ಶನಿವಾರ, ಜನವರಿ 25, 2020
28 °C

ಸೈಕಲ್ಲಿನ ಹೊಸ ಅವತಾರ

ಸುಭಾಸ ಯಾದವಾಡ Updated:

ಅಕ್ಷರ ಗಾತ್ರ : | |

ಸೈಕಲ್ಲಿನ ಹೊಸ ಅವತಾರ

ಸೈಕಲ್ಲೆಂದರೆ ಸಾಮಾನ್ಯರು ಬಳಸುವ, ಕಾಲಿನ ಶಕ್ತಿ ಆಧರಿಸಿದ ಎರಡು ಚಕ್ರದ ಪುಟ್ಟ ವಾಹನ.  ಅತ್ಯಂತ ಸರಳ ಹಾಗೂ ಪರಿಸರ ಸ್ನೇಹಿ ವಾಹನ.ಅದೀಗ ಹೊಸ ರೂಪದಲ್ಲಿ ಅವತರಿಸಿದೆ.  ಈಗ ಅದನ್ನು ಓಡಿಸಲು ಕಾಲಿನ ಜತೆಗೆ ಕೈಯನ್ನೂ ಬಳಸಬಹುದು.  ಆಮೂಲಕ ಅದರ ವೇಗವನ್ನೂ ಹೆಚ್ಚಿಸಬಹುದು.

ಇದು ಬರೀ ವೇಗ ಹೆಚ್ಚಿಸಲು ಅವತಾರ ತಾಳಿದ ಸೈಕಲ್ ಅಲ್ಲ.  ಕೈ ಕಾಲು ಎರಡೂ ಬಳಸುವುದರಿಂದ ಸವಾರನ ಇಡೀ ದೇಹ ಸೈಕಲ್ ಓಡಿಸುವದಲ್ಲಿ ಕಾರ್ಯ ಪ್ರವೃತ್ತವಾಗುತ್ತದೆ.  ಪೂರ್ಣ ದೇಹಕ್ಕೆ ಶ್ರಮದ ಹಂಚಿಕೆಯಾಗುತ್ತದೆ. ಶರೀರದ ಸಮತೋಲನ ಕಾಯ್ದುಕೊಳ್ಳಬಹುದು. ಕೈ ಕಾಲು ಎರಡೂ ಬಳಸುವದರಿಂದ ಹೃದಯದ ಬಡಿತವೇನೂ ಹೆಚ್ಚಾಗುವದಿಲ್ಲ.  ಅದು ಬರೀ ಕಾಲು ಬಳಸುವಾಗಿನಷ್ಟೇ ಇರುತ್ತದೆ.  ಶ್ರಮ ಕಡಿಮೆ, ವೇಗ ಹೆಚ್ಚು, ಕಡಿಮೆ ಶಕ್ತಿ ಬಳಸಿ ಹೆಚ್ಚು ದೂರ ಕ್ರಮಿಸಬಹುದು ಎಂಬುದು ಹೊಸ ಸೈಕಲ್ಲಿನ ಹೆಗ್ಗಳಿಕೆ. ಗುಡ್ಡ-ಬೆಟ್ಟಗಳ ಏರು ರಸ್ತೆಯಲ್ಲಿ ಇದರ ಸವಾರಿ ಸಾಂಪ್ರದಾಯಕ ಸೈಕಲ್‌ಗಳಿಗಿಂತ ಹೆಚ್ಚು ಸುಖಕರ.  ಇತರೆ ಸೈಕಲ್‌ನಲ್ಲಿ ಬಳಸುವಷ್ಟೇ ಶ್ರಮದಿಂದ ಈ ಹೊಸ ವಾಹನದಲ್ಲಿ ಶೇ 31ರಷ್ಟು ಹೆಚ್ಚು ವೇಗವನ್ನು ಪಡೆದುಕೊಳ್ಳಬಹುದು ಎನ್ನುತ್ತಾರೆ ಇದರ ವಿನ್ಯಾಸಕರು.ಕಾಲು ಸೋತಾಗ ಕೈಯನ್ನು, ಕೈ ಸೋತಾಗ ಕಾಲನ್ನು ಪರ್ಯಾಯವಾಗಿ ಬಳಸಬಹುದು.  ಹೆಚ್ಚು ವೇಗ ಪಡೆಯಲು ಏರು ರಸ್ತೆಗಳನ್ನು ಕ್ರಮಿಸಲು ಕೈ ಕಾಲು ಎರಡರ ಶಕ್ತಿಯನ್ನೂ ಬಳಸಬಹುದು ಎನ್ನುತ್ತಾರೆ ಇದನ್ನು ರೂಪಿಸಿದ ಮಾರ್ಟಿನ್ ಕ್ರೇಸ್. ಮಾರ್ಟಿನ್ ಜರ್ಮನ್ ನಿವಾಸಿ.  ಅತ್ಯಂತ ಹಗುರವಾದ ಅಲ್ಯುಮಿನಿಯಂನಿಂದ ಈ ಸೈಕಲ್‌ ನಿರ್ಮಿಸಿದ್ದಾರೆ. 15 ಕೆ.ಜಿ ತೂಕದ ಈ ಕೈ-ಕಾಲು ಗಾಡಿ, ಬಿಳಿ, ಕಪ್ಪು ಹಾಗೂ ಬಂಗಾರ ವರ್ಣಗಳಲ್ಲಿ ಲಭ್ಯವಿದೆ. 4 ಸಾವಿರ ಪೌಂಡ್‌ಗಳಿಗೆ ದೊರೆಯುವ ಈ ಸೈಕಲ್ಲಿನ ಬೆಲೆ ತುಸು ಹೆಚ್ಚೇ ಎನ್ನಬಹುದು.  ತನ್ನ ಈ ಹೊಸ ಸೈಕಲ್ಲಿಗೆ ಮಾರ್ಟಿನ್ ‘ವ್ಹೇರಿಬೈಕ್‌’ ಎಂದು ಹೆಸರಿಟ್ಟಿದ್ದಾರೆ.

ಪ್ರತಿಕ್ರಿಯಿಸಿ (+)