ಶುಕ್ರವಾರ, ಫೆಬ್ರವರಿ 26, 2021
31 °C

ಸುಂದರ ಸರ್ಕಾರಿ ಶಾಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುಂದರ ಸರ್ಕಾರಿ ಶಾಲೆ

ಹಳ್ಳಿಗಾಡಿನ ಸರ್ಕಾರಿ ಶಾಲೆಗಳೆಂದರೆ ದನಗಳನ್ನು ಕೂಡಿಹಾಕುವ ದೊಡ್ಡಿ ಎಂಬ ಭಾವನೆ ಅನೇಕರಿಗೆ ಇದೆ. ಅನೇಕ ಶಾಲೆಗಳು ಹಾಗೇ ಇವೆ. ಕೆಲವೇ ಶಾಲೆಗಳು ಮೇಲಿನ ಮಾತಿಗೆ ಅಪವಾದ ಎನ್ನುವಂತಿವೆ. ಅಂತಹ ಶಾಲೆಗಳಲ್ಲಿ ಇಳೇಹಳ್ಳಿಯ ಸರ್ಕಾರಿ ಶಾಲೆಯೂ ಒಂದು.ಇಳೇಹಳ್ಳಿ ತಾಲೂಕು ಕೇಂದ್ರ ಯಲ್ಲಾಪುರ ದಿಂದ 35 ಕಿ. ಮೀ. ದೂರದಲ್ಲಿದೆ. ಯಲ್ಲಾಪುರ-ಶಿರಸಿ ರಸ್ತೆಯಿಂದ ಸುಮಾರು 10 ಕಿ. ಮೀ. ಒಳಗಿದೆ. ಆಧುನಿಕ ಸೌಲಭ್ಯಗಳಿಂದ ವಂಚಿತವಾಗಿರುವ ಈ ಶಾಲೆಯ ಏಕೈಕ ಆಕರ್ಷಣೆ ಎಂದರೆ ಹಚ್ಚ ಹಸಿರಿನ ಪರಿಸರ. ಅದರ ನಡುವೆಯೇ ಶಾಲೆ ಇದೆ.ಶಾಲೆಗಳಿಗೆ ಸರ್ಕಾರ ಸಾಕಷ್ಟು ಅನುದಾನ ನೀಡಿದರೂ ಎಲ್ಲಾ  ಶಾಲೆಗಳು ಒಂದೇ ರೀತಿ ಇಲ್ಲ. ಕೆಲವಂತೂ ಇವು ಶಾಲೆಯೇ? ಎಂದು ಉದ್ಗರಿಸುವಂತಿವೆ. ಕೆಲ ಶಾಲೆಗಳಲ್ಲಿ ಶಿಕ್ಷಕರ ಕೊರತೆ, ಶಿಕ್ಷರಿದ್ದರೂ ಅವರ ನಡವಳಿಕೆಗಳ ಬಗ್ಗೆ ಊರವರಿಗೆ ಅಸಮಾಧಾನ, ಶಿಕ್ಷಕರ ನಡುವೆ ಹೊಂದಾಣಿಕೆಯ ಸಮಸ್ಯೆ. ಕೆಲ ಶಾಲೆಗಳಲ್ಲಿ ಕನಿಷ್ಠ ಸೌಕರ್ಯಗಳೂ ಇರುವುದಿಲ್ಲ. ಆದರೆ ಇಳೇಹಳ್ಳಿ ಶಾಲೆ ಮೇಲಿನ ಅವಗುಣಗಳಿರುವ ಎಲ್ಲ ಶಾಲೆಗಳಿಗಿಂತ ಭಿನ್ನವಾಗಿದೆ.ಇಳೇಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಕುಣಬಿ ಜನಾಂಗದ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಕಲಿಯುತ್ತಿದ್ದಾರೆ! ಅವರ ಮಾತೃಭಾಷೆ ಕೊಂಕಣಿ! ಈ ಮಕ್ಕಳಿಗೆ ಕನ್ನಡದಲ್ಲಿ ಕಲಿಸುವುದು ತುಸು ಕಷ್ಟ. ಆದರೂ, ಶಾಲೆಯ ಮೂವರು ಶಿಕ್ಷಕರು  ಮಕ್ಕಳಿಗೆ  ಕಲಿಸುವ ವಿಷಯದಲ್ಲಿ ಅಪಾರ ಪರಿಶ್ರಮವಹಿಸಿದ್ದಾರೆ.