ಸೋಮವಾರ, ಏಪ್ರಿಲ್ 12, 2021
30 °C

ಸೆ.7ರಂದು ರಾಜ್ಯ ಮಟ್ಟದ ಸಮಾವೇಶ: ಸಿಪಿಎಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ಅಪೌಷ್ಟಿಕತೆ ನಿವಾರಿಸಿ ಆರೋಗ್ಯಯುತ ಬದುಕುವ ಹಕ್ಕು ರಕ್ಷಿಸಿ ಎಂಬ ಪ್ರಮುಖ  ವಿಷಯದ ಆಧಾರದ ಮೇಲೆ ಸೆಪ್ಟೆಂಬರ್ 7ರಂದು ರಾಯಚೂರಿನಲ್ಲಿ ರಾಜ್ಯ ಮಟ್ಟದ ಸಮಾವೇಶ ಆಯೋಜಿಸಲಾಗಿದ್ದು, ಸಮಾವೇಶದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಸುಮಾರು 1,000 ಜನ ಪಾಲ್ಗೊಳ್ಳುವರು ಎಂದು ಸಿಪಿಐಎಂ ಪಕ್ಷದ  ಮುಖಂಡ ಯು ಬಸವರಾಜ ಹೇಳಿದರು.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಸಮಾವೇಶ ನಡೆಯಲಿದೆ. ಹಂಪಿ ಕನ್ನಡ ವಿಶ್ವವಿದ್ಯಾಲಯದ ಅಭಿವೃದ್ಧಿ ಅಧ್ಯಯನ ವಿಭಾಗದ ತಜ್ಞರಾದ ಡಾ.ಟಿ.ಆರ್ ಚಂದ್ರಶೇಖರ, ಬೆಂಗಳೂರಿನ ಪತ್ರಕರ್ತೆ ಕಾತ್ಯಾಯಿನಿ ಚಾಮರಾಜ,  ಮಾಜಿ ಶಾಸಕ ಜಿ.ವಿ ಶ್ರೀರಾಮರೆಡ್ಡಿ ಅವರು ವಿಷಯ ಮಂಡನೆ ಮಾಡುವರು. ಪಕ್ಷದ ಮುಖಂಡರಾದ ಮಾರುತಿ ಮಾನ್ಪಡೆ, ಜಿ.ಎನ ನಾಗರಾಜ್, ಜನವಾದಿ ಮಹಿಳಾ ಸಂಘಟನೆಯ ಕೆ ನೀಲಾ ಅವರು ಪಾಲ್ಗೊಂಡು ಸಮಾವೇಶದಲ್ಲಿ ಮಾತನಾಡಲಿದ್ದಾರೆ ಎಂದು ಹೇಳಿದರು.ಮಕ್ಕಳು ಮತ್ತು ಗರ್ಭೀಣಿಯರಲ್ಲಿ ಅಪೌಷ್ಟಿಕತೆ ಪ್ರಮಾಣ ಹೆಚ್ಚಾಗಿದೆ. ವಿಶೇಷವಾಗಿ ಹೈದರಾಬಾದ್ ಕರ್ನಾಟಕ ಪ್ರದೇಶದ ಜಿಲ್ಲೆಗಳಲ್ಲಿ ಪ್ರಮಾಣ ಹೆಚ್ಚಾಗಿದೆ. ಈ ಬಗ್ಗೆ ಆಡಳಿತರೂಢ ಸರ್ಕಾರಗಳು ತುರ್ತು ಗಮನಹರಿಸಿ ವೈಜ್ಞಾನಿಕ ಅಂಶಗಳ ಆಧಾರದ ಮೇಲೆ ಕ್ರಮ ಕೈಗೊಳ್ಳಬೇಕು. ಈಗ ಸರ್ಕಾರಗಳು ಕೈಗೊಂಡಿರುವ ಕ್ರಮಗಳು ಸಂಪೂರ್ಣ ಅಸಮರ್ಪಕವಾಗಿವೆ ಎಂದು ಆಪಾದಿಸಿದರು.ಮಧ್ಯಾಹ್ನ ಬಿಸಿಯೂಟ ಯೋಜನೆ, ಅಂಗನವಾಡಿ ಮಕ್ಕಳಿಗೆ ಅಲ್ಪ ಪ್ರಮಾಣದ ಆಹಾರ, ಬಾಣಂತಿಯರಿಗೆ ಆಹಾರ ದೊರಕಿಸುವಂಥ ಕ್ರಮಗಳು ಸರಿಯಾದ ಕ್ರಮಗಳಲ್ಲ. ಇವೆಲ್ಲ ಕೇವಲ ಆಗಿನ ಮಟ್ಟಿಗೆ ಮಾತ್ರ ಸಮಾಧಾನ ಪಡಿಸಲು ಮಾಡಿರುವ ಯೋಜನೆಗಳಷ್ಟೇ ಆಗಿವೆ. ಮೂಲ ಸಮಸ್ಯೆ ಇರುವುದು ಬಡತನ ಹೋಗಲಾಡಿಸುವುದು, ಸಮರ್ಪಕ ಆಹಾರ ದೊರಕಿಸುವುದು, ಆರ್ಥಿಕ ಅಸಮಾನತೆ ಹೋಗಲಾಡಿಸುವುದು ಮುಖ್ಯವಾಗಿದೆ. ಆರ್ಥಿಕ ಸಬಲತೆ ಬಂದರೆ  ಈ ಸಮಸ್ಯೆ ಹೋಗಲಾಡಬಹುದು ಎಂದರು.ಈ ಎಲ್ಲ ಅಂಶಗಳ ಬಗ್ಗೆ ಸಮಾವೇಶದಲ್ಲಿ ವಿವರವಾಗಿ ಚರ್ಚೆ ಮಾಡಲಾಗುವುದು. ಸಮಾವೇಶದಲ್ಲಿಯೇ ಚರ್ಚಿಸಿ ಮುಂದಿನ ಹೋರಾಟದ ರೂಪು ರೇಶೆ ಸಿದ್ಧಪಡಿಸಲಾಗುವುದು ಎಂದು ವಿವರಿಸಿದರು. ಸಿಪಿಐಎಂ ಪಕ್ಷದ ಮಲ್ಲಯ್ಯ ಜಾಲಹಳ್ಳಿ, ಎಚ್ ಪದ್ಮಾ, ಕೆ.ಜಿ ವಿರೇಶ ಪತ್ರಿಕಾಗೋಷ್ಠಿಯಲ್ಲಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.