ಬುಧವಾರ, ಜುಲೈ 6, 2022
22 °C

ಸೊಬಗಿನ ಜಲಪಾತಗಳು

ಅವನಿ Updated:

ಅಕ್ಷರ ಗಾತ್ರ : | |

ಇಗ್ವಾಜೂ ಜಲಪಾತ

ಸೌಂದರ್ಯ ರಾಶಿಯನ್ನು ಅಡಿಯಿಂದ ಮುಡಿಯವರೆಗೂ ಹೊದ್ದ ರಾಷ್ಟ್ರಗಳೆಂದರೆ ಅರ್ಜೆಂಟೀನಾ ಮತ್ತು ಬ್ರೆಜಿಲ್. ಅವೆರಡೂ ರಾಷ್ಟ್ರಗಳಿಗೆ ಮುಕುಟಪ್ರಾಯದಂತಿದೆ ಇಗ್ವಾಜೂ ಜಲಪಾತ. ಬ್ರೆಜಿಲ್‌ನಲ್ಲಿ ಹುಟ್ಟಿದರೂ ಇಗ್ವಾಜೂ ನದಿ ತನ್ನದೆಂದು ಹೆಮ್ಮೆಯಿಂದ ಹೇಳಿಕೊಳ್ಳಲು ಅರ್ಜೆಂಟೀನಾಕ್ಕೆ ಹೆಚ್ಚಿನ ಪಾಲು ಕೊಟ್ಟಿದೆ.ಪರಾನಾ ಪ್ರಸ್ಥಭೂಮಿಯ ಅಂಚಿನಲ್ಲಿ ಹರಿಯುವ ಇಗ್ವಾಜೂ ಬ್ರೆಜಿಲ್‌ನಲ್ಲಿ ದ್ವೀಪಗಳ ಮಧ್ಯೆ ಹಲವು ಕವಲುಗಳಾಗಿ ಒಡೆಯುತ್ತದೆ. ಹೀಗಾಗಿ 197 ರಿಂದ 269 ಅಡಿ ಎತ್ತರದ ಅನೇಕ ಜಲಪಾತಗಳು ರೂಪುಗೊಂಡಿದೆ. ಎರಡು ಹಂತಗಳಲ್ಲಿ ಇಗ್ವಾಜೂ ತನ್ನ ಸೌಂದರ್ಯ ಪ್ರದರ್ಶಿಸುತ್ತದೆ.ಎರಡು ರಾಷ್ಟ್ರಗಳ ನಡುವಿನ ಡೆವಿಲ್ಸ್ ಥ್ರೋಟ್ ಎಂದು ಕರೆಯಲಾಗುವ ಸ್ಥಳದಲ್ಲಿ ತುಸು ದೂರ ಹರಿದು `ಯು~ ವಿನ್ಯಾಸದಲ್ಲಿ 82 ಮೀಟರ್ ಎತ್ತರ, 150 ಮೀಟರ್ ಅಗಲದಿಂದ ಧುಮುಕುತ್ತದೆ. ಈ ದೇಶಗಳ ಗಡಿ ಭಾಗದಲ್ಲಿ ಇಂಗ್ಲಿಷ್ ಅಕ್ಷರ `ಜೆ~ಯನ್ನು ತಿರುಗಿಸಿ ಇಟ್ಟಂತೆ ಗೋಚರಿಸುವ ಪ್ರದೇಶದಲ್ಲಿ ಇಗ್ವಾಜೂ ಹರಿಯುತ್ತದೆ.

