ಗುರುವಾರ , ಜೂನ್ 24, 2021
29 °C

ಸೇನಾ ಮುಖ್ಯಸ್ಥರಿಗೆ ಆಮಿಷ: ಸಿಬಿಐ ತನಿಖೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೇನಾ ಮುಖ್ಯಸ್ಥರಿಗೆ ಆಮಿಷ: ಸಿಬಿಐ ತನಿಖೆ

ನವದೆಹಲಿ: ಸೇನೆ ಮುಖ್ಯಸ್ಥರಿಗೆ ಲಂಚ ಆಮಿಷ ಆರೋಪವು ಸೋಮವಾರ ಸಂಸತ್ತಿನಲ್ಲಿ ಕೋಲಾಹಲ ಸೃಷ್ಟಿಸಿದ ಹಿನ್ನೆಲೆಯಲ್ಲಿ ಸರ್ಕಾರವು ಈ ಪ್ರಕರಣವನ್ನು ಸಿಬಿಐ ತನಿಖೆಗೆ ಆದೇಶಿಸಿದೆ.ಆದಷ್ಟು ಬೇಗ ತನಿಖೆ ಪೂರ್ಣಗೊಳಿಸುವಂತೆ ಸಿಬಿಐಗೆ ಸೂಚನೆ ನೀಡಲಾಗಿದೆ. ಸೇನಾ ಮುಖ್ಯಸ್ಥ ಜ. ವಿ.ಕೆ.ಸಿಂಗ್ ಅವರು ಮೇ 31ರಂದು ನಿವೃತ್ತರಾಗಲಿದ್ದು, ಅದಕ್ಕೂ ಮುನ್ನವೇ ತನಿಖಾ ವರದಿ ನೀಡುವಂತೆಯೂ ನಿರ್ದೇಶನ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.`ಕಳಪೆ ದರ್ಜೆ ವಾಹನಗಳ ಖರೀದಿ ಪ್ರಕ್ರಿಯೆಗೆ `ಲಾಬಿ~ ಮಾಡಲು ತಮಗೆ 14 ಕೋಟಿ ರೂಪಾಯಿ ಲಂಚ ಕೊಡುವುದಾಗಿ ಆಮಿಷವೊಡ್ಡಲಾಗಿತ್ತು~ ಎಂದು ಸಿಂಗ್ ಅವರು ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನ ಉಭಯ ಸದನಗಳಲ್ಲೂ ಕೋಲಾಹಲ ಸೃಷ್ಟಿಸಿತು. ಈ ಆರೋಪದ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳು ಗದ್ದಲವೆಬ್ಬಿಸಿದ್ದರಿಂದ ಕೆಲಹೊತ್ತು ಕಲಾಪ ಮುಂದೂಡಲಾಯಿತು. ಇದಲ್ಲದೇ ತೆಲಂಗಾಣ ಬೇಡಿಕೆಗೆ ಆಗ್ರಹಿಸಿ ಆ ಭಾಗದ ಸದಸ್ಯರು ನಿರಂತರ ಗದ್ದಲ ಮಾಡಿದ್ದರಿಂದ ಕೆಳಮನೆ ಕಲಾಪವನ್ನು ಮೂರು ಸಲ ಮುಂದೂಡಲಾಯಿತು. ಮಧ್ಯಾಹ್ನ 2ಕ್ಕೆ ಲೋಕಸಭೆ 3ನೇ ಸಲ ಸೇರಿದಾಗಲೂ ಗದ್ದಲ ನಿಲ್ಲಲಿಲ್ಲ. ಸದಸ್ಯರು ಗದ್ದಲ ನಿಲ್ಲಿಸಿ ಆಸನಗಳಿಗೆ ಹಿಂತಿರುಗುವಂತೆ ಮಾಡಿದ ಮನವಿಗೆ ಮನ್ನಣೆ ಸಿಗದಿದ್ದರಿಂದ ಅಧ್ಯಕ್ಷ ಪೀಠದಲ್ಲಿದ್ದ ಉಪಾಧ್ಯಕ್ಷರು ಅಂತಿಮವಾಗಿ ಕಲಾಪವನ್ನು ಮಂಗಳವಾರಕ್ಕೆ ಮುಂದೂಡಿದರು. ಮೇಲ್ಮನೆಯಲ್ಲಿ ಬಿಜೆಪಿ ಸದಸ್ಯ ಅಹ್ಲುವಾಲಿಯಾ ಸೇನಾ ಮುಖ್ಯಸ್ಥರ ಆರೋಪ ಪ್ರಸ್ತಾಪಿಸಿ ಸರ್ಕಾರದ ಹೇಳಿಕೆಗೆ ಪಟ್ಟು ಹಿಡಿದರು.     ಬಿಜೆಪಿ, ಜೆಡಿಯು ಹಾಗೂ ಎಐಎಡಿಎಂಕೆ ಸದಸ್ಯರು ಉಭಯ ಸದನಗಳಲ್ಲೂ ಸೇನಾ ಮುಖ್ಯಸ್ಥರ ಸಂದರ್ಶನ ಪ್ರಕಟ ಮಾಡಿದ್ದ ಪತ್ರಿಕೆ ಪ್ರತಿಗಳನ್ನು ಪ್ರದರ್ಶಿಸಿದರು. ಇದರಿಂದ ಗದ್ದಲ ಉಂಟಾಗಿ ಸದನವನ್ನು ಮಧ್ಯಾಹ್ನಕ್ಕೆ  ಮುಂದೂಡಲಾಯಿತು.`ಪ್ರಕರಣ ಕುರಿತು ಸಿಬಿಐ ತನಿಖೆಗೆ ಆದೇಶಿಸಲಾಗಿದೆ~ ಎಂಬ ವರದಿಯನ್ನು ಪತ್ರಿಕೆ ಪ್ರಕಟಿಸಿದೆ. ಈ ಬಗ್ಗೆ ಸದನಕ್ಕೆ ಮಾಹಿತಿ ಇಲ್ಲ. ರಕ್ಷಣಾ ಸಚಿವರು ಸದನದಲ್ಲಿ ಇಲ್ಲದಿರುವುದರಿಂದ ಕೆಲ ಹೊತ್ತು ಕಲಾಪ ಮುಂದಕ್ಕೆ ಹಾಕಬೇಕೆಂದು ಅಹ್ಲುವಾಲಿಯಾ ಸಲಹೆ ಮಾಡಿದರು. ಮೇಲ್ಮನೆಯಲ್ಲಿ ಗದ್ದಲ ನಿಲ್ಲದ್ದರಿಂದ ಸಭಾಪತಿ ಕೆ. ರೆಹಮಾನ್‌ಖಾನ್ ಕಲಾಪವನ್ನು ಮಧ್ಯಾಹ್ನ 2ಕ್ಕೆ ಮುಂದೂಡಿದರು.

