ಬುಧವಾರ, ಮೇ 12, 2021
26 °C
ಪಾಳು ಬಿದ್ದ ಗಪ್ಪಿ ಮೀನು ಸಾಕಣೆ ಕೇಂದ್ರ

ಸೊಳ್ಳೆ ನಿಯಂತ್ರಣ ಕೇಂದ್ರದಲ್ಲೇ ಸೊಳ್ಳೆ ಕಾಟ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪುತ್ತೂರು: ಜಿಲ್ಲಾ ಪಂಚಾಯಿತಿ ಮತ್ತು ಆರೋಗ್ಯ ಇಲಾಖೆಯ ಜಂಟಿ ಅನುದಾನದಲ್ಲಿ ಪುತ್ತೂರಿನ ಸರ್ಕಾರಿ ಆಸ್ಪತ್ರೆಯ ಬಳಿ ನಿರ್ಮಾಣವಾಗಿರುವ ಗಪ್ಪಿ ಮೀನು ಸಾಕಾಣಿಕಾ ಕೇಂದ್ರವೊಂದು ಪಾಳು ಬಿದ್ದು ವರ್ಷಗಳೇ ಉರುಳಿದೆ. ಇದರಿಂದಾಗಿ ಸೊಳ್ಳೆಗಳ ನಿಯಂತ್ರಣಾ ಕೇಂದ್ರವಾಗಬೇಕಿದ್ದ ಅದು  ಸೊಳ್ಳೆಗಳ ಉತ್ಪಾದನಾ ಕೇಂದ್ರವಾಗಿ ಮಾರ್ಪಟ್ಟಿದೆ.ಪುತ್ತೂರು ಸರ್ಕಾರಿ ಆಸ್ಪತ್ರೆ ಪಕ್ಕದಲ್ಲಿರುವ ವೈದ್ಯರ ಮತ್ತು ಆಸ್ಪತ್ರೆಯ ಸಿಬ್ಬಂದಿಯ ವಸತಿಗೃಹದ ಬಳಿ ಸುಮಾರು 10 ವರ್ಷದ ಹಿಂದೆ ಸೊಳ್ಳೆಗಳ ನಿಯಂತ್ರಣದ ಉದ್ದೇಶದಿಂದ ಈ ಕೇಂದ್ರ ಸ್ಥಾಪಿಸಲಾಗಿತ್ತು. ಆದರೆ ಈ ವ್ಯವಸ್ಥೆ ಸಂಪೂರ್ಣ ನಿರ್ಲಕ್ಷ್ಯಕ್ಕೊಳಗಾಗಿ ಪಾಳುಬಿದ್ದಿದೆ. ಇದರಿಂದಾಗಿ ಉದ್ದೇಶಿತ ಯೋಜನೆ ಪ್ರಯೋಜನಕ್ಕೆ ಬಾರದೆ ಉಪದ್ರಕಾರಿಯಾಗುವಂತಾಗಿದೆ.ಗಪ್ಪಿ ಮೀನು ಸಾಕಾಣಿಕೆಯ ಕುರಿತು ಆಸಕ್ತಿ ಹೊಂದಿದ್ದ ಅಂದಿನ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಾಲಕೃಷ್ಣ ಬೋರ್ಕರ್ ಅವರ ಮುತುವರ್ಜಿಯ ಫಲವಾಗಿ ಕೇಂದ್ರದ ನಿರ್ಮಾಣವಾಗಿತ್ತು.  