ಶನಿವಾರ, ಫೆಬ್ರವರಿ 27, 2021
28 °C

ಸೆಟ್‌ಟಾಪ್‌ ಬಾಕ್ಸ್‌ ಬಗೆಹರಿಯದ ಅಳವಡಿಕೆ ಗೊಂದಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೆಟ್‌ಟಾಪ್‌ ಬಾಕ್ಸ್‌ ಬಗೆಹರಿಯದ ಅಳವಡಿಕೆ ಗೊಂದಲ

ಕೇಬಲ್‌ ಟಿ.ವಿ. ಕ್ಷೇತ್ರದಲ್ಲಿ ಪಾರದರ್ಶಕ ವ್ಯವಸ್ಥೆಗೆ ಅನುಕೂಲ ಕಲ್ಪಿಸುವ  ಸೆಟ್‌ಟಾಪ್‌ ಬಾಕ್ಸ್‌ ಅಳವಡಿಕೆ ಗೊಂದಲ ಬಗೆಹರಿದಿಲ್ಲ.  ಅನಲಾಗ್‌ನಿಂದ ಡಿಜಿಟಲೀಕರಣಕ್ಕೆ ಪರಿವರ್ತನೆಗೊಳಿಸುವ ಯೋಜನೆಗೆ  ಪೂರ್ವ ಸಿದ್ಧತೆ ಇಲ್ಲದೆ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್‌) ಇಂತಹ ಕ್ರಮಕ್ಕೆ ಮುಂದಾಗಿದೆ ಎನ್ನುವ ದೂರುಗಳು ವ್ಯಾಪಕವಾಗಿವೆ.ನಾಲ್ಕು ಹಂತಗಳಲ್ಲಿ ನಡೆಯುತ್ತಿರುವ ಡಿಜಿಟಲೀಕರಣ ಪ್ರಕ್ರಿಯೆ ಇಡೀ ದೇಶದಾದ್ಯಂತ ವಿಸ್ತರಿಸಲಿದೆ. ಮೊದಲ ಹಂತದಲ್ಲಿ ದೆಹಲಿ, ಕೋಲ್ಕತ್ತ, ಮುಂಬೈ, ಚೆನ್ನೈ ಮಹಾನಗರಗಳಲ್ಲಿ ನಡೆಯಿತು. ಎರಡನೇ ಹಂತದಲ್ಲಿ 36 ನಗರಗಳಲ್ಲಿ ನಡೆಯಿತು. ಈ ಎರಡು ಹಂತಗಳಲ್ಲಿ 3 ಕೋಟಿ ಸೆಟ್‌ಟಾಪ್‌ ಬಾಕ್ಸ್‌ಗಳನ್ನು ಈ ನಗರಗಳಲ್ಲಿ ಅಳವಡಿಸಲಾಯಿತು.ಈಗ ಮೂರನೇ ಹಂತದಲ್ಲಿ ಜಿಲ್ಲಾ ಮಟ್ಟದಲ್ಲಿ ಮತ್ತು ಇತರ ಪಟ್ಟಣಗಳಲ್ಲಿ ನಡೆಯು ತ್ತಿದೆ. ನಾಲ್ಕನೇ ಹಂತದಲ್ಲಿ ಸಂಪೂರ್ಣವಾಗಿ ಎಲ್ಲ ಹಳ್ಳಿಗಳು ಸೇರಿದಂತೆ ಇಡೀ ದೇಶ ಡಿಜಿಟಲ್‌ ಪ್ರಕ್ರಿಯೆಗೆ ಒಳಗಾಗಲಿದೆ.3ನೇ ಹಂತದಲ್ಲಿ ದೊಡ್ಡ ಪ್ರಮಾಣದಲ್ಲಿ ಅಂದರೆ 4 ಕೋಟಿ ಟಿ.ವಿ. ಗ್ರಾಹಕರು ಸುಮಾರು 7 ಸಾವಿರ ಪಟ್ಟಣ, ನಗರಗಳಲ್ಲಿ ಈ ಪ್ರಕ್ರಿಯೆಯಲ್ಲಿ ಸೇರ್ಪಡೆ ಯಾಗುವ ನಿರೀಕ್ಷೆಯಾಗಿದೆ. ಡಿಟಿಎಚ್‌ ಮೂಲಕವೂ ಪ್ರತಿ ವರ್ಷ 10 ಲಕ್ಷ ಗ್ರಾಹಕರು ಈ ವ್ಯವಸ್ಥೆಗೆ ಸೇರ್ಪಡೆಯಾಗುತ್ತಿದ್ದಾರೆ.