ಗುರುವಾರ , ಜೂನ್ 17, 2021
27 °C

ಸುಂಗಟಾನ ಸಿದ್ದಪ್ಪ ದೇವರ ಪಲ್ಲಕ್ಕಿ ಉತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುದ್ದೇಬಿಹಾಳ: ತಾಲ್ಲೂಕಿನ ತಂಗಡಗಿ ಗ್ರಾಮದಲ್ಲಿ ಶುಕ್ರವಾರ ಸುಂಗಟಾನ ಸಿದ್ದಪ್ಪ ದೇವರ ಪಲ್ಲಕ್ಕಿ ಉತ್ಸವ ಭಕ್ತಿ, ಶ್ರದ್ಧೆಯಿಂದ ನೆರವೇರಿತು.ತಾಲ್ಲೂಕಿನ ಸರೂರ ಹಾಗೂ ಕೋಳೂರ ಗ್ರಾಮದಿಂದ ಗುರುವಾರ ಸಂಜೆ ಗ್ರಾಮಕ್ಕೆ ಆಗಮಿಸಿದ ದೇವರ ಪಲ್ಲಕ್ಕಿ ಹಾಗೂ ಸುಂಗಟಾನದಿಂದ ಬಂದ ಭಕ್ತರನ್ನು ತಂಗಡಗಿಯ ಸದ್ಭಕ್ತರು ಸಾಂಪ್ರದಾಯಿಕವಾಗಿ ಸ್ವಾಗತಿಸಿದರು. ಮಹಿಳೆಯರು ಪಲ್ಲಕ್ಕಿ ಬರುವ ದಾರಿಗುಂಟ ನೀರು ಸುರಿದು ತಂಪು ಸೂಸಿದರು. ಕೆಲವು ಮಹಿಳೆಯರು ಹಾಗೂ ಪುರುಷರು ಪಲ್ಲಕ್ಕಿಯ ಕೆಳಗೆ ಮಲಗಿ ಭಕ್ತಿ ನಮನ ಸಲ್ಲಿಸಿದರು.ನಂತರ ನೇರವಾಗಿ ಕುಂಚಗನೂರಗೆ ನಡೆದ ಸಿದ್ದಪ್ಪ ದೇವರ ಪಲ್ಲಕ್ಕಿಯು ಅಲ್ಲಿಯ ಕೃಷ್ಣಾ ನದಿ ತೀರದಲ್ಲಿ ಗಂಗಾ ಸ್ನಾನ ಮಾಡಲಾಯಿತು. ನಾಲ್ಕು ಸುತ್ತಿನ ಕಂಬಳಿಯಲ್ಲಿ ಸುಂಗಟಾನದಿಂದ ತಂದಿದ್ದ ದೇವರ ಕಲ್ಲುಗಳನ್ನು, ಬೆಳ್ಳಿ ಮೂರ್ತಿಗಳನ್ನು, ಬೆಳ್ಳಿ ದಂಡಗಳನ್ನು ತೊಳೆದು ಶುಚಿಗೊಳಿಸಲಾಗಿತ್ತು.ದೇವರ ಮೂರ್ತಿಗಳನ್ನು ಅಂಬರಿ (ಹಳದಿ) ಹೂವಿನಲ್ಲಿ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಪೂಜೆಯ ನಂತರ ಉತ್ಸವಕ್ಕೆ ಬಂದಿದ್ದ ಭಕ್ತರು ತಾವು ತಂದಿದ್ದ ಸಜ್ಜಿ ರೊಟ್ಟಿ, ಬಾನ, ಪುಂಡಿ ಪಲ್ಲೆ, ಕಡಬು ಹೋಳಿಗೆಗಳನ್ನು ಜೊತೆಗೆ ಮದ್ಯದ ಬಾಟಲಿಗಳನ್ನೂ ಸಹ ದೇವರಿಗೆ ನೆವೇದ್ಯ ಮಾಡಲಾಯಿತು. ಅದೇ ಪ್ರಸಾದವನ್ನು ಎಲ್ಲ ಭಕ್ತರಿಗೂ ವಿತರಿಸಲಾಯಿತು.ನದಿ ದಂಡೆಯ ಮೇಲೆ ಸ್ನಾನ ಮಾಡಿದ ಭಕ್ತರು ಅಲ್ಲಿಯೇ ಕುಳಿತು ತಾವು ತಂದಿದ್ದ ಬುತ್ತಿಯನ್ನು ಇತರರಿಗೆ ಸಹ ಹಂಚಿ ಸಹಭೋಜನ ಮಾಡಿದರು.ತಂಗಡಗಿಗೆ ಬಂದ ಸಿದ್ದಪ್ಪ ದೇವರನ್ನು ಮಂಕಣಿಯವರ ಮನೆಯಲ್ಲಿ ಪ್ರತಿಷ್ಠಾಪಿಸಲಾಯಿತು.ಶುಕ್ರವಾರ ದಿನವಿಡೀ ದೇವರ ದರ್ಶನಕ್ಕೆ ಜಿಲ್ಲೆಯ ವಿವಿಧ ಗ್ರಾಮಗಳಿಂದ ಬಂದಿದ್ದ ಸದ್ಭಕ್ತರಿಗೆ ಗ್ರಾಮಸ್ಥರು, ವಿಶೇಷವಾಗಿ ಯುವಕರು ಸ್ವತ: ನಿಂತು ಪ್ರಸಾದ ವ್ಯವಸ್ಥೆ ಮಾಡಿದರು. ಚಿತ್ರಾನ್ನ, ಸಾರು, ಮಜ್ಜಿಗೆಯ ಅಂಬಲಿ ಪ್ರಸಾದವನ್ನು ಪ್ರೀತಿಯಿಂದ ಎಲ್ಲರಿಗೂ ಬಡಿಸುವ ಕೆಲಸ ನಡೆಯಿತು. ಇಡೀ ಗ್ರಾಮವೇ ಬಂದ ಸದ್ಭಕ್ತರನ್ನು ಪ್ರೀತಿಯಂದ ಆದರಿಸುವ ಪರಿಪಾಠ ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ.

ಮದ್ಯ ಮಾರಾಟಕ್ಕೆ ಅನುಮತಿ ನೀಡಬಾರದೆಂಬ  ಒತ್ತಾಯದ ಮಧ್ಯವೂ ಕೆಲವು ಅಂಗಡಿಗಳಲ್ಲಿ ಮದ್ಯ ಮಾರಾಟ ನಡೆಯಿತು ಎಂಬುದು ಜನಪರ ಸಂಘಟನೆಗಳ ದೂರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.