ಕೇಂದ್ರಕ್ಕೆ ಅಗತ್ಯವಾದ ನೀರಿನ ಟ್ಯಾಂಕಿಯನ್ನು ಕೂಡ ನಿರ್ಮಿಸಲಾಗಿತ್ತು. ಆರಂಭದಲ್ಲಿ ಕೇಂದ್ರಕ್ಕೆ  ಗಪ್ಪಿ ಮೀನುಗಳನ್ನೂ ಒದಗಿಸಲಾಗಿತ್ತು. ಆದರೆ ಅಧಿಕಾರಿಗಳ ನಿರ್ಲಕ್ಷದಿಂದ ಕೇಂದ್ರ ಸಂಪೂರ್ಣ ಪಾಳು ಬೀಳುವಂತಾಗಿದೆ. ಇದೀಗ ಈ ಕೇಂದ್ರ ಪೊದೆಗಂಟಿಗಳಿಂದ ಮುಚ್ಚಿ ಹೋಗಿದೆ. ಸೊಳ್ಳೆ ನಿಯಂತ್ರಣದ ಉದ್ದೇಶದಿಂದ ನಿರ್ಮಿಸಲಾದ ಈ ಕೇಂದ್ರ  ಇದೀಗ ಸೊಳ್ಳೆ ಉತ್ಪಾದನಾ ಕೇಂದ್ರವಾಗಿ ಪರಿಸರದ ಮಂದಿಗೆ  ಕಿರುಕುಳ ತಾಣವಾಗಿದೆ.ಈ ಕೇಂದ್ರವನ್ನು ಆರಂಭಿಸಲು ಆಸಕ್ತಿ ವಹಿಸಿದ್ದ ಜಿಲ್ಲಾ ಪಂಚಾಯಿತಿ ಆಡಳಿತ ವ್ಯವಸ್ಥೆಯಾಗಲೀ , ಆರೋಗ್ಯ ಕಾಪಾಡುವಲ್ಲಿ ಮುತುವರ್ಜಿ ವಹಿಸಬೇಕಾಗಿದ್ದ ಆರೋಗ್ಯ ಇಲಾಖೆಯಾಗಲೀ ಈ ಬಗ್ಗೆ ಗಮನ ಹರಿಸುತ್ತಿಲ್ಲ. ಇದೀಗ ಈ ಕೇಂದ್ರದ ವಠಾರದಲ್ಲಿ ಸೊಳ್ಳೆಗಳ ಕಾಟ ಮಿತಿ ಮೀರಿದ್ದು, ಈ ಪರಿಸರದಲ್ಲಿ ಹಾವುಗಳು ಕೂಡ ಸೇರಿಕೊಂಡಿವೆ. ಇಲ್ಲಿ ಎರಡು ಬಾರಿ ಹೆಬ್ಬಾವು ಕಾಣಿಸಿಕೊಂಡಿದ್ದು, ಅದನ್ನು ಹಿಡಿದು ಕಾಡಿಗೆ ಬಿಡಲಾಗಿದೆ ಎಂದು ಸ್ಥಳಿಯರು ಮಾಹಿತಿ ನೀಡಿದ್ದಾರೆ. ಮಳೆಗಾಲದಲ್ಲಿ ಈ ಪರಿಸರದಲ್ಲಿ ಮಳೆ ನೀರು ನಿಲ್ಲುತ್ತಿದ್ದು, ಸೊಳ್ಳೆಗಳ ಉತ್ಪತ್ತಿಗೆ ಹೇಳಿ ಮಾಡಿಸಿದ ಸ್ಥಳದಂತಿದೆ. ಆರೋಗ್ಯ ಕೇಂದ್ರದ ವಠಾರದಿಂದಲೇ ಸಾಂಕ್ರಾಮಿಕ ರೋಗ ಹರಡುವ ಮುನ್ನ ಆರೋಗ್ಯ ಇಲಾಖೆ ಎಚ್ಚೆತ್ತುಕೊಳ್ಳಬೇಕು ಎಂದು ನಾಗರಿಕರು ಕೋರಿದ್ದಾರೆ.ಇದರ ಜೊತೆಗೆ ಗಪ್ಪಿ ಮೀನು ಸಾಕಾಣಿಕಾ ಕೇಂದ್ರಕ್ಕೆ ಮರುಜೀವ ನೀಡಿ ಕೇಂದ್ರದ ನಿರ್ವಹಣೆಯ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಪರಿಸರವಾದಿಗಳು ಆಗ್ರಹಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.