........ಅಗ್ರೇಬೀಸ್ ಜಲಧಾರೆ

 
ದಕ್ಷಿಣ ಆಫ್ರಿಕಾದ ಈ ಜಲಪಾತದ ನೀರನ ರಭಸದಿಂದ ಮಣ್ಣನ್ನು ರಕ್ಷಿಸುವ ಸಲುವಾಗಿಯೇ ಅದರ ಮೇಲೆ ಬಂಡೆಗಳ ಭಾರೀ ಹೊದಿಕೆ ಹಾಸಿದಂತಿದೆ. ಇದು ಆರೆಂಜ್ ನದಿ 60 ಮೀಟರ್ ಎತ್ತರದಿಂದ ಮತ್ತೆ ಭೂ ಸ್ಪರ್ಶ ಮಾಡುವ ತಾಣ. ಇದನ್ನು ಸ್ಥಳೀಯ ನಿವಾಸಿಗಳಾದ ಕೋಯ್‌ಕೋಯ್‌ಗಳು ಕರೆಯುವುದು ಅನ್ಕೊಯಿರೆಬಿಸ್ ಎಂದು.ದೂರದ ನೋಟಕ್ಕೆ ಕಿತ್ತಳೆ ಸಿಹಿಯಾದರೂ ಭೋರ್ಗರೆಯುವ ಸದ್ದಿನೊಂದಿಗೆ ಆರ್ಭಟಿಸುವ ಆರೆಂಜ್ ಮೈನಡುಗಿಸುತ್ತದೆ. ಈ ಸುಂದರಿಯದೂ ಒಂದು ದಾಖಲೆಯಿದೆ. 1988ರಲ್ಲಿ ಪ್ರವಾಹ ಬಂದಾಗ ಪ್ರತಿ ಸೆಕೆಂಡಿಗೆ 7,800 ಕ್ಯೂಬಿಕ್ ಮೀಟರ್‌ನಷ್ಟು ನೀರು ಕೆಳಗೆ ಚಿಮ್ಮಿದ್ದು ವಿಶ್ವದಾಖಲೆ.ಇದು ಜಗತ್ತಿನ ಅತಿ ಆಕರ್ಷಕ ಜಲಪಾತವೆನ್ನಲಾದ ನಯಾಗರದ ದಾಖಲೆಯ ಮೂರುಪಟ್ಟು ಹೆಚ್ಚು. ಈ ಪ್ರಮಾಣದ ಪ್ರವಾಹವನ್ನು ಹೊತ್ತುಕೊಳ್ಳುತ್ತಲೇ ಶತಮಾನಗಳ ಸವೆಸಿರುವ ಆ ಬೃಹತ್ ಕಲ್ಲುಬಂಡೆಗಳು ಎಷ್ಟು ಸವೆದಿರಬಹುದು?

............ಬಾತರ ಗಾರ್ಜ್ ಜಲಪಾತ

 
ಎಂತಹ ನಿರ್ಭಾವುಕ ಮನುಷ್ಯನನ್ನೂ ಮೋಡಿಮಾಡಬಲ್ಲ ತಾಕತ್ತು ಲೆಬೆನಾನ್‌ನ ಟನ್ನೌರಿನ್‌ನಲ್ಲಿರುವ ಬಾತರ ಗಾರ್ಜ್‌ಗಿದೆ. ಎತ್ತರದಿಂದ ಜಿಗಿಯುವ ನೀರನ್ನು ನೋಡುವುದೇ ಸೊಗಸು ಎಂದಾದರೆ ಅದರ ಸುತ್ತಲಿನ ಪ್ರಕೃತಿಯದೂ ಇನ್ನೊಂದು ಸೊಗಸು. ಬಾತರ ಜಲಪಾತದ ವಿಚಾರದಲ್ಲಿ ಇದು ಒಂದು ತೂಕ ಹೆಚ್ಚು.

 

