ಶನಿವಾರ, ಜೂನ್ 19, 2021
22 °C

ಸುಳ್ಯ ಪಟ್ಟಣ ಪಂಚಾಯಿತಿ ಸಭೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುಳ್ಯ: ಸುಳ್ಯ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಬೀರಮಂಗಲದಲ್ಲಿ ಕುಡಿಯುವ ನೀರಿನ ಪೂರೈಕೆ ಸರಿಯಾಗಿಲ್ಲ ಎಂದು ಆರೋಪಿಸಿ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಿ 20 ದಿನ ಕಳೆದರೂ ಇನ್ನೂ ಕೂಡಾ ನೀರು ಪೂರೈಕೆ ಸಮರ್ಪಕವಾಗಿ ಮಾಡದ ಆಡಳಿತ ಕ್ರಮವನ್ನು ಖಂಡಿಸಿ ವಿರೋಧ ಪಕ್ಷದ ನಾಯಕ ಎಂ.ವೆಂಕಪ್ಪ ಗೌಡ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಖಾಲಿ ಕೊಡ ಪ್ರದರ್ಶನ ಮಾಡುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು.ಪಂಚಾಯಿತಿ ಅಧ್ಯಕ್ಷೆ ಸುಮತಿ ನಾರಾಯಣ ಅಧ್ಯಕ್ಷತೆಯಲ್ಲಿ ಸಭೆ ಆರಂಭವಾಗುತ್ತಿದ್ದಂತೆ ಎದ್ದು ನಿಂತ ವೆಂಕಪ್ಪ ಗೌಡ, `ನೀರು ಕೊಡಿ ಇಲ್ಲವೇ ಅಧಿಕಾರ ಬಿಡಿ~ ಎಂಬ ಘೋಷಣೆ ಬರೆದ ಎರಡು ಖಾಲಿ ಕೊಡಗಳನ್ನು ಪ್ರದರ್ಶಿಸಿದರು.ಮುಖ್ಯ ಸ್ಥಾವರದಿಂದ ಪೂರೈಕೆಗೆ ಅಡಚಣೆ ಇರುವುದರಿಂದ ತಾತ್ಕಾಲಿಕವಾಗಿ ಶಾಸ್ತ್ರಿ ವೃತ್ತದ ಬಳಿಯ ಕೊಳವೆ ಬಾವಿಯಿಂದ 2 ದಿನಗಳಿಗೊಮ್ಮೆ ನೀರು ಪೂರೈಕೆ ಮಾಡ ಲಾಗುತ್ತದೆ ಎಂದು ಲಿಖಿತ ಭರವಸೆ ಕೂಡಾ ಅಧ್ಯಕ್ಷರು ನೀಡಿದ್ದರು. ಆದರೆ ನೀರು ಪೂರೈಕೆ ಮಾತ್ರ ಸರಿಯಾಗಿಲ್ಲ ಎಂದರು.ಎಂಜಿನಿಯರ್ ಅರುಣ್‌ಕುಮಾರ್ ನೀರು ಪೂರೈಕೆ ಮಾಡಲಾಗುತ್ತಿದೆ ಎಂದದ್ದು ವೆಂಕಪ್ಪ ಗೌಡರನ್ನು ಕೆರಳಿಸಿತು. ಎಲ್ಲಿ ಕೊಟ್ಟದ್ದು ಎಂದವರು ಪ್ರಶ್ನಿಸಿದರು. ಈ ಸಂದರ್ಭ ಆಡಳಿತ ಹಾಗೂ ವಿರೋಧ ಪಕ್ಷಗಳ ಸದಸ್ಯರ ಮಧ್ಯೆ ಮಾತಿನ ಚಕಮಕಿ ನಡೆಯಿತು.18 ವಾರ್ಡುಗಳ ಪೈಕಿ ಮೂರು ವಾರ್ಡುಗಳಲ್ಲಿ ಸಮಸ್ಯೆ ಇರುವುದಾಗಿ ಉಪಾಧ್ಯಕ್ಷ ಪ್ರಕಾಶ್ ಹೆಗ್ಡೆ ಒಪ್ಪಿಕೊಂಡರು. ಇಂದು ಸಂಜೆಯಿಂದಲೇ ಸರಿಯಾಗಿ ನೀರು ಪೂರೈಕೆ ವ್ಯವಸ್ಥೆ ಮಾಡುವುದಾಗಿ ಅವರು ಭರವಸೆ ನೀಡಿದರು.