ಮಂಗಳವಾರ, ಜನವರಿ 28, 2020
19 °C
ಭಾನುವಳ್ಳಿ: ಅಪಘಾತದಲ್ಲಿ ಮಡಿದವರ ಸಾಮೂಹಿಕ ಅಂತ್ಯಕ್ರಿಯೆ

ಸೂತಕದ ಛಾಯೆ, ಮಡುಗಟ್ಟಿದ ದುಃಖ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೂತಕದ ಛಾಯೆ, ಮಡುಗಟ್ಟಿದ ದುಃಖ

ಮಲೇಬೆನ್ನೂರು: ಜನಜಂಗುಳಿ, ಹೂಹಾರ, ತಮಟೆವಾದನ ಸದ್ದು, ಮುಖ್ಯ ರಸ್ತೆ, ರಾಜಬೀದಿ, ತೇರುಬೀದಿ, ಬಸವೇಶ್ವರ ರಸ್ತೆಯ ಮನೆಗಳ ಮುಂದೆ ಹಾಕಿದ ಶಾಮಿಯಾನ, ಶವದ ಮುಂದೆ ಅಂತಿಮ ನಮನ ಸಲ್ಲಿಸುತ್ತಿರುವ ದುಃಖತಪ್ತ ಸಂಬಂಧಿಕರು...ಇಂಥ ಮನಕಲಕುವ ಸನ್ನಿವೇಶಗಳು ಮಂಗಳವಾರ ಕಂಡುಬಂದಿದ್ದು, ಸೂತಕದ ಛಾಯೆ ಆವರಿಸಿದ್ದ ಸಮೀಪದ ಭಾನುವಳ್ಳಿ ಗ್ರಾಮದಲ್ಲಿ.