ಪ್ರಸಾರದಲ್ಲಿ ಗುಣಮಟ್ಟ ಹೆಚ್ಚಳ ಜತೆಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೂ ಅಪಾರ ಆದಾಯವನ್ನು ಡಿಜಿಟಲೀಕರಣ ವ್ಯವಸ್ಥೆ ತಂದು ಕೊಡಲಿದೆ. ಈ ವ್ಯವಸ್ಥೆಯಿಂದ ಮನರಂಜನೆ ತೆರಿಗೆ ಸಂಗ್ರಹದಲ್ಲಿ ಎರಡರಿಂದ ಮೂರು ಪಟ್ಟು ಹೆಚ್ಚಳವಾಗಬಹುದು ಎಂದು 2013–14ರ ಆರ್ಥಿಕ ಸಮೀಕ್ಷೆಯಲ್ಲಿ ಉಲ್ಲೇಖಿಸಲಾಗಿತ್ತು.ಕಳೆದ ಎರಡು ದಶಕಗಳಲ್ಲಿ ಟಿ.ವಿ. ರೇಡಿಯೊ, ಸಿನಿಮಾ, ಮುದ್ರಣ, ಸಂಗೀತ, ಅನಿಮೇಷನ್‌ ಕ್ಷೇತ್ರಗಳು ಅಪಾರ ಬೆಳವಣಿಗೆ ಸಾಧಿಸಿವೆ. ಇದರಿಂದ 2018ರಲ್ಲಿ 1,78,600 ಕೋಟಿ ಆದಾಯ ದೊರೆಯಬಹುದು ಎಂದು ಸಮೀಕ್ಷೆ ತಿಳಿಸಿದೆ. ಈ ವ್ಯವಸ್ಥೆ ಜಾರಿಯಾದರೆ ಸೆಟ್‌ಟಾಪ್‌ಬಾಕ್ಸ್‌ ತಯಾರಿಕೆಯಲ್ಲಿ ತೊಡಗುವುದರಿಂದ ದೇಶಿಯ ಎಲೆಕ್ಟ್ರಾನಿಕ್‌ ಉದ್ಯಮಕ್ಕೂ ಅನುಕೂಲವಾಗಲಿದ್ದು, ಹೊಸದಾಗಿ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ವರದಿ ತಿಳಿಸಿದೆ.ದೇಶದಲ್ಲಿ ಪ್ರಸಾರ ಮಾಧ್ಯಮ ಅತ್ಯಂತ ಪ್ರಬಲವಾದ ಕ್ಷೇತ್ರವಾಗಿ ಬೆಳೆದಿದೆ. ಮನೆಗಳಲ್ಲಿ 16 ಕೋಟಿಗೂ ಹೆಚ್ಚು ಟಿ.ವಿಗಳಿವೆ. ಪ್ರಸ್ತುತ 800 ಸ್ಯಾಟಲೈಟ್‌ ಚಾನೆಲ್‌ಗಳಿದ್ದು, 245 ಎಫ್‌ಎಂ ರೇಡಿಯೊ ಚಾನಲ್‌ಗಳಿವೆ. ಜತೆಗೆ 170 ಸಮುದಾಯದ ರೇಡಿಯೊಗಳಿವೆ. ಹೀಗಾಗಿ ಹೆಚ್ಚಿನ ಆದಾಯವನ್ನು ಈ ಕ್ಷೇತ್ರದಿಂದ ನಿರೀಕ್ಷಿಸಬಹುದಾಗಿದೆ ಎಂದು ವರದಿಗಳು ತಿಳಿಸಿವೆ.ಆದಾಯ ಮತ್ತು ಗುಣಮಟ್ಟದ ವಿಶ್ಲೇಷಣೆ ನಡೆಸಿಯೇ ಸೆಟ್‌ಟಾಪ್‌ ಬಾಕ್ಸ್‌ ವ್ಯವಸ್ಥೆ ಜಾರಿಗೊಳಿಸಲು ಸರ್ಕಾರವೂ ಆಸಕ್ತಿ ವಹಿಸಿದೆ. ಕೇಬಲ್‌ ಮೂಲಕ ಕೇವಲ 80 ಚಾನಲ್‌ಗಳ ಪ್ರಸಾರ ಸಾಧ್ಯವಾಗುತ್ತಿತ್ತು. ಆದರೆ, ಈಗ 2 ಸಾವಿರ ಚಾನೆಲ್‌ಗಳನ್ನು ಸಹ ಅಳವಡಿಸಲು ಸಾಧ್ಯ. ಡಿಜಿಟಲ್‌ ಕೇಬಲ್‌ನಲ್ಲಿ ಪ್ರಿಪೇಡ್‌ ಮತ್ತು ಪೋಸ್ಟ್‌ಪೇಡ್‌ ಸಹ ಲಭ್ಯ. ಪ್ರತಿಯೊಂದು ಚಾನೆಲ್‌ಗೂ ಲೆಕ್ಕ ಇರುತ್ತದೆ.