ಸೋಮವಾರ, ಜೂನ್ 21, 2021
29 °C
ನಾರೀಕೇಳಾ

ಸೂರಕ್ಕೆಯೂ ಗಾಂಧಿಯೂ

ಎಂ.ಎಸ್. ಆಶಾದೇವಿ Updated:

ಅಕ್ಷರ ಗಾತ್ರ : | |

ಭಿನ್ನ ವರ್ಗಕ್ಕೆ ಸೇರಿದ ಹೆಣ್ಣುಮಕ್ಕಳ ಪರಿಸ್ಥಿತಿ ಸವಾಲುಗಳಲ್ಲಿ ವ್ಯತ್ಯಾಸಗಳಿರುತ್ತವೆಯೇ ಎನ್ನುವುದು ಸಂಕೀರ್ಣವಾದ ಪ್ರಶ್ನೆ. ಅಥವಾ ಈ ಪ್ರಶ್ನೆಯನ್ನು ಹೀಗೂ ಕೇಳಿಕೊಳ್ಳಬಹುದು. ಬದುಕನ್ನು, ಹೆಣ್ಣೆನ್ನುವ ಕಾರಣಕ್ಕೆ ಒಡ್ಡಲಾಗುವ ಸವಾಲುಗಳನ್ನು ಭಿನ್ನ ಹಿನ್ನೆಲೆಯ ಹೆಣ್ಣುಮಕ್ಕಳು ಎದುರಾಗುವ ಬಗೆಯಲ್ಲಿ ವ್ಯತ್ಯಾಸಗಳಿವೆಯೇ? ಎಲೆ ಹೆಣ್ಣೇ , ಇದು ಲಕ್ಷ್ಮಣರೇಖೆ, ಇದನ್ನು ದಾಟಲಾಗದು ನೀನು ಎನ್ನುವ ಗೋಚರ ಅಗೋಚರ ಯಮಪಾಶಗಳನ್ನು ಮೀರುವ, ದಾಟುವ, ಮೆಟ್ಟಿನಿಲ್ಲುವ ಹೆಣ್ಣಿನ ದಾರಿಗಳಿಗೆ ನಿರ್ದಿಷ್ಟ ಮಾದರಿಗಳಿವೆ ನಿಜ, ಅವು ವರ್ಗರೂಪಿತ ಎನ್ನುವುದೂ ನಿಜ. ಆದರೆ ಇದಕ್ಕಿಂತ ಸತ್ಯವಾದ ಮಾತೆಂದರೆ ಹೆಣ್ಣಿನ ಸಮಸ್ತ ಪ್ರತಿರೋಧಗಳೂ ಚಲಿಸುವುದು ಬದುಕನ್ನು ಇನ್ನೂ ಹೆಚ್ಚು ಆಪ್ತತೆಯಲ್ಲಿ ಗಾಢವಾಗಿ ಅಪ್ಪಿಕೊಳ್ಳುವುದರ ಕಡೆಗೇ ಹೊರತು ‘ತನ್ನಿಂದ ತನ್ನ ಸಲುವಾಗಿ’ ಎನ್ನುವ ವ್ಯಕ್ತಿನಿಷ್ಟತೆಯಲ್ಲಿ ಅಲ್ಲ. ಎಂದರೆ ಅವಳ ಹೋರಾಟಗಳ ಮೂಲಧಾತುವೇ ಸಕಲಜೀವಸಂಕುಲವನ್ನೂ ಒಳಗೊಳ್ಳುವ, ಆ ಮೂಲಕ ತನ್ನ ಪೊರೆಯುವ ವಲಯವನ್ನು ವಿಸ್ತರಿಸಿಕೊಳ್ಳುವುದರ ಕಡೆಗೆ.ನಿಜವೆಂದರೆ ಹೆಣ್ಣಿನ ಎಲ್ಲ ಮತ್ತು ಯಾವ ಹೋರಾಟಗಳೂ ಅವಳ ಮೂಲಕೇಂದ್ರವಾದ ‘ಕುಟುಂಬವಿಶ್ವ’ದ ಅನಂತ ವಿಸ್ತಾರವೇ ಆಗಿರುತ್ತವೆ. ಅವಳ ಈ ಅಸಾಧಾರಣ ‘ಒಳಗೊಳ್ಳುವ’ ಮತ್ತು ತಾಳಿಕೊಳ್ಳುವ ‘ಧಾರಣ’ಶಕ್ತಿಗೆ ಅಧಿಕೃತತೆ ಬೇಕೆನ್ನುವುದೇ ಹೆಣ್ಣಿನ ಸಂಕಥನದ ಮೊದಲ ಮತ್ತು ಅಂತಿಮ ಪ್ರಶ್ನೆ. ಇರಲಿ, ವರ್ಗಗಳ ಭಿನ್ನತೆಯ ಬಗೆಗಿನ ಚರ್ಚೆಗೆ ವಾಪಸಾಗುವುದಾದರೆ, ಸರಳವಾಗಿ, ಕೆಲವು ಮಾತುಗಳಲ್ಲಿ ಹೇಳಿ ಮುಗಿಸಿಬಿಡಲಾಗದ ಸಂಗತಿ ಇದು.