ಭಾನುವಾರ, ಮೇ 16, 2021
27 °C
ಫ್ರೆಂಚ್ ಓಪನ್ ಟೆನಿಸ್: ಪುರುಷರ ಸಿಂಗಲ್ಸ್ ಟ್ರೋಫಿಗಾಗಿ ನಡಾಲ್-ಫೆರರ್ ಇಂದು ಪೈಪೋಟಿ

ಸೆರೆನಾ ಮುಡಿಗೆ ಕಿರೀಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ಯಾರಿಸ್ (ಐಎಎನ್‌ಎಸ್/ಎಎಫ್‌ಪಿ): ಅಲ್ಪ ಪ್ರತಿರೋಧ ಎದುರಿಸಿ ಗೆಲುವಿನ ನಗೆ ಬೀರಿದ ಅಮೆರಿಕದ ಸೆರೆನಾ ವಿಲಿಯಮ್ಸ ಫ್ರೆಂಚ್ ಓಪನ್ ಗ್ರ್ಯಾನ್ ಸ್ಲಾಮ್ ಟೆನಿಸ್ ಟೂರ್ನಿಯ ಮಹಿಳಾ ವಿಭಾಗದ ಸಿಂಗಲ್ಸ್‌ನಲ್ಲಿ 11 ವರ್ಷಗಳ ಬಳಿಕ ಚಾಂಪಿಯನ್ ಆದರು.ಫಿಲಿಪ್ ಚಾಟ್ರಿಯರ್ ಕೋರ್ಟ್‌ನಲ್ಲಿ ಶನಿವಾರ ಕಿಕ್ಕಿರಿದು ತುಂಬಿದ್ದ ಟೆನಿಸ್ ಪ್ರಿಯರ ನಡುವೆ ನಡೆದ ಫೈನಲ್ ಹಣಾಹಣಿಯಲ್ಲಿ ಅಗ್ರಶ್ರೇಯಾಂಕದ ಸೆರೆನಾ 6-4, 6-4ರ ನೇರ ಸೆಟ್‌ಗಳಿಂದ ಎರಡನೇ ಶ್ರೇಯಾಂಕದ ರಷ್ಯಾದ ಮರಿಯಾ ಶರ್ಪೋವಾ ಅವರನ್ನು ಮಣಿಸಿ 11.32 ಕೋಟಿ ರೂಪಾಯಿ ಬಹುಮಾನ ಮತ್ತು ಟ್ರೋಫಿ ತಮ್ಮದಾಗಿಸಿಕೊಂಡರು.ಈ ಟೂರ್ನಿಯಲ್ಲಿ ಸೆರನಾ ಜಯಿಸಿದ ಎರಡನೇ ಟ್ರೋಫಿ ಇದಾಗಿದೆ. 2002ರ ಟೂರ್ನಿಯಲ್ಲಿ ವೀನಸ್ ವಿಲಿಯಮ್ಸ ಅವರನ್ನು ಮಣಿಸಿ ಮೊದಲ ಸಲ ಚಾಂಪಿಯನ್ ಆಗಿದ್ದರು. ಲಂಡನ್ ಒಲಿಂಪಿಕ್ಸ್‌ನಲ್ಲೂ ಚಿನ್ನ ಜಯಿಸಿದ್ದ ಸೆರೆನಾ ಗೆದ್ದ 16ನೇ ಗ್ರ್ಯಾನ್ ಸ್ಲಾಮ್ ಟ್ರೋಫಿಯಿದು. ಆಸ್ಟ್ರೇಲಿಯಾ (5), ಫ್ರೆಂಚ್ (2), ವಿಂಬಲ್ಡನ್ (5) ಮತ್ತು ಅಮೆರಿಕ ಓಪನ್ (4) ಟೂರ್ನಿಗಳಲ್ಲಿ ಪ್ರಶಸ್ತಿ ಜಯಿಸಿದ್ದಾರೆ.