ಬೇಡವಾದ ಚಾನೆಲ್‌ಗಳನ್ನು ತೆಗೆದು ಹಾಕಿಸಲು ಅವಕಾಶವೂ ಇದೆ. ರಾಜ್ಯದಲ್ಲಿ 15 ಲಕ್ಷ ಟಿವಿಗಳಿಗೆ ಸೆಟ್‌ಟಾಪ್‌ ಬಾಕ್ಸ್‌ ಅಳವಡಿಸುವ ಪ್ರಕ್ರಿಯೆ ಜಾರಿಯಲ್ಲಿದೆ. ಬೆಂಗಳೂರಿನಲ್ಲಿ ಸುಮಾರು 5 ಲಕ್ಷ ಟಿ.ವಿ.ಗಳಿಗೆ ಬಾಕ್ಸ್‌ಳನ್ನು ಅಳವಡಿಸಲಾಗಿದೆ. ಇದೊಂದು ಪಾರದರ್ಶಕ ವ್ಯವಸ್ಥೆ. ಈ ಪ್ರಕ್ರಿಯೆ ಉತ್ತಮವಾದರೂ ಸೆಟ್‌ಟಾಪ್‌ ಬಾಕ್ಸ್‌ಗಳ ಕೊರತೆಯಿಂದ ಈ ಯೋಜನೆ ಹಿನ್ನಡೆ ಸಾಧಿಸುತ್ತಿದೆ ಎನ್ನುವುದು ಕೇಬಲ್‌ ಆಪರೇಟರ್‌ಗಳ ದೂರು.ಸೆಟ್‌ಟಾಪ್‌ ಬಾಕ್ಸ್‌ ಅಳವಡಿಸಿಕೊಳ್ಳಲು ಟ್ರಾಯ್‌ ನೀಡಿದ್ದ ಗಡುವು ಡಿ.31ಕ್ಕೆ ಕೊನೆಗೊಂಡಿದೆ. ಕೆಲವು ನಗರ, ಪಟ್ಟಣಗಳಲ್ಲಿ ಸೆಟ್‌ಟಾಪ್‌ ಬಾಕ್ಸ್‌ ಅಳವಡಿಸಿ ಕೊಳ್ಳದ ಲಕ್ಷಾಂತರ ಗ್ರಾಹಕರ ಕೇಬಲ್‌ ಸಂಪರ್ಕ ಕಡಿತಗೊಳಿಸಿರುವ ಪ್ರಕರಣಗಳು ಸಹ ವರದಿಯಾಗಿವೆ.ಮುಖ್ಯವಾಗಿ ಬೇಡಿಕೆ ಇರುವಷ್ಟು ಸೆಟ್‌ಟಾಪ್‌ ಬಾಕ್ಸ್‌ಗಳು ಲಭ್ಯವಿಲ್ಲ. ಹೀಗಾಗಿ ಕಾಲಾವಕಾಶ ನೀಡುವಂತೆ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರಕ್ಕೆ ಕೇಬಲ್‌ ಆಪರೇಟರ್‌ ಸಂಘಟನೆಗಳು ಮನವಿ ಸಲ್ಲಿಸಿವೆ. ಆದರೆ, ಪ್ರಾಧಿಕಾರ ಈ ಮನವಿಗೆ ಪೂರಕವಾಗಿ ಸ್ಪಂದಿಸಿಲ್ಲ.ಸೆಟ್‌ಟಾಪ್‌ ಬಾಕ್ಸ್‌ ಅಳವಡಿಸಿಕೊಳ್ಳುವಂತೆ ‘ಟ್ರಾಯ್‌’ ಒಂದೂವರೆ ವರ್ಷದ ಗಡುವು ನೀಡಿತ್ತು. ಅದರಂತೆ ಕರ್ನಾಟಕದಲ್ಲೇ ಸುಮಾರು 15 ಲಕ್ಷ ಸಂಪರ್ಕಗಳಿಗೆ ಸೆಟ್‌ಟಾಪ್‌ ಬಾಕ್ಸ್‌ ಅಳವಡಿಸಲಾಗಿದೆ. ಗ್ರಾಹಕರು ಸೆಟ್‌ ಟಾಪ್‌ ಬಾಕ್ಸ್‌ ಅಳವಡಿಸಿಕೊಳ್ಳದಿರುವುದು ಅಥವಾ ವಿಳಂಬಕ್ಕೆ ಮಲ್ಟಿ ಸಿಸ್ಟಂ ಆಪರೇಟರ್‌ಗಳು (ಎಂಎಸ್‌ಒ) ಸೂಕ್ತ ವ್ಯವಸ್ಥೆ ಮಾಡಿಕೊಳ್ಳದಿರುವುದೇ ಕಾರಣವೆನ್ನುವ ದೂರುಗಳು ಕೇಳಿ ಬಂದಿವೆ.