ಯಾವುದೇ ಶಾಲೆಯ ಪ್ರಗತಿ ಅಳೆಯಲು ಮಕ್ಕಳ ಫಲಿತಾಂಶ ಮಾನದಂಡ ಅಲ್ಲ. ಆದರೂ ಈ ಶಾಲೆಯ ಮಕ್ಕಳು ಉತ್ತಮ ಅಂಕವನ್ನು ಪಡೆದು ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ. ಪಠ್ಯೇತರ ಚಟುವಟಿಕೆಗಳಲ್ಲಿಯೂ ಸಕ್ರಿಯವಾಗಿದ್ದಾರೆ. ಶಿಕ್ಷಕರು- ಪಾಲಕರ ನಡುವೆ ಉತ್ತಮ ಸಂಬಂಧವಿದೆ. ಶಾಲೆಯ ಅಭಿವೃದ್ಧಿಯಲ್ಲಿ ಎಲ್ಲ ಶಿಕ್ಷಕರೂ ಹೆಚ್ಚಿನ ಆಸಕ್ತಿ ವಹಿಸುತ್ತಾರೆ. ಇಂತಹ ಉತ್ತಮ ಪರಿಸರ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ನೋಡಲು ಸಾಧ್ಯವಿಲ್ಲ. ಇಳೇಹಳ್ಳಿ ನಗರ, ಪಟ್ಟಣ ಪ್ರದೇಶದಿಂದ ದೂರ ಇದ್ದರೂ ಶಾಲೆಯಲ್ಲಿ ಶೈಕ್ಷಣಿಕ ಪರಿಸರ ನಿರ್ಮಿಸುವ ವಿಷಯದಲ್ಲಿ ಮುಂದಿದೆ.ಈ ಶಾಲೆಯ ಪರಿಸರ ಅನೇಕ ಶಾಲೆಗಳಿಗೆ ಮಾದರಿ. ಶಾಲೆಯ ಗೋಡೆಗಳ ಮೇಲೆ ಅನೇಕ ಮಾಹಿತಿಗಳನ್ನು ಬರೆಯಲಾಗಿದೆ. ಒಳ ಹಾಗೂ ಹೊರಗಿನ ಗೋಡೆಗಳ ತುಂಬ ಅನೇಕ ಮಾಹಿತಿಗಳ ಬರಹಗಳೇ ತುಂಬಿ ತುಳುಕುತ್ತಿವೆ. ವಿವಿಧ ನಕಾಶೆ, ಮಹಾನ್ ಸಾಧಕರು, ಸಾಹಿತಿಗಳು, ಪಕ್ಷಿ-ಪ್ರಾಣಿಗಳ ಆಕರ್ಷಕ ಚಿತ್ರಗಳಿವೆ. ಮಕ್ಕಳಿಗೆ ಸಂಗೀತ ಉಪಕರಣಗಳನ್ನು ಚಿತ್ರಗಳೂ ಸೇರಿದಂತೆ ಸಾಮಾನ್ಯ ಜ್ಞಾನ ಹೆಚ್ಚಿಸುವ ಅನೇಕ ಚಿತ್ರಗಳಿವೆ.  ಈ ಶಾಲೆಯನ್ನು ಸಂದರ್ಶಿಸಿದ ಗಣ್ಯರೆಲ್ಲರೂ ಮುಕ್ತಕಂಠದಿಂದ ಈ ಪ್ರಯತ್ನಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಈ ಚಿತ್ರಗಳನ್ನು ವೃತ್ತಿನಿರತ ಕಲಾವಿದರು ಚಿತ್ರಿಸಿದಲ್ಲ. ಈ ಶಾಲೆಯಲ್ಲಿ 1994 ರಿಂದ ಸೇವೆ ಸಲ್ಲಿಸುತ್ತಿರುವ ಶಿಕ್ಷಕಿ  ಮಂಗಳಾಗೌರಿ ಭಟ್ ಅವರು  ರಚಿಸಿದ್ದಾರೆ.ಬಹುತೇಕ ಸರ್ಕಾರಿ ಶಾಲೆಗಳ ಶಿಕ್ಷಕರು ತಮ್ಮ ದೈನಂದಿನದ ಕರ್ತವ್ಯಗಳನ್ನು ಸರಿಯಾಗಿ ನಿಭಾಯಿಸುವುದಿಲ್ಲ ಎನ್ನುವ ದೂರುಗಳಿವೆ. ಆದರೆ ಶಿಕ್ಷಕಿ ಮಂಗಳಾ ಗೌರಿ ಅವರು ಮಕ್ಕಳಿಗೆ ಚೆನ್ನಾಗಿ ಪಾಠ ಹೇಳುವುದಲ್ಲದೆ ಪಠ್ಯೇತರ ಚಟುವಟಿಕೆಗಳಿಗೂ ಉತ್ತೇಜನ ಕೊಡುತ್ತಾರೆ. ಶಾಲೆಯ ಗೋಡೆ ಮೇಲೆ ಸ್ವಂತ ಖರ್ಚಿನಿಂದ ಚಿತ್ರಗಳನ್ನು ಬರೆದಿದ್ದಾರೆ. ಗೋಡೆಗಳ ಮೇಲೆ ಮಾಹಿತಿಗಳ ಕಣಜವೇ ಇದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.