ 6 ಜನ ನ್ಯಾಯಮೂರ್ತಿಗಳು 6ರಿಂದ 8 ವಾರಗಳ ಕಾಲ ಸರದಿ ಮೇಲೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಾಯಂ ಪೀಠವಾದ ನಂತರ ಹೆಚ್ಚಿನ ಸಂಖ್ಯೆಯ ನ್ಯಾಯಮೂರ್ತಿಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸಲು ಸಾಧ್ಯವಾಗುವುದರಿಂದ ಶೀಘ್ರ ವಿಲೇವಾರಿ ಸಾಧ್ಯವಾಗಲಿದೆ ಎನ್ನುವದು ಈ ಭಾಗದ ಕಕ್ಷಿದಾರರ ಅಪೇಕ್ಷೆ.ಒಟ್ಟಿನಲ್ಲಿ ಸಂಚಾರಿ ಪೀಠಗಳು ಕಾಯಂ ಪೀಠಗಳಾಗಿ ಪರಿವರ್ತನೆಯಾಗುತ್ತಿರುವುದು ಈ ಭಾಗದ ನ್ಯಾಯಾಪೇಕ್ಷಿತ ಕಕ್ಷಿದಾರರು, ವಕೀಲರು, ಜನಸಾಮಾನ್ಯರಲ್ಲಿ ಸಂತಸ, ಸಂಭ್ರಮ ಮೂಡಿಸಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.