ತಮ್ಮ ವಾರ್ಡಿಗೂ ಸರಿಯಾಗಿ ನೀರು ಬರುತ್ತಿಲ್ಲ ಎಂದು ದೂರಿದ ವೆಂಕಪ್ಪ ಗೌಡ ಸ್ಥಳೀಯರೊಬ್ಬರು ಹಲವು ಬಾರಿ ಈ ಸಮಸ್ಯೆ ಬಗ್ಗೆ ತಮ್ಮಲ್ಲಿ ದೂರಿದ್ದಾರೆ.ಇಂದೂ ಕೂಡಾ ಇಲ್ಲಿಗೆ ಬಂದಿದ್ದಾರೆ. ಅವರನ್ನು ಬೇಕಿದ್ದರೆ ನೀವೇ ಕೇಳಿ ಎಂದರು.ಸಭೆಗೆ ಜನ ಕರೆದುಕೊಂಡು ಬಂದು ರಾಜಕೀಯ ಮಾಡುತ್ತೀರಿ. ಖಾಲಿ ಕೊಡ ಪ್ರದರ್ಶಿಸಿ `ಶೋ ಮಾಡುತ್ತೀರಿ ಎಂದು ರಮಾನಂದ ರೈ ಹೇಳಿದ್ದು, ಅವರೊಳಗೆ ಮತ್ತೆ ಚಕಮಕಿಗೆ ಕಾರಣವಾಯಿತು.ವಿದ್ಯಾರ್ಥಿಗಳಿಗೆ ನೀಡಿದ ಚೆಕ್ ಬೌನ್ಸ್: ವಿದ್ಯಾರ್ಥಿಗಳಿಗೆ ಸಹಾಯಧನವಾಗಿ ನೀಡಿದ ಚೆಕ್ ಬೌನ್ಸ್ ಆಗಿದೆ. ಪಂಚಾಯಿತಿ ಖಾತೆ ಯಲ್ಲಿ ಅಷ್ಟೂ ಹಣವಿಲ್ಲವೇ ಎಂದು ಎಷ್ಟು ಚೆಕ್‌ಗಳು ಬೌನ್ಸ್ ಆಗಿವೆ ಎಂದು ವೆಂಕಪ್ಪ ಗೌಡ ಪ್ರಶ್ನಿಸಿದರು. ಚೆಕ್ ಬೌನ್ಸ್ ಆಗಿಲ್ಲ ಎಂದು ಮುಖ್ಯಾಧಿಕಾರಿ ರೋಹಿತಾಕ್ಷ ಹೇಳಿದರೆ ಚೆಕ್ ಬ್ಯಾಂಕಿಗೆ ಬಂದ ದಿನ ಹಣವಿರಲಿಲ್ಲ ಅಷ್ಟೆ ಎಂದು ಉಪಾಧ್ಯಕ್ಷರು ಒಪ್ಪಿಕೊಂಡರು.  ಸ್ಥಾಯಿ ಸಮಿತಿ ಸಭೆಯಲ್ಲಿ ಬಿಲ್ ನೀಡುವಾಗ ಹಂತ ಹಂತವಾಗಿ ನೀಡುವುದು ಎಂದು ಬರೆಯಲಾಗಿದೆ. ವರ್ಗ ಒಂದರಲ್ಲಿ ಹಣವಿಲ್ಲವೇ ಎಂದು ದಿನೇಶ್ ಅಂಬೆಕಲ್ಲು ಪ್ರಶ್ನಿಸಿದರು.ಶುಲ್ಕ ಹೆಚ್ಚಳ: ಅಂಗಡಿ ಮಳಿಗೆಗಳ ಪರವಾನಗಿ ಶುಲ್ಕವನ್ನು ನಾಲ್ಕು ಪಟ್ಟು ಹೆಚ್ಚಿಸಿದ್ದೀರಿ. ಇದಕ್ಕೆ ಕಾಂಗ್ರೆಸ್‌ನ ಸಹಮತ ವಿಲ್ಲ ಎಂದು ದಿನೇಶ್ ಅಂಬೆಕಲ್ಲು ಹೇಳಿದರು. ವರ್ತಕ ಸಂಘದ ಅಧ್ಯಕ್ಷರೊಂದಿಗೆ ಮಾತುಕತೆ ನಡೆಸಿಯೇ ಅವರ ಒಪ್ಪಿಗೆ ಪಡೆದೇ ಹೆಚ್ಚಳ ಮಾಡಲಾಗಿದೆ. ಅದೂ ಕರಡು ಪಟ್ಟಿ ಅಷ್ಟೆ. ಅವರೇ ಒಪ್ಪಿರುವಾಗ ವೃಥಾ ಯಾಕೆ ಚರ್ಚೆ ಮಾಡುವುದು ಎಂದು ಉಪಾಧ್ಯಕ್ಷರು ಹೇಳಿದರು.  