ಬುಧವಾರ, ಮಾರ್ಚ್ 3, 2021
31 °C

ಸೃಜನಶೀಲ ಸರಣಿ ಉದ್ಯಮಿಗಳು

ಸಂದರ್ಶನ: ಮಾಲತಿ ಭಟ್‌ Updated:

ಅಕ್ಷರ ಗಾತ್ರ : | |

ಸೃಜನಶೀಲ ಸರಣಿ ಉದ್ಯಮಿಗಳು

ಸ್ಟಾರ್ಟ್‌ ಅಪ್‌ ಯುಗ ಉದ್ಯಮ ಕ್ಷೇತ್ರದಲ್ಲೂ ಸೃಜನಶೀಲತೆಗೆ ದಾರಿ ಮಾಡಿಕೊಟ್ಟಿದೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ವೃತ್ತಿಪರರು ಎರಡು, ಮೂರು  ವರ್ಷಗಳಿಗೊಮ್ಮೆ ಉದ್ಯೋಗ ಬದಲಿಸುತ್ತಿದ್ದರೆ,  ಮೂರು–ನಾಲ್ಕು ವರ್ಷಗಳಿಗೊಂದು ಹೊಸ ಉದ್ಯಮ ಆರಂಭಿಸುವ ಸರಣಿ ಉದ್ಯಮಿಗಳೂ (serial entrepreneurs) ಇತ್ತೀಚೆಗೆ ಹೆಚ್ಚುತ್ತಿದ್ದಾರೆ.ಸರಣಿ ಉದ್ಯಮಿಗಳ ಮನೋಭಾವ, ಸ್ಟಾರ್ಟ್‌ಅಪ್‌ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆಗಳ ಕುರಿತು ಮಾಹಿತಿ ತಂತ್ರಜ್ಞಾನ ಸೇವಾ ಕಂಪೆನಿ ‘ಸ್ಪೈಡರ್‌ ಲಾಜಿಕ್‌’ನ ನಿರ್ದೇಶಕ ಗಿರೀಶ್‌ ರಾಮಚಂದ್ರ ಅವರು ‘ಪ್ರಜಾವಾಣಿ’ಗೆ ನೀಡಿರುವ ಸಂದರ್ಶನ ಇಲ್ಲಿದೆ: * ಸಂಸ್ಥೆ ಕಟ್ಟಿ ಬೆಳೆಸಿದವರಿಗೆ ಅದನ್ನು ಸುಲಭಕ್ಕೆ ಬಿಡಲು ಸಾಧ್ಯವಾಗದು. ಸರಣಿ ಉದ್ಯಮಿಗಳಿಗೆ  ತಮ್ಮ ಕಂಪೆನಿಗಳ ಜತೆ ಭಾವನಾತ್ಮಕ ನಂಟು ಇರುವುದಿಲ್ಲವೇ?