ಚೀನಾದ ಕಂಪೆನಿಯೊಂದು ಭಾರತಕ್ಕೆ ಸೆಟ್‌ ಟಾಪ್‌ ಬಾಕ್ಸ್‌ಗಳನ್ನು ಪೂರೈಸುತ್ತಿತ್ತು. ಕೆಲವು ತಾಂತ್ರಿಕ ಕಾರಣಗಳಿಂದಾಗಿ ಸೆಟ್‌ ಟಾಪ್‌ ಬಾಕ್ಸ್‌ ಪೂರೈಕೆ ಸಕಾಲಕ್ಕೆ  ಪೂರೈಕೆಯಾಗಿಲ್ಲ. ಹಾಗಾಗಿ ಸೆಟ್‌ ಟಾಪ್‌ ಬಾಕ್ಸ್‌ಗಳೇ ಇಲ್ಲ ಅನ್ನುವಂತಹ ಸ್ಥಿತಿ ಇದೆ. ಹೀಗಿರುವಾಗ ಗ್ರಾಹಕರಿಗೆ ಗಡುವು ನೀಡುವುದು ಸಮಂಜಸವಲ್ಲ. ಇದಕ್ಕೂ ಸಾಕಷ್ಟು ಕಾಲಾವಕಾಶ ನೀಡುವುದು ಸೂಕ್ತ ಎನ್ನುವುದು ಕೇಬಲ್‌ ಆಪರೇಟರ್‌ಗಳ ವಾದ.ರಾಜ್ಯದಲ್ಲಿ ಬೆಂಗಳೂರು, ಮೈಸೂರು ಹೊರತುಪಡಿಸಿ ಉಳಿದ ನಗರ, ಪಟ್ಟಣ ಪ್ರದೇಶಗಳಲ್ಲಿ ಸೆಟ್‌ ಟಾಪ್‌ ಬಾಕ್ಸ್‌ ಅಳವಡಿಸಿಕೊಳ್ಳದ ಗ್ರಾಹಕರಿಗೆ ಡಿ.31ರ ಗಡುವು ನೀಡಿದ್ದ ‘ಟ್ರಾಯ್‌’, ನಂತರ ಕೇಬಲ್‌ ಸಂಪರ್ಕ ಕಡಿತಗೊಳಿಸುವ ಎಚ್ಚರಿಕೆ ನೀಡಿತ್ತು. ಅದರಂತೆ, ರಾಜ್ಯದಲ್ಲಿ ಸುಮಾರು 60 ಲಕ್ಷ ಕೇಬಲ್‌ ಸಂಪರ್ಕ ಪಡೆದ ಗ್ರಾಹಕರಿದ್ದಾರೆ. ಅದರಲ್ಲಿ ಈಗಾಗಲೇ 15 ಲಕ್ಷಕ್ಕೂ ಹೆಚ್ಚು ಗ್ರಾಹಕರಿಗೆ ಸೆಟ್‌ ಟಾಪ್‌ ಬಾಕ್ಸ್‌ ಅಳವಡಿಸಲಾಗಿದೆ. ಉಳಿದ ಗ್ರಾಹಕರ ಟಿ.ವಿ.ಗಳಿಗೆ ಸೆಟ್‌ಟಾಪ್‌ ಬಾಕ್ಸ್ ಅಳವಡಿಸುವ ಕಾರ್ಯ ಮಾತ್ರ ಮಂದಗತಿಯಲ್ಲೂ ಸಾಗಿದೆ.ಸೆಟ್‌ಟಾಪ್‌ ಬಾಕ್ಸ್‌ ಕಡ್ಡಾಯ ಅಳವಡಿಕೆ ವಿಚಾರವಾಗಿ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್‌) ಹಾಗೂ ಕೆಲವು ರಾಜ್ಯಗಳಲ್ಲಿನ ಕೇಬಲ್‌ ಆಪರೇಟರ್‌ಗಳ ಸಂಘಗಳ ಮಧ್ಯೆ ನಡೆಯುತ್ತಿರುವ ಸಂಘರ್ಷವೂ ನ್ಯಾಯಾಲಯದ ಮೆಟ್ಟಿಲೇರಿದೆ. ಕೇಬಲ್‌ ಗ್ರಾಹಕರಿಗೆ ಸೆಟ್‌ಟಾಪ್‌ ಬಾಕ್ಸ್‌ ಕಡ್ಡಾಯವಾಗಿ ಅಳವಡಿಸಿಕೊಳ್ಳುವಂತೆ ಟ್ರಾಯ್‌ ನೀಡಿದ್ದ ಗಡುವಿಗೆ ಆಂಧ್ರಪ್ರದೇಶ, ತಮಿಳುನಾಡು, ದೆಹಲಿ, ಒಡಿಶಾ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿನ ಅಲ್ಲಿನ ಹೈಕೋರ್ಟ್‌ಗಳು ತಡೆಯಾಜ್ಞೆ ನೀಡಿವೆ. ಸೆಟ್‌ಟಾಪ್‌ ಬಾಕ್ಸ್‌ ಅಳವಡಿಕೆಗೆ ಮೂರು ತಿಂಗಳ ಹೆಚ್ಚಿನ ಕಾಲಾವಕಾಶ ನೀಡಿವೆ. vಸೆಟ್‌ಟಾಪ್‌ ಬಾಕ್ಸ್‌ಗಳ ಕೊರತೆ