ಸವಿತಾ ಸಮಾಜದವರು ಮಾತ್ರ ಆಕ್ಷೇಪಣೆ ಸಲ್ಲಿಸಿದ್ದಾರೆ. 75 ರೂಪಾಯಿ ಇದ್ದ ಶುಲ್ಕವನ್ನು ಏಕಾ ಏಕಿ 300 ರೂಪಾಯಿಗೆ ಹೆಚ್ಚಿಸಿದ್ದು ಸರಿಯಲ್ಲ ಎಂದು ಅಂಬೆಕಲ್ಲು ಹೇಳಿದರು. ಈ ಕುರಿತು ಚರ್ಚೆ ನಡೆದು ಸವಿತಾ ಸಮಾಜದವರಿಗೆ ಎರಡು ಪಟ್ಟು ಹೆಚ್ಚಿಸುವುದ ಎಂದು ನಿರ್ಣಯಿಸಲಾಯಿತು.ಮತ್ತೆ ಕಸದ ಸಮಸ್ಯೆ: ತಿಂಗಳಿಗೆ 95 ಸಾವಿರ ರೂಪಾಯಿಗೆ ಮಂಗಳೂರಿಗೆ ಅವರದೇ ಲಾರಿಯಲ್ಲಿ ತಿಂಗಳಿಗೆ 18 ಲೋಡು ಕಸ ಹೋಗುತ್ತಿತ್ತು. ಈಗ 1.10 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಕೇವಲ 5 ಕಿ.ಮೀ. ದೂರದ ಕಲ್ಚರ್ಪೆಯ ನಮ್ಮದೇ ಡಂಪಿಂಗ್ ಯಾರ್ಡಿಗೆ, ನಮ್ಮದೇ ಟ್ರಾಕ್ಟರ್‌ನಲ್ಲಿ ಹೋಗುತ್ತದೆ. ಹಾಗಿದ್ದೂ ವಾರಕ್ಕೆ ಒಮ್ಮೆಯೂ ಸರಿಯಾಗಿ ಶುಚಿ ಮಾಡುತ್ತಿಲ್ಲ. ಕಂಟ್ರಾಕ್ಟುದಾರರ ಹೆಸರಲ್ಲಿ ಬಿಲ್ ಮಾತ್ರ ಮಾಡಲಾಗುತ್ತದೆಯೇ ಎಂದು ವೆಂಕಪ್ಪ ಗೌಡ ಸಂದೇಹ ವ್ಯಕ್ತಪಡಿಸಿದರು.ಜಯನಗರದಲ್ಲಿ ಕಾಳನಿ ನಿವೇಶನದಲ್ಲಿ ರೂ 7 ಲಕ್ಷ ವೆಚ್ಚ ಮಾಡಿ ಸಮತಟ್ಟು ಮಾಡಲಾಗಿದೆ. ಆದರೆ ಅಲ್ಲ ಮನೆ ನಿರ್ಮಿಸಲು ಸಾಧ್ಯವೇ ಇಲ್ಲ. ಎಲ್ಲರೂ ಒಮ್ಮೆ ಹೋಗಿ ನೋಡಬೇಕು, ಆ ನಂತರ ಬಿಲ್ ನೀಡಬೇಕು ಎಂದು ಕುಸುಮಾಧರ ಹೇಳಿದರು.ಮೀನು ಮಾರುಕಟ್ಟೆಯನ್ನು ವಾರ್ಷಿಕ 14 ಲಕ್ಷಕ್ಕೆ, ಮಾಂಸ ಮಾರುಕಟ್ಟೆಯನ್ನು 45 ಸಾವಿರಕ್ಕೆ, ಬಸ್ ನಿಲ್ದಾಣದ ಶುಲ್ಕ ವಸೂಲಿಯನ್ನು 1 ಲಕ್ಷಕ್ಕೆ ಟೆಂಡರ್ ಪಡೆದವರಿಗೆ ನೀಡುವುದೆಂದು ನಿರ್ಣಯಿ ಸಲಾಯಿತು. ಸ್ವರ್ಣ ಜಯಂತಿ ಸಹಕಾರಿ ಮಹಿಳಾ ಸಂಘ ಮುಚ್ಚುವ ಹಂತದಲ್ಲಿದೆ. ಇದಕ್ಕೆ ಯಾರು ಹೊಣೆ ಎಂದು ಸರೋಜಿನಿ ಪ್ರಶ್ನಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.