ಇಲ್ಲ ಎಂದು ಥಟ್ಟನೆ ಹೇಳುವುದು ಕಷ್ಟ. ಆದರೆ, ಈ ಕಾಲಘಟ್ಟವೇ ಹೀಗಿದೆ. ಇದು ಕೊಳ್ಳುಬಾಕತನದ ಯುಗ. ಹಿಂದೆಲ್ಲ ಕಾರು ಖರೀದಿಸಬೇಕಾದರೆ 10–15 ವರ್ಷ ಬಾಳಿಕೆ ಬರುವಂತೆ ಇರಬೇಕು ಎಂದು ಅಂದುಕೊಳ್ಳುತ್ತಿದ್ದರು. ಅಂಥ ಬ್ರ್ಯಾಂಡ್‌ಗಾಗಿ ಹುಡುಕುತ್ತಿದ್ದರು. ಈಗ ಮೂರು ವರ್ಷಕ್ಕೊಮ್ಮೆ ಕಾರು ಬದಲಿಸುವುದು ಷೋಕಿಯಾಗಿಬಿಟ್ಟಿದೆ. ಈ ಮನೋಭಾವ ಎಲ್ಲ ಕ್ಷೇತ್ರದಲ್ಲೂ ಕಂಡುಬರುತ್ತಿದೆ. ಆದರೆ, ಎಲ್ಲ ಸರಣಿ ಉದ್ಯಮಿಗಳೂ ಹೀಗಿರುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಬಹುತೇಕ ನವೋದ್ಯಮಿಗಳು ದೊಡ್ಡ ದೊಡ್ಡ ಕಂಪೆನಿಗಳಲ್ಲಿ ಕೆಲಸ ಮಾಡಿರುತ್ತಾರೆ. ಹೊಸ ಪರಿಕಲ್ಪನೆಯೊಂದು ಹುಟ್ಟಿದಾಗ ಅದಕ್ಕೆ ಮೂರ್ತ ರೂಪ ನೀಡಲು ತಮ್ಮದೇ  ಕಂಪೆನಿ ಕಟ್ಟುತ್ತಾರೆ. ಐದಾರು ವರ್ಷಗಳ ನಂತರ ಮತ್ತೊಂದು ಪರಿಕಲ್ಪನೆ ಹುಟ್ಟಿದಾಗ ಇನ್ನೊಂದು ಕಂಪೆನಿ ಕಟ್ಟಬೇಕೆಂಬ ತುಡಿತ ಹುಟ್ಟುತ್ತದೆ.* ಹಾಗಿದ್ದರೆ ನವೋದ್ಯಮಿಗಳನ್ನು ಚಿತ್ರನಿರ್ದೇಶಕರು, ಕಲಾವಿದರು, ಸಾಹಿತಿಗಳಂತಹ ಸೃಜನಶೀಲರ ಗುಂಪಿಗೆ ಸೇರಿಸಬಹುದೇ?

ಹೌದು, ಇಂತಹ ತುಡಿತವೇ ಹೊಸ ಹೊಸ ಕಂಪೆನಿ ಕಟ್ಟಲು ಅವರಿಗೆ ಪ್ರೇರಣೆಯಾಗುತ್ತದೆ. ಮತ್ತೆ ಕೆಲವರಿಗೆ ತಮ್ಮ ಪರಿಕಲ್ಪನೆಯನ್ನು ಬೆಳೆಸಲು ದೊಡ್ಡ ವೇದಿಕೆ, ಬೃಹತ್‌ ಪ್ರಮಾಣದ ಆರ್ಥಿಕ ಸಂಪನ್ಮೂಲದ ಅಗತ್ಯವಿರುತ್ತದೆ.  ತಮ್ಮ ಪುಟ್ಟ ಕಂಪೆನಿಗಳನ್ನು ದೈತ್ಯ ಕಂಪೆನಿಗಳಲ್ಲಿ ವಿಲೀನ ಮಾಡುತ್ತಾರೆ. ತಾವು ಸಹ ಆ ದೊಡ್ಡ ಕಂಪೆನಿಗಳಲ್ಲಿ ಮಹತ್ವದ ಹುದ್ದೆಯನ್ನು ನಿಭಾಯಿಸುತ್ತ ತಮ್ಮ ಪರಿಕಲ್ಪನೆಯನ್ನು ಬೆಳೆಸುತ್ತಾರೆ. ಅಮೆರಿಕದಲ್ಲಿ ಇದು ಸಾಮಾನ್ಯ. ಸಣ್ಣ ಸಣ್ಣ ನವೋದ್ಯಮಿಗಳು ಗೂಗಲ್‌, ಯಾಹೂ, ಫೇಸ್‌ಬುಕ್‌ನಂತಹ ದೈತ್ಯ ಕಂಪೆನಿಗಳಲ್ಲಿ ತಮ್ಮ ಕಂಪೆನಿಗಳನ್ನು ವಿಲೀನಗೊಳಿಸಿ ಅಲ್ಲೇ ಕೆಲಸ ಮಾಡುತ್ತಾರೆ.* ಕಂಪೆನಿ ಆರಂಭಿಸಿದ 3–4 ವರ್ಷಗಳಲ್ಲೇ ಮಾರಿದರೆ ಕೆಲಸ ಮಾಡುವವರ ಪಾಡೇನು?