ಸೆಟ್‌ಟಾಪ್‌ ಬಾಕ್ಸ್‌ಗಳ  ಕೊರತೆ ಇದೆ. ಇನ್ನೂ 2–3 ತಿಂಗಳು ವಿಸ್ತರಿಸುವಂತೆ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರಕ್ಕೆ ಕೋರಲಾಗಿದೆ. ಈಗಾಗಲೇ ಕೆಲವು ರಾಜ್ಯಗಳಲ್ಲಿ ಸೆಟ್‌ಟಾಪ್‌ ಅಳವಡಿಸದಂತೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.ಸೆಟ್‌ಟಾಪ್‌ ಬಾಕ್ಸ್‌ ಕೊರತೆಯಾಗಲು ಕೇಬಲ್‌ ಆಪರೇಟರ್‌ಗಳು ಕಾರಣರಲ್ಲ. ಸೆಟ್‌ಟಾಪ್‌ ಬಾಕ್ಸ್‌ಗಳು ಭಾರತದಲ್ಲಿ ತಯಾರಾಗುತ್ತಿಲ್ಲ. ನರೇಂದ್ರ ಮೋದಿ ಅವರು ಮೇಕ್‌ ಇನ್‌ ಇಂಡಿಯಾ ಎಂದು ಹೇಳುತ್ತಿದ್ದಾರೆ. ಆದರೆ, ಸೆಟ್‌ಟಾಪ್‌ ಬಾಕ್ಸ್‌ಗಳ ವಿಷಯದಲ್ಲೇ ಇದು ಕಾರ್ಯಗತವಾಗುತ್ತಿಲ್ಲ ಎಲ್ಲವೂ ಚೀನಾದಿಂದ ಬರಲೇಬೇಕು.ಡಿಜಿಟಲ್‌ ಪ್ರಕ್ರಿಯೆಯಿಂದ ಸರ್ಕಾರಕ್ಕೆ ಪ್ರತಿ ವರ್ಷ ₹10 ಸಾವಿರ ಕೋಟಿ ಆದಾಯ ದೊರೆಯುವ ನಿರೀಕ್ಷೆ ಇದೆ. ಡಿಜಿಟಲ್‌ ವ್ಯವಸ್ಥೆಯಲ್ಲಿ ಸೆಟ್‌ಟಾಪ್‌ ಬಾಕ್ಸ್‌ಗಳಿಗೆ ಮಲ್ಟಿ ಸಿಸ್ಟಂ ಆಪರೇಟರ್‌ಗಳು ಮಾಲೀಕರಾಗಿರುತ್ತಾರೆ. ಇದರಿಂದ ಕೇಬಲ್‌ ಆಪರೇಟರ್‌ಗಳಿಗೆ ಹೆಚ್ಚಿನ ಆದಾಯ ದೊರೆಯುವುದಿಲ್ಲ. ಸರ್ಕಾರ ಮತ್ತು ಪೇ ಚಾನೆಲ್‌ಗಳಿಗೆ ಹೆಚ್ಚಿನ ಆದಾಯ ತಂದು ಕೊಡುತ್ತದೆ.

