ಮಂಗಳವಾರ, ಏಪ್ರಿಲ್ 13, 2021
32 °C

ಸುಳುಗಳಲೆಯ ಕಷ್ಟ ಕೋಟಲೆ

ಶ.ಗ.ನಯನತಾರಾ Updated:

ಅಕ್ಷರ ಗಾತ್ರ : | |

ಶನಿವಾರಸಂತೆ: ಸುಳುಗಳಲೆ ಗ್ರಾಮ 40-50 ವರ್ಷಗಳ ಹಿಂದೆ ಕಾಲೋನಿಯಾಗಿದ್ದು ಇದೀಗ ಗ್ರಾಮವಾಗಿ ಬೆಳೆದಿದೆ. ಇಷ್ಟು ವರ್ಷಗಳಾದರೂ ಈ ಪುಟ್ಟ ಗ್ರಾಮಕ್ಕೆ ಸೌಲಭ್ಯವೆನ್ನುವುದು ಮರೀಚಿಕೆಯಾಗಿಯೇ ಉಳಿದಿದೆ ಎನ್ನುವುದು ಗ್ರಾಮಸ್ಥರ ಆರೋಪ.ಸಮೀಪದ ದುಂಡಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ ಈ ಗ್ರಾಮ ಜನಸಂಖ್ಯೆ 1,600. ಮನೆಗಳು 150. ಶೇ 70 ಜನ ಪರಿಶಿಷ್ಟ ಜಾತಿ-ಪಂಗಡದವರು. ಇವರಲ್ಲೂ ಕೂಲಿಕಾರ್ಮಿಕರೇ ಹೆಚ್ಚು.ಗ್ರಾಮದಲ್ಲಿ ಕುಡಿಯುವ ನೀರಿಗೆ ಬರವಿಲ್ಲ. ಸಚಿವ ಅಪ್ಪಚ್ಚುರಂಜನ್ ಅವರ ಶಾಸಕರ ಅನುದಾನದಿಂದ, ಮಳೆ ಹಾನಿ ನಿಧಿಯಿಂದ ಡಾಂಬರೀಕರಣ ರಸ್ತೆಗಳಾಗಿವೆ.ಗ್ರಾಮದಲ್ಲಿ ರಸ್ತೆಗಳೇನೋ ಇವೆ. ಆದರೆ, ರಸ್ತೆ ಬದಿಯಲ್ಲಿ ಚರಂಡಿಗಳೇ ಇಲ್ಲ. ವ್ಯವಸ್ಥಿತವಾದ ಸಿಮೆಂಟ್ ಚರಂಡಿಗಳಿಲ್ಲದಿರುವುದೇ ಈ ಗ್ರಾಮದ ಮುಖ್ಯ ಸಮಸ್ಯೆ. ವಿದ್ಯುತ್ ಕಂಬಗಳು ಅಲಂಕಾರಕ್ಕಿರುವಂತಿವೆ. ಏಕೆಂದರೆ  ಇದರ ದೀಪಗಳು ಬೆಳಗುವುದೇ ಇಲ್ಲ.ಮಳೆಗಾಲದಲ್ಲಿ ರಸ್ತೆಯಲ್ಲಿ ಹರಿದು ಬರುವ ನೀರು ಮನೆಯೊಳಗೆ ನುಗ್ಗುವುದು ಸಾಮಾನ್ಯವಾಗಿದೆ. ಗ್ರಾಮ ಪಂಚಾಯಿತಿ ಈ ಬಗ್ಗೆ ಸ್ಪಂದಿಸುತ್ತಲೇ ಇಲ್ಲ ಎಂದು ಗ್ರಾಮಸ್ಥರಾದ ಶಾಂತಪ್ಪ, ನಂದಾ ಕೃಷ್ಣಪ್ಪ, ಮಂಜುನಾಥ್, ವಾಸು, ಬೋಜಮ್ಮ ಹಾಗೂ ಸುತ್ತಲಿನ ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.ಜಿಲ್ಲಾ ಪಂಚಾಯಿತಿ ಸದಸ್ಯ ಡಿ.ಬಿ.ಧರ್ಮಪ್ಪ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಸವಿತಾ ಸತೀಶ್, ಜೆ.ಆರ್.ಫಾಲಾಕ್ಷ ಗ್ರಾಮಕ್ಕೆ ಭೇಟಿ ನೀಡಿ ಪರೀಶೀಲಿಸಿ ಹೋದರೂ ಯಾವುದೇ ಅಭಿವೃದ್ಧಿಯಾಗಿಲ್ಲ. ಸದಸ್ಯೆ ಸವಿತಾ ಪರಿಶಿಷ್ಟ ಜಾತಿ ನಿಧಿಯಿಂದ ಅಡ್ಡರಸ್ತೆಗೆ 20 ಮೀಟರ್ ಮಾತ್ರ ಚರಂಡಿ ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದಾರೆ.

ಮೋರಿಯೊಂದು ತಡೆಗೋಡೆ ಇಲ್ಲದ ಕಾರಣ ಕುಸಿಯುತ್ತಿದೆ. ಕೊಳಚೆ ನೀರು ಹರಿದು ಸುಳುಗಳಲೆ ಕೆರೆ ಸೇರುತ್ತದೆ. ತಡೆಗೋಡೆ ಕುಸಿತದಿಂದ ವೇದಾಕುಮಾರ್ ಅವರ ಮನೆಯೂ ಸೇರಿದಂತೆ 3-4 ಕುಟುಂಬಗಳ ಮನೆಯ ಹಿಂಬದಿ ಕುಸಿಯುತ್ತಿದೆ.ಉದ್ಯೋಗ ಖಾತ್ರಿ

ರಸ್ತೆಯಲ್ಲಿ ನೀರಿನ ಪೈಪ್‌ಲೈನ್ ಒಂದು 4-5 ತಿಂಗಳಿನಿಂದ ಒಡೆದದ್ದು ಇನ್ನೂ ಹಾಗೇ ಇದೆ. ನೀರು ರಸ್ತೆಯಲ್ಲಿ ಹರಿದುಹೋಗುತ್ತಿದ್ದರೂ ಸಂಬಂಧಪಟ್ಟವರು ಗಮನಹರಿಸುತ್ತಿಲ್ಲ.ಒಟ್ಟಿನಲ್ಲಿ ರಸ್ತೆಗಳ ಎರಡೂ ಬದಿಯಲ್ಲಿ ಚರಂಡಿ ನಿರ್ಮಿಸಿ, ವಿದ್ಯುತ್ ಕಂಬಗಳಲ್ಲಿ ದೀಪಗಳನ್ನು ಅಳವಡಿಸಿ, ಮೋರಿಗೆ ತಡೆಗೋಡೆ ನಿರ್ಮಿಸಿಕೊಡಬೇಕು ಎಂಬುದು ಗ್ರಾಮಸ್ಥರ ಆಗ್ರಹ.                                                 

      

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.