ಆದರೆ ಕಳೆದ ಶತಮಾನದಲ್ಲಿ ಆರಂಭವಾದ ಮಹಿಳಾ ಚಳವಳಿಯು ಮಧ್ಯಮವರ್ಗದ ಹೆಣ್ಣುಮಕ್ಕಳ ಚಳವಳಿ ಎನ್ನುವ ಜನಾಭಿಪ್ರಾಯ ಮೂಡಲೊಂದು ಕಾರಣವಿದೆ. ಮಧ್ಯಮವರ್ಗದ ಉಗಮವೇ ಮಹಿಳಾ ಚಳವಳಿಯ ಕೇಂದ್ರವಾದದ್ದು ಆಕಸ್ಮಿಕವಲ್ಲ. ಅದೊಂದು ಐತಿಹಾಸಿಕ ಬೆಳವಣಿಗೆ. ಯಾವ ಮಧ್ಯಮವರ್ಗ ಮಹಿಳಾಸಂಕಥನದ ಆರಂಭಬಿಂದುವಾಯಿತೋ ಅದೇ ಹೆಣ್ಣಿನ ಮಟ್ಟಿಗೆ ಅತಿ ಹೆಚ್ಚಿನ ಸವಾಲುಗಳನ್ನು ಹೊಂದಿರುವ ವರ್ಗವಾಗಿರುವುದು ಒಂದು ರೀತಿಯಲ್ಲಿ ದುರಂತ ವ್ಯಂಗ್ಯವಾಗಿರುವಂತೆ ಕಾಣುತ್ತದೆ. ನಾಗರಿಕತೆಯ ಬದಲಾದ ಸನ್ನಿವೇಶಗಳು ಮಧ್ಯಮವರ್ಗದ ಹೆಣ್ಣು ಮಕ್ಕಳಿಗೆ ಅನೇಕ ಬಾರಿ ಚಕ್ರವ್ಯೂಹದಂತೆ ಭಾಸವಾಗುವುದೂ ಸತ್ಯವೇ.ಇದಕ್ಕೆ ಹೋಲಿಸಿದರೆ ಮಧ್ಯಮವರ್ಗದ ಕತ್ತಿಯಂಚಿನ ದಾರಿಯಿಂದ ಹೊರಗಿರುವವರಿಗೆ ಬದುಕಿನೊಂದಿಗೆ ಮಾತನಾಡುವ ಅವಕಾಶಗಳು ಹೆಚ್ಚಾಗಿರುವಂತೆ ಕಾಣಿಸುತ್ತದೆ. ಸ್ವಬಂಧನಗಳು ಮಧ್ಯಮವರ್ಗದ ಮಹಿಳೆಯರನ್ನು ಕಾಡುವಷ್ಟು ಕೆಳವರ್ಗದವರನ್ನು ಕಾಡುವುದಿಲ್ಲ. ಪಿತೃಸಂಸ್ಕೃತಿಯ ಮೌಲ್ಯವ್ಯವಸ್ಥೆಯಾದರೂ ತನ್ನ ಆತ್ಯಂತಿಕ ಯಶಸ್ಸನ್ನು ಕಾಣುವುದು ಮಧ್ಯಮವರ್ಗದವರಲ್ಲಿಯೇ.

ನಾಗವೇಣಿಯವರ ‘ಗಾಂಧಿ ಬಂದ’ ಕಾದಂಬರಿಯ ಸೂರಕ್ಕೆಯ ಪಾತ್ರ ನೋಡುತ್ತಿದ್ದರೆ, ಎಲ್ಲ ಕೆಲಸ ಬಿಟ್ಟು ಓಡಿ ಹೋಗಿ ಒಮ್ಮೆ ಆಕೆಯನ್ನು ಭೇಟಿ ಮಾಡಬೇಕು ಎನ್ನುವ ಅದಮ್ಯ ಆಸೆ ಹುಟ್ಟುತ್ತದೆ. ‘ಮಾರಾಯ್ತಿ, ಇಂಥ ಎತ್ತರ, ಮನಸ್ಸಿನ ಪರಿಪಾಕ ಹ್ಯಾಗೆ ಸಾಧ್ಯವಾಯಿತೆ ನಿನಗೆ’ ಅಂತ ಕೇಳಬೇಕು ಅನ್ನುವ ಪ್ರಶ್ನೆಯೂ ನನ್ನಲ್ಲಿ ಸಿದ್ಧವಾಗಿದೆ! ನಮ್ಮ ಕಾಲದ ಮಹತ್ವದ ಕೃತಿಗಳಲ್ಲೊಂದು ‘ಗಾಂಧಿ ಬಂದ’ ಕಾದಂಬರಿಯ ಶೀರ್ಷಿಕೆಯೇ ಓದುಗರಲ್ಲಿ ಅನುರಣನವನ್ನು ಸೃಷ್ಟಿಸುತ್ತದೆ. ಬಂದ ಎನ್ನುವ ಕ್ರಿಯಾಪದ ಏನೆಲ್ಲ ಅರ್ಥಗಳನ್ನು, ಸಾಧ್ಯತೆಗಳನ್ನು ನಮ್ಮಲ್ಲಿ ತರುತ್ತದೆ!