–ಪ್ಯಾಟ್ರಿಕ್‌ ರಾಜು

ಕರ್ನಾಟಕ ಕೇಬಲ್‌ ಟಿ.ವಿ. ಆಪರೇಟರ್‌ ಅಸೋಸಿಯೇಷನ್‌ ಅಧ್ಯಕ್ಷಡಿಜಿಟಲೀಕರಣದ ಅನುಕೂಲಗಳು

* ಪ್ರಸಾರದ ಗುಣಮಟ್ಟದಲ್ಲಿ ಹೆಚ್ಚಳ

* ಹೆಚ್ಚಿನ ಚಾನೆಲ್‌ಗಳು ಲಭ್ಯ

* ಸರ್ಕಾರಕ್ಕೆ ಪ್ರತಿ ವರ್ಷ ಅಂದಾಜು ₹10 ಸಾವಿರ ಕೋಟಿ ಆದಾಯದ ನಿರೀಕ್ಷೆ

* ಪಾರದರ್ಶಕ ವ್ಯವಸ್ಥೆ

* ಉದ್ಯೋಗಗಳ ಸೃಷ್ಟಿ* ಚೀನಾ ಕಂಪೆನಿಗಳು ಸೆಟ್‌ಟಾಪ್‌ ಬಾಕ್ಸ್‌  ಪೂರೈಸುತ್ತಿವೆ. ಬಾಕ್ಸ್‌ಗಳು ಸಹ ಗುಣಮಟ್ಟದಿಂದ ಕೂಡಿಲ್ಲ. ಐಎಸ್‌ಐ ಗುಣಮಟ್ಟದ ಸೆಟ್‌ಟಾಪ್‌ ಬಾಕ್ಸ್‌ ಪೂರೈಸುವುದು ಅಗತ್ಯ.

–ವೆಂಕಟೇಶ್‌

ಕೇಬಲ್‌ ಆಪರೇಟರ್‌ ಅಸೋಸಿಯೇಷನ್‌ ಸದಸ್ಯ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.