ಮಂಗಳವಾರ, ಮೇ 11, 2021
26 °C

ಸೋನಿಯಾ ಪ್ರತಿಕೃತಿ ದಹನಕ್ಕೆ ಆಕ್ಷೇಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಅಕ್ರಮ ಗಣಿಗಾರಿಕೆ ನಡೆಸಿದ ಆರೋಪದ ಮೇರೆಗೆ ಸಿಬಿಐನಿಂದ ಬಂಧನಕ್ಕೆ ಒಳಗಾಗಿರುವ ಜನಾರ್ದನ ರೆಡ್ಡಿ ಅವರ ಬೆಂಬಲಿಗರು ಸೋನಿಯಾ ಗಾಂಧಿ ಅವರ ಪ್ರತಿಕೃತಿ ದಹಿಸುವುದು ಬಿಜೆಪಿಗೆ ಶೋಭೆ ತರುವಂತಹ ಕೆಲಸವಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಹೇಳಿದೆ.ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಕುಮಾರಸ್ವಾಮಿ ಅವರ ವಿರುದ್ಧ ಸಿಬಿಐ ತನಿಖೆಗೆ ಈ ಹಿಂದೆ ಜನಾರ್ದನ ರೆಡ್ಡಿ ಅವರೇ ಒತ್ತಾಯಿಸಿದ್ದರು. ಇದೀಗ ಸಿಬಿಐನಿಂದಲೇ ಅವರ ಬಂಧನವಾಗಿರುವಾಗ ಕೇಂದ್ರ ಸರ್ಕಾರದ ವಿರುದ್ಧ ದೂಷಣೆ ಮಾಡುವುದು ಸೂಕ್ತವಲ್ಲ.ಜನಾರ್ದನ ರೆಡ್ಡಿ ಅವರ ಬಂಧನಕ್ಕೂ, ಸೋನಿಯಾ ಗಾಂಧಿ ಅವರಿಗೂ ಯಾವುದೇ ಸಂಬಂಧ ಇಲ್ಲದಿರುವಾಗ ಅವರ ಪ್ರತಿಕೃತಿ ದಹಿಸಿ ಅವಮಾನಿಸುವುದು ಸಮಂಜಸವಲ್ಲ ಎಂದು ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ರಮಾನಾಥ ರೈ ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಅಕ್ರಮ ಎಸಗಿದ ಕಾಂಗ್ರೆಸ್ ನಾಯಕರು ಜೈಲಿಗೆ ಹೋದಾಗ ಅದನ್ನು ಒಪ್ಪಿಕೊಳ್ಳುವ ಎದೆಗಾರಿಕೆ ಪಕ್ಷಕ್ಕಿದೆ. ಇದೇ ಎದೆಗಾರಿಕೆಯನ್ನು ಬಿಜೆಪಿ ಪ್ರದರ್ಶಿಸುತ್ತದೆಯೇ ಎಂದು ಪ್ರಶ್ನಿಸಿದ ಅವರು, ಹಲವು ಹಗರಣಗಳ ಭಾರಕ್ಕೆ ಸಿಲುಕಿರುವ ಬಿಜೆಪಿ ನಾಯಕರಿಗೆ ಇದೀಗ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ ಎಂದರು.ಆರಾಧನೆಗೆ ದುಡ್ಡಿಲ್ಲ: ಬಿಜೆಪಿ ಸರ್ಕಾರ ತನಗೆ ಇಷ್ಟ ಬಂದ ಮಠಗಳಿಗೆ ಕೋಟಿಗಟ್ಟಲೆ ಹಣ ನೀಡುತ್ತಿದೆ, ಆದರೆ ಸರ್ಕಾರದ ಆರಾಧನಾ ಯೋಜನೆಯಡಿಯಲ್ಲಿ ಬಡವರ ಆರಾಧನಾ ಸ್ಥಳಗಳ ಜೀರ್ಣೋದ್ಧಾರಕ್ಕೆ ಬಿಡಿಗಾಸು ನೀತಿ ತನ್ನ ತಾರತಮ್ಯ ಧೋರಣೆ ಪ್ರದರ್ಶಿಸಿದೆ. ತಾನು ಬಡವರು, ಹಿಂದುಳಿದವರ ವಿರೋಧಿ ಎಂಬುದನ್ನು ತೋರಿಸಿಕೊಟ್ಟಿದೆ.