ಹೊನ್ನಾಳಿ ತಾಲ್ಲೂಕಿನ ತೀರ್ಥರಾಮೇಶ್ವರದಲ್ಲಿ ಕುಕ್ಕುವಾಡದ ವಿರೂಪಾಕ್ಷಪ್ಪನವರ ಮಗಳು ಗಂಗಮ್ಮನ ವಿವಾಹ ಒಡೆಯರ ಹತ್ತೂರಿನ ತೀರ್ಥಪ್ಪನೊಂದಿಗೆ ನೆರವೇರಿಸಿ ಸವಿದ ಸಿಹಿಯೂಟ ಕೊನೆ ಊಟವಾಯಿತು.ಸ್ವಗ್ರಾಮಕ್ಕೆ ಮರಳುತ್ತಿದ್ದ ಕ್ಯಾಂಟರ್‌ ಮರಕ್ಕೆ ಡಿಕ್ಕಿಹೊಡೆದು ಅಪಘಾತಕ್ಕೀಡಾದ ದುರ್ಘಟನೆಯಲ್ಲಿ 11 ಜೀವ ಬಲಿತೆಗೆದುಕೊಂಡ  ನಂತರ ಇಡೀ ಗ್ರಾಮ ದುಃಖದಲ್ಲಿ ಮುಳುಗಿತ್ತು. ಭಾನುವಳ್ಳಿ ಗ್ರಾಮಕ್ಕೆ ಸೇರಿದವರೇ 9 ಜನರು ಅಪಘಾತದಲ್ಲಿ ಮೃತರಾಗಿದ್ದಾರೆ. ಒಬ್ಬರು ಬೇರೆ ಊರಿಗೆ ಸೇರಿದವರಾಗಿದ್ದಾರೆ.ಶವಗಳ ಮುಂದೆ ದೀಪದ ಹಣತೆ, ಧೂಪ, ಅಗರಬತ್ತಿ, ಹೂವಿನಹಾರದ ಸುವಾಸನೆ ಅಂತಿಮಯಾತ್ರೆಗೆ ಸಿದ್ಧತೆ ನಡೆಸುವವರು. ಧಾರ್ಮಿಕ ಕ್ರಿಯೆಗಳಿಗೆ ಸಿದ್ಧತೆಯ ನಿರತರು, ಕಣ್ಣಂಚಿನಲ್ಲಿ ನೀರು, ಬಾಡಿದ ಮೊಗ, ಅಂತಿಮ ದರ್ಶನ ಪಡೆಯುವ ಜನರ ಗುಂಪುಗಳು ಗೋಚರಿಸಿದವು. ಕುಟುಂಬದ ಯಜಮಾನನ್ನು ಕಳೆದುಕೊಂಡ ಮನೆಯವರ ರೋದನ ಮುಗಿಲು ಮುಟ್ಟಿತ್ತು. ವಿವಿಧೆಡೆಯಿಂದ ಆಗಮಿಸಿ ಮೃತಕುಟುಂಬಕ್ಕೆ ಸಾಂತ್ವನ ಹೇಳುವವರು, ರಸ್ತೆಯ ತುಂಬೆಲ್ಲ ಜನಜಂಗುಳಿ. ವಾಹನಗಳ ಭರಾಟೆ ಗ್ರಾಮದಲ್ಲಿ ಕಂಡು ಬಂದಿತು.ಇಂತಹ ದುರ್ಘಟನೆ ಕನಸಿನಲ್ಲಿಯೂ ನಿರೀಕ್ಷಿಸಿರಲಿಲ್ಲ. ಮದುವೆಗೆ ತೆರಳಿದವರು ಮಸಣ ಸೇರಿದರು ಎಂದು ನೆನೆಪಿಸಿಕೊಂಡ ಸಹಪಾಠಿಗಳು, ಸ್ನೇಹಿತರು, ಬಂಧು– ಬಾಂಧವರನ್ನು ಕಳೆದುಕೊಂಡ  ಗ್ರಾಮಸ್ಥರು ಭಾರವಾದ ಮನಸ್ಸಿನಿಂದ ಕಂಬನಿ ಮಿಡಿದರು.ಸಾಮೂಹಿಕ ಅಂತ್ಯಕ್ರಿಯೆ: 9 ಮೃತರ ಸಾಮೂಹಿಕ ಶವಸಂಸ್ಕಾರಕ್ಕೆ ಗ್ರಾಮಸ್ಥರು ನಿರ್ಧರಿಸಿ ಸೂಕ್ತ ವ್ಯವಸ್ಥೆ ಮಾಡಿದ್ದರು. ತಮಟೆ ವಾದನ, ಪಟಾಕಿ ಸಿಡಿತದ ನಡುವೆ ಅಲಂಕರಿಸಿದ ಟ್ರ್ಯಾಕ್ಟರ್‌ಗಳಲ್ಲಿ 9 ಶವಗಳನ್ನು ಗ್ರಾಮದ ಕರಿಗಲ್ಲನ್ನು ಸುತ್ತಿಕೊಂಡು ಸಾರ್ವಜನಿಕ ಸ್ಮಶಾನಕ್ಕೆ ತರಲಾಯಿತು.ದಾರಿಯುದ್ದಕ್ಕೂ ಜನಜಾತ್ರೆ, ಸಾವಿರಾರು ಜನರು ಶವಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಅವರವರ ಧರ್ಮಕ್ಕೆ ಅನುಗುಣವಾಗಿ ಸಾವಿರಾರು ಜನರ ಸಮ್ಮುಖದಲ್ಲಿ ಅಂತ್ಯಕ್ರಿಯೆ ನೆರವೇರಿತು.ದುರ್ಘಟನೆಗೆ ಕಾರಣ: ಕ್ಯಾಂಟರ್‌ ಚಾಲಕ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿದ್ದು ಅಪಘಾತಕ್ಕೆ ಕಾರಣ. ವಾಹನ ಮರಕ್ಕೆ ಡಿಕ್ಕಿಹೊಡೆದಾಗ ಒಳಗಿದ್ದವರ ತಲೆಗೆ ಪೆಟ್ಟುಬಿದ್ದು ಸಾವಿನ ಸಂಖ್ಯೆ ಹೆಚ್ಚಾಗಿದೆ ಎಂದು ಜನರು ಶಂಕಿಸಿದರು.ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಸರ್ಕಾರಿ ಸಿಬ್ಬಂದಿ, ಪೊಲೀಸರು ಹಾಗೂ 108 ವಾಹನ, ವೈದ್ಯಕೀಯ ತಂಡ ಘಟನಾ ಸ್ಥಳಕ್ಕೆ ಆಗಮಿಸಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದು ವಿಶೇಷ.ರಾತ್ರಿವೇಳೆ ಮೃತಪಟ್ಟ 10 ಶವಗಳ ಮರಣೋತ್ತರ ಪರೀಕ್ಷೆ ನಂತರ ಕಾಲಹರಣ ಮಾಡದೆ ಆಯಾ ಕುಟುಂಬಕ್ಕೆ ಹಸ್ತಾಂತರ ಮಾಡಿದ್ದಕ್ಕೆ ಪ್ರಶಂಸಿಸಿದರು.ಕಹಿನೆನೆಪು: 19 ವರ್ಷದ ಹಿಂದೆ ಬ್ಯಾಲದಹಳ್ಳಿ ಸೇತುವೆ ಮೇಲಿಂದ ಬಸ್‌ ಉರುಳಿ ಬಿದ್ದು 13 ಜನರು ಮೃತಪಟ್ಟ ಘಟನೆ ವರದಿಯಾಗಿತ್ತು.

ಪ್ರತಿಕ್ರಿಯಿಸಿ (+)