ಅದರ ಸುತ್ತಲೂ ಶಿಲ್ಪಿ ಕೆತ್ತಿ ನಿರ್ಮಿಸಿದ ಕಲಾಕೃತಿಯಂತೆ ಕಾಣುವ ನಿಸರ್ಗದತ್ತ ಅಲಂಕಾರ ಜಲಪಾತದಿಂದ ಅದಕ್ಕೆ ಸೌಂದರ್ಯವೋ, ಅಥವಾ ಅದರಿಂದಾಗಿ ಜಲಪಾತಕ್ಕೆ ಸೌಂದರ್ಯವೋ ಎಂಬ ಗೊಂದಲವನ್ನು ಹುಟ್ಟುಹಾಕುವಂತಿದೆ. ಲೆಬನಾನ್ ಪರ್ವತ ಶ್ರೇಣಿಯ ಸಾಲಿನಲ್ಲಿ ಅಡಗಿರುವ ಈ ಅದ್ಭುತವನ್ನು ಮೊದಲಿಗೆ ಪ್ರಪಂಚಕ್ಕೆ ಪರಿಚಯಿಸಿದ್ದು ಫ್ರಾನ್ಸಿನ ಹೆನ್ರಿ ಕೋಯಿಫಾಯತ್ ಎಂಬಾತ.ಮೂರು ಸೇತುವೆಗಳ ಕಂದರ ಎಂದೇ ಇದು ಪ್ರಸಿದ್ಧ. ಮೇಲಿನಿಂದ ಕೆಳಕ್ಕೆ ಮೂರು ಕಡೆ ಸೇತುವೆಗಳನ್ನು ನಿಸರ್ಗವೇ ನಿರ್ಮಿಸಿದೆ. ಸುಮಾರು 100 ಮೀಟರ್ ಎತ್ತರದಿಂದ ನೀರು ಸೇತುವೆಗಳ ಹಿಂದಿನಿಂದ ಭೂತಳ ಮುಟ್ಟುತ್ತದೆ.

........ಕಯೀಚ್ಯೂರ್ ಜಲಪಾತ

 
ಗಯಾನಾದ ಕೇಂದ್ರಭಾಗದಲ್ಲಿರುವ ಪೊಟಾರೋ ನದಿ ಕಯೀಚ್ಯೂರ್ ಎಂಬ ರಮಣೀಯ ಜಲಧಾರೆಯ ಜನ್ಮದಾತೆ. ಪೊಟಾರೋ-ಸಿಪಾರುನಿ ಪ್ರದೇಶದಲ್ಲಿನ ಕಯೀಚ್ಯೂರ್ ರಾಷ್ಟ್ರೀಯ ಉದ್ಯಾನದಲ್ಲಿರುವ ಇದನ್ನು ವಿಶ್ವದ ಅತ್ಯಂತ ಶಕ್ತಿಶಾಲಿ ಜಲಪಾತಗಳಲ್ಲಿ ಒಂದು ಎಂದು ಗುರುತಿಸಲಾಗಿದೆ.

 

ದಟ್ಟವಾದ ಅರಣ್ಯ ರಾಶಿಯ ನಡುವೆ ಸುತ್ತಿಬಳಸಿ ನುಸುಳಿಕೊಂಡು ಬರುವ ಪೊಟಾರೋ ಸುಮಾರು 226 ಮೀಟರ್ ಎತ್ತರದಿಂದ ಕೆಳಕ್ಕೆ ನೆಗೆಯುವ ದೃಶ್ಯವೇ ಅದ್ಭುತ. ಇದರ ವೈಮಾನಿಕ ಅವಲೋಕವಂತೂ ವರ್ಣಿಸಲಸದಳ.ಬೇರೆ ಜಲಪಾತಗಳಂತೆ ಇದರ ನೀರು ಹರಿದು ಹಂಚಿ ಹೋಗುವುದಿಲ್ಲ. ನದಿ ನೀರು ನೇರವಾಗಿ ಮತ್ತು ಭಾರೀ ಪ್ರಮಾಣದಲ್ಲಿ ಒಮ್ಮೆಲೆ ಧುಮುಕುತ್ತದೆ. ಅಂದರೆ ಪ್ರತಿ ಸೆಕೆಂಡಿಗೆ ಸುಮಾರು 663 ಕ್ಯೂಬಿಕ್ ಮೀಟರ್‌ಗಳಷ್ಟು ನೀರು ನೆಲ ಮುಟ್ಟುತ್ತದೆ. ಹೀಗಾಗಿ ಇದಕ್ಕೆ `ಟಾಲೆಸ್ಟ್ ಸಿಂಗಲ್ ಡ್ರಾಪ್~ ಎಂದು ಕರೆಯಲಾಗುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.