ಸೋಮವಾರ, ಆಗಸ್ಟ್ 3, 2020
27 °C

ಸುಲಿಗೆಕೋರರ ಹಾವಳಿ: ಗ್ರಾಮಸ್ಥರ ಆತಂಕ

ವೆಂಕಟೇಶ ಜಿ.ಎಚ್ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುಲಿಗೆಕೋರರ ಹಾವಳಿ: ಗ್ರಾಮಸ್ಥರ ಆತಂಕ

ಹುಬ್ಬಳ್ಳಿ: ಹಾದಿಬದಿಯ ಸುಲಿಗೆಕೋರರ ಹಾವಳಿಯಿಂದ ಬೇಸತ್ತಿರುವ ತಾಲ್ಲೂಕಿನ ಕಟನೂರು, ಮಾವನೂರು, ಗಿರಿಯಾಲ ಗ್ರಾಮಸ್ಥರು ರಕ್ಷಣೆಗೆ ಶಾಸಕರ ಮೊರೆ ಹೋಗಿದ್ದಾರೆ.ನಗರಕ್ಕೆ ಹತ್ತಿರದಲ್ಲಿರುವ ಈ ಗ್ರಾಮಗಳ ಸುತ್ತಲೂ ಇರುವ ಪೇರಲ ಹಾಗೂ ಚಿಕ್ಕು ತೋಟಗಳಿಗೆ ಇಸ್ಪೀಟ್ ಆಡಲು, ಪಾನಗೋಷ್ಠಿ ನಡೆಸಲು ಬರುವವರು ಸಂಜೆಯಾಗುತ್ತಿದ್ದಂತೆಯೇ ಸುಲಿಗೆಗೆ ನಿಲ್ಲುತ್ತಿರುವುದು ಆತಂಕದ ವಾತಾವರಣ ಸೃಷ್ಟಿಸಿದೆ.ಕಳೆದ ಆರು ತಿಂಗಳಿನಿಂದ ಗ್ರಾಮದ 8ಕ್ಕೂ ಹೆಚ್ಚು ಮಂದಿ ಸುಲಿಗೆಕೋರರ ದಾಳಿಗೆ ತುತ್ತಾಗಿದ್ದಾರೆ. ಬಿಜೆಪಿ ಜಿಲ್ಲಾ ಘಟಕದ ಕಾರ್ಯದರ್ಶಿ ಸೇರಿದಂತೆ ಮೂವರು ತೀವ್ರವಾಗಿ ಗಾಯಗೊಂಡಿದ್ದಾರೆ. ಪೊಲೀಸರಿಗೆ ದೂರು ನೀಡಿದರೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಕೊನೆಗೆ ಗ್ರಾಮಸ್ಥರು ರಕ್ಷಣೆ ನೀಡುವಂತೆ ಕುಂದಗೋಳ ಶಾಸಕ ಚಿಕ್ಕನಗೌಡರ ಬಳಿ ಮನವಿ ಮಾಡಿಕೊಂಡಿದ್ದಾರೆ.ಹಳೇಹುಬ್ಬಳ್ಳಿಯಿಂದ ನೇಕಾರ ನಗರ ಮೂಲಕ ಮಾವನೂರು, ಕಟನೂರು ಹಾಗೂ ಗಿರಿಯಾಲ ಗ್ರಾಮಗಳಿಗೆ ತೆರಳಬೇಕಿದೆ. ನಗರಕ್ಕೆ ಹೊಂದಿಕೊಂಡಿರುವ ಹಲವು ತೋಟಗಳನ್ನು ಹುಬ್ಬಳ್ಳಿಯ ಕೆಲವರು ಗುತ್ತಿಗೆ ಹಿಡಿದಿದ್ದಾರೆ. ಅಲ್ಲಿ ಕೆಲವರು ಅನಧಿಕೃತವಾಗಿ ಜೂಜಾಟ ಆಯೋಜಿಸುತ್ತಿದ್ದಾರೆ. ಅಲ್ಲಿ ದಿನವಿಡೀ ಇಸ್ಪೀಟ್ ಆಟದಲ್ಲಿ ನಿರತರಾಗುವವರು  ಸಂಜೆಯಾಗುತ್ತಿದ್ದಂತೆಯೇ ಕುಡಿದು ಅಲ್ಲಿ ಸಂಚರಿಸುವ ಗ್ರಾಮಸ್ಥರ ಮೇಲೆ ಹಲ್ಲೆ ನಡೆಸಿ ಸುಲಿಗೆಗೆ ಇಳಿಯುತ್ತಿದ್ದಾರೆ ಎಂದು ಗ್ರಾಮಸ್ಥರು ದೂರುತ್ತಾರೆ.ಆಗಾಗ ಗ್ರಾಮಕ್ಕೆ ಬರುವವರನ್ನು ನಿಲ್ಲಿಸಿ ಬೆದರಿಸಿ ಹಣ ಕೀಳುತ್ತಿದ್ದವರು, ಇತ್ತೀಚೆಗೆ ಹುಬ್ಬಳ್ಳಿಯಿಂದ ಕಟನೂರಿಗೆ ತೆರಳುತ್ತಿದ್ದ ವೈದ್ಯ ಐ.ಡಿ.ಮನಿಯಾರ, ಬಸವರಾಜ ಈರಪ್ಪ ನರೇಂದ್ರ ಹಾಗೂ ಮಾವನೂರಿನ ನಿವಾಸಿ ಈರಣ್ಣ ಜಡಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ತಲೆಗೆ ಬಿದ್ದ ಪೆಟ್ಟಿನಿಂದ ತೀವ್ರವಾಗಿ ಗಾಯಗೊಂಡಿದ್ದ  ಬಸವರಾಜ ನರೇಂದ್ರ, ತಿಂಗಳ ಕಾಲ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬುಧವಾರ ಬಿಡುಗಡೆ ಹೊಂದಿದ್ದಾರೆ.ಮಾವನೂರಿನ ತಮ್ಮ ಮನೆಯಿಂದ ಸಂಜೆ ಬೈಕ್‌ನಲ್ಲಿ ತೋಟಕ್ಕೆ ಹೊರಟಿದ್ದ ಬಿಜೆಪಿ ಜಿಲ್ಲಾ ಘಟಕದ ಕಾರ್ಯದರ್ಶಿ ಈರಣ್ಣ ಜಡಿ ಅವರು ಸುಲಿಗೆಕೋರರ ದಾಳಿಗೆ ತುತ್ತಾಗಿದ್ದಾರೆ.  ಹಲ್ಲೆಯಿಂದ ಜಡಿ ಅವರ ಬಾಯಿ ಹರಿದು ಹೋಗಿದೆ. `ಪಕ್ಷದ ಪದಾಧಿಕಾರಿಯ ಮೇಲೆ ಹಲ್ಲೆ ನಡೆದ ನಂತರ ಶಾಸಕರೂ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದರು~ ಎನ್ನುವ ಕಟನೂರಿನ ಮಂಜುನಾಥ ಮೋರೆ, ಹಲ್ಲೆ ಪ್ರಕರಣಗಳಿಂದ ಭಯಭೀತರಾದ ಗ್ರಾಮಸ್ಥರು ಆ ಮಾರ್ಗದಲ್ಲಿ ಓಡಾಡುವುದನ್ನು ಬಿಟ್ಟು, ಬುಡ್ರಸಿಂಗಿ ಗ್ರಾಮದ ಮೂಲಕ ಹೆದ್ದಾರಿಗೆ ಬಂದು ಹುಬ್ಬಳ್ಳಿಗೆ ಓಡಾಟ ಆರಂಭಿಸಿದ್ದಾರೆ ಎನ್ನುತ್ತಾರೆ.ಶಾಸಕರ ನೇತೃತ್ವದಲ್ಲಿ ಸಭೆ

