ಮಂಗಳವಾರ, ಜೂನ್ 15, 2021
26 °C
ಗುಂಡು ಹಾರಿಸಿ ವ್ಯಾಪಾರಿ ಕೊಲೆ ಪ್ರಕರಣ

ಸುಪಾರಿ ನೀಡಿದ ಇಬ್ಬರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚನ್ನರಾಯಪಟ್ಟಣ:  ನುಗ್ಗೇಹಳ್ಳಿಯಲ್ಲಿ ಚಿನ್ನ, ಬೆಳ್ಳಿ ವರ್ತಕನನ್ನು  ಸೋಮವಾರ ಸಂಜೆ ಗುಂಡಿಕ್ಕಿ ಕೊಲೆ ಮಾಡಿದ ಪ್ರಕರಣವನ್ನು ಭೇದಿಸಿರುವ ಪೊಲೀಸರು ಘಟನೆಗೆ ಕಾರಣರಾದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ನುಗ್ಗೇಹಳ್ಳಿ ಗ್ರಾಮದ ಟೇಲರ್‌ ನಟೇಶ್‌, ಚನ್ನರಾಯಪಟ್ಟಣದ ಟೇಲರ್‌ ಪ್ರಕಾಶ್‌ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಉಳಿದ ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು ಎಂದು ದಕ್ಷಿಣ ವಲಯದ ಐಜಿಪಿ ಡಾ.ಕೆ. ರಾಮಚಂದ್ರರಾವ್‌ ಮಂಗಳವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.ಅನೈತಿಕ ಸಂಬಂಧ ಕಾರಣ: ಚಿನ್ನ, ಬೆಳ್ಳಿ ವ್ಯಾಪಾರಿ ಪರಮೇಶ್‌ ಅಂಗಡಿಯ ಮುಂಭಾಗದಲ್ಲಿ ಆರೋಪಿ ನಟೇಶ್‌ಗೆ ಸೇರಿದ ಟೇಲರ್‌ ಅಂಗಡಿ ಇದೆ. ಇಬ್ಬರು ಪರಸ್ಪರ ಸ್ನೇಹಿತರು. ಆದರೆ, ನಟೇಶ್‌ ಪತ್ನಿ ಜೊತೆ ಚಿನ್ನ, ಬೆಳ್ಳಿ ವ್ಯಾಪಾರಿ ಪರಮೇಶ್‌ ಎರಡು ವರ್ಷಗಳಿಂದ ಅನೈತಿಕ ಸಂಬಂಧ ಇಟ್ಟುಕೊಂಡಿದ್ದರು. ಇದೇ ಪರಮೇಶ್‌ ಕೊಲೆಗೆ ಕಾರಣ. ಹಾಗಾಗಿ,  ಆರೋಪಿ ನಟೇಶ್ ತನ್ನ ಸ್ನೇಹಿತ ಪ್ರಕಾಶ್‌ ಜೊತೆ ಚರ್ಚಿಸಿ ಉತ್ತರ ಪ್ರದೇಶದ ಯುವಕರಿಬ್ಬರಿಗೆ ಸುಪಾರಿ ನೀಡುವ ಮೂಲಕ ಚಿನ್ನ, ಬೆಳ್ಳಿ ವ್ಯಾಪಾರಿಯನ್ನು ಕೊಲೆ ಮಾಡಿಸಿದ್ದಾರೆ.ಕೊಲೆಯಾದ ಪರಮೇಶ್ ಅವರಿಗೆ ಸೇರಿದ ಮೊಬೈಲ್‌ ಪರಿಶೀಲಿಸಿದಾಗ ಕೃತ್ಯದ ರಹಸ್ಯ ಬಯಲಾಯಿತು ಎಂದು  ಐಜಿಪಿ ಹೇಳಿದರು.

₨ 2 ಲಕ್ಷ ಒಪ್ಪಂದದೊಂದಿಗೆ ಉತ್ತರ ಪ್ರದೇಶದ ಯುವಕರಿಗೆ ಸುಪಾರಿ ನೀಡಲಾಯಿತು.  ಮೊದಲನೇ ಕಂತಾಗಿ  ₨ 95 ಸಾವಿರ  ನೀಡಲಾಗಿತ್ತು. ಕೆಲಸ ಮುಗಿದ ನಂತರ ಉಳಿದ ಹಣ ನೀಡಲು ತೀರ್ಮಾನಿಸಲಾಯಿತು. ಅದರಂತೆ ಉತ್ತರದ ಪ್ರದೇಶದ ಇಬ್ಬರು ಯುವಕರು 10 ದಿನಗಳಿಂದ  ತಾಲ್ಲೂಕಿನಲ್ಲಿ ನೆಲೆಸಿ ಪರಮೇಶ್‌ ಚಲನವಲನ ಗುರುತಿಸಿ ಕೊಲೆ ಮಾಡಲು ಯೋಜನೆ ರೂಪಿಸಿದರು.  ಸೋಮವಾರ ಸಂಜೆ ಗುಂಡು ಹಾರಿಸಿ ಪರಮೇಶ್‌ ಅವರನ್ನು ಕೊಲೆ ಮಾಡಿದರು. ಚಿನ್ನಾಭರಣಕ್ಕಾಗಿ ಈ ಕೊಲೆ ನಡೆದಿಲ್ಲ  ಎಂದು ಐಜಿಪಿ ಸ್ಪಷ್ಟಪಡಿಸಿದರು.ಕೊಲೆ ಹಂತಕರು ಕೃತ್ಯಕ್ಕಾಗಿ ದೇಸಿ ಪಿಸ್ತೂಲ್‌ ಬಳಸಿದ್ದು, ಎರಡು ಗುಂಡು ಹಾರಿಸಿದ್ದಾರೆ. ಪರಮೇಶ್‌ ಮೃತದೇಹ­ದಲ್ಲಿ ಒಂದು ಗುಂಡು ಪತ್ತೆಯಾಗಿದೆ ಎಂದ ಅವರು, ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಈ ಕೃತ್ಯ ಭೇದಿಸುವಲ್ಲಿ ಜಿಲ್ಲಾ ಎಸ್ಪಿ ರವಿ ಡಿ. ಚನ್ನಣ್ಣನವರ ಮತ್ತು ತಂಡ ಯಶಸ್ವಿಯಾಗಿದೆ. ಈ ತಂಡಕ್ಕೆ ₨ 10 ಸಾವಿರ   ಬಹುಮಾನ ನೀಡಲಾಗುವುದು ಎಂದು ಪ್ರಕಟಿಸಿದರು. ಉಳಿದ ಆರೋಪಿಗಳ ಪತ್ತೆಗಾಗಿ ಆರು ತಂಡ ರಚಿಸಲಾಗಿದೆ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.