ಲೋಕಸಭೆಯಲ್ಲಿ ಸೇನಾ ಮುಖ್ಯಸ್ಥರ ಆರೋಪದ ಜತೆಗೆ ಪ್ರತ್ಯೇಕ ತೆಲಂಗಾಣ ರಾಜ್ಯದ ಬೇಡಿಕೆಯೂ ಸೇರಿಕೊಂಡು ಸದನದಲ್ಲಿ ತೀವ್ರ ಗದ್ದಲ ಉಂಟಾಯಿತು. ಟಿಆರ್‌ಎಸ್, ಟಿಡಿಪಿ ಮತ್ತು  ಕಾಂಗ್ರೆಸ್ ಸದಸ್ಯರು ತಮ್ಮ ಆಸನಗಳಿಂದ          ಎದ್ದು ಅಧ್ಯಕ್ಷ ಪೀಠದ ಮುಂದಿನ ಆವರಣಕ್ಕೆ ಧಾವಿಸಿ ಘೋಷಣೆಗಳನ್ನು ಕೂಗಿದ್ದರಿಂದ ಯಾರು ಏನೂ ಹೇಳುತ್ತಿದ್ದಾರೆಂದು ಕೇಳದ ಪರಿಸ್ಥಿತಿ ನಿರ್ಮಾಣವಾಯಿತು.

ಲೋಕಸಭೆಯಲ್ಲಿ ಕಪ್ಪು ಪಟ್ಟಿ ಧರಿಸಿ, ಕೈಯಲ್ಲಿ ಭಿತ್ತಿ ಪತ್ರಗಳನ್ನು ಹಿಡಿದಿದ್ದ ಆಂಧ್ರದ ತೆಲಂಗಾಣ ಭಾಗದ ಸದಸ್ಯರು ಪ್ರತ್ಯೇಕ ರಾಜ್ಯಕ್ಕಾಗಿ ಪಟ್ಟು ಹಿಡಿದರು. ಬೆಳಿಗ್ಗ 11ಕ್ಕೆ ಮುಂದಕ್ಕೆ ಹೋಗಿದ್ದ ಕಲಾಪ ಪುನಃ 12 ಗಂಟೆಗೆ ಆರಂಭವಾದಾಗಲೂ ಪರಿಸ್ಥಿತಿ ಸುಧಾರಣೆ ಕಾಣದಿದ್ದರಿಂದ ಮಧ್ಯಾಹ್ನ 2ಕ್ಕೆ ಅನಂತರ ದಿನದ ಮಟ್ಟಿಗೆ ಮುಂದೂಡಲಾಯಿತು. ರಾಜ್ಯಸಭೆಯಲ್ಲಿ ಜಾವಡೇಕರ್ ತೆಲಂಗಾಣ ಬೇಡಿಕೆ ಕುರಿತು ಪ್ರಸ್ತಾಪ ಮಾಡಿದರು.ಕೇಂದ್ರ ಸರ್ಕಾರದ ವಿಳಂಬದಿಂದ ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದುವರೆಗೆ 600 ಮಂದಿ ಆತ್ಮಹತ್ಯೆ ಮಾಡಿಕೊಂಡಿರುವುದೂ ಸೇರಿದಂತೆ 900 ಮಂದಿ ಬಲಿಯಾಗಿದ್ದಾರೆ ಎಂದರು.ಎರಡು ವರ್ಷಗಳ ಹಿಂದೆಯೇ ತೆಲಂಗಾಣ ಪ್ರತ್ಯೇಕ ರಾಜ್ಯ ರಚನೆ ಪ್ರಕ್ರಿಯೆ ಆರಂಭವಾಗಿದೆ ಎಂದು ಗೃಹ ಸಚಿವ ಪಿ. ಚಿದಂಬರಂ ಪ್ರಕಟಿಸಿದ್ದರು. ಈಗ ಮಾತಿನಿಂದ ಹಿಂದೆ ಸರಿಯಲಾಗಿದೆ. ಈ ಬಗ್ಗೆ ಅಧ್ಯಯನ ನಡೆಸಲು ಸಮಿತಿಗಳನ್ನು ನೇಮಕ ಮಾಡುವ ಮೂಲಕ ಕಾಲಹರಣ ಮಾಡಲಾಗುತ್ತಿದೆ. ಹಿಂದಿನ ಎನ್‌ಡಿಎ ಸರ್ಕಾರ ಮೂರು ರಾಜ್ಯಗಳನ್ನು ರಚನೆ ಮಾಡಿ ಜನರ ಭಾವನೆ ಗೌರವಿಸಿದೆ. ತೆಲಂಗಾಣ ಭಾಗದ ಜನರ ಭಾವನೆಗೆ ಸ್ಪಂದಿಸಬೇಕಾದ್ದು ಸರ್ಕಾರದ ಕರ್ತವ್ಯ ಎಂದರು.

ಸರ್ಕಾರ ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಿದರೆ ಅದಕ್ಕೆ ಎನ್‌ಡಿಎ ಬೆಂಬಲ ನೀಡಲಿದೆ ಎಂದು ಜಾವಡೇಕರ್ ಹೇಳಿದರು. ಕಾಂಗ್ರೆಸ್ ಸದಸ್ಯ ಕೆ. ಕೇಶವರಾವ್ ಇದಕ್ಕೆ ದನಿಗೂಡಿಸಿ ಪ್ರತ್ಯೇಕ ರಾಜ್ಯ ರಚನೆಗೆ ವಿಳಂಬ ನೀತಿ ಅನುಸರಿಸುತ್ತಿರುವ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡರು. ಪ್ರಜಾಪ್ರಭುತ್ವದಲ್ಲಿ ಜನರ ಅಭಿಪ್ರಾಯಗಳಿಗೆ ಬೆಲೆ ಇಲ್ಲದಿದ್ದರೆ ಸಂಸತ್ ಮತ್ತು ವಿಧಾನಸಭೆಗಳಿದ್ದು ಏನು ಪ್ರಯೋಜನ ಎಂದು ಕೇಳಿದರು. ಪ್ರತ್ಯೇಕ ತೆಲಂಗಾಣಕ್ಕೆ ಇನ್ನೆಷ್ಟು ಬಲಿ ಬೇಕು. ಈ ಬೇಡಿಕೆಗಾಗಿ ಮೂರು ಕೋಟಿ ಜನ ಪ್ರಾಣ ಕೊಡಲು ಸಿದ್ಧರಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಎಚ್ಚರಿಕೆಯ ಪ್ರತಿಕ್ರಿಯೆ

ನವದೆಹಲಿ (ಪಿಟಿಐ): ಸೇನಾ ಮುಖ್ಯಸ್ಥರ ಹೇಳಿಕೆ ವಿವಾದಕ್ಕೆ ಸಂಯಮದಿಂದ ಪ್ರತಿಕ್ರಿಯಿಸಿರುವ ಕಾಂಗ್ರೆಸ್, `ಒಂದು ವೇಳೆ ಈ ಸಂಬಂಧ ದೂರು ದಾಖಲಾದಲ್ಲಿ ರಕ್ಷಣಾ ಸಚಿವಾಲಯವು ಅದನ್ನು ಸೂಕ್ತ ರೀತಿಯಲ್ಲಿ ಪರಾಮರ್ಶಿಸುತ್ತದೆ~ ಎಂದಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.