ಬೆಂಗಳೂರು: ಕಾಮಾಕ್ಷಿಪಾಳ್ಯದ ಸುಗಂಧದ್ರವ್ಯ ತಯಾರಿಕಾ ಘಟಕದಲ್ಲಿ ಸೋಮವಾರ ಬೆಂಕಿ ಹೊತ್ತಿಕೊಂಡು ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಹೋಗಿವೆ. ಪೇಟೆ ಚನ್ನಬಸಪ್ಪ ಕೈಗಾರಿಕಾ ಪ್ರದೇಶದಲ್ಲಿರುವ ನಂದಕುಮಾರ್ ಎಂಬುವವರಿಗೆ ಸೇರಿದ, ಸುಗಂಧದ್ರವ್ಯ ಘಟಕ ‘ಪಾಸ್ವಾ ಇನ್ ಕಾರ್ಪೊರೇಷನ್’ನಲ್ಲಿ ಘಟನೆ ಸಂಭವಿಸಿದೆ.
ಮಧ್ಯಾಹ್ನ 3.30ರ ಸುಮಾರಿಗೆ ಘಟಕದಲ್ಲಿ ನಾಲ್ಕೈದು ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಕಾರ್ಮಿಕರು ಘಟಕದಿಂದ ಹೊರಬಂದಿದ್ದಾರೆ ಎಂದು ಪೊಲೀಸರು ತಿಳಿಸಿದರು.
ಆರು ವಾಹನಗಳಲ್ಲಿ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ, ಎರಡು ಗಂಟೆ ಕಾರ್ಯಾಚರಣೆ ನಡೆಸಿ, ಬೆಂಕಿ ನಂದಿಸಿದರು. ಶಾರ್ಟ್ ಸರ್ಕಿಟ್‌ನಿಂದಾಗಿ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆ ಇದೆ. ಘಟನೆಯಲ್ಲಿ ಸುಗಂಧದ್ರವ್ಯ ತಯಾರಿಕಾ ಘಟಕ ಸಂಪೂರ್ಣ ಹಾನಿಗೊಂಡಿದೆ ಎಂದು ಪೊಲೀಸರು ಹೇಳಿದರು. ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.