ಭಾನುವಾರ, ಮೇ 22, 2022
27 °C

ಸುಧಾರಣೆ ಬರ ನೀಗಿಸಿದ ಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೇಶಿ ಅರ್ಥ ವ್ಯವಸ್ಥೆಯ ಒಟ್ಟು 12 ವಲಯಗಳಲ್ಲಿ  ವಿದೇಶಿ ನೇರ ಬಂಡವಾಳ ಹೂಡಿಕೆಗೆ (ಎಫ್‌ಡಿಐ) ಅವಕಾಶ ಮಾಡಿಕೊಡುವ ಮೂಲಕ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ, ಈಗ ಇನ್ನೊಂದು ಸುತ್ತಿನ ಪ್ರಮುಖ ಆರ್ಥಿಕ ಸುಧಾರಣಾ ಕ್ರಮಗಳಿಗೆ ಚಾಲನೆ ನೀಡಿದೆ.ರಕ್ಷಣೆ, ದೂರಸಂಪರ್ಕ, ವಿಮೆ, ಸರಕು ವಿನಿಮಯ, ವಿದ್ಯುತ್ ವಿನಿಮಯ ಮತ್ತಿತರ ಪ್ರಮುಖ ವಲಯಗಳಲ್ಲಿನ `ಎಫ್‌ಡಿಐ' ಮಿತಿ ಹೆಚ್ಚಳ ಮತ್ತು ನಿಯಮಗಳ ಸರಳೀಕರಣವು  ಸದ್ಯದ ಸಂದರ್ಭದಲ್ಲಿ ತುಂಬ ಜರೂರಿನ ಕೆಲಸವಾಗಿತ್ತು. ಅರ್ಥ ವ್ಯವಸ್ಥೆಯಲ್ಲಿ ನಿರ್ಮಾಣಗೊಂಡಿರುವ  ಬಂಡವಾಳದ ಬರ ಪರಿಸ್ಥಿತಿಯನ್ನು ಈ `ಸುಧಾರಣೆಗಳ ಮುಂಗಾರು' ಸಮರ್ಥವಾಗಿ ನೀಗಿಸಲು ನೆರವಾಗಲಿದೆ. ಅಮೆರಿಕದ ಡಾಲರ್ ಎದುರು ಸತತವಾಗಿ ಮುಗ್ಗರಿಸುತ್ತಿರುವ ರೂಪಾಯಿ ಮೌಲ್ಯಕ್ಕೆ ಮೂಗುದಾರ ಹಾಕುವುದು ಮತ್ತು ವಿದೇಶಿ ಸಾಂಸ್ಥಿಕ ಹೂಡಿಕೆದಾರರಲ್ಲಿ ಮನೆ ಮಾಡಿರುವ ಹಿಂಜರಿಕೆ ಮನೋಭಾವ ದೂರಮಾಡಿ ಆತ್ಮವಿಶ್ವಾಸ ತುಂಬಿಸಿ ಹೂಡಿಕೆ ಪ್ರವೃತ್ತಿ ಉತ್ತೇಜಿಸುವುದೇ ಈ ಮಹತ್ವದ ನಿರ್ಧಾರದ ಮೂಲ ಉದ್ದೇಶವಾಗಿದೆ.ಕೈಗಾರಿಕೆ ಮತ್ತು ಉದ್ಯಮ ವಲಯದ ಪುನಶ್ಚೇತನ ದೃಷ್ಟಿಯಿಂದ ಈ ನಿರ್ಧಾರ ಸಕಾರಾತ್ಮಕವಾಗಿದೆ. ದೂರಸಂಪರ್ಕ, ವಿವಾದಾತ್ಮಕ ವಿಮೆ ಮತ್ತು ರಕ್ಷಣೆ ಸೇರಿದಂತೆ ವಿವಿಧ ರಂಗಗಳಲ್ಲಿ  ಎಫ್‌ಡಿಐ ಗರಿಷ್ಠ ಮಿತಿ ಹೆಚ್ಚಿಸಿರುವುದರಿಂದ ಕುಂಟುತ್ತ ಸಾಗಿರುವ ಅರ್ಥ ವ್ಯವಸ್ಥೆಗೆ ಖಂಡಿತವಾಗಿಯೂ ಚೇತರಿಕೆ ದೊರೆಯಲಿದೆ. ಕೆಲ ರಂಗಗಳಲ್ಲಿ ಸರ್ಕಾರದ ಪೂರ್ವಾನುಮತಿ ಇಲ್ಲದೇ ಎಫ್‌ಡಿಐ ಅನುಮತಿ ನೀಡಿರುವುದು ಬಂಡವಾಳ ಹೂಡಿಕೆ ಆಕರ್ಷಿಸುವುದನ್ನು ಕೇಂದ್ರ ಸರ್ಕಾರವು ಅದೆಷ್ಟರ ಮಟ್ಟಿಗೆ ಗಂಭೀರವಾಗಿ ಪರಿಗಣಿಸಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ.ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಹಣಕಾಸು ಮಾರುಕಟ್ಟೆಯಿಂದ ಗಮನಾರ್ಹ ಪ್ರಮಾಣದಲ್ಲಿ ಬಂಡವಾಳ ವಾಪಸ್ ಪಡೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಹೊಸ ಬಂಡವಾಳ ಆಕರ್ಷಿಸುವುದು ಅನಿವಾರ್ಯವಾಗಿತ್ತು. ದೂರಸಂಪರ್ಕ ರಂಗದಲ್ಲಿ ಶೇ 100ರಷ್ಟು ಎಫ್‌ಡಿಐಗೆ ಅವಕಾಶ ಮಾಡಿಕೊಟ್ಟಿರುವುದರಿಂದ ದೇಶದಾದ್ಯಂತ ದೂರವಾಣಿ ಸೇವೆಗಳ ಗುಣಮಟ್ಟ ಇನ್ನಷ್ಟು ಸುಧಾರಿಸಲಿದೆ ಎಂಬುದು ಆಶಯ.ಇನ್ನಷ್ಟು ಎಫ್‌ಡಿಐಗೆ ಅವಕಾಶ ಮಾಡಿಕೊಡುವುದರಿಂದ ದೇಶಿ ಅರ್ಥ ವ್ಯವಸ್ಥೆಯನ್ನು ಬಹುರಾಷ್ಟ್ರೀಯ ಸಂಸ್ಥೆಗಳಿಗೆ ಅಡವು ಇಟ್ಟಂತೇನೂ ಆಗುವುದಿಲ್ಲ. ಬದಲಿಗೆ, ಬಂಡವಾಳ ಹೂಡಿಕೆ, ಉದ್ಯೋಗಾವಕಾಶ ಹೆಚ್ಚಳಗೊಂಡು ಅರ್ಥವ್ಯವಸ್ಥೆಗೆ ಅಗತ್ಯವಾದ ಚೇತರಿಕೆ ದೊರೆಯಲಿದೆ. ಸ್ವಲ್ಪ ಮಟ್ಟಿಗೆ ಲಾಭ ದೇಶದಿಂದ ಹೊರಗೆ ಹರಿದು ಹೋಗಲು ಅವಕಾಶ ಮಾಡಿಕೊಟ್ಟರೂ ಒಟ್ಟಾರೆಯಾಗಿ ಇಡೀ ಅರ್ಥ ವ್ಯವಸ್ಥೆಗೆ ಹೆಚ್ಚಿನ ಪ್ರಯೋಜನ ಲಭಿಸಲಿದೆ. ಹೊಸ ಬಂಡವಾಳ ಹರಿವಿಗೆ ಅವಕಾಶ ಮಾಡಿಕೊಡುವುದಿಂದ ಅರ್ಥವ್ಯವಸ್ಥೆಗೆ ಅಗತ್ಯವಾದ `ಶಕ್ತಿವರ್ಧಕ' ಪೂರೈಸಿದಂತಾಗಲಿದೆ.ಅರವಿಂದ ಮಾಯಾರಾಂ ಸಮಿತಿಯು ಒಟ್ಟು 20 ರಂಗಗಳಲ್ಲಿ ಎಫ್‌ಡಿಐಗೆ ಅನುಮತಿ ನೀಡಲು ಶಿಫಾರಸು ಮಾಡಿತ್ತು. ಅದರಲ್ಲಿ 12 ವಲಯಗಳಲ್ಲಿ ಮಾತ್ರ ಕೇಂದ್ರ ಸಚಿವ ಸಂಪುಟ ಹಸಿರು ನಿಶಾನೆ ತೋರಿಸಿದೆ. ಅರ್ಥ ವ್ಯವಸ್ಥೆಯನ್ನು ಸಮರ್ಥವಾಗಿ ನಿಭಾಯಿಸಲು ಬರೀ ಎಫ್‌ಡಿಐ ಅನ್ನೆ ನೆಚ್ಚಿಕೊಳ್ಳುವುದೂ ಸರಿಯಲ್ಲ. ಇದಕ್ಕೆ ಪೂರಕವಾಗಿ ಸರ್ಕಾರವು ಇನ್ನಷ್ಟು ರಚನಾತ್ಮಕ ಕಾರ್ಯಕ್ರಮಗಳನ್ನೂ ಸಮರ್ಥವಾಗಿ ಜಾರಿಗೊಳಿಸಿದರೆ ಮಾತ್ರ ಅರ್ಥವ್ಯವಸ್ಥೆ ಸರಿದಾರಿಗೆ ಬಂದೀತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.