ಮೂರು ಗ್ರಾಮಗಳ ಮುಖಂಡರ ಒತ್ತಾಯದ ಮೇರೆಗೆ ಶಾಸಕ ಚಿಕ್ಕನಗೌಡ, ಅಂಚಟಗೇರಿ ಜಿಲ್ಲಾ ಪಂಚಾಯಿತಿ ಸದಸ್ಯೆ ರತ್ನವ್ವ ಕಳ್ಳಿಮನಿ ಹಾಗೂ ಕಟನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭೀಮವ್ವ ಉಚಣಿಕೇರಿ ನೇತೃತ್ವದಲ್ಲಿ ಈಚೆಗೆ ಕಟನೂರಿನಲ್ಲಿ ಸಭೆ ನಡೆಸಿ ಗ್ರಾಮಾಂತರ ಡಿವೈಎಸ್‌ಪಿ ಆರ್.ಎಸ್.ಬನಹಟ್ಟಿ, ವೃತ್ತ ನಿರೀಕ್ಷಕ ವಿಜಯಕುಮಾರ ಬಿಸನಹಳ್ಳಿ ಅವರನ್ನು ಕರೆಸಿ ಸುಲಿಗೆಕೋರರ ಹಾವಳಿ ತಪ್ಪಿಸುವಂತೆ ಸೂಚನೆ ನೀಡಿದ್ದಾರೆ.ನಾಲ್ವರ ವಿರುದ್ಧ ಪ್ರಕರಣ

ನಗರದ ಹೊರವಲಯದಲ್ಲಿ ಮೋಜು-ಮಸ್ತಿಗೆ ತೆರಳುತ್ತಿದ್ದ ಕೆಲವರು ಪುಂಡಾಟ ನಡೆಸಿದ್ದಾರೆ. ಹಲ್ಲೆ ನಡೆಸಿದ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.  ಶಾಸಕ ಚಿಕ್ಕನಗೌಡರ ಸೂಚನೆಯಂತೆ ಈಗ ದಿನದ 24 ಗಂಟೆ ಆ ಪ್ರದೇಶದಲ್ಲಿ ಪೊಲೀಸರ ಕಾವಲು ಹಾಕಲಾಗಿದೆ ಎಂದು ಗ್ರಾಮಾಂತರ ಠಾಣೆ ವೃತ್ತ ನಿರೀಕ್ಷಕ ವಿಜಯಕುಮಾರ ಬಿಸ್ನಳ್ಳಿ `ಪ್ರಜಾವಾಣಿ~ಗೆ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.