ಗಾಂಧಿ ಬಂದ ಮೇಲೆ ಭಾರತ ಹಿಂದಿನ ಹಾಗೆ ಉಳಿಯಲಿಲ್ಲ, ಬ್ರಿಟಿಷರು ಹಿಂದಿನ ಹಾಗೆ ಉಳಿಯಲಿಲ್ಲ, ಭಾರತದ ಸ್ವಾತಂತ್ರ್ಯ ಹೋರಾಟವೂ ಅವನು ಬಂದ ಮೇಲೆ ಇನ್ನೊಂದು ಸ್ವರೂಪವನ್ನೇ ಪಡೆಯತು, ಒಟ್ಟಿನಲ್ಲಿ ಗಾಂಧಿ ಬಂದ ಮೇಲೆ ಭಾರತದ ಮಟ್ಟಿಗೆ ಸಕಲವೂ ಏನೇನೋ ಆಯಿತು. ‘ಬಂದ’ಎನ್ನುವುದು ಕೊನೆಯೇ ಇಲ್ಲದ ವರ್ತಮಾನ ಕಾಲವಾಗಿ, ಕಾಲದಿಂದ ಕಾಲಕ್ಕೂ ಗಾಂಧಿ ಸಂಗತವಾಗುತ್ತಲೇ ಹೋಗುವ ಪರಮ ಸತ್ಯವೊಂದನ್ನು ಈ ಶೀರ್ಷಿಕೆ ಧ್ವನಿಸುತ್ತಿರುವಂತೆ ಕಾಣಿಸುತ್ತದೆ.ಗಾಂಧಿ ಎನ್ನುವವನು ಯಾರೆಂಬುದೇ ಗೊತ್ತಿಲ್ಲದ ದಕ್ಷಿಣ ಕನ್ನಡದ ಶೂದ್ರರು, ಮಹಿಳೆಯರು, ಗಾಂಧಿಯನ್ನು ‘ಮಹಾತ್ಮ’ನಾಗಿ, ಹೊಸಯುಗದ ಹರಿಕಾರನಾಗಿ ಸ್ವಾಗತಿಸುತ್ತಿರುವ ಬ್ರಾಹ್ಮಣ ಮತ್ತು ಶೂದ್ರ ಗಾಂಧಿವಾದಿಗಳು ಮತ್ತು ಗಾಂಧಿಯನ್ನು ಅಪಾಯವಾಗಿ ಗ್ರಹಿಸಿದ ಬ್ರಾಹ್ಮಣರಿದ್ದಾರೆ. ಇವರೆಲ್ಲರನ್ನೂ ಮತ್ತು ಸಮಸ್ತ ಭಾರತೀಯ ಜನಮಾನಸವನ್ನೂ ಬೇಕಾಗಿ ಬೇಡವಾಗಿ, ಮಿತ್ರನಾಗಿ, ಎದುರಾಳಿಯಾಗಿ, ಸನಾತನಿಯಾಗಿ, ಆಧುನಿಕನಾಗಿ, ಸಂತನಾಗಿ, ಲೌಕಿಕನಾಗಿ, ಅಲೌಕಿಕನಾಗಿ ಆವರಿಸಿದ ಗಾಂಧಿಯನ್ನು ವಿಲಕ್ಷಣವೂ ಆರ್ದ್ರವೂ ಆದ ನೆಲೆಗಳಲ್ಲಿ ನಾಗವೇಣಿ ಕಟ್ಟಿಕೊಡುತ್ತಾರೆ.ಗಾಂಧಿ ಎನ್ನುವವನು ಯಾರು ಎನ್ನುವುದೇ ಗೊತ್ತಿಲ್ಲದ ದಕ್ಷಿಣ ಕನ್ನಡದ ಸೂರಕ್ಕೆ ಎಂಬ ಅವಿದ್ಯಾವಂತ ಶೂದ್ರ ಹೆಣ್ಣುಮಗಳು ತನ್ನ ಬದುಕಿನುದ್ದಕ್ಕೂ ತನಗೆ ಅರಿವಿಲ್ಲದೆಯೇ ಗಾಂಧಿಯ ವಿಚಾರಗಳು, ಕನಸುಗಳು ಹಾಗೂ ಪ್ರಯತ್ನಗಳ ಜೊತೆ ನಡೆಸುವ ಪ್ರಯೋಗಶೀಲವೂ ಚೈತನ್ಯಶೀಲವೂ ಆದ ಪಾತ್ರದ ಹೆಸರೇ ಸೂರಕ್ಕೆ. ದಲಿತರಲ್ಲಿ, ಮಹಿಳೆಯರಲ್ಲಿ ಬರಬೇಕು ಎಂದು ಗಾಂಧಿ ಆಶಿಸಿದ ‘ಅರಿವಿನ ವಿಸ್ತಾರ’ದ ಪಾತ್ರವಾಗಿ ಸೂರಕ್ಕೆಯಿದ್ದಾಳೆ.ಈ ಅರಿವಿನ ವಿಸ್ತಾರಕ್ಕೆ ನೂರು ಮುಖಗಳಿವೆ. ಆತ್ಮಗೌರವ, ಸ್ವಾವಲಂಬನೆ, ಜಾತಿ ಧರ್ಮಗಳ ಚೌಕಟ್ಟುಗಳ ಹಂಗಿಲ್ಲದ ಅಪ್ಪಟ ಮನುಷ್ಯತ್ವದ ಬದುಕು ಇವುಗಳನ್ನು ತನ್ನ ಬದುಕಿನ ಕ್ರಮವಾಗಿಸಿಕೊಳ್ಳಲು ಹೋರಾಡುತ್ತಾಳೆ ಸೂರಕ್ಕೆ. ಈ ಇವೇ ತನ್ನ ಬದುಕಿನ ದಾರಿಯೂ ಗುರಿಯೂ ಎಂಬಂತೆ ಬದುಕುತ್ತಾ ಹೋಗುವ ಸೂರಕ್ಕೆಯ ಈ ಹೋರಾಟಕ್ಕೆ ಮೂರು ಮುಖಗಳಿವೆ. ಒಂದು, ಹೆಣ್ಣಿನ ‘ಆಯ್ಕೆಯ ಬದುಕಿ’ನ ಮಾದರಿಯೊಂದಾಗಿ, ಇನ್ನೊಂದು, ಗಾಂಧಿಯ ಆಶೋತ್ತರಗಳ ಈಡೇರಿಕೆಯಾಗಿ, ಮತ್ತೊಂದು, ಆಧುನಿಕ ಭಾರತದ ಮುಖ್ಯ ಪಲ್ಲಟದ ಒಂದು ಕ್ರಿಯಾಶೀಲ ಪ್ರತಿನಿಧಿ ಯೂ ಆಗುತ್ತಾ ಹೋಗುವುದು. ಈ ಮೂರನ್ನೂ ಬೇರೆ ಬೇರೆ ಮಾಡಿ ನೋಡಲಾಗುವುದಿಲ್ಲ ಎನ್ನುವಷ್ಟು ಸಮಗ್ರತೆ ಈ ಪಾತ್ರಕ್ಕಿದೆ.ಹಾಗೆ ನೋಡಿದರೆ ಸೂರಕ್ಕೆಯ ಹೋರಾಟದ ಬದುಕು ಗಾಂಧಿಯ ಸುಳಿವೇ ಇಲ್ಲದ ಸನ್ನಿವೇಶದಲ್ಲಿ ಆರಂಭವಾದದ್ದು. ಅಳಿಯಕಟ್ಟಿನ ಸಂತಾನದಲ್ಲಿ ತನಗೆ ಮತ್ತು ತನ್ನ ಗಂಡನಿಗೆ ಆಗುತ್ತಿದ್ದ ನಿತ್ಯ ಅವಮಾನದ, ಹಂಗಿನ ಸಿರಿವಂತಿಕೆಯ ಬದುಕನ್ನು ಧಿಕ್ಕರಿಸಿ ಗಂಡ ಮುದ್ದಣ್ಣಶೆಟ್ಟರೊಂದಿಗೆ ಹೊರಬಂದು ಬಡತನದ ಆದರೆ ಆತ್ಮಘನತೆಯ, ಸ್ವಾವಲಂಬನೆಯ ಬದುಕನ್ನು ಪ್ರಜ್ಞಾಪೂರ್ವಕವಾಗಿ ಆರಿಸಿಕೊಂಡವಳು ಸೂರಕ್ಕೆ. ಸಾಮಾನ್ಯವಾಗಿ ರಾಜಿಯಂತೆ ಕಾಣಿಸುವ ಆದರೆ ನಿಜದಲ್ಲಿ ಶೋಷಣೆಯೇ ಆಗಿರುವ ಬದುಕಿನ ವಿನ್ಯಾಸದಲ್ಲಿ ತನ್ನ ಬಂಡಾಯದ ಮೂಲಕವೇ ‘ಆಯ್ಕೆಯ ಬದುಕಿನ’ ಕಡೆಗೆ ಚಲಿಸುತ್ತಾಳೆ ಸೂರಕ್ಕೆ.ಬದುಕಿನ ಸವಲತ್ತುಗಳಿಗಿಂತ ಸ್ವಾಭಿಮಾನವೇ ಮುಖ್ಯ ಎನ್ನುವುದನ್ನು ಸೂರಕ್ಕೆ ತನ್ನ ಅರಿವಿಗೆ ತಂದುಕೊಳ್ಳುವ ಆ ಕ್ಷಣ, ಗಂಡನ ತೀರ್ಮಾನದೊಂದಿಗೆ ತನ್ನನ್ನು ಬೆಸೆದುಕೊಳ್ಳುವ ನಿಲುವು ಅವಳನ್ನು ಹೊಸ ಹೆಣ್ಣಾಗಿಸುತ್ತದೆ. ಬದುಕಿನ ಹೊಸ ಅವಕಾಶಗಳಿಗೆ ಮಾತ್ರವಲ್ಲ ತನ್ನದೇ ಆದ ಬದುಕು ಮತ್ತು ವ್ಯಕ್ತಿತ್ವದ ಕಡೆಗೆ ಮುಖ ಮಾಡುವ ಪ್ರಕ್ರಿಯೆಗೂ ಚಾಲನೆ ನೀಡುತ್ತದೆ. ಇವಳ ಈ ತೀರ್ಮಾನವನ್ನು ಅವಳ ಪರಿಸರವಿಡೀ ಮೆಚ್ಚುತ್ತದೆ, ಅವಳೆಡೆಗೆ ಅಭಿಮಾನದಿಂದ ನೋಡುತ್ತದೆ ಎನ್ನುವ ಸಂಗತಿಯೂ ಅಷ್ಟೇ ಮುಖ್ಯವಾದುದು.ಹಾಗೆಂದು ಇವಳು ‘ಸತಿ ಸಾವಿತ್ರಿ, ಊರ್ಮಿಳೆಯರಂತೆ’ ಎಂದೇನೂ ಅಲ್ಲ. ‘ಸಣ್ಣತನ, ಕೊಂಕು ಕೆರೆದಾಟ...’ ಎಲ್ಲ ಇವಳಲ್ಲೂ ಇವೆ. ಊರ ಸುದ್ದಿಯೆಂದರೆ ಮಹಾ ಪ್ರೀತಿ ಈಕೆಗೆ. ‘ಈಕೆ ಬಯಸಿದ್ದು ಸರೀಕರ ನಡುವೆ ತಲೆ ಎತ್ತಿ ಬದುಕಲಿಕ್ಕೆ, ಮೇಲೊಂದು ಸೂರು ಹಚಡಕ್ಕೆ’. ಆದ್ದರಿಂದಲೇ ಮಗ ಮಾರಪ್ಪ ‘ಗಾಂಧಿಯ ಬಾಲ’ವಾಗುವುದು ಇವಳಿಗೆ ಬೇಡ. ಇರುವ ಒಂದೆಕರೆ ತೋಟವನ್ನು ಚಂದವಾಗಿ ನೋಡಿಕೊಂಡು ಮಾನವಾಗಿ ಬದುಕಿದರೆ ಸಾಕು ಎಂದು ಇವಳು ಹಂಬಲಿಸುತ್ತಾಳೆ. ಆ ಮಗನೋ ಇದರ ಬಿಸಾತೇ ಇಲ್ಲದವನಂತೆ ತಾನಾಯ್ತು, ಗಾಂಧಿಯಾಯ್ತು ಎನ್ನುವುದನ್ನೇ ಬದುಕಿನ ಮೂಲಮಂತ್ರವಾಗಿಸಿಕೊಂಡವನು. ಗಾಂಧಿಭಕ್ತ ಕಾರ್ನಾಡರ ಶಿಷ್ಯನಂತೆ ಖಾದಿ, ಅಸ್ಪೃಶ್ಯರಿಗೆ ದೇವಳದಲ್ಲಿ ಏಕಪಂಕ್ತಿಯ ಊಟ, ತಕಲಿ ನೀಡಿ ಎಲ್ಲರಿಗೂ ನೂಲುವುದನ್ನು ಹೇಳಿಕೊಡುವುದು ಮುಂತಾದ, ಸೂರಕ್ಕೆಯ ಮಾತಿನಲ್ಲೇ ಹೇಳುವುದಾದರೆ ‘ಆ ಗಾಂಧಿಯಿಂದಲೇ ತನ್ನ ಮಗ ಸರ್ವನಾಶವಾದ’.ಹೀಗೆ ಗಾಂಧಿ ಮತ್ತು ಸೂರಕ್ಕೆಯ ನಡುವಿನ ಸಂಬಂಧವನ್ನು ನಾಗವೇಣಿ ಅದೆಂಥ ನಾಟಕೀಯತೆಯಲ್ಲಿ ಆದರೆ ಅದಮ್ಯವೆನಿಸುವ ವಾಸ್ತವ ನೆಲೆಯಲ್ಲಿ ಕಟ್ಟಿಕೊಡುತ್ತಾರೆಂದರೆ, ಈ ಕಾದಂಬರಿಯಲ್ಲಿ ನಮ್ಮ ಮನಸ್ಸಿನಲ್ಲಿ ಎಂದಿಗೂ ಉಳಿಯುವ ಹಲವು ಪಾತ್ರಗಳ ನಡುವೆಯೂ ಸೂರಕ್ಕೆಯ ಸ್ಥಾನವನ್ನು ಯಾರೂ ಪಡೆಯಲಾರರು. ‘ಏನಾ ಆ ಗಾಂಧಿ ಮತ್ತೆ ಬರ್ತಾನಂತೆ ಹೌದಾ? ಮತ್ಯಾಕಂತೆ ಅಂವ ಬರುದು? ಆ ಬಾರಿ ಬಂದು ನಗನಾಣ್ಯ ಕೊಂಡೋಗಿದ್ದು ಸಾಲದಂತೆಯಾ?’ ಎನ್ನುವ ನಿರಾಕರಣೆಯಲ್ಲಿ ಶುರುವಾಗುವ ಗಾಂಧಿ ಮತ್ತು ಸೂರಕ್ಕೆಯ ಸಂಬಂಧ ‘ಯಾವಾಗ ಬರುವುದನಾ ನಿನ್ನ ಗಾಂಧಿ?’ ಎನ್ನುವ ತೀವ್ರ ಸಂಘರ್ಷದ ಘಟ್ಟವನ್ನು ಹಾದು, ಕೊನೆಗೆ ಮುಟ್ಟುವುದು ‘ಮುಂಜಾನೆ ಬೋಳು ಮುಚ್ಚಿಕೊಂಡಿದ್ದ ದೋಪಮ್ಮ ಇದೀಗ ಕುಂಕುಮ ಶೋಭಿತೆಯಾಗಿ ಬಂದಿರುವ ಕತೆಯನ್ನು ಸೂರಕ್ಕೆಯವರು ಸೊಸೆಯ ಬಾಯಲ್ಲಿ ಕೇಳಿದವರೇ ಸಂತಸದಿಂದ, ‘ಅಯ್ಯೋ ಪುಣ್ಯಾತ್ಮಾ!ನಿನ್ನನೊಂದು ಘಳಿಗೆ ಕಾಣದೇ ಹೋದೆನೇ’ ಎಂದು ಪರಿತಪಿಸುತ್ತ ಚಾವಡಿಯಲ್ಲಿ ಕುಸಿದು ಕೂರುವುದರೊಂದಿಗೆ. ಈ ಎಲ್ಲ ಘಟ್ಟಗಳಲ್ಲೂ ಸೂರಕ್ಕೆ ನಿರಂತರವಾಗಿ, ತನ್ನ ಅರಿವಿಲ್ಲದೆಯೇ ಶೋಧಿಸುತ್ತಿರುವುದು, ಪಡೆಯಲು ಯತ್ನಿಸುತ್ತಿರುವುದು ಗಾಂಧಿ ಪ್ರಣೀತ ಬದುಕಿನ ಮತ್ತು ವ್ಯಕ್ತಿತ್ವದ ಮಾದರಿಯನ್ನೇ. ಆದರೆ ಕೊನೆಯ ಘಟ್ಟದ ತನಕವೂ ಸೂರಕ್ಕೆ ಈ ಗಾಂಧಿ ಎನ್ನುವವನು ತನ್ನ ಮತ್ತು ತನ್ನ ಮಗನ ನಡುವಿನ ಶತ್ರು ಎನ್ನುವಂತೆಯೇ ನಡೆದುಕೊಳ್ಳುತ್ತಾ ಹೋಗುತ್ತಾಳೆ.ಆದರೆ ವಿಪರ್ಯಾಸವೋ, ಐತಿಹಾಸಿಕ ಘಳಿಗೆಯೇ ಹಾಗೆ ಎಲ್ಲರನ್ನೂ ಒಂದುಗೂಡಿಸುವಷ್ಟು ಪ್ರಬಲವಾಗಿತ್ತೋ ಅಂತೂ ಸೂರಕ್ಕೆಯೂ ಮಗನಷ್ಟೇ ಅಥವಾ ಮಗನಿಗಿಂತ ಒಂದು ತೂಕ ಹೆಚ್ಚೆೇ ಎನಿಸುವಷ್ಟು ಗಾಂಧಿವಾದಿಯಾಗುತ್ತಾ ಹೋಗುತ್ತಾಳೆ, ಗಾಂಧಿಯನ್ನು ತಾರಾಮಾರ ಬೈಯುತ್ತಲೇ!‘ಯಾವಾಗ ಬರುವುದನಾ ನಿನ್ನ ಗಾಂಧಿ?’ ಎಂದು ಕೇಳುವಾಗಲೂ ಅವಳ ಮನಸಿನಲ್ಲಿರುವುದು ಅವನನ್ನು ನೋಡುವ ಬಯಕೆಯಲ್ಲ, ಅವನನ್ನು ಕುರಿತ ಗೌರವವೂ ಅಲ್ಲ. ಆ ಗಾಂಧಿಯೆಂಬ ಮನುಷ್ಯ ಸಿಕ್ಕರೆ ತನ್ನ ಮಗನ ಮದುವೆ ವಿಷಯ ಮಾತನಾಡಬೇಕು ಎಂದು! ಏನು ಮಾಡಿದರೂ ಮದುವೆಗೆ ಒಪ್ಪದ ಮಗನನ್ನು ಒಪ್ಪಿಸಲು ಗಾಂಧಿಯನ್ನೇ ಕೇಳಬೇಕೆಂದು ನಿರ್ಧರಿಸಿ ಅವಳು ಗಾಂಧಿಯ ಬರವಿನ ಬಗ್ಗೆ ವಿಚಾರಿಸುವುದು. ಜೋಗದ ಜಲಪಾತ ನೋಡುವುದರಿಂದ ಸಮಯ ವ್ಯರ್ಥವಾಗುತ್ತದೆ ಎಂದು ಭಾವಿಸುವ ಗಾಂಧಿಗೆ ಇವಳು ವಹಿಸಬೇಕೆಂದಿರುವ ಕೆಲಸ ಇದು.ಮುಂದೆ ಬದಲಾದ ಸನ್ನಿವೇಶದಲ್ಲಿ ಸೂರಕ್ಕೆಯ ಮಗ ಮಾರಪ್ಪ, ಲೋಕೆವೆಲ್ಲ ‘ಶಿಖಂಡಿ’ಯೆಂದು ಕರೆದು ಅವಳ ಚೈತನ್ಯವನ್ನೇ ಕುಗ್ಗಿಸಿಬಿಟ್ಟಿರುವ ದಾರುವನ್ನು ಮದುವೆಯಾಗುತ್ತಾನೆ. ಸೂರಕ್ಕೆಯ ವ್ಯಕ್ತಿತ್ವದ ಶಕ್ತಿಸೌಂದರ್ಯಗಳೆಲ್ಲ ಬೆಳಕಿಗೆ ಬರುವುದು ಈ ಸಂದರ್ಭದಲ್ಲಿಯೇ. ದಾಂಪತ್ಯದ ಫಲ ಕೊಡಲಾಗದ ಹೆಣ್ಣು ಮಗಳನ್ನು ಮದುವೆಯಾಗುವ ನಿರ್ಧಾರವನ್ನು ಮಗೆ ತೆಗೆದುಕೊಂಡಾಗ ಆರಂಭದಲ್ಲಿ ಮೆಲುದನಿಯಲ್ಲಿ ಗೊಣಗಾಡಿದರೂ ಅಂತಿಮವಾಗಿ ಸೂರಕ್ಕೆ ಈ ತೀರ್ಮಾನವನ್ನು  ಒಪ್ಪುತ್ತಾಳೆ. ಮಾತ್ರವಲ್ಲ, ಆಗೊಮ್ಮೆ ಈಗೊಮ್ಮೆ ದಾರುವನ್ನು ತನ್ನ ಮಾತಿನಿಂದ ಘಾಸಿಗೊಳಿಸಿದರೂ ಅವಳನ್ನು ಅಪಾರ ಪ್ರೀತಿ ಮತ್ತು ಕಾಳಜಿಯಲ್ಲಿ ನೋಡಿಕೊಳ್ಳುತ್ತಾಳೆ.ಇದರ ಹಿಂದೆ ಅಪ್ಪಟ ಮಾನವೀಯತೆಯಷ್ಟೇ ಪ್ರಾಯೋಗಿಕ ಚಿಂತನೆಯೂ ಇದೆ. ಸದಾ ಹೊರಗಿನ ಬದುಕನ್ನೇ ನೆಚ್ಚಿಕೊಂಡಿರುವ ಮಗನಿಗೆ ಎಲ್ಲ ಸರಿಯಾದ ಹೆಣ್ಣಿನ ಜೊತೆ ಮದುವೆಯಾದರೆ, ಅವಳ ಆಶೋತ್ತರಗಳನ್ನು ಮಗ ಪೂರೈಸಲಾಗದೆ ಮನೆ ನರಕವಾಗುತ್ತದೆಯಲ್ಲವೇ ಎಂದೂ ಸೂರಕ್ಕೆ ಯೋಚಿಸುತ್ತಾಳೆ. ಆದರೆ ಇಷ್ಟು ವಾಸ್ತವದ ನೆಲೆಯಲ್ಲಿ ಯೋಚಿಸುವಾಗಲೂ ಸೂರಕ್ಕೆಯ ಗಮನ ದಾರುವಿನೊಂದಿಗೆ ಬರಬಹುದಾದ ಆಸ್ತಿಯ ಕಡೆಗಿಲ್ಲ ಎನ್ನುವುದೇ ಇವಳನ್ನು ಕುರಿತ ನಮ್ಮ ಗೌರವವನ್ನು ಹೆಚ್ಹಿಸುತ್ತದೆ. ತನ್ನದಲ್ಲದ ತಪ್ಪಿಗೆ ಲೋಕನಿಂದೆಗೆ ಗುರಿಯಾದ ದಾರುವನ್ನು ಅರ್ಥಮಾಡಿಕೊಳ್ಳುವ, ಅದಕ್ಕೆ ನಿರಂತರವಾಗಿ ಸ್ಪಂದಿಸುವ ಮನಸ್ಥಿತಿಯನ್ನು ಸೂರಕ್ಕೆ ರೂಡಿಸಿಕೊಳ್ಳುತ್ತಾ ಹೋಗುತ್ತಾಳೆ. ಇದೊಂದು ಆತ್ಮವಿಕಾಸದಂತೆಯೇ ನಮಗೆ ಭಾಸವಾಗುತ್ತದೆ. ನಿತ್ಯದ ಕಟಕಿಮುಳ್ಳಾಗಿ ಬಿಡಬಹುದಾದದ್ದು, ನಮ್ಮ ಸಾಮಾಜಿಕ ಪರಿಸರದಲ್ಲಿ ಸಹಜವೂ ಒಪ್ಪಿತವೂ ಆದ ಕ್ರೌರ್ಯದ ಮನಸ್ಥಿತಿಯೊಂದು ನಿಧ ನಿಧಾನವಾಗಿ ಪರಿವರ್ತನೆಯಾಗುತ್ತಾ ಪರಿಮಳದ ಹೂವಾಗಿಬಿಡುವ ಮಾಂತ್ರಿಕತೆಯಂತೆಯೂ ಇದು ಕಾಣುತ್ತದೆ.ಇದು ಇನ್ನೂ ಸ್ಪಷ್ಟವಾಗಿ ನಮ್ಮ ಅನುಭವಕ್ಕೆ ಬರುವುದು ಈ ಕಾದಂಬರಿಯ ಇನ್ನೊಂದು ಕೇಂದ್ರ ಪಾತ್ರ ದ್ರೌಪದಿ ಮರುವಿಧವೆಯಾದಾಗ ಸೂರಕ್ಕೆ ನಡೆದುಕೊಳ್ಳುವ ಪರಿ. ದ್ರೌಪದಿಯನ್ನೂ ಅವಳ ಮಗುವನ್ನೂ ಸಾಕುವ ಹೊಣೆ ತಾನು ಹೊರುತ್ತೇನೆಂದು ಸ್ವಇಚ್ಛೆಯಿಂದ ಸೂರಕ್ಕೆ ಘೋಷಿಸುತ್ತಾಳೆ. ಹೆಣ್ಣಿನ ವಿಶ್ವಕುಟುಂಬದ ಮೂಲಧಾತುವನ್ನು ಅದೆಷ್ಟೇ ಸಣ್ಣ ಪ್ರಮಾಣದಲ್ಲಿ, ಸ್ವರೂಪದಲ್ಲೇ ಇರಲಿ ಸೂರಕ್ಕೆ ಸಮರ್ಥಿಸುವುದು, ಪ್ರತಿನಿಧಿಸುವುದು ಹೀಗೆ. ನಖಶಿಖಾಂತ ಅವಳು ವಿರೋಧಿಸುತ್ತಿದ್ದ ಗಾಂಧಿಯ ಜೊತೆ ಅವಳು ತನ್ನನ್ನು ಲಯಗೊಳಿಸಿಕೊಳ್ಳುವುದೂ ಇದೇ ದ್ರೌಪದಿಯ ಕಾರಣಕ್ಕಾಗಿ. ಮಂಗಳೂರಿಗೆ ಗಾಂಧಿಯ ಮರುಭೇಟಿಯಲ್ಲಿ, ವಿಧವೆ ದ್ರೌಪದಿಗೆ ಗಾಂಧಿ ಹೂವು ಕೊಟ್ಟು, ಕುಂಕುಮವಿಟ್ಟು ಹರಸಿದ್ದನ್ನು ಕಂಡ ಘಳಿಗೆಯಲ್ಲಿ ಸೂರಕ್ಕೆಗೆ ಗಾಂಧಿಯ ಬಗೆಗಿನ ತನ್ನ ವಿರೋಧಗಳೆಲ್ಲ ಅಕಾರಣವೆನಿಸಿ, ಈ ತನಕ ಅನಧಿಕೃತವಾಗಿ ಗಾಂಧಿವಾದಿಯಾಗಿದ್ದವಳು ಈಗ ಅಧಿಕೃತವಾಗಿ ಗಾಂಧಿವಾದಿಯಾಗಿಬಿಡುತ್ತಾಳೆ.ಸಾಮಾಜಿಕವೆಂದು ಕಾಣಿಸುವ ಸನ್ನಿವೇಶಗಳನ್ನೇ ಹೆಣ್ಣಿನ ಶಕ್ತ ರಾಜಕೀಯ ಹೋರಾಟವಾಗಿ ಸೂರಕ್ಕೆಯಂಥ ಅನಾಮಿಕ ಹೆಣ್ಣು ಮಕ್ಕಳು ಪರಿವರ್ತಿಸುವುದು ಆ ಮೂಲಕ ಸ್ತ್ರೀಸಂಕಥನದ ಭದ್ರ ಕೊಂಡಿಗಳಾಗುವುದು ಹೀಗೆಯೇ. ಯಾವುದನ್ನು ಗಾಂಧಿ ಸಮುದಾಯದ ನೈತಿಕ ನೆಲೆಯಾಗಬೇಕೆಂದು ಬಯಸಿದರೋ ಅದನ್ನು ನಿರ್ಲಕ್ಷಿತ ಸಮುದಾಯದ ಹೆಣ್ಣುಮಗಳೊಬ್ಬಳು ಸಿದ್ಧಿಸಿಕೊಳ್ಳುವುದು ಅನೇಕ ಸಂಗತಿಗಳನ್ನು ಏಕಕಾಲದಲ್ಲಿ ಹೇಳುತ್ತದೆ. ಕಾಲವೇ ಇದನ್ನು ಅಪೇಕ್ಷಿಸುತ್ತಿತ್ತಾಗಿ ಸೂರಕ್ಕೆಯಂತವರಿಗೆ ಇದನ್ನು ಸಿದ್ಧಿಸಿಕೊಳ್ಳಲು ಅನುವಾಯಿತೆಂದು ಹೇಳಬಹುದು.ಹೆಣ್ಣಿನ ಮೂಲಧಾತುವೇ ‘ಒಳಗೊಳ್ಳುವಿಕೆ’ಯಾದ್ದರಿಂದ ಇದು ಸಾಧ್ಯವಾಗುತ್ತದೆ ಮತ್ತು ಇಂಥ ಸಾವಿರಾರು ಹೆಣ್ಣು ಮಕ್ಕಳು ನಮ್ಮ ನಡುವೆಯಿದ್ದು ಅವರನ್ನು ಸಂಘಟಿಸುವ ಸವಾಲು ನಮ್ಮೆದುರಿಗಿದೆಯೆಂದು ಹೇಳಬಹುದು. ಗಾಂಧಿತತ್ವವೆನ್ನುವುದು ನಮ್ಮೆಲ್ಲರ ಪ್ರಾತಿನಿಧಿಕ ನೆಲೆಯಾದ್ದರಿಂದ ಸೂರಕ್ಕೆಯನ್ನು ಗಾಂಧಿವಾದದ ಜೊತೆ ಸಮೀಕರಿಸುವುದು ಸಾಧ್ಯ ಎನ್ನಬಹುದು.ಇಷ್ಟೆಲ್ಲ ಹೇಳಿದ ಮೇಲೂ ನನಗನ್ನಿಸುವುದು ಹೆಣ್ತನವನ್ನು ಆವಾಹಿಸಿಕೊಳ್ಳಲು ನಿರಂತರವಾಗಿ ಬಯಸಿದ ಗಾಂಧಿಯ ಜೊತೆ ಸೂರಕ್ಕೆಯಂತಹ ಅಪ್ಪಟ ಮಾನವಿಯನ್ನು ಇಟ್ಟು ನೋಡುವುದು ಇಬ್ಬರಿಗೂ ಸಕಾರಣವಾಗಿ ನಾವು ಸಲ್ಲಿಸಬೇಕಾದ ಪ್ರೀತಿ ಮತ್ತು ಗೌರವ ಎಂದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.