ಯಾವುದೇ ಉದ್ಯಮಿ ತನ್ನ ಕಂಪೆನಿ ಮಾರುವಾಗ ಅದರಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಸೇವಾ ಭದ್ರತೆ ಕುರಿತೂ ಆಲೋಚಿಸುತ್ತಾನೆ. ಕಂಪೆನಿ ಹಸ್ತಾಂತರ ಮಾಡುವಾಗ ಉದ್ಯೋಗಿಗಳ ಸಂಬಳದ ಪ್ಯಾಕೇಜ್‌, ವಿಮೆ ಎಲ್ಲದರ ಬಗ್ಗೆಯೂ  ಮಾತುಕತೆ ನಡೆದಿರುತ್ತದೆ.* ನವೋದ್ಯಮಗಳನ್ನು ಕಟ್ಟುವ ಪ್ರಕ್ರಿಯೆ ಬಗ್ಗೆ ವಿವರಿಸಿ.

ಯಾವುದೇ ಕಂಪೆನಿಗೆ ಮೂರು ಹಂತದ ಬೆಳವಣಿಗೆ ಇರುತ್ತದೆ. ಮೊದಲಿನ ಒಂದೆರಡು ವರ್ಷಗಳಲ್ಲಿ ಅದಕ್ಕೆ ಹಣಕಾಸು ಹೊಂದಿಸುವ, ಪರಿಕಲ್ಪನೆಯನ್ನು ವಾಸ್ತವಕ್ಕೆ ಇಳಿಸುವ ಪ್ರಕ್ರಿಯೆ ನಡೆಯುತ್ತದೆ. ಮುಂದಿನ 2–3 ವರ್ಷಗಳಲ್ಲಿ ಕಂಪೆನಿ ಬೆಳವಣಿಗೆಯಾಗಿ ಲಾಭದತ್ತ ನಡೆಯುತ್ತದೆ. ಮೂರನೆಯದು ಪರಿವರ್ತನೆಯ ಹಂತ (transition period). ಯಾವುದೇ ಕಂಪೆನಿ ಅಭಿವೃದ್ಧಿಗೊಳ್ಳಲು ಇಷ್ಟು ಅವಧಿ ಬೇಕು ಎಂದು ಸಾಹಸೋದ್ಯಮ ಹೂಡಿಕೆದಾರರಿಗೂ (Venture capitalists) ಗೊತ್ತಿರುತ್ತದೆ. ಹಾಗಾಗಿ ಕನಿಷ್ಠ ಐದಾರು ವರ್ಷಗಳ ಕಾಲ ಹಣಕಾಸು ನೆರವು ನೀಡುತ್ತಾರೆ.* ನವೋದ್ಯಮದ ಉತ್ತೇಜನಕ್ಕೆ ಸರ್ಕಾರ ನಿಧಿ ಸ್ಥಾಪಿಸಲಿರುವ ಬಗ್ಗೆ ನಿಮ್ಮ ಅಭಿಪ್ರಾಯ?

ಇದು ಒಳ್ಳೆಯದೇ. ಖಾಸಗಿ ಹೂಡಿಕೆದಾರರೆಲ್ಲ ಭಾರಿ ಲಾಭ ತರುವ ಬೃಹತ್‌ ಉದ್ಯಮಗಳಿಗೆ ಹೂಡಿಕೆ ಮಾಡಲು ಮುಂದಾಗುತ್ತಾರೆ. ಕೇಂದ್ರ ಸರ್ಕಾರವೇ ಸ್ಟಾರ್ಟ್ಅಪ್‌ ನಿಧಿ ಸ್ಥಾಪನೆಗೆ ಮುಂದಾಗಿರುವುದರಿಂದ ಸಾರ್ವಜನಿಕ ವಲಯದ ಹಣಕಾಸು ಸಂಸ್ಥೆಗಳು ಸಣ್ಣ ಉದ್ಯಮ, ನವೋದ್ಯಮಗಳಿಗೆ ಹೆಚ್ಚೆಚ್ಚು ಹೂಡಿಕೆ ಮಾಡಲು ಇದು ನೆರವಾಗಬಹುದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.