 

2008-09ರಲ್ಲಿ ಆರಾಧನಾ ಯೋಜನೆಗಾಗಿ ಜಿಲ್ಲೆಯ ಯಾವೊಂದು ವಿಧಾನಸಭಾ ಕ್ಷೇತ್ರಕ್ಕೂ ಬಿಡಿಗಾಸು ನೀಡದ ಸರ್ಕಾರ ಕಳೆದ ಎರಡು ವರ್ಷಗಳಿಂದ ಸರಾಸರಿ 72 ಸಾವಿರರಷ್ಟು ಹಣ ಮಾತ್ರ ನೀಡಿದೆ, ಜಿಲ್ಲಾಧಿಕಾರಿ ನೀಡಿದ ಮಾಹಿತಿಯ ಆಧಾರದಲ್ಲಿ ತಾವು ಈ ಆರೋಪ ಮಾಡುತ್ತಿರುವುದಾಗಿ ತಿಳಿಸಿದರು.ಅಡಿಕೆ ಬೆಳೆಗಾರರು ಕೊಳೆರೋಗದಿಂದ ಸಂಕಷ್ಟದಲ್ಲಿದ್ದು, ಅಧಿಕ ಮಳೆಯಿಂದ ಸಹ ಭಾರಿ ಹಾನಿ ಅನುಭವಿಸಿದ್ದಾರೆ. ಜಿಲ್ಲೆಯ ರಸ್ತೆಗಳಂತೂ ತೀರಾ ಹದಗೆಟ್ಟಿವೆ. ರಸ್ತೆಗಳ ಗುಂಡಿ ಮುಚ್ಚುವುದಕ್ಕಾಗಿ ಸರ್ಕಾರ ತಕ್ಷಣ 25 ಕೋಟಿ ರೂಪಾಯಿ ಬಿಡುಗಡೆ ಮಾಡಬೇಕು. ಮುಖ್ಯಮಂತ್ರಿ ಅವರು ಇದೇ ಜಿಲ್ಲೆಯವರಾದ ಕಾರಣ ಅಡಿಕೆ ಬೆಳೆಗಾರರ ಸಂಕಷ್ಟಕ್ಕೆ ತಕ್ಷಣ ಸ್ಪಂದಿಸಬೇಕು ಮತ್ತು ಅಭಿವೃದ್ಧಿ ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ರಮಾನಾಥ ರೈ ಆಗ್ರಹಿಸಿದರು.ದೆಹಲಿಯಲ್ಲಿ ನಡೆದ ಬಾಂಬ್ ಸ್ಫೋಟ ಘಟನೆ ಅತ್ಯಂತ ದುಃಖದ ಸಂಗತಿ. ತಪ್ಪಿತಸ್ಥರನ್ನು ಶೀಘ್ರ ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು. ಶಾಸಕರಾದ ಅಭಯಚಂದ್ರ ಜೈನ್, ಯು.ಟಿ.ಖಾದರ್, ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿ, ಕೆಪಿಸಿಸಿ ಕಾರ್ಯದರ್ಶಿ ಐವನ್ ಡಿಸೋಜ ಇತರರು ಇದ್ದರು.ಯುವ ಕಾಂಗ್ರೆಸ್ ಚುನಾವಣೆ

ಯುವ ಕಾಂಗ್ರೆಸ್‌ನ ಬೂತ್ ಮಟ್ಟದ ಚುನಾವಣಾ ಪ್ರಕ್ರಿಯೆ ಬಿರುಸಿನಿಂದ ಸಾಗಿದ್ದು, ಸೆ. 16ರಿಂದ 20ರ ನಡುವೆ ವಿವಿಧ ಬ್ಲಾಕ್ ಕಚೇರಿಗಳಲ್ಲಿ ಮತದಾನ ನಡೆಯಲಿದೆ. ಸೆ. 11ರಿಂದಲೇ ನಾಮಪತ್ರ ಸಲ್ಲಿಕೆ ಕಾರ್ಯ ಆರಂಭವಾಗುತ್ತಿದೆ ಎಂದು ರಮನಾಥ ರೈ ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.