ಕಳೆದ ವರ್ಷ ವಿಂಬಲ್ಡನ್ ಮತ್ತು ಅಮೆರಿಕ ಓಪನ್ ಟೂರ್ನಿಗಳಲ್ಲಿ ಪ್ರಶಸ್ತಿ ಗೆದ್ದಿದ್ದ ಸೆರೆನಾ ಎರಡೂ ಸೆಟ್‌ಗಳಲ್ಲಿ ಪ್ರಬಲ ಪ್ರತಿರೋಧ ಎದುರಿಸಿದರು. ಕಳೆದ ವರ್ಷದ ಚಾಂಪಿಯನ್ ಶರ್ಪೋವಾ ಅವರು ಸೆರೆನಾ ಎದುರು ಅನುಭವಿಸಿದ 10ನೇ ಸೋಲು ಇದಾಗಿದೆ.`ಇದು ಅತ್ಯಂತ ಕಠಿಣ ದಿನವಾಗಿತ್ತು. ರೋಲಂಡ್ ಗ್ಯಾರೋಸ್ ಕೋರ್ಟ್‌ನಲ್ಲಿ 11 ವರ್ಷಗಳ ಹಿಂದೆ ಪ್ರಶಸ್ತಿ ಎತ್ತಿ ಹಿಡಿದಿದ್ದೆ. ಮತ್ತೆ ಆ ಸಾಧನೆ ಈಗ ಸಾಧ್ಯವಾಗಿದೆ. ಮುಂದಿನ ವರ್ಷವೂ ಮತ್ತೆ ಇಲ್ಲಿಗೆ ಬರುತ್ತೇನೆ. ಮತ್ತೊಮ್ಮೆ ಟ್ರೋಫಿ ಜಯಿಸುವ ಗುರಿ ಹೊಂದಿದ್ದೇನೆ' ಎಂದು ಸೆರೆನಾ ನುಡಿದರು.`ಇದು ಅಮೋಘ ಟೂರ್ನಿ. ಸೆರೆನಾ ಹಿಂದಿನ ವರ್ಷ ಮತ್ತು ಈ ವರ್ಷ ತುಂಬಾ ಚೆನ್ನಾಗಿ ಆಡಿದರು. ನನಗೂ ಪ್ರಶಸ್ತಿ ಜಯಿಸಲು ಅವಕಾಶವಿತ್ತು. ಆದರೆ, ಎದುರಾಳಿ ಆಟಗಾರ್ತಿ ಪ್ರಬಲ ಪೈಪೋಟಿ ಒಡ್ಡಿದರು' ಎಂದು ನಾಲ್ಕು ಸಲ ಗ್ರ್ಯಾನ್ ಸ್ಲಾಮ್ ಟ್ರೋಫಿ ಗೆದ್ದಿರುವ ಶರ್ಪೋವಾ ನುಡಿದರು.ಇಂದು ಫೈನಲ್: ಪುರುಷರ ವಿಭಾಗದ ಸಿಂಗಲ್ಸ್‌ನ ಫೈನಲ್ ಪಂದ್ಯ ಭಾನುವಾರ ನಡೆಯಲಿದ್ದು, ಸ್ಪೇನ್‌ನ ಟೆನಿಸ್ ದಿಗ್ಗಜರಾದ ರಫೆಲ್ ನಡಾಲ್ ಮತ್ತು ಡೇವಿಡ್ ಫೆರರ್ ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿದ್ದಾರೆ.ಶುಕ್ರವಾರ ತಡರಾತ್ರಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ನಾಲ್ಕನೇ ಶ್ರೇಯಾಂಕದ ಫೆರರ್ 6-1, 7-6, 6-2ರಲ್ಲಿ ಫ್ರಾನ್ಸ್‌ನ ವಿಲ್‌ಫ್ರಡ್ ಸೊಂಗಾ ಎದುರು ಜಯ ಪಡೆದು ಪ್ರಶಸ್ತಿ ಘಟ್ಟ